Advertisement

ನದಿ ಮೂಲದಿಂದ ಗ್ರಾಮಗಳಿಗೆ ಕುಡಿಯುವ ನೀರು

11:24 AM Jun 08, 2019 | Suhan S |

ಮದ್ದೂರು: ನದಿ ಮೂಲದಿಂದ ಗ್ರಾಮಗಳಿಗೆ ಶುದ್ಧ ಕುಡಿಯುವ ನೀರು ಪೂರೈಸಲು ಆದ್ಯತೆ ನೀಡಲಾಗಿದೆ ಎಂದು ಸಾರಿಗೆ ಸಚಿವ ಡಿ.ಸಿ.ತಮ್ಮಣ್ಣ ಹೇಳಿದರು.

Advertisement

ತಾಲೂಕಿನ ದೇಶಹಳ್ಳಿ ಗ್ರಾಮದ ಮದ್ದೂರು ಕೆರೆಯಂಗಳದಲ್ಲಿ ಬೆಸಗರಹಳ್ಳಿ ಹಾಗೂ 38 ಗ್ರಾಮಗಳಿಗೆ 31.71 ಕೋಟಿ ರೂ. ಹಾಗೂ ನವಿಲೆ, ತೊರೆಶೆಟ್ಟಹಳ್ಳಿ ಮತ್ತು ಇತರೆ 53 ಗ್ರಾಮಗಳಿಗೆ 39.89 ಕೋಟಿ ರೂ. ವೆಚ್ಚದ ಬಹುಗ್ರಾಮ ಕುಡಿಯುವ ನೀರಿನ ಯೋಜನೆಗಳಿಗೆ ಚಾಲನೆ ನೀಡಿ ಅವರು ಮಾತನಾಡಿದರು.

ಕುಡಿವ ನೀರಿಗೆ ಮಾತ್ರ ಬಳಕೆ: ನದಿ ಮೂಲದಿಂದ ನೀರು ತಂದು ಕೆರೆಗಳನ್ನು ತುಂಬಿಸಿ ಬರಗಾಲದಲ್ಲೂ ಮೂರ್‍ನಾಲ್ಕು ತಿಂಗಳಿಗೆ ಸಾಕಾಗುವಷ್ಟು ನೀರು ಸಂಗ್ರಹಿಸಿಟ್ಟುಕೊಂಡು ಕುಡಿಯುವ ನೀರಿಗೆ ಉಪಯೋಗಿಸುವ ಯೋಜನೆ ಇದಾಗಿದೆ. ಈ ನೀರನ್ನು ರೈತರು ಕೃಷಿಗೆ ನೀಡುವಂತೆ ಬೇಡಿಕೆ ಇಡುವ ತಕರಾರನ್ನು ಅಧಿಕಾರಿಗಳು ಆರಂಭದಲ್ಲಿ ತೆಗೆದರು. ಕುಡಿಯುವ ನೀರು ಹೊರತುಪಡಿಸಿ ಬೇರಾವುದೇ ಉದ್ದೇಶಕ್ಕೆ ನೀರನ್ನು ಬಳಸದಂತೆ ಕಾನೂನು ಮಾಡುವಂತೆ ತಾಕೀತು ಮಾಡಿ ಸರ್ಕಾರದಿಂದ ಯೋಜನೆ ಮಂಜೂರು ಮಾಡಿಸಿದ್ದಾಗಿ ಹೇಳಿದರು.

ಹೂಳು ತೆಗೆಸಲು ಕ್ರಮ: ಮದ್ದೂರು ಕೆರೆಯಲ್ಲಿ ಎಷ್ಟೇ ಮಳೆ ಹೊಯ್ದರೂ 3 ಅಡಿಗಳಷ್ಟು ನೀರು ನಿಲ್ಲುತ್ತಿಲ್ಲ. ಈ ಕೆರೆಯಲ್ಲಿ ಹೂಳು ತುಂಬಿಕೊಂಡಿದೆ. ಇದನ್ನು 4 ಅಡಿ ಆಳ ತೆಗೆಸಲು ನಿರ್ಧರಿಸಿ ಹೆಚ್ಚು ನೀರು ಸಂಗ್ರಹ ವಾಗುವಂತೆ ಕ್ರಮ ವಹಿಸಲಾಗುವುದು. ಈ ಉದ್ದೇಶಕ್ಕಾಗಿಯೇ ಸರ್ಕಾರದಿಂದ 80 ಕೋಟಿ ರೂ. ಮಂಜೂರು ಮಾಡಿಸಿದ್ದೇನೆ. ಇನ್ನು ಸೂಳೆಕೆರೆ ಹಾಗೂ ನಾಲೆ ಅಭಿವೃದ್ಧಿಗೆ 125 ಕೋಟಿ ರೂ. ಮಂಜೂರು ಮಾಡಿಸಿದ್ದೇನೆ. ರೈತರಿಗೆ ಆತಂಕ ಬೇಡ. ಕುಡಿಯಲು ಹಾಗೂ ಕೃಷಿ ಎರಡಕ್ಕೂ ತೊಂದರೆಯಾಗದಂತೆ ನೀರು ಒದಗಿಸಲಾಗುವುದು ಎಂದು ತಿಳಿಸಿದರು.

ಶುದ್ಧೀಕರಣ ನೀರು ಪೂರೈಕೆ: ಜಲಧಾರೆ ಯೋಜನೆಯಡಿ 254 ಕೋಟಿ ರೂ. ವೆಚ್ಚದಲ್ಲಿ ಶ್ರೀರಂಗಪಟ್ಟಣದ ಅರಕೆರೆಯ ಶ್ರೀ ಬೋರೇದೇವರ ದೇವಸ್ಥಾನದಿಂದ ಸಬ್ಬನಹಳ್ಳಿ, ಯರಗನಹಳ್ಳಿ ಮೂಲಕ ನೀರು ತರುವ ಯೋಜನೆ ರೂಪಿಸಲಾಗಿತ್ತು. ಆದರೆ, ಆ ಯೋಜನೆಯನ್ನು ಈಗ ಎರಡು ಭಾಗಗಳಾಗಿ ವಿಂಗಡಿಸಿದೆ. ಮೈಸೂರು-ಬೆಂಗಳೂರು ಹೆದ್ದಾರಿಯ ಎಡ ಮತ್ತು ಬಲಭಾಗದಲ್ಲಿ ಹಾದು ಹೋಗುವಂತೆ ಯೋಜನೆ ತಯಾರಿಸಲಾಗಿದೆ. ಇಲ್ಲೊಂದು ಶುದ್ಧೀಕರಣ ಘಟಕ ನಿರ್ಮಾಣ ಮಾಡಿ ಕಾವೇರಿಯಿಂದ ನೇರವಾಗಿ ನೀರನ್ನು ಇಲ್ಲಿಗೆ ತಂದು ಶುದ್ಧೀಕರಣಗೊಂಡ ನೀರನ್ನು ಗ್ರಾಮಗಳಿಗೆ ಪೂರೈಸಲಾಗುವುದು. ಇದು ಮುಂದಿನ ಎರಡು-ಎರಡೂವರೆ ವರ್ಷದಲ್ಲಿ ಪೂರ್ಣಗೊಳ್ಳಲಿದೆ ಎಂದು ಹೇಳಿದರು.

Advertisement

ವೈಜ್ಞಾನಿಕ ಪೈಪ್‌ಲೈನ್‌: ಕುಡಿಯುವ ನೀರಿನ ಪೈಪ್‌ಲೈನ್‌ಗಳ ದುರಸ್ತಿಗೆ ನೂರಾರು ಕೋಟಿ ರೂ. ವೆಚ್ಚ ಮಾಡಿದರೂ ಸಮರ್ಪಕವಾಗಿ ನೀರು ಹರಿಸಲಾಗುತ್ತಿಲ್ಲ. ಪೈಪ್‌ಲೈನ್‌ ಹೆಸರಿನಲ್ಲಿ ಹಣವೆಲ್ಲವೂ ಗುತ್ತಿಗೆದಾರರ ಜೇಬು ಸೇರುತ್ತಿದೆ. ಇನ್ನು ಮುಂದೆ ಪೈಪ್‌ಲೈನ್‌ಗೆ ಯಾವುದೇ ಹಣ ಬಿಡುಗಡೆ ಮಾಡಬೇಡಿ. ಕ್ಷೇತ್ರದಲ್ಲಿರುವ ಓವರ್‌ಹೆಡ್‌ ಟ್ಯಾಂಕ್‌ಗಳನ್ನು ಹೊಸದಾಗಿ ನಿರ್ಮಿಸಿದ ನಂತರ ವೈಜ್ಞಾನಿಕವಾಗಿ ಪೈಪ್‌ಲೈನ್‌ ಅಳವಡಿಸೋಣ ಎಂದು ಹೇಳಿದರು.

ಸಣ್ಣ ನೀರಾವರಿ ಇಲಾಖೆಯಿಂದ ಕುಣಿಗಲ್ ಗಡಿಯಿಂದ ಮಳವಳ್ಳಿ ಗಡಿಭಾಗದವರೆಗೆ ಏತ ನೀರಾವರಿ ಯೋಜನೆಯಿಂದ ಕೆರೆಗಳಿಗೆ ನೀರು ಹರಿಸಲು ಉದ್ದೇಶಿಸಲಾಗಿದೆ. ಇದರಿಂದ ಕೃಷಿ ಹಾಗೂ ಕುಡಿಯುವ ನೀರಿಗೆ ಹೆಚ್ಚಿನ ಅನುಕೂಲವಾಗಲಿದೆ ಎಂದರು.

ಶಾಸಕ ಸುರೇಶ್‌ಗೌಡ ಮಾತನಾಡಿ, ಶುದ್ಧ ಕುಡಿಯುವ ನೀರನ್ನು ಗ್ರಾಮಗಳಿಗೆ ನೀಡುವುದು ಬಹಳ ಒಳ್ಳೆಯ ಕೆಲಸ. ಪ್ರತಿ ಹಳ್ಳಿಗಳಿಗೆ ನದಿ ಮೂಲದಿಂದ ಶುದ್ಧ ನೀರು ನೀಡುವುದು ಮೈತ್ರಿ ಸರ್ಕಾರದ ಉದ್ದೇಶವಾಗಿದೆ. ಜಲಧಾರೆ ಯೋಜನೆಯಡಿ ನಾಗಮಂಗಲ ತಾಲೂಕಿನ 375 ಹಳ್ಳಿಗಳಿಗೆ ನೀರು ಹರಿಸಲು ಯೋಜನೆ ರೂಪಿಸಲಾಗುತ್ತಿದೆ. ಇದು ಶಾಶ್ವತವಾದ ಕೆಲಸ. ಮುಂದಿನ ದಿನಗಳಲ್ಲಿ ಈ ಯೋಜನೆಯನ್ನು ಇಡೀ ಜಿಲ್ಲೆಗೆ ವಿಸ್ತರಿಸಲು ಮುಖ್ಯಮಂತ್ರಿ ಕುಮಾರಸ್ವಾಮಿ ಉದ್ದೇಶಿಸಿದ್ದಾರೆ ಎಂದರು.

ಟೀಕೆ ಮಾಡುವವರು ಮಾಡಲಿ. ಅದಕ್ಕೆಲ್ಲಾ ತಲೆಕೆಡಿಸಿಕೊಳ್ಳಬಾರದು. ಈಗ ಸಂಸದರಾಗಿರುವವರು ಕೇಂದ್ರದಿಂದ ಅದೆಷ್ಟು ಅನುದಾನ ಅಭಿವೃದ್ಧಿಗೆ ತರುತ್ತಾರೋ ತರಲಿ. ಅದಕ್ಕೆ ನಾವು ಸಹಕಾರ ನೀಡುತ್ತೇವೆ. ಅಭಿವೃದ್ಧಿಗೆ ಕೈಜೋಡಿಸಲು ಮುಂದೆ ಬರುವವರಿಗೆ ನಮ್ಮ ಸಹಕಾರವಿರುತ್ತದೆ ಎಂದು ಸಂಸದೆ ಸುಮಲತಾ ಹೆಸರು ಹೇಳದೆ ಸುರೇಶ್‌ಗೌಡ ಮಾತನಾಡಿದರು.

ಈ ವೇಳೆ ಜಿಪಂ ಅಧ್ಯಕ್ಷೆ ನಾಗರತ್ನಸ್ವಾಮಿ, ಸದಸ್ಯರಾದ ಬೋರಯ್ಯ, ಮರಿಹೆಗ್ಗಡೆ, ತಾಪಂ ಅಧ್ಯಕ್ಷೆ ಜಯಲಕ್ಷ್ಮಮ್ಮ, ಸದಸ್ಯರಾದ ಚಿಕ್ಕಮರಿಯಪ್ಪ, ಆಶಾ ಗೋಪಿ, ಗ್ರಾಮೀಣ ಕುಡಿಯುವ ನೀರು ಹಾಗೂ ನೈರ್ಮಲ್ಯ ಇಲಾಖೆಯ ಇಇ ರಾಮಕೃಷ್ಣ, ಎಇಇ ಚನ್ನಕೇಶವಯ್ಯ, ಎಪಿಎಂಸಿ ನಿರ್ದೇಶಕ ಪಿ.ಕೆ.ಸ್ವಾಮಿಗೌಡ, ಮನ್‌ಮುಲ್ ಮಾಜಿ ಅಧ್ಯಕ್ಷ ಚಿಕ್ಕೋನಹಳ್ಳಿ ತಮ್ಮಯ್ಯ, ಚಾಮನಹಳ್ಳಿ ಗ್ರಾಪಂ ಅಧ್ಯಕ್ಷ ಕೃಷ್ಣ ಇತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next