Advertisement

ಕುಡಿಯುವ ನೀರಿನ ಬವಣೆ: ಬಾವಿ ರೀಚಾರ್ಜಿಂಗ್‌ ಯೋಜನೆ ನನೆಗುದಿಗೆ

07:25 AM May 05, 2018 | |

ಕಾಸರಗೋಡು: ಕಳೆದ ಕೆಲವು ವರ್ಷಗಳಿಂದ ಕಾಸರಗೋಡು ಜಿಲ್ಲೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ತೀವ್ರವಾಗಿ ಕಾಡುತ್ತಿದೆ. ಇದನ್ನು ಗಣನೆಗೆ ತೆಗೆದುಕೊಂಡು ಅನುಷ್ಠಾನಕ್ಕೆ ತಂದ ಬಾವಿ ರೀಚಾರ್ಜಿಂಗ್‌ ಯೋಜನೆಯು ಇದೀಗ ನನೆಗುದಿಗೆ ಬಿದ್ದಿದೆ.

Advertisement

ಫಲಾನುಭವಿಗಳ ಪಟ್ಟಿಯನ್ನು  ಕಾರ್ಯದಕ್ಷತೆಯಿಂದ ಸಲ್ಲಿಸುವು ದಾಗಲಿ,ಯೋಜನೆಯನ್ನು ಯಶಸ್ವಿಗೊಳಿಸಬೇಕೆಂಬ ಸಂಕಲ್ಪವಾಗಲಿ ಗ್ರಾಮ ಪಂಚಾಯತ್‌ಗಳಿಗೆ ಇದ್ದಂತೆ ತೋರುತ್ತಿಲ್ಲ ಎಂಬ ಆಕ್ಷೇಪ ಕೇಳಿ ಬಂದಿದೆ. ಜಿಲ್ಲಾ ಪಂಚಾಯತ್‌ನ ಕಳೆದ ಮುಂಗಡಪತ್ರದಲ್ಲಿ  ಯೋಜನೆಯ ಯಶಸ್ಸಿಗಾಗಿ ಒಂದು ಕೋಟಿ ರೂಪಾಯಿ ಮೀಸಲಿಡಲಾಗಿತ್ತು. ಇಷ್ಟೊಂದು ಮೊತ್ತ ಗ್ರಾಮ ಪಂಚಾಯತ್‌ಗಳಿಗೆ ಲಭಿಸಿದೆಯೋ ಎಂಬ ಪ್ರಶ್ನೆ ವಾರ್ಡ್‌ ಸಭೆಗಳಲ್ಲಿ  ಕೇಳಿಬಂದಿತ್ತು.

ಜಿಲ್ಲಾ ಪಂಚಾಯತ್‌ ಮೀಸಲಿಟ್ಟ ಅನುದಾನವನ್ನು ಮೊದಲ ಹಂತ ಎಂಬ ನೆಲೆಯಲ್ಲಿ ಹತ್ತು ಗ್ರಾಮ ಪಂಚಾಯತ್‌ಗಳಿಗೆ ಹಂಚಲಾಗಿತ್ತು. 5 ಲಕ್ಷ ರೂ.ನಿಂದ 20 ಲಕ್ಷ  ರೂ. ವರೆಗೆ ಗ್ರಾಮ ಪಂಚಾಯತ್‌ಗಳಿಗೆ ನೀಡಲಾಗಿತ್ತು. ಆದರೆ ಹಣ ವಿನಿಯೋಗಿಸಿರುವುದರ ಕುರಿತು ನಿಖರವಾದ ಪಟ್ಟಿ  ಹೆಚ್ಚಿನ ಪಂಚಾಯತ್‌ಗಳಲಿಲ್ಲ.

ಗ್ರಾಮಸಭೆ ನಡೆಸಿ ತಯಾರಿಸಿದ ಫಲಾನುಭವಿಗಳ ಪಟ್ಟಿ ಮತ್ತು ಅದರ ಪ್ರಕಾರ ಲಭಿಸಿದ ಅರ್ಜಿಗಳನ್ನು ಪರಿಗಣಿಸಿ ಫಲಾನುಭವಿಗಳಿಗೆ 8 ಸಾವಿರ ರೂ. ತನಕ ನೀಡಲಾಗಿದೆ. ಮೊದಲ ಹಂತದ ಯೋಜನೆಯು ನಿರೀಕ್ಷಿಸಿದಷ್ಟು ಯಶಸ್ಸು ಕಾಣದಿರುವುದರಿಂದ ಈ ಬಾರಿಯ ಮುಂಗಡಪತ್ರದಲ್ಲಿ  ಜಿಲ್ಲಾ  ಪಂಚಾಯತ್‌ ಬಾವಿ ರಿಚಾರ್ಜಿಂಗ್‌ ಯೋಜನೆಗೆ ಕಡಿಮೆ ಮೊತ್ತವನ್ನು ಮೀಸಲಿರಿಸಿದೆ.

ಏನಿದು ಬಾವಿ ರೀಚಾರ್ಜಿಂಗ್‌ 
ಮನೆಯ ಟೆರೆಸ್‌ ಮೇಲೆ ಬೀಳುವ ಮಳೆನೀರನ್ನು ಪೋಲು ಮಾಡದೆ ಬಾವಿಗೆ ತಲುಪಿಸುವ ಯೋಜನೆ ಇದಾಗಿದೆ. ಟೆರೆಸ್‌ನಲ್ಲಿ ಅಳವಡಿಸಿದ ಪೈಪ್‌ಗ್ಳೊಂದಿಗೆ ಇತರ ಪೈಪ್‌ಗ್‌ಳನ್ನು ಜೋಡಿಸಲಾಗುವುದು. ಬಾವಿಯ ಹತ್ತಿರ ಬ್ಯಾರಲ್‌ ಇಟ್ಟು ಪೈಪ್‌ನಿಂದ ಬರುವ ನೀರನ್ನು  ಬ್ಯಾರಲ್‌ನಲ್ಲಿ  ಸಂಗ್ರಹಿಸಲಾಗುವುದು. ಸಾವಿರ ಚದರಡಿ ಮನೆಗಳಲ್ಲಿ  200 ಲೀಟರ್‌ನ ಬ್ಯಾರಲ್‌ ಸ್ಥಾಪಿಸಬೇಕು. ಬ್ಯಾರಲ್‌ನ ಕೆಳಭಾಗದಲ್ಲಿ ನೀರು ಬಾವಿಗೆ ತಲುಪಿಸಲಿರುವ ದ್ವಾರ ಇರಬೇಕು. ಬ್ಯಾರಲ್‌ ಅಡಿಯಲ್ಲಿ  20 ಸೆಂಟಿ ಮೀಟರ್‌ ಎತ್ತರದಲ್ಲಿ ಸಣ್ಣ  ಉರುಳುಕಲ್ಲುಗಳನ್ನು ಕ್ರಮಬದ್ಧವಾಗಿ ಇಡಬೇಕು. ಬಳಿಕ 20 ಸೆಂಟಿ ಮೀಟರ್‌ನಷ್ಟು  ಹೊಯ್ಗೆ  ಸೋಸಿ ಸಿಗುವ ಕಲ್ಲುಗಳನ್ನು ಇಡಬೇಕು. 20 ಸೆಂಟಿ ಮೀಟರ್‌ನಲ್ಲಿ  ಗೆರಟೆಯ ಮಸಿ (ಇದ್ದಲು) ಹಾಕಬೇಕು. ಕೊನೆಗೆ 10 ಸೆಂಟಿ ಮೀಟರ್‌ ಹೊಯ್ಗೆ, ಜಲ್ಲಿಕಲ್ಲುಗಳನ್ನು ಹಾಕಬೇಕು. 

Advertisement

ಈ ರೀತಿ ಪ್ರತ್ಯೇಕ ಸಜ್ಜೀಕರಣ ಗಳೊಂದಿಗೆ ತಯಾರಿಸಿದ ಬ್ಯಾರಲ್‌ನ ಕೆಳಗಿಳಿಯುವ ನೀರು ಶುದ್ಧೀಕರಣಗೊಳ್ಳುತ್ತದೆ. ಸಾವಿರ ಚದರ ಅಡಿ ವಿಸ್ತೀರ್ಣದ ಮನೆಯಿಂದ ಈ ರೀತಿ ಮಳೆನೀರು ಸಂಗ್ರಹಿಸಿದರೆ ಒಂದು ಮಳೆಗಾಲದಲ್ಲಿ  2 ಲಕ್ಷ  ಲೀಟರ್‌ ನೀರು ಬಾವಿಗೆ ತಲುಪಲಿದೆ ಎಂಬುದು ಅಧ್ಯಯನದಿಂದ ದೃಢಪಟ್ಟಿದೆ.

ಪಂಚಾಯತ್‌ಗಳಿಗೆ  ಬೇಕು ಇಚ್ಛಾಶಕ್ತಿ 
ಕಾಸರಗೋಡು ಜಿಲ್ಲೆಯಲ್ಲಿ ಒಟ್ಟು 38 ಗ್ರಾಮ ಪಂಚಾಯತ್‌ಗಳಲ್ಲೂ ಯೋಜನೆಯನ್ನು ಜಾರಿಗೊಳಿಸಲು ಮೊದಲಿಗೆ ನಿರ್ಧರಿಸಲಾಗಿತ್ತು. ಆದರೆ ಪಂಚಾಯತ್‌ಗಳಿಗೆ ಈ ಕುರಿತು ಅಸಡ್ಡೆ ಎದ್ದುಕಾಣುತ್ತಿದೆ ಎಂಬ ಆರೋಪವೂ ಇದೆ. ಈ ಮಧ್ಯೆ ಮಂಜೇಶ್ವರ, ಕಾಸರಗೋಡು ಮತ್ತು ಕಾರಡ್ಕ ಬ್ಲಾಕ್‌ ಪಂಚಾಯತ್‌ಗಳ ವ್ಯಾಪ್ತಿಯ ಗ್ರಾಮ ಪಂಚಾಯತ್‌ಗಳಲ್ಲಿ  ಮಳೆನೀರು ಸಂಗ್ರಹಿಸಿ ಬಾವಿಗೆ ರಿಚಾರ್ಜಿಂಗ್‌ ಮಾಡುವ ಯೋಜನೆಯನ್ನು  ವ್ಯವಸ್ಥಿತವಾಗಿ ಕಾರ್ಯಗತಗೊಳಿಸಲು ಸಕಲ ಸಿದ್ಧತೆಗಳು ನಡೆಯುತ್ತಿವೆ. ಆದರೆ ಯಾವೆಲ್ಲಾ ಪಂಚಾಯತ್‌ಗಳು ಯೋಜನೆಯನ್ನು  ಅನುಷ್ಠಾನಕ್ಕೆ ತರುತ್ತಿವೆ ಎಂಬುದು ಮುಂದಿನ ದಿನಗಳಲ್ಲಿ  ಗೊತ್ತಾಗಲಿದೆ.

Advertisement

Udayavani is now on Telegram. Click here to join our channel and stay updated with the latest news.

Next