ಬೆಂಗಳೂರು: ಬಿಬಿಎಂಪಿ ವೈಟ್‌ಟಾಪಿಂಗ್ ಕಾಮಗಾರಿ ಕೈಗೆತ್ತಿಕೊಂಡ ಹಿನ್ನೆಲೆಯಲ್ಲಿ 110 ಹಳ್ಳಿಗಳಿಗೆ ಕುಡಿಯುವ ನೀರು ಪೂರೈಸುವ ಪೈಪ್ ಅಳವಡಿಕೆ ಕಾಮಗಾರಿ ಚುರುಗೊಂಡಿದ್ದು, ನಿಗದಿಗೂ ಮೊದಲೇ 30ಕ್ಕೂ ಹೆಚ್ಚು ಹಳ್ಳಿಗಳಿಗೆ ನೀರು ಪೂರೈಕೆಯಾಗುವ ಸಾಧ್ಯತೆಯಿದೆ.
ಹೊರವರ್ತುಲ ರಸ್ತೆಗಳು ಸೇರಿ 972.69 ಕೋಟಿ ರೂ. ವೆಚ್ಚದಲ್ಲಿ ಒಟ್ಟು 29 ರಸ್ತೆಗಳ 93.47 ಕಿ.ಮೀ. ಉದ್ದದ ರಸ್ತೆಗಳನ್ನು ವೈಟ್‌ಟಾಪಿಂಗ್‌ನಡಿ ಅಭಿವೃದ್ಧಿಪಡಿಸುವ ಕಾಮಗಾರಿಗೆ ಬಿಬಿಎಂಪಿ ಚಾಲನೆ ನೀಡಿದೆ. ವೈಟ್‌ಟಾಪಿಂಗ್ ರಸ್ತೆ ಸುಮಾರು 30 ವರ್ಷಗಳು ಬಾಳಿಕೆ ಬರಲಿದ್ದು, ರಸ್ತೆ ಮತ್ತೆ ಮತ್ತೆ ಅಗೆಯಲು ಸಾಧ್ಯವಾಗುವುದಿಲ್ಲ.
ಹೀಗಾಗಿ ರಸ್ತೆ ಕಾಮಗಾರಿಗೆ ಮೊದಲೇ ಪೈಪ್ ಅಳವಡಿಕೆ ಪೂರ್ಣಗೊಳಿಸುವಂತೆ ಜಲಮಂಡಳಿಗೆ ಪಾಲಿಕೆಯ ಅಧಿಕಾರಿಗಳು ಸೂಚಿಸಿದ್ದಾರೆ. ಆ ಹಿನ್ನೆಲೆಯಲ್ಲಿ ಪೈಪ್ ಅಳವಡಿಕೆ ಕಾರ್ಯಕ್ಕೆ ವೇಗ ನೀಡಿರುವ ಜಲಮಂಡಳಿ ಅಧಿಕಾರಿಗಳು, ವೈಟ್‌ಟಾಪಿಂಗ್ ಕಾಮಗಾರಿ ನಡೆಯುವ ರಸ್ತೆಗಳಲ್ಲಿ ಪೈಪ್ ಅಳವಡಿಕೆಗೆ ಮುಂದಾಗಿದ್ದಾರೆ.
ಈ ಮೊದಲು ಬಿಬಿಎಂಪಿ ಹಾಗೂ ಸಂಚಾರ ಪೊಲೀಸರಿಂದ ಅನುಮತಿ ಪಡೆಯಲು ಕನಿಷ್ಠ 4-5 ತಿಂಗಳಾಗುತ್ತಿತ್ತು. ಆದರೆ, ವೈಟ್‌ಟಾಪಿಂಗ್‌ಗೆ ಗುರುತಿಸಿರುವ ರಸ್ತೆಗಳಲ್ಲಿ ಕಾಮಗಾರಿ ಕೈಗೊಳ್ಳುವಂತೆ ಪಾಲಿಕೆಯ ಅಧಿಕಾರಿಗಳೇ ಸೂಚಿಸಿರುವುದರಿಂದ ಹೊಸ ಪೈಪ್ ಅಳವಡಿಕೆ, ಸ್ಥಳಾಂತರದಂತಹ ಕಾರ್ಯಗಳನ್ನು ಆದ್ಯತೆ ಮೇರೆಗೆ ಕೈಗೆತ್ತಿಕೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಜಲಮಂಡಳಿಯು 110 ಹಳ್ಳಿಗಳಿಗೆ ಕುಡಿಯುವ ನೀರು ಪೂರೈಸಲು 1,019.75 ಕೋಟಿ ರೂ. ವೆಚ್ಚದಲ್ಲಿ ಪೈಪ್ ಅಳವಡಿಸುವ ಕಾಮಗಾರಿ ನಡೆಸುತ್ತಿದೆ. ಅದರಂತೆ 2019ರ ವೇಳೆಗೆ 110 ಹಳ್ಳಿಗಳಿಗೆ ನೀರು ಪೂರೈಸುವುದು ಮಂಡಳಿಯ ಗುರಿಯಾಗಿತ್ತು. ಆದರೆ, ವೈಟ್‌ಟಾಪಿಂಗ್ ಕಾಮಗಾರಿಯಿಂದ 2018ರ ಜನವರಿ ವೇಳೆಗೆ 30ಕ್ಕೂ ಹೆಚ್ಚು ಹಳ್ಳಿಗಳಿಗೆ ನೀರು ಪೂರೈಯಾಗುವ ಸಾಧ್ಯತೆಯಿದ್ದು, 17 ಹಳ್ಳಿಗಳಿಗೆ ನೀರು ದೊರೆಯುವುದು ಖಚಿತವಾಗಿದೆ.