ಕಲಬುರಗಿ: ಕುಡಿಯುವ ನೀರು, ಚರಂಡಿ, ರಸ್ತೆ ಮುಂತಾದ ಮೂಲಭೂತ ಸಮಸ್ಯೆಗಳಿಗೆ ಪರಿಹಾರ ಕಲ್ಪಿಸಬೇಕೆಂದು ಒತ್ತಾಯಿಸಿ ನಗರದ ಸೇಡಂ ರಸ್ತೆಯ ವೀರೇಂದ್ರ ಪಾಟೀಲ ಬಡಾವಣೆ ನಾಗರಿಕರು ವಿವಿಧ ಸಂಘಟನೆಗಳ ಸಹಾಯದೊಂದಿಗೆ ಸೇಡಂ ರಸ್ತೆಯಲ್ಲಿ ರಸ್ತೆ ತಡೆ ನಡೆಸಿದರು.
ವಿರೇಂದ್ರ ಪಾಟೀಲ ಬಡಾವಣೆಯ 1, 2 ಹಾಗೂ 3ನೇ ಹಂತದಲ್ಲಿ ಕಳೆದ ಒಂದು ವರ್ಷದಿಂದ ಬಡಾವಣೆಯಲ್ಲಿ ನೀರಿನ ಟ್ಯಾಂಕ್ ಇದ್ದರೂ 10 ದಿನಕ್ಕೊಮ್ಮೆ ಕೇವಲ ಅರ್ಧಗಂಟೆ ಮಾತ್ರ ನೀರು ಬಿಡಲಾಗುತ್ತದೆ. ಇದರಿಂದ ಬಡಾವಣೆ ನಾಗರಿಕರು ಸಂಕಷ್ಟದಲ್ಲಿದ್ದಾರೆ. ಕೇಳುವವರು ಯಾರು ಇಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಬಡಾವಣೆಯಲ್ಲಿ ಬೋರವೆಲ್ ಹಾಕಿದರೂ ನೀರು ಬರುವುದಿಲ್ಲ. ಈ ಬಗ್ಗೆ ಪಾಲಿಕೆ ಹಾಗೂ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಗೆ ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ ಎಂದರು.
ಬಡಾವಣೆಯಲ್ಲಿ ಒಳಚರಂಡಿ ಕಾಮಗಾರಿ ಪೂರ್ಣವಾಗಿ ಒಂದು ವರ್ಷವಾದರೂ ಹದಗೆಟ್ಟ ರಸ್ತೆಗಳ ದುರಸ್ತಿಯಾಗಿಲ್ಲ. ಈ ರಸ್ತೆಗಳ ಮೇಲೆ ಓಡಾಡಲು ಜನರಿಗೆ ತೊಂದರೆಯಾಗುತ್ತಿದೆ. ಮಳೆಯಾದಾಗ ಕೆಸರು ಉಂಟಾಗಿ ಬಿದ್ದು ಕೈಕಾಲು
ಮುರಿದುಕೊಂಡಿದ್ದಾರೆ ಎಂದು ಆರೋಪಿಸಿದರು.
ವಿದ್ಯುತ್ ಕಂಬಗಳಿಗೆ ದೀಪಗಳಿಲ್ಲ. ಈ ಬಗ್ಗೆ ಬೀದಿ ದೀಪ ಅಳವಡಿಸುವಂತೆ ಮನವಿ ಮಾಡಿದರೆ ಈ ವಾರ್ಡ್ 29-30 ಕ್ಕೆ ಬರುತ್ತದೆ ಎಂದು ಹೇಳಿ ದೀಪ ಅಳವಡಿಸುತ್ತಿಲ್ಲ. ರಾತ್ರಿ ಇಲ್ಲಿನ ಜನರು ಕತ್ತಲಲ್ಲಿಯೇ ಓಡಾಡುವಂತಾಗಿದೆ. ನಗರಾಭಿವೃದ್ಧಿ ಪ್ರಾಧಿಕಾರದ ವ್ಯಾಪ್ತಿಯಲ್ಲಿದ್ದರೂ ಪ್ರಾಧಿಕಾರ ಯಾವುದೇ ಸೌಲಭ್ಯ ಒದಗಿಸುವಲ್ಲಿ ವಿಫಲವಾಗಿದೆ ಎಂದರು. ರಸ್ತೆ ತಡೆ ವೇಳೆ ನಂದಿ ಬಸವೇಶ್ವರ ಟ್ರಸ್ಟ್, ವೀರೇಂದ್ರ ಪಾಟೀಲ ಬಡಾವಣೆ ಕ್ಷೇಮಾಭಿವೃದ್ಧಿ ಸಂಘ, ಡಾ| ಅಂಬೇಡ್ಕರ ನವ ಯುವ ಸಂಘ, ಓಂ ನಗರ ಅಭಿವೃದ್ಧಿ ಸೇವಾ ಸಂಘ, ಜೈ ಹನುಮಾನ ಟ್ರಸ್ಟ್, ಗೌರಿಶಂಕರ ದೇವಾಲಯ.