ಸುರಪುರ: ನಗರಸಭೆ ವ್ಯಾಪ್ತಿಯ ಹಸನಾಪುರ ವಾರ್ಡ್ 19ರಲ್ಲಿ ಕಿರು ನೀರು ಸರಬರಾಜು ಮೋಟಾರು ಸುಟ್ಟು
ಹೋಗಿದ್ದು, ಕಳೆದ ಮೂರು ದಿನಗಳಿಂದ ನೀರಿಗೆ ಹಾಹಾಕಾರ ಉಂಟಾಗಿದೆ. ಈ ಹಿನ್ನೆಲೆಯಲ್ಲಿ ವಾರ್ಡ್ ಜನರು ಮುಸ್ಲಿಂ
ಸಮುದಾಯದ ಖಬರಸ್ತಾನದಲ್ಲಿರುವ ಕೊಳವೆಬಾವಿಗೆ ಮುಗಿ ಬೀಳುತ್ತಿದ್ದಾರೆ.
ವಾರ್ಡ್‌ನಲ್ಲಿರುವ ಐತಿಹಾಸಿಕ ಬಾವಿ ಬರಗಾಲದ ಹೊಡೆತಕ್ಕೆ ಸಿಲುಕಿ ನೀರಿಲ್ಲದೆ ಬತ್ತಿ ಹೋಗಿದೆ. ಇದರಿಂದಾಗಿ ಕೊಡ ನೀರಿಗಾಗಿ ನಾಗರಿಕರು ಪರದಾಡುವಂತಾಗಿದೆ.
ಈ ಮೊದಲು ಒಂದೇ ವಾರ್ಡ್ ಇತ್ತು. ಆದರೆ ಜನಸಂಖ್ಯೆ ಹೆಚ್ಚಳದಿಂದ ವಾರ್ಡ್ ವಿಂಗಡಿಸಲಾಗಿದೆ. ಸದ್ಯಕ್ಕೆ ವಾರ್ಡ್‌ನಲ್ಲಿ 12 ಮತದಾರರಿದ್ದಾರೆ. 2 ಸಾವಿರ ಮೇಲ್ಪಟ್ಟು ಜನಸಂಖ್ಯೆ ಇದೆ. ಒಬ್ಬರು ಸದಸ್ಯರಿದ್ದಾರೆ. ಕಿರು ನೀರು ಸರಬರಾಜು ಬೋರ್‌ಗೆ ಕಡಿಮೆ ಸಾಮರ್ಥ್ಯದ ಮೋಟಾರ್ ಅಳವಡಿಸಿದ್ದರಿಂದ ನೀರು ಝರಿಯಂತೆ ಬರುತಿತ್ತು. ಹೀಗಾಗಿ ಮನೆಗಳ ನಳಗಳನ್ನು ಬಂದ್ ಮಾಡಿ ಗುಮ್ಮಿಗೆ ಮಾತ್ರ ಪೂರೈಸಲಾಗುತ್ತಿದೆ. ಆದರೆ ಮೋಟಾರ್ ಸುಟ್ಟು ಹೋಗಿದೆ. ಇಷ್ಟು ದಿನಗಳಾದರು ನಗರಸಭೆಯವರು ದುರಸ್ತಿಗೆ ಆಸಕ್ತಿ ತೋರುತ್ತಿಲ್ಲ.
ಇದರಿಂದ ನಾಗರಿಕರು ಕುಡಿಯುವ ನೀರಿಗಾಗಿ ಕೊಡ ಹಿಡಿದು ಅಲೆದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು
ವಾರ್ಡ್‌ನ ಹಲವಾರು ನಾಗರಿಕರು ಆರೋಪಿಸಿದ್ದಾರೆ.
ವಾರ್ಡ್‌ನಲ್ಲಿ ಎರದೇ ಎರಡು ಕೊಳವೆಬಾವಿಗಳಿವೆ. ಕೆಟ್ಟು ಹೋಗಿರುವ ಒಂದು ಕೊಳವೆಬಾವಿ ನಗರಸಭೆ ನಿರ್ಲಕ್ಷ್ಯದಿಂದ ಇದುವರೆಗೂ ದುರಸ್ತಿಯಾಗುತ್ತಿಲ್ಲ. ಹಾಗಾಗಿ ಕಬರಸ್ತಾನದಲ್ಲಿರುವ ಕೊಳವೆಬಾವಿ ಬಿಟ್ಟರೆ ಎಲ್ಲಿಯೂ ಕೊಡ ನೀರು ಸಿಗುತ್ತಿಲ್ಲ.ಬೆಳಗಿನಿಂದ ಸಂಜೆವರೆಗೂ ಕೊಳವೆಬಾವಿ ಎದುರು ಉದ್ದನೆ ಸಾಲು ಇರುತ್ತದೆ.
ಹೀಗಾಗಿ ಮಹಿಳೆಯರು ಮಕ್ಕಳು, ಯುವಕರಿಗೆ ಬೆಳಗಿನ 9:00ರಿಂದ ಸಂಜೆ 7:00ರ ವರೆಗೆ ನೀರು ತರುವುದೊಂದೇ
ಕೆಲಸವಾಗಿ ಬಿಟ್ಟಿದೆ. ಬೇಸಿಗೆ ಮುಗಿಯವವರೆಗೂ ನಗರದಲ್ಲಿ ಎಲ್ಲಿಯೂ ಕುಡಿಯುವ ನೀರಿಗೆ ತೊಂದರೆಯಾಗದಂತೆ ಜಾಗೃತಿ ವಹಿಸುವಂತೆ ಜಿಲ್ಲಾಧಿಕಾರಿ ಕೂರ್ಮಾರಾವ್ ಖಡಕ್ಕಾಗಿ ಸೂಚಿಸಿದ್ದಾರೆ. ಪ್ರತಿ ವಾರ್ಡ್‌ಗಳಿಗೂ ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡಲು ಸ್ಕೇರ್‌ಸಿಟಿ ಯೋಜನೆ ಅಡಿ ಸಾಕಷ್ಟು ಅನುದಾನ ಕಲ್ಪಿಸಲಾಗಿದೆ.
ಶಾಸಕ ರಾಜೂಗೌಡ ಕೂಡ ನಗರಸಭೆ ಅಧಿಕಾರಿಗಳ ಸಭೆ ನಡೆಸಿ ನೀರಿನ ವಿಷಯದಲ್ಲಿ ಎಲ್ಲ ಮುಂಜಾಗೃತಾ ಕ್ರಮ
ಕೈಗೊಳ್ಳುವಂತೆ ತಾಕೀತು ಮಾಡಿದ್ದಾರೆ. ನಾಗರಿಕರ ಹಿತದೃಷ್ಟಿಯಿಂದ ವೈಕ್ತಿಕವಾಗಿ ನಗರಸಭೆಗೆ ಟ್ಯಾಂಟರ್ ಕೊಟ್ಟಿದ್ದಾರೆ. ಈಗಾಗಲೇ ವಿವಿಧ ವಾರ್ಡ್‌ಗಳಲ್ಲಿ ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡಲಾಗುತ್ತಿದೆ. ಆದರೆ ಹಸನಾಪುರ ವಾರ್ಡ್‌ಗೆ ಮಾತ್ರ ಸರಬರಾಜು ಮಾಡದೆ ನಗರಸಭೆ ನಿರ್ಲಕ್ಷ್ಯವಹಿಸಿದೆ ಎಂದು ನಾಗರಿಕರು ದೂರಿದ್ದಾರೆ.
ಕಿರು ನೀರು ಸರಬರಾಜು ಯಂತ್ರವನ್ನು ತ್ವರಿತವಾಗಿ ದುರಸ್ತಿ ಮಾಡಿಸಬೇಕು. ಹೊಸದಾಗಿ ಕೊರೆದಿರುವ ಕೊಳವೆಬಾವಿಗೆ ಶೀಘ್ರವೇ ಮೋಟಾರ್ ಅಳವಡಿಸಿ ಸಮರ್ಪಕ ನೀರು ಒದಗಿಸಬೇಕು. ಅಲ್ಲಿಯವರೆಗೆ ತಾತ್ಕಾಲಿಕವಾಗಿ ಟ್ಯಾಂಕರ್ ನೀರು ಸರಬರಾಜು ಮಾಡಬೇಕು. ನಿರ್ಲಕ್ಷ್ಯ ವಹಿಸಿದಲ್ಲಿ ಮಂಗಳವಾರ ವಾರ್ಡ್‌ನ ಜನರೊಂದಿಗೆ ನಗರಸಭೆ ಎದುರು ಪ್ರತಿಭಟನೆ ಮಾಡಲಾಗುವುದು.
ರಾಘವೇಂದ್ರ ಗಂಗನಾಳ, ವಾರ್ಡ್ ನಾಗರಿಕ
ಯಂತ್ರ ಕೆಟ್ಟಿರುವ ಬಗ್ಗೆ ಗಮನಕ್ಕೆ ಬಂದಿದೆ. ಶೀಘ್ರವೇ ಮೋಟಾರ್ ದುರಸ್ತಿ ಮಾಡಿಸಲಾಗುವುದು. ಟ್ಯಾಂಕರ್
ನೀರು ಸರಬರಾಜಿಗೆ ಯಾವುದೇ ತೊಂದರೆ ಇಲ್ಲ. ಮೋಟಾರು ದುರಸ್ತಿ ಆಗುವವರೆಗೂ ಟ್ಯಾಂಕರ್ ನೀರು ಸರಬರಾಜು ಮಾಡಲು ಸೂಚಿಸುತ್ತೇನೆ.
ಏಜಾಜ್‌ಹುಸೇನ್, ಪೌರಾಯುಕ್ತ
ಇಲ್ಲ ಕಡೆಯೂ ಇದೇ ಸಮಸ್ಯೆ ಇದೆ. ಮೋಟಾರು ಎತ್ತುವ ಯಂತ್ರ ಸಿಗದ ಕಾರಣ ವಿಳಂಬ ಆಗಿದೆ. ತ್ವರಿತವಾಗಿ ಯಂತ್ರ
ದುರಸ್ತಿ ಮಾಡಿಸಲಾಗುವುದು. ಸ್ಕೇರ್‌ಸಿಟಿಯಲ್ಲಿ ಕೊರೆದಿರುವ ಹೊಸ ಕೊಳವೆಬಾವಿಗೆ ಶೀಘ್ರದಲ್ಲಿ ಮೋಟಾರ್ ಅಳವಡಿಸಲಾಗುವುದು.
ಯಲ್ಲಪ್ಪ ನಾಯಕ ಡೊಣ್ಣಿಗೇರಾ, ವ್ಯವಸ್ಥಾಪಕ