Advertisement
ಕರಾವಳಿ ಜಿಲ್ಲೆಗಳ ಭೂರಚನೆ ಎನ್ನುವುದು ಸ್ಪಂಜಿನಂತಹ ರಚನೆಯಾಗಿದೆ. ಇಲ್ಲಿ ಮಳೆ ಬಂದಾಗ ನೀರನ್ನು ಹಿಡಿದಿಟ್ಟುಕೊಳ್ಳುವುದು ಅಧಿಕ, ಅಂತೆಯೇ ಬಿಟ್ಟುಕೊಡುವುದೂ ಕೂಡ ಬೇಗ. ಉಡುಪಿ ಜಿಲ್ಲೆಯೆನ್ನುವುದು ಅಧಿಕ ಮಳೆಯಾಗುವ ಪ್ರದೇಶ. ಈ ಬಾರಿ ಅತ್ಯಧಿಕ 4 ಮೀಟರ್ ಮಳೆಯಾಗಿದೆ. ಇಷ್ಟು ಮಳೆಯಾದರೆ ಬೇಸಗೆಯಲ್ಲಿ ನೀರಿನ ಸಮಸ್ಯೆ ಬರಲಾರದು. ಆದರೆ ಇತ್ತೀಚಿನ ದಿನಗಳಲ್ಲಿ ನೀರಿನ ಸಮಸ್ಯೆ ಕಂಡುಬರುತ್ತಿದೆ. ಇದಕ್ಕೆ ಕಾರಣ ಜಲ ಮರುಪೂರಣಕ್ಕೆ ಅವಕಾಶ ನೀಡದಿರುವುದು. ಪ್ರತಿಯೊಬ್ಬರೂ ಮನೆ ನಿರ್ಮಾಣ ಸಂದರ್ಭ, ಪಂಚಾಯತ್‌ಗಳು ಇಂಗುಗುಂಡಿ ರಚಿಸಿದಲ್ಲಿ ಬೇಸಗೆಯಲ್ಲಿ ನೀರಿನ ಸಮಸ್ಯೆ ಕಾಣಿಸದು.
ಪ್ರತಿ ಹನಿಯೂ ಅಮೂಲ್ಯ
ಕರಾವಳಿಗಳಲ್ಲಿ ಜಲ ಮರುಪೂರಣಕ್ಕೆ ಜೂನ್, ಜುಲೈ ತಿಂಗಳಲ್ಲಿ ಬರುವ ಮಳೆಯೆನ್ನುವುದು ಅಷ್ಟು ಪ್ರಾಮುಖ್ಯತೆ ಪಡೆಯುವುದಿಲ್ಲ. ಏಕೆಂದರೆ ಆ ಸಂದರ್ಭ ಅಗತ್ಯಕ್ಕಿಂತ ಹೆಚ್ಚಿನ ಮಳೆ ಬೀಳುತ್ತದೆ. ಆದರೆ ಅಗಸ್ಟ್ ಅನಂತರ ಬೀಳುವ ಪ್ರತಿ ಹನಿ ಮಳೆಯೂ ಕೂಡ ಪ್ರಾಮುಖ್ಯತೆ ಪಡೆಯುತ್ತದೆ. ವರ್ಷದಿಂದ ವರ್ಷಕ್ಕೆ ಕುಸಿತ
2013ರ ಅನಂತರದ ವರ್ಷಗಳ ಸೆಪ್ಟೆಂಬರ್ ತಿಂಗಳ ಅಂತರ್ಜಲ ಮಟ್ಟದ ದತ್ತಾಂಶಗಳನ್ನು ಪರಿಶೀಲಿಸಿದಾಗ ಉಡುಪಿ ಜಿಲ್ಲೆಯಲ್ಲಿ ವರ್ಷದಿಂದ ವರ್ಷಕ್ಕೆ ಅಂತರ್ಜಲ ಮಟ್ಟ ಕುಸಿಯುತ್ತಾ ಬರುತ್ತಿದೆ. 2013ರ ಸೆಪ್ಟೆಂಬರ್ ನಲ್ಲಿ 2.34 ಮೀಟರ್ ಇದ್ದ ಮಟ್ಟ 2018ರಲ್ಲಿ 5.06 ಮೀ.ಗೆ ಇಳಿದಿದೆ. ಕಳೆದ ವರ್ಷ ಜಿಲ್ಲೆಯಲ್ಲಿ ಸುರಿದ ಮಳೆಯ ಪ್ರಮಾಣಕ್ಕಿಂತಲೂ ಈ ಬಾರಿ ಅಧಿಕ ಮಳೆಯಾಗಿದೆ. ಆದರೆ ಕಳೆದ ವರ್ಷ ಸೆಪ್ಟೆಂಬರ್ ತಿಂಗಳಿನಲ್ಲಿ 5.02 ಮೀ. ಇತ್ತು. ಆದರೆ ಈ ಬಾರಿ 5.06 ಮೀಟರ್‌ಗೆ ಕುಸಿದಿದೆ.
Related Articles
ಹವಾಮಾನ ವೈಪರೀತ್ಯ?
ಈ ರೀತಿಯಾಗಿ ಕುಸಿಯುತ್ತಿರುವುದಕ್ಕೆ ಹವಾಮಾನ ವೈಪರೀತ್ಯ ಕೂಡ ಕಾರಣವಾಗಿದೆ. ಈ ವರ್ಷ ಜುಲೈ, ಅಗಸ್ಟ್ ತಿಂಗಳಿನಲ್ಲಿ 3.21 ಮೀ. ಇದ್ದ ಅಂತರ್ಜಲ ಮಟ್ಟ ಸೆಪ್ಟೆಂಬರ್ ತಿಂಗಳಾಂತ್ಯಕ್ಕೆ 5.06ರಷ್ಟು ಕುಸಿತ ಕಂಡಿದೆ. ಇದಕ್ಕೆ ಪ್ರಮುಖ ಕಾರಣ ನೀರಿನ ಬಳಕೆ ಅಧಿಕಗೊಂಡಿರುವುದು, ನೀರು ಇಂಗುವ ಸ್ಥಳಗಳನ್ನು ಮುಚ್ಚಿರುವುದು ಮತ್ತು ತಾಪಮಾನ ಕೂಡ ಹೆಚ್ಚಿರುವುದಾಗಿದೆ. ಕರಾವಳಿ ಪ್ರದೇಶದ ಭೂರಚನೆ ಸ್ಪಂಜಿನಂತಹ ರಚನೆಯಾಗಿರುವುದರಿಂದ ಅಧಿಕ ನೀರಿನ ಬಳಕೆ ಮತ್ತು ತಾಪಮಾನಕ್ಕೆ ಬೇಗ ಆವಿಯಾಗುತ್ತದೆ. ಇದನ್ನು ತಡೆ ಯಲು ಜಲಮರುಪೂರಣ ಕೂಡ ಅತ್ಯಗತ್ಯ. ಆಗಸ್ಟ್ ಅನಂತರ ಬೀಳುವ ಪ್ರತಿ ಮಳೆಹನಿಯನ್ನು ಇಂಗಿಸಿದಲ್ಲಿ ಮಾತ್ರ ಬೇಸಗೆಯಲ್ಲಿ ಅಗತ್ಯವಿರುವಷ್ಟು ನೀರಿನ ಬಳಕೆ ಮಾಡಲು ಸಾಧ್ಯ.
Advertisement
ಇಂಗು ಗುಂಡಿ ಸೂಕ್ತಪ್ರತಿ ಕಟ್ಟಡದಲ್ಲಿ ವೈಜ್ಞಾನಿಕವಾಗಿ ಇಂಗು ಗುಂಡಿಗಳನ್ನು ಮಾಡಬೇಕು. ಅತ್ಯಧಿಕ ಪ್ರಮಾಣದಲ್ಲಿ ನೀರು ಹರಿದು ಸಮುದ್ರ ಸೇರುವ ಬದಲು ಆಯಕಟ್ಟಿನ ಸ್ಥಳಗಳಲ್ಲಿ ಇಂಗು ಗುಂಡಿ ರಚಿಸಿ ಮರುಪೂರಣ ಮಾಡಬೇಕಾಗಿದೆ. 400 ಮಿ. ಮೀ. ಮಳೆ ಸುರಿಯುವಲ್ಲಿ ಕೂಡ ಜಲಮರುಪೂರಣ ಕ್ರಮಗಳನ್ನು ಅನುಸರಿಸುತ್ತಾರೆ. ಆದರೆ 4 ಸಾವಿರ ಮಿ.ಮೀ. ಮಳೆ ಬೀಳುವ ಕರಾವಳಿಯಲ್ಲಿ ಅನುಸರಿಸುತ್ತಿಲ್ಲ. ನೈಸರ್ಗಿಕ ಮರುಪೂರಣ ಸ್ಥಳಗಳಾದ ಕೆರೆ, ಮದಗಗಳು ಮುಚ್ಚಲ್ಪಟ್ಟಿದ್ದರಿಂದ ಮರುಪೂರಣ ಘಟಕಗಳು ಅವಶ್ಯವಾಗಿದೆ. ನಗರ ಪ್ರದೇಶಗಳಲ್ಲಿ ಕಡ್ಡಾಯವಾಗಿ ಮಾಡಲೇಬೇಕು. 2019ಕ್ಕೆ ಕರಾವಳಿಯ ಪರಿಸ್ಥಿತಿ ಗಂಭೀರ?
ಕರಾವಳಿಗರಲ್ಲಿ ಜಲಜಾಗೃತಿ ಕಡಿಮೆ ಇದೆ. ಈ ಬಗ್ಗೆ ಜಾಗೃತಿ ಮೂಡಿಸುವ ಕೆಲಸ ಜಿಲ್ಲಾಡಳಿತ ಮಾಡಬೇಕು. ಈ ಬಾರಿ ಮಳೆಗಾಲದಲ್ಲಿ ತುಂಬಿ ಹರಿಯುತ್ತಿದ್ದ ನದಿಗಳಲ್ಲಿ ಹಠಾತ್ ನೀರಿನ ಕೊರತೆಯುಂಟಾಗಿದೆ. ಮುಂದೆ ಮಳೆ ಬಾರದೇ ಇದ್ದಲ್ಲಿ 2019ರ ಬೇಸಗೆ ಕಡು ಬೇಸಗೆಯಾಗಲಿದ್ದು ಜಲಕ್ಷಾಮ ಉಂಟಾಗಲಿದೆ.
– ಶ್ರೀ ಪಡ್ರೆ, ಜಲ ತಜ್ಞರು ಮಳೆಗಾಲದಲ್ಲಿ ಬೋರ್‌ವೆಲ್ ಬಳಕೆ ಏಕೆ?
ಕರಾವಳಿಯೆನ್ನುವುದು 4 ಸಾವಿರ ಮಿ.ಮೀ. ಮಳೆ ಬರುವ ಪ್ರದೇಶ. ಆದರೆ ಇಲ್ಲಿ ಎಷ್ಟು ಮಳೆ ಬಂದಿದೆ ಎನ್ನುವುದಕ್ಕಿಂತ ಎಷ್ಟು ಮರುಪೂರಣವಾಗಿದೆ ಎನ್ನುವುದು ಅಗತ್ಯವಾಗುತ್ತದೆ. ಮಳೆಗಾಲದಲ್ಲೂ ಬೋರ್‌ವೆಲ್ ನೀರು ಬಳಸುವುದಕ್ಕಿಂತ ಛಾವಣಿಯ ಮೇಲೆ ಬೀಳುವ ನೀರನ್ನು ಟ್ಯಾಂಕ್‌ಗೆ ತೆರಳುವಂತೆ ಮಾಡಿ ಬಳಕೆ ಮಾಡಿದ್ದಲ್ಲಿ ನೀರಿನ ಸದ್ಭಳಕೆಯಾಗುತ್ತದೆ. ಜಲಮರುಪೂರಣ ಅಗತ್ಯ
ಕರಾವಳಿ ಪ್ರದೇಶ ಲ್ಯಾಟ್ಯಾರಿಟಿಕ್ ಟೆರಿಟೆರಿ ಆದ್ದರಿಂದ ನೀರು ಹೀರಿಕೊಂಡಷ್ಟು ಬೇಗದಲ್ಲಿಯೇ ನೀರನ್ನು ಬಿಟ್ಟುಕೊಡುತ್ತದೆ. ಆದ್ದರಿಂದ ಮಳೆಗಾಲದಲ್ಲಿ ಹೆಚ್ಚು ಹೆಚ್ಚು ಜಲಮರುಪೂರಣ ಅತ್ಯಗತ್ಯ. ಹೆಚ್ಚು ನೀರು ಭೂಮಿಗೆ ಸೇರಿದಷ್ಟು ಭವಿಷ್ಯದಲ್ಲಿ ನೀರಿನ ಸಮಸ್ಯೆಯಾಗುವುದಿಲ್ಲ.
– ಎಂ. ದಿನಕರ್ ಶೆಟ್ಟಿ, ಪ್ರಭಾರ ಭೂವಿಜ್ಞಾನಿ, ಜಿಲ್ಲಾ ಅಂತರ್ಜಲ ವಿಭಾಗ — ಹರೀಶ್ ಕಿರಣ್ ತುಂಗ