Advertisement

Dasara: ರಾಜ್ಯಕ್ಕೆ ಕೆಟ್ಟ ಹೆಸರು ತರಲು ಯತ್ನಿಸುತ್ತಿರುವವರೇ ದುಷ್ಟಶಕ್ತಿಗಳು: ಡಿಕೆಶಿ

02:15 AM Oct 13, 2024 | Team Udayavani |

ಮಡಿಕೇರಿ: ಅನಾವಶ್ಯಕ ವಿಷಯಗಳನ್ನು ಮುಂದಿಟ್ಟುಕೊಂಡು ರಾಜ್ಯಕ್ಕೆ ಕೆಟ್ಟ ಹೆಸರು ತರಲು ಪ್ರಯತ್ನ ಮಾಡುತ್ತಿರುವವರೇ ದುಷ್ಟಶಕ್ತಿಗಳು ಎಂದು ಡಿಸಿಎಂ ಡಿ.ಕೆ. ಶಿವಕುಮಾರ್‌ ತಿಳಿಸಿದರು.

Advertisement

ಮಡಿಕೇರಿಯಲ್ಲಿ ಶುಕ್ರ ವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ದುಃಖವನ್ನು ನಿವಾರಿಸುವ ದುರ್ಗಾ ದೇವಿ, ದುಷ್ಟರನ್ನು ದೂರಮಾಡಿ ಎಲ್ಲರಿಗೂ ಒಳಿತು ಮಾಡಿ ಹರಸಲಿ. ನಮ್ಮ ರಾಜ್ಯ ಶಾಂತಿಯ ತೋಟವಾಗಿ ಪರಿವರ್ತನೆ ಆಗಬೇಕೆಂದು ಪ್ರಾರ್ಥಿಸುತ್ತೇನೆ ಎಂದರು. ನಾನು ವಿಪಕ್ಷದವರಿಗೆ ಉತ್ತರ ನೀಡಲು ಬಯಸುವುದಿಲ್ಲ. ಸಕಾರಾತ್ಮಕ ವಿಷಯದ ಬಗ್ಗೆ ಮಾತ್ರ ಮಾತನಾಡುತ್ತೇನೆ. ಜಾತಿ ಗಣತಿ ವಿಚಾರದಲ್ಲಿ ಬಿಜೆಪಿ ತನ್ನ ನಿಲುವನ್ನು ಪ್ರದರ್ಶಿಸಲಿ ಎಂದರು.

ಮಡಿಕೇರಿ ದಸರಾ ಖ್ಯಾತಿ ಪಡೆಯಲಿ
ಕೊಡಗಿನ ಸಂಸ್ಕೃತಿಯ ಸಂಕೇತ ಮಡಿಕೇರಿ ದಸರಾಕ್ಕೆ ಚಾಲನೆ ನೀಡಲು ಮಡಿಕೇರಿಗೆ ಆಗಮಿಸಿದ್ದೇನೆ. ಈ ವಿಶೇಷ ಸಂದರ್ಭಕ್ಕೆ ಹಾಗೂ ನಮ್ಮ ಸಂಸ್ಕೃತಿಯ ಸಂಕೇತದ ಆಚರಣೆಗೆ ಪ್ರೋತ್ಸಾಹ ನೀಡಬೇಕು ಎಂದು ಬಂದಿದ್ದೇನೆ. ಮೈಸೂರು ದಸರಾ ಮಾದರಿಯಲ್ಲೇ ಮಡಿಕೇರಿ ದಸರಾವೂ ಖ್ಯಾತಿ ಪಡೆಯಲು ಈ ಭಾಗದ ಜನರು ಒಗ್ಗಟ್ಟಿನಿಂದ ಕೆಲಸ ಮಾಡುತ್ತಿರುವುದು ಸ್ವಾಗತಾರ್ಹ ಎಂದು ಶಿವಕುಮಾರ್‌ ತಿಳಿಸಿದರು.

ವಿವಿಧ ದೇವಾಲಯಗಳಿಗೆ ಭೇಟಿ
ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರು ನಗರದ ವಿವಿಧ ದೇವಾಲಯಗಳಿಗೆ ಶುಕ್ರವಾರ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು. ನಗರದ ಶಕ್ತಿ ದೇವತೆಗಳಾದ ಕುಂದೂರುಮೊಟ್ಟೆ ಶ್ರೀ ಚೌಟಿ ಮಾರಿಯಮ್ಮ, ದಂಡಿನ ಮಾರಿಯಮ್ಮ, ಕೋಟೆ ಮಾರಿಯಮ್ಮ, ಕಂಚಿ ಕಾಮಾಕ್ಷಿ, ಶ್ರೀ ಕೋಟೆ ಗಣಪತಿ, ಪೇಟೆ ಶ್ರೀ ರಾಮಮಂದಿರ, ಶ್ರೀ ಕೋದಂಡರಾಮ ದೇವಾಲಯ, ಶ್ರೀ ಮುತ್ತಪ್ಪ ದೇವಾಲಯ, ಕರವಲೆ ಭಗವತಿ ದೇವಾಲಯ, ಶ್ರೀ ಚೌಡೇಶ್ವರಿ ದೇವಾಲಯ, ವಿಜಯ ವಿನಾಯಕ, ದೇಚೂರು ಶ್ರೀರಾಮ ಮಂದಿರ ಸಹಿತ ವಿವಿಧ ದೇವಸ್ಥಾನಗಳಿಗೆ ಭೇಟಿ ನೀಡಿದರು.

ಕೊಡಗು ಜಿಲ್ಲಾ ಉಸ್ತುವಾರಿ ಸಚಿವ ಎನ್‌. ಎಸ್‌.ಭೋಸರಾಜು, ಮುಖ್ಯಮಂತ್ರಿ ಅವರ ಕಾನೂನು ಸಲಹೆಗಾರ ಹಾಗೂ ವೀರಾಜಪೇಟೆ ಕ್ಷೇತ್ರದ ಶಾಸಕ ಎ.ಎಸ್‌.ಪೊನ್ನಣ್ಣ, ಮಡಿಕೇರಿ ಶಾಸಕ ಡಾ| ಮಂಥರ್‌ ಗೌಡ ಸಹಿತ ಪ್ರಮುಖರು ಇದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next