ಬೆಂಗಳೂರು: ಮದ್ಯ ಸೇವಿಸಿ ವಾಹನ ಚಾಲನೆ ಹಾಗೂ ಸಂಚಾರ ನಿಯಮ ಉಲ್ಲಂಘನೆ ಮಾಡಿದ ವಾಹನ ಚಾಲಕರ ವಿರುದ್ಧ ಕಳೆದೊಂದು ವಾರ ವಿಶೇಷ ಕಾರ್ಯಾಚರಣೆ ನಡೆಸಿರುವ ನಗರ ಸಂಚಾರ ಪೊಲೀಸರು, 11,468 ಪ್ರಕರಣ ದಾಖಲಿಸಿ, 70.74 ಲಕ್ಷ ರೂ. ದಂಡ ಸಂಗ್ರಹಿಸಿದ್ದಾರೆ.
ನ.18ರಿಂದ ನ.24ರವರೆಗೆ ನಗರದ 50 ಸಂಚಾರ ಠಾಣೆ ವ್ಯಾಪ್ತಿಯಲ್ಲಿ ಮದ್ಯ ಸೇವಿಸಿ ವಾಹನ ಚಾಲನೆ ಮಾಡುವವರ ವಿರುದ್ಧ ವಿಶೇಷ ಕಾರ್ಯಾಚರಣೆ ನಡೆಸಿದ್ದು, 60692 ವಾಹನ ಪರಿಶೀಲಿಸಲಾಗಿದೆ. ಈ ವೇಳೆ ಮದ್ಯ ಸೇವಿಸಿ ವಾಹನ ಚಾಲನೆ ಮಾಡಿದ 802 ಮಂದಿ ವಿರುದ್ಧ ಪ್ರಕರಣ ದಾಖಲಿಸಿ ಕೋರ್ಟ್‌ಗೆ ವರದಿ ನೀಡಲಾಗಿದೆ. ಆರೋಪಿತ ವಾಹನ ಚಾಲಕರ ಚಾಲನಾ ಪರವಾನಿಗೆ ಅಮಾನತುಗೊಳಿಸಲು ಸಾರಿಗೆ ಇಲಾಖೆಗೆ ಶಿಫಾರಸು ಮಾಡಲಾಗಿದೆ ಎಂದು ಸಂಚಾರ ಪೊಲೀಸರು ಮಾಹಿತಿ ನೀಡಿದರು.
69.46 ಲಕ್ಷ ರೂ. ದಂಡ ಸಂಗ್ರಹ: ಸಂಚಾರ ನಿಯಮ ಉಲ್ಲಂಘನೆ ಮಾಡುತ್ತಿರುವ ವಾಹನ ಸವಾರರು ಹಾಗೂ ಚಾಲಕರ ವಿರುದ್ಧ ವಿಶೇಷ ಕಾರ್ಯಾಚರಣೆ ಮುಂದುವರಿಸಿರುವ ನಗರ ಪೂರ್ವ ಮತ್ತು ಉತ್ತರ ವಿಭಾಗದ ಸಂಚಾರ ಪೊಲೀಸರು, 10,538 ಪ್ರಕರಣ ದಾಖಲಿಸಿಕೊಂಡು, 69.46 ಲಕ್ಷ ರೂ. ದಂಡ ಸಂಗ್ರಹಿಸಿದ್ದಾರೆ. ಉತ್ತರ ವಿಭಾಗದ ಸಂಚಾರ ಪೊಲೀಸರು 7 ದಿನ ನಡೆಸಿದ ಕಾರ್ಯಾಚರಣೆಯಲ್ಲಿ 9,912 ಪ್ರಕರಣ ದಾಖಲಿಸಿಕೊಂಡು 66.46 ಲಕ್ಷ ದಂಡ ಸಂಗ್ರಹಿಸಿದ್ದಾರೆ. ಉತ್ತರ ವಿಭಾಗದ ವ್ಯಾಪ್ತಿ ಯಲ್ಲಿ ಉಂಟಾಗುತ್ತಿರುವ ಅಪಘಾತ ತಡೆಗಟ್ಟುವ ಹಾಗೂ ಸಂಚಾರ ನಿಯಮ ಉಲ್ಲಂಘನೆ ಪ್ರಕರಣ ಗಳಿಗೆ ಕಡಿವಾಣ ಹಾಕಲು ನ.17ರಿಂದ 23ರವರೆಗೆ ವಿಶೇಷ ಕಾರ್ಯಾಚರಣೆ ನಡೆಸಲಾಯಿತು.
ಪೂರ್ವ ವಿಭಾಗದಲ್ಲೂ ಕಾರ್ಯಾಚರಣೆ ನಡೆಸಿದ ಪೊಲೀಸರು, ನಿಯಮ ಉಲ್ಲಂಘಿಸಿದ ವಾಹನ ಸವಾರರು ಹಾಗೂ ಚಾಲಕರ ವಿರುದ್ಧ ಒಟ್ಟು 626 ಪ್ರಕರಣ ದಾಖಲಿಸಿದ್ದಾರೆ. ಜತೆಗೆ 3.13 ಲಕ್ಷ ರೂ. ದಂಡ ಸಂಗ್ರಹಿಸಲಾಗಿದೆ. ಹಾಗೆಯೇ ನಗರಾದ್ಯಂತ ಅತಿ ವೇಗದ ಚಾಲನೆ ಮಾಡುವ ಸವಾರರ ವಿರುದ್ಧ 128 ಪ್ರಕರಣ ದಾಖಲಿಸಿ, 1.28 ಲಕ್ಷ ರೂ. ದಂಡ ಸಂಗ್ರಹಿಸಲಾಗಿದೆ ಎಂದು ಸಂಚಾರ ಪೊಲೀಸರು ಮಾಹಿತಿ ನೀಡಿದರು.