Advertisement

ಕುಡಿವ ನೀರಿನ ಸಮಸ್ಯೆ ಆಗದಿರಲಿ

09:15 AM Jan 25, 2019 | |

ಔರಾದ: ಗ್ರಾಮೀಣ ಭಾಗದ ಸಮಸ್ಯೆಗಳನ್ನು ಆಲಿಸಿ ಬಗೆ ಹರಿಸುವ ಉದ್ದೇಶದಿಂದ ಪ್ರತಿವರ್ಷ ತಾಲೂಕಿನಲ್ಲಿ ಗ್ರಾಮ ಸಂಚಾರ ನಡೆಸಲಾಗುತ್ತಿದೆ ಎಂದು ಶಾಸಕ ಪ್ರಭು ಚವ್ಹಾಣ ಹೇಳಿದರು.

Advertisement

ಸುಂಧಾಳ ಗ್ರಾಪಂ ವ್ಯಾಪ್ತಿಯ ಜಕನಾಳ, ನಂದ್ಯಾಳ, ಇಟಗ್ಯಾಳ ಹಾಗೂ ಇನ್ನಿತರ ಗ್ರಾಮಗಳಲ್ಲಿ ಗುರುವಾರ ಸಂಚಾರ ಆರಂಭಿಸಿ ಅವರು ಮಾತನಾಡಿದರು.

ಪ್ರಸಕ್ತ ಸಾಲಿನಲ್ಲಿ ಸುಂಧಾಳ ಗ್ರಾಪಂ ಹಾಗೂ ಹಲವು ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಹೆಚ್ಚಾಗಿ ಕಾಡುವ ಲಕ್ಷಣಗಳು ನಿರ್ಮಾಣವಾಗಿವೆ. ಗ್ರಾಪಂ ಅಭಿವೃದ್ಧಿ ಅಧಿಕಾರಿಗಳು ಹಾಗೂ ಪಂಚಾಯತ ಆಡಳಿತ ಮಂಡಳಿ ಸದಸ್ಯರು ತಮ್ಮ ವಾರ್ಡ್‌ಗಳಲ್ಲಿ ನೀರಿನ ಸಮಸ್ಯೆ ಆಗದಂತೆ ನೋಡಿಕೊಳ್ಳಿ ಎಂದು ಸಲಹೆ ನೀಡಿದರು.

ಗ್ರಾಪಂ ವ್ಯಾಪ್ತಿಯ ಪ್ರತಿಯೊಂದು ಕುಟುಂಬದ ಸದಸ್ಯರು ಕಡ್ಡಾಯವಾಗಿ ತಮ್ಮ ಮನೆಯಲ್ಲಿ ಶೌಚಾಲಯ ಕಟ್ಟಿಕೊಂಡು ಉಪಯೋಗಿಸಬೇಕು. ಪ್ರತಿ ಬಡಾವಣೆಯ ನಿವಾಸಿಗಳು ಮನೆ ಸುತ್ತಮುತ್ತ ಸ್ವಚ್ಛತೆ ಕಾಪಾಡಿಕೊಂಡು ರೋಗ ಮುಕ್ತ ಜೀವನ ಸಾಗಿಸಬೇಕೆಂದು ಸಲಹೆ ನೀಡಿದರು.

ಚಿಂತಾಕಿ ಗ್ರಾಪಂ ವ್ಯಾಪ್ತಿಯ ರೈತರು ಬರ ಹಿನ್ನೆಲೆಯಲ್ಲಿ ತಮ್ಮ ಜಾನುವಾರುಗಳಿಗೆ ನೀರು ಹಾಗೂ ತಿನ್ನಲು ಇಲ್ಲವೆಂದು ಆತಂಕಕ್ಕೆ ಒಳಗಾಗಿ ಕಡಿಮೆ ಬೆಲೆಗೆ ಮಾರಾಟ ಮಾಡಕೂಡದು. ಸರ್ಕಾರ ಹಾಗೂ ಜಿಲ್ಲಾಡಳಿತದಿಂದ ತಾಲೂಕಿನ ಪ್ರತಿಯೊಂದು ಹೋಬಳಿ ಕೇಂದ್ರ ವ್ಯಾಪ್ತಿಯಲ್ಲಿ ಗೋ ಶಾಲೆ ಹಾಗೂ ಮೇವು ವಿತರಣಾ ಕೇಂದ್ರಗಳನ್ನು ಆರಂಭಿಸಲಾಗುತ್ತದೆ. ಹಿಗಾಗಿ ರೈತರು ತಮ್ಮ ಜಾನುವಾರುಗಳನ್ನು ಮಾರಾಟ ಮಾಡದೆ ಅವುಗಳ ಪಾಲನೆ ಮಾಡಬೇಕೆಂದು ತಿಳಿಸಿದರು.

Advertisement

ಇಟಗ್ಯಾಳ ಗ್ರಾಮದಲ್ಲಿನ ನೀರಿನ ಸಮಸ್ಯೆಯನ್ನು ಶಾಶ್ವತವಾಗಿ ಬಗೆ ಹರಿಸುವ ಉದ್ದೇಶದಿಂದ 20 ಲಕ್ಷ ರೂ. ಅನುದಾನದಲ್ಲಿ ತೆರೆದ ಬಾವಿ ಹಾಗೂ 10 ಲಕ್ಷ ರೂ. ವೆಚ್ಚದಲ್ಲಿ ನೀರು ಶುದ್ಧೀಕರಣ ಘಟಕವನ್ನು ಸರ್ಕಾರದಿಂದ ಮಂಜೂರು ಮಾಡಿಸಲಾಗಿದೆ. ಕೇಲವೆ ದಿನಗಳಲ್ಲಿ ಕಾಮಗಾರಿ ಆರಂಭವಾಗಲಿದೆ ಎಂದು ಭರವಸೆ ನೀಡಿದರು.

ಸುಂಧಾಳ ಗ್ರಾಪಂ ಅಧ್ಯಕ್ಷ ಶರಣಪ್ಪ ಪಾಟೀಲ ಮಾತನಾಡಿ, ಗ್ರಾಮದ ಜನರಿಗೆ ಬೇಸಿಗೆಯಲ್ಲಿ ಕುಡಿಯುವ ನೀರಿನ ಸಮಸ್ಯೆಯಾಗದಂತೆ ತಮ್ಮ ಹೊಲದಿಂದ ಗ್ರಾಮಕ್ಕೆ ಮೂರು ವರ್ಷಗಳಿಂದ ಉಚಿತವಾಗಿ ನೀರು ಬಿಡಲಾಗುತ್ತಿದೆ ಎಂದು ತಿಳಿಸಿದರು.

ನಂದ್ಯಾಳ ಹಾಗೂ ನಾಗಮಾರಪಳ್ಳಿ ಗ್ರಾಮದಲ್ಲಿ ಕುಡಿಯುವ ನೀರಿನ ಸಮಸ್ಯೆ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿದೆ. ನೀರಿನ ಸಮಸ್ಯೆಗೆ ಶಾಸ್ವತ ಪರಿಹಾರ ನೀಡಲು ಸರ್ಕಾರ ಹಾಗೂ ಶಾಸಕರು ಮುಂದಾಗಬೇಕೆಂದು ಗ್ರಾಮಸ್ಥರು ಶಾಸಕರಿಗೆ ಮನವಿ ಮಾಡಿದರು.

ಗ್ರಾಮಸ್ಥರ ಮನವಿಗೆ ಸ್ಪಂದಿಸಿದ ಶಾಸಕರು, ಎರಡು ಗ್ರಾಮಗಳಲ್ಲಿ ಬೇಸಿಗೆಯಲ್ಲಿ ನೀರು ಪೂರೈಸಲು ಟ್ಯಾಂಕರ್‌ ವ್ಯವಸ್ಥೆ ಮಾಡಿ ಬೇಸಿಗೆ ಮುಗಿದ ತಕ್ಷಣ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ನೀಡಲಾಗುತ್ತದೆ ಎಂದರು.

ಚಿಂತಾಕಿ ಹೋಬಳಿಯಲ್ಲಿ ಸರ್ಕಾರದಿಂದ ನಿರಂತರ ಜ್ಯೋತಿ ವಿದ್ಯುತ್‌ ಘೋಷಣೆಯಾಗಿದೆ. ಆದರೆ ನಿತ್ಯ ವಿದ್ಯುತ್‌ ಕಣ್ಣಾ ಮುಚ್ಚಾಲೆಯಿಂದ ಈ ಭಾಗದ ಜನರು ಬೇಸತ್ತು ಹೋಗಿದ್ದಾರೆ. ಗ್ರಾಮಸ್ಥರು ಜೆಸ್ಕಾಂ ಅಧಿಕಾರಿಗಳನ್ನು ವಿಚಾರಿಸಿದಾಗ ಸುಳ್ಳು ಹೇಳಿ ಕಳುಹಿಸಿಸುತ್ತಿದ್ದಾರೆ. ಆದರೆ ನಿರಂತರ ವಿದ್ಯುತ್‌ ನೀಡಲು ವಿಫಲರಾಗುತ್ತಿದ್ದಾರೆ ಎಂದರು. ತಾಲೂಕಿನ ಪ್ರತಿಯೊಂದು ಇಲಾಖೆಯ ಅಧಿಕಾರಿಗಳು ಹಾಗೂ ಊರಿನ ಮುಖಂಡರ, ವಿವಿಧ ಪಕ್ಷದ ಸದಸ್ಯರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next