Advertisement

ಕಾಡಿನಿಂದ ಡೀಮ್ಡ್ ಅರಣ್ಯ ಹೊರಗಿಟ್ಟರೆ ಬರ

11:43 AM Aug 09, 2017 | Team Udayavani |

ಬೆಂಗಳೂರು: ಡೀಮ್ಡ್ ಅರಣ್ಯವನ್ನು ಅರಣ್ಯ ವ್ಯಾಪ್ತಿಯಿಂದ ಹೊರಗಿಡಲು ಕೈಗೊಂಡ ಸರ್ಕಾರದ ನಿರ್ಣಯವು ಭವಿಷ್ಯದ ಬರಗಾಲಗಳಿಗೆ ಆಹ್ವಾನ ನೀಡಿದಂತಾಗಿದೆ. ಕೂಡಲೇ ಈ ನಿರ್ಧಾರ ಕೈಬಿಡಬೇಕು ಎಂದು ಪಶ್ಚಿಮಘಟ್ಟ ಕಾರ್ಯಪಡೆ ನಿಕಟಪೂರ್ವ ಅಧ್ಯಕ್ಷ ಹಾಗೂ ವೃಕ್ಷಲಕ್ಷ ಆಂದೋಲನ ಕರ್ನಾಟಕದ ಅಧ್ಯಕ್ಷ ಅನಂತ ಹೆಗಡೆ ಅಶೀಸರ ಆಗ್ರಹಿಸಿದ್ದಾರೆ. 

Advertisement

ರಾಜ್ಯದಲ್ಲಿ ಸರ್ಕಾರದ ಘೋಷಣೆಯಂತೆ 2002ರಲ್ಲಿ 9.94 ಲಕ್ಷ ಹೆಕ್ಟೇರ್‌ ಇದ್ದ ಡೀಮ್ಡ್ ಅರಣ್ಯ ಪ್ರದೇಶ ಈಗ ಅದೇ ಸರ್ಕಾರದ ಘೋಷಣೆ ಪ್ರಕಾರ 4.98 ಲಕ್ಷ ಹೆಕ್ಟೇರ್‌ಗೆ ಇಳಿಕೆಯಾಗಿದೆ. ಮುಂದಿನ ದಿನಗಳಲ್ಲಿ ಡೀಮ್ಡ್ ಅರಣ್ಯದ ಅಸ್ತಿತ್ವವೇ ಇಲ್ಲದಂತೆ ಮಾಡುವ ಹುನ್ನಾರ ನಡೆದಿದೆ. ಇದಕ್ಕೆ “ಡೀಮ್ಡ್ ಅರಣ್ಯವನ್ನು ಅರಣ್ಯ ವ್ಯಾಪ್ತಿಯಿಂದ ಹೊರಗಿಡುವ’ ಸಂಬಂಧ ಸಚಿವ ಸಂಪುಟದಲ್ಲಿ ತೆಗೆದುಕೊಂಡ ನಿರ್ಣಯ ಮುನ್ನುಡಿಯಾಗಲಿದೆ ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಆರೋಪಿಸಿದರು. 

ಪರಿಭಾವಿತ ಅರಣ್ಯಗಳು ಜಲಮೂಲಗಳಾಗಿವೆ. ಭಾರತೀಯ ವಿಜ್ಞಾನ ಸಂಸ್ಥೆ (ಐಐಎಸ್ಸಿ) ಸೇರಿದಂತೆ ವಿವಿಧ ವಿಜ್ಞಾನ ಸಂಸ್ಥೆಗಳ ವಿಜ್ಞಾನಿಗಳು ನಡೆಸಿದ ಅಧ್ಯಯನದ ಪ್ರಕಾರ ಈ ಡೀಮ್ಡ್ ಅರಣ್ಯದ ಸುತ್ತಮುತ್ತ ಕೆರೆ-ಕುಂಟೆಗಳಿವೆ. ಔಷಧಿ ಸಸ್ಯಗಳು, ಅಳಿವೆ, ನದಿಗಳು, ಹೊಳೆಗಳು ಒಳಗೊಂಡಂತೆ ಪರಿಸರದ ಉಳಿವಿಗೆ ಇವು ಬಹುದೊಡ್ಡ ಕೊಡುಗೆ ನೀಡುತ್ತಿವೆ. ಈ ಸಂಪತ್ತು ಇಲ್ಲದಂತಾದರೆ, ಭವಿಷ್ಯದ ಬರಗಾಲಗಳಿಗೆ ನಾವೇ ಆಹ್ವಾನ ನೀಡಿದಂತಾಗಲಿದೆ. ಇದರಿಂದ ಈಗಾಗಲೇ ಸತತ ಬರದಿಂದ ನರಳುತ್ತಿರುವ ರಾಜ್ಯಕ್ಕೆ ಗಾಯದ ಮೇಲೆ ಬರೆ ಎಳೆದಂತೆ ಎಂದು ಆತಂಕ ವ್ಯಕ್ತಪಡಿಸಿದರು. 

ನವಿಲುಬೆಟ್ಟದಲ್ಲಿ ಗಣಿಗಾರಿಕೆ; ಹೋರಾಟ
ಇದೇ ಸಂದರ್ಭದಲ್ಲಿ ಮಾತನಾಡಿದ ವೃಕ್ಷ ಲಕ್ಷ ಆಂದೋಲನದ ಚಿಕ್ಕಮಗಳೂರು ಜಿಲ್ಲಾ ಘಟಕದ ಅಧ್ಯಕ್ಷ ಗಜೇಂದ್ರ ಗೊರಸುಕುಡಿಗೆ, ತರೀಕೆರೆ ತಾಲ್ಲೂಕಿನ ಶಿವಪುರದಲ್ಲಿರುವ ನವಿಲುಬೆಟ್ಟದಲ್ಲಿ ಸರ್ಕಾರವು ಗಣಿಗಾರಿಕೆಗೆ ಅವಕಾಶ ನೀಡಿದೆ. ಇದರಿಂದ ತರೀಕೆರೆ ಪ್ರದೇಶದ ಕೆರೆ-ಹಳ್ಳಗಳು ಜೀವ ಕಳೆದುಕೊಳ್ಳಲಿವೆ. ಕೃಷಿ, ತೋಟಗಾರಿಕೆಗೆ ಆಪತ್ತು ಬರಲಿದೆ. ಇದನ್ನು ಸ್ವತಃ ವಿಜ್ಞಾನಿಗಳ ಅಧ್ಯಯನ ಕೂಡ ಸ್ಪಷ್ಟಪಡಿಸಿದೆ. ಆದ್ದರಿಂದ ತಕ್ಷಣ ಗಣಿಗಾರಿಕೆಗೆ ತಡೆ ನೀಡಬೇಕು. ಇಲ್ಲದಿದ್ದರೆ ಉಗ್ರ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದರು. 

ಈ ಬೆಟ್ಟದಲ್ಲಿ ನವಿಲು, ಕೃಷ್ಣಮೃಗ, ಕರಡಿ, ಚಿರತೆ ಕೂಡ ಇದ್ದು, ಅವೆಲ್ಲವುಗಳಿಗೂ ಗಣಿಗಾರಿಕೆಯಿಂದ ಕುತ್ತು ಬರಲಿದೆ. ಅಷ್ಟೇ ಅಲ್ಲ, ಈ ಬೆಟ್ಟಗಳ ಸಾಲು ಮಳೆಯನ್ನು ಹಿಡಿದಿಡುತ್ತದೆ. ಇದರಿಂದ ಸುತ್ತಮುತ್ತ ಮಳೆ ಆಗುತ್ತದೆ. ಆದರೆ, ಗಣಿಗಾರಿಕೆಯಿಂದ ಆ ಬೆಟ್ಟಗಳೇ ಇಲ್ಲವಾಗಲಿದೆ. ಈ ಹಿನ್ನೆಲೆಯಲ್ಲಿ ಈಗಾಗಲೇ ಕುಡೂÉರು, ಪುಂಡನಹಳ್ಳಿ, ಶಿವಪುರ, ಮುಂಡ್ರೆ ಸೇರಿದಂತೆ ಸುತ್ತಲಿನ ಗ್ರಾಮಸ್ಥರು ಪ್ರತಿಭಟನೆ ನಡೆಸಿ, ಜಿಲ್ಲಾಧಿಕಾರಿಗೆ ದೂರು ಸಲ್ಲಿಸಿದ್ದಾರೆ. ತಕ್ಷಣ ಸ್ಪಂದಿಸದಿದ್ದರೆ ಅಹಿಂಸಾತ್ಮಕ ಚಳವಳಿ ತೀವ್ರಗೊಳ್ಳಲಿದೆ ಎಂದು ಎಚ್ಚರಿಸಿದರು.  

Advertisement

ಜಲವಿದ್ಯುತ್‌ ಯೋಜನೆಗೆ ವಿರೋಧ
ಉತ್ತರ ಕನ್ನಡದ ಶಿರಸಿಯ ಗಣೇಶ್‌ಪಾಲ್‌ ಎಂಬಲ್ಲಿ ಜಲವಿದ್ಯುತ್‌ ಯೋಜನೆಗೆ ಸರ್ಕಾರ ಮುಂದಾಗಿದೆ. ಇದು ಶಾಲ್ಮಲಾ ವನ್ಯಜೀವಿ ಸಂರಕ್ಷಿತ ಪ್ರದೇಶ ವ್ಯಾಪ್ತಿಗೆ ಬರಲಿದ್ದು, ಯಾವುದೇ ಕಾರಣಕ್ಕೂ ಇದಕ್ಕೆ ಅವಕಾಶ ನೀಡಬಾರದು ಎಂದು ಅನಂತ ಹೆಗಡೆ ಅಶೀಸರ ಒತ್ತಾಯಿಸಿದರು. 

Advertisement

Udayavani is now on Telegram. Click here to join our channel and stay updated with the latest news.

Next