Advertisement
ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ “ಉದಯವಾಣಿ’ಗೆ ಸಂದರ್ಶನ ನೀಡಿರುವ ಅವರು, ಪ್ರಧಾನಿ ನರೇಂದ್ರ ಮೋದಿ ರಾಜ್ಯಕ್ಕೆ ಎಷ್ಟೇ ಬಾರಿ ಬಂದು ಹೋದರೂ ಫಲಿತಾಂಶದ ಮೇಲೆ ಪರಿಣಾಮ ಬೀರುವುದಿಲ್ಲ. ಕಾಂಗ್ರೆಸ್ ರಾಜ್ಯದಲ್ಲಿ ಮತ್ತೂಮ್ಮೆ ಅಧಿಕಾರಕ್ಕೆ ಬರುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಅಮಿತ್ ಶಾ, ಮೋದಿಯವರು ಬಂದು ಹೋಗುತ್ತಲೇ ಇದ್ದಾರೆ. ಅವರು ಎಷ್ಟು ಸಾರಿ ಬಂದರೂ ನಮಗೇನು ವ್ಯತ್ಯಾಸವಾಗುವುದಿಲ್ಲ. ಇದನ್ನು ನೋಡಿದರೆ ಸ್ಥಳೀಯ ನಾಯಕರ ಯಾವುದೇ ಸಾಮರ್ಥ್ಯ ಇಲ್ಲ ಎನ್ನುವುದನ್ನು ಅವರು ಸಾಬೀತು ಪಡಿಸಿದ್ದಾರೆ. ಮೋದಿ ಬಂದರೂ ಫಲಿತಾಂಶ ಏನೂ ಬದಲಾಗುವುದಿಲ್ಲ. ರಾಹುಲ್ ಗಾಂಧಿಯವರು ಸಿದ್ದರಾಮಯ್ಯ ಅವರೇ ಸಿಎಂ ಅಭ್ಯರ್ಥಿ ಅಂತಾರೆ. ಖರ್ಗೆಯವರು ಸಿಎಲ್‌ಪಿಯಲ್ಲಿ ತೀರ್ಮಾನ ಎನ್ನುತ್ತಾರೆ. ಗೊಂದಲ ಇದೆಯಾ ?
ನಾನು ಸ್ಪಷ್ಟವಾಗಿ ಹೇಳುತ್ತೇನೆ ಕೇಳಿ, ನಮ್ಮ ಗುರಿ ಇರುವುದು ಪಕ್ಷ 113 ಸ್ಥಾನಗಳನ್ನು ಗೆಲ್ಲುವಂತೆ ಮಾಡುವುದು. ಅಲ್ಲಿವರೆಗೂ ಇದೆಲ್ಲ ಹೈಪೊಥೆಟಿಕಲ್ ಪ್ರಶ್ನೆ. ಫಲಿತಾಂಶ ಬರುವವರೆಗೂ ಸಿಎಂ ಯಾರು ಅನ್ನುವುದು ಪ್ರಶ್ನಾರ್ಥಕವಾಗಿಯೇ ಇರುತ್ತದೆ. ಆಮೇಲೆ ಸಿಎಲ್‌ಪಿ ತೀರ್ಮಾನ ಮಾಡುತ್ತದೆ. ಸಿಎಲ್‌ಪಿ ಅಭಿಪ್ರಾಯ ಸಂಗ್ರಹ ಮಾಡಿಯೇ ಹೈ ಕಮಾಂಡ್ ತೀರ್ಮಾನ ಮಾಡುತ್ತದೆ.
Related Articles
ಅದು ಈಗ ಅಪ್ರಸ್ತುತ. ಸಿಎಲ್‌ಪಿ ತೀರ್ಮಾನವೇ ಅಂತಿಮ.
Advertisement
ಅಭ್ಯರ್ಥಿಗಳ ಘೊಷಣೆ ಆದ ಮೇಲೆ ಪಕ್ಷದಲ್ಲಿ ಬಂಡಾಯ ಹೆಚ್ಚಾಗಿತ್ತಲ್ಲ?ಪ್ರತಿ ಚುನಾವಣೆಯಲ್ಲಿಯೂ ಟಿಕೆಟ್ ಆಕಾಂಕ್ಷಿಗಳು ಹೆಚ್ಚಾಗಿರುತ್ತಾರೆ ಬಂಡಾಯ ಹೆಚ್ಚಿರುತ್ತದೆ. ಈಗ ಐದಾರು ಕ್ಷೇತ್ರದಲ್ಲಿ ಬಂಡಾಯ ಕಂಡು ಬಂದಿದೆ. ಮಾತುಕತೆ ಮೂಲಕ ಶಮನ ಮಾಡಿದ್ದೇವೆ. ಕಾಂಗ್ರೆಸ್ ಹೌಸ್‌ಫುಲ್ ಅಂತ ಹೇಳಿದ್ದಿರಿ, ಆದರೂ, ವಲಸಿಗರಿಗೆ ಟಿಕೆಟ್ ನೀಡಿದ್ದೀರಿ, ಅಭ್ಯರ್ಥಿಗಳ ಕೊರತೆಯಾಯ್ತಾ ?
ಹಾಗೇನಿಲ್ಲ. ನಮ್ಮ ಕೆಲವು ಅಭ್ಯರ್ಥಿಗಳು ಮೂರ್ನಾಲ್ಕು ಚುನಾವಣೆಗಳಲ್ಲಿ ಸ್ಪರ್ಧಿಸಿ ಸೋತಿದ್ದರು. ಅಂತ ಕ್ಷೇತ್ರಗಳಲ್ಲಿ ಬೇರೆ ಪಕ್ಷದಿಂದ ಗೆಲ್ಲುವ ಆಕಾಂಕ್ಷಿಗಳು ಬಂದರೆ ಅವರನ್ನು ಕರೆದುಕೊಳ್ಳಬೇಕೆಂಬ ತೀರ್ಮಾನ ಮಾಡಿದ್ದೇವು. ನಾವೂ ಚುನಾವಣೆಯಲ್ಲಿ ಗೆಲ್ಲಬೇಕಲ್ಲವೇ. ಟಿಕೆಟ್ ಹಂಚಿಕೆಯಲ್ಲಿ ಹಣ ಪಡೆದಿದ್ದೀರಾ ಎಂಬ ಆರೋಪ ಕೇಳಿ ಬಂದಿದೆಯಲ್ಲಾ ?
ಅದು ಶುದ್ಧ ಸುಳ್ಳು. ಕಳೆದ ಬಾರಿಯೂ ಅದೇ ಆರೋಪ ಮಾಡಿದ್ದರು. ಯಾರಿಗೆ ಟಿಕೆಟ್ ಸಿಗಲಿಲ್ಲವೋ ಅಂತವರು ಬೇರೆ ಪಕ್ಷಕ್ಕೆ ಹೋಗಿ ಈ ರೀತಿಯ ವಿರುದ್ಧ ಮಾತಾಡುತ್ತಾರೆ. ನೀವು ಅಕ್ರಮ ಗಣಿಗಾರಿಕೆ ವಿರುದ್ಧ ಪಾದಯಾತ್ರೆ ಮಾಡಿದ್ದಿರಿ, ಆದರೆ, ಕಳಂಕಿತರನ್ನು ಪಕ್ಷಕ್ಕೆ ಕರೆತಂದು ಟಿಕೆಟ್ ನೀಡಿದ್ದೀರಲ್ಲಾ ?
ನೀವು ಹೇಳುತ್ತಿರುವ ಪ್ರಕರಣ ನನಗೆ ಅರ್ಥ ಆಗುತ್ತೆ. ಆನಂದ್ ಸಿಂಗ್ ಹೊಸಪೇಟೆ ಶಾಸಕರು, ಅವರು ಈ ಬಾರಿಯೂ ಗೆಲ್ಲುತ್ತಾರೆ ಎನ್ನುವ ವರದಿ ಇದೆ. ಅವರು ಬಿಜೆಪಿಯಲ್ಲಿ ಬೇಸರ ಆಗಿದೆ ಎಂದು ಕಾಂಗ್ರೆಸ್ ಸೇರಲು ಮುಂದಾದರು. ಈ ಬಗ್ಗೆ ಸ್ಥಳೀಯ ನಾಯಕರ ಜೊತೆ ಚರ್ಚಿಸಿ ಅವರನ್ನು ಸೇರಿಸಿಕೊಂಡಿದ್ದೇವೆ. ಆದರೆ, ಅವರ ವಿರುದ್ಧ ಇರುವ ಪ್ರಕರಣಗಳಿಗೆ ಕಾಂಗ್ರೆಸ್ ಜವಾಬ್ದಾರಿಯಲ್ಲ. ಅವರೇ ಅವುಗಳನ್ನು ಎದುರಿಸಬೇಕು. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಅವರು ಜನರಿಂದ ಆಯ್ಕೆಯಾದರೆ ಏನು ಮಾಡುವುದು. ರೆಡ್ಡಿ ಸಹೋದರರ ವಿಷಯದಲ್ಲಿಯೂ ಇದೇ ಆರೋಪ ಇರುವುದಲ್ಲವೇ ?
ಜನಾರ್ದನ ರೆಡ್ಡಿಗೂ ಆನಂದ ಸಿಂಗ್‌ಗೂ ಹೋಲಿಕೆ ಮಾಡುವಂತಿಲ್ಲ. ಅದರಲ್ಲಿ ಸಾಕಷ್ಟು ವ್ಯತ್ಯಾಸ ಇದೆ. ಅವರು ಮಾಡಿರುವ ಅಪರಾಧಗಳ ಗಂಭೀರತೆಯನ್ನು ನೋಡಿದರೆ, ಆನಂದಸಿಂಗ್ ವಿರುದ್ಧ ಅಷ್ಟೊಂದು ಆರೋಪ ಇಲ್ಲ. ನೀವು ನುಡಿದಂತೆ ನಡೆದಿದ್ದೇವೆ ಎನ್ನುತ್ತೀರಿ, ಬಿಜೆಪಿ ನಿಮ್ಮದು ಸುಳ್ಳುಗಳ ಸರ್ಕಾರ ಅಂತ ಹೇಳುತ್ತಿದೆಯಲ್ಲಾ ?
ನಾವು ಮಾಡಿದ್ದು ಜನರಿಗೆ ಗೊತ್ತಿದೆ. ನಾವು ಪ್ರಣಾಳಿಕೆಯಲ್ಲಿ ಹೇಳಿರುವ ಕಾರ್ಯಕ್ರಮಗಳು ಅನುಷ್ಠಾನವಾಗಿದೆ. ಅದರಲ್ಲಿ ಯಾವುದೋ ಒಂದು ಅನುಷ್ಠಾನ ಆಗದಿರುವುದನ್ನು ಹಿಡಿದುಕೊಂಡು ನಾವು ಏನೂ ಮಾಡಿಯೇ ಇಲ್ಲ ಎಂದು ಹೇಳುತ್ತಿದ್ದಾರೆ. ನಾವು ಬಿಡುಗಡೆ ಮಾಡಿರುವ ಪ್ರಣಾಳಿಕೆ ಇದೆ. ಅವರು ಅದನ್ನು ಹೋಲಿಕೆ ಮಾಡಿ ನೋಡಲಿ. ಮುಖ್ಯಮಂತ್ರಿಯವರು ಎರಡು ಕ್ಷೇತ್ರಗಳಲ್ಲಿ ಸ್ಪರ್ಧಿಸಲು ಸೋಲಿನ ಭಯ ಕಾರಣ ಎನ್ನಲಾಗುತ್ತಿದೆಯಲ್ಲಾ ?
ಇಲ್ಲ. ಅವರು ಚಾಮುಂಡೇಶ್ವರಿಯಲ್ಲಿಯೇ ನಿಲ್ಲುವುದಾಗಿ ಹೇಳಿದ್ದರು. ಆದರೆ, ಬಾಗಲಕೋಟೆಯ ನಾಯಕರು ಬಂದು ನೀವು ಬಾದಾಮಿಯಲ್ಲಿ ಸ್ಪರ್ಧೆ ಮಾಡಿದರೆ, ಆ ಭಾಗದಲ್ಲಿ ನಮಗೆ ಹೆಚ್ಚಿನ ಸ್ಥಾನಗಳನ್ನು ಗೆಲ್ಲಲು ಅನುಕೂಲವಾಗುತ್ತದೆ ಎಂದು ಕೇಳಿಕೊಂಡಿದ್ದರು. ಹಾಗಾಗಿ ಅವರು ಬಹಳ ಯೋಚನೆ ಮಾಡಿ ಕೊನೇ ಹಂತದಲ್ಲಿ ತೀರ್ಮಾನ ಮಾಡಿದ್ದಾರೆ. ಅವರಿಗೆ ಸೋಲುವ ಭಯ ಇಲ್ಲ. ಚುನಾವಣಾ ಸಮಿತಿಯಲ್ಲೇ ಅವರು ಒಂದೇ ಕಡೆ ನಿಲ್ಲಬೇಕೆಂದು ತೀರ್ಮಾನವಾಗಿತ್ತು ಅಂತ ಹೇಳ್ತಾರಲ್ಲಾ ?
ಆ ರೀತಿ ಯಾವುದೇ ಚರ್ಚೆಯಾಗಿರಲಿಲ್ಲ. ಆಯ್ಕೆಯನ್ನು ಮುಖ್ಯಮಂತ್ರಿಗೆ ಬಿಡಲಾಗಿತ್ತು. ಒಂದು ವೇಳೆ ಅವರು ನಿರಾಕರಿಸಿದರೆ, ಬೇರೆಯವರಿಗೆ ಅವಕಾಶ ನೀಡಲು ಮತ್ತೂಬ್ಬರ ಹೆಸರು ಘೊಷಣೆ ಮಾಡಿದ್ದೆವು. ನೀವೂ ಎರಡು ಕಡೆ ಸ್ಪರ್ಧೆ ಮಾಡಲು ಬಯಸಿದ್ದು ನಿಜಾನಾ ?
ನಾನು ಮೊದಲಿನಿಂದಲೂ ಕೊರಟಗೆರೆಯಲ್ಲಿಯೇ ನಿಂತುಕೊಳ್ಳುತ್ತೇನೆ ಎಂದು ಹೇಳಿದ್ದೆ. ಆದರೆ, ಒಂದು ಹಂತದಲ್ಲಿ ನಾನು ಬೆಂಗಳೂರಿಗೆ ಕ್ಷೇತ್ರ ಬದಲಾಯಿಸಬೇಕೆಂದು ಯೋಚನೆ ಮಾಡಿದ್ದೆ. ಆದರೆ, ಸ್ಥಳೀಯರು ಅಲ್ಲಿಯೇ ನಿಲ್ಲುವಂತೆ ಒತ್ತಾಯ ಮಾಡಿದರು. ಆ ನಂತರ ನಾನು ಎರಡು ಕಡೆ ಸ್ಪರ್ಧಿಸುವ ಚಿಂತನೆಯೂ ಮಾಡಿಲ್ಲ. ಕೇಳಿಯೂ ಇಲ್ಲ. ಈಗಲೂ ನಿಮಗೆ ಕೊರಟಗೆರೆಯಲ್ಲಿ ಸೋಲುವ ಭೀತಿ ಇದೆಯಂತೆ. ಅದಕ್ಕಾಗಿ ಬೇರೆಡೆ ಪ್ರಚಾರಕ್ಕೆ ಹೋಗುತ್ತಿಲ್ಲವಂತೆ?
ನಾನು ಚುನಾವಣೆಗೆ ನಿಂತಿರುವುದರಿಂದ ಕ್ಷೇತ್ರಕ್ಕೂ ಸಮಯ ಕೊಡುತ್ತಿದ್ದೇನೆ. ಅಧ್ಯಕ್ಷನಾಗಿ ಪಾಲ್ಗೊಳ್ಳುವ ಯಾವುದೇ ಕಾರ್ಯಕ್ರಮಗಳನ್ನು ತಪ್ಪಿಸುತ್ತಿಲ್ಲ. ಕೆಲವು ಕಾರ್ಯಕ್ರಮಗಳನ್ನು ನಾನು ಮಾಡುವ ಅಗತ್ಯವಿಲ್ಲ. ಅದಕ್ಕೆ ಕೆಲವರಿಗೆ ಜವಾಬ್ದಾರಿ ವಹಿಸಿದ್ದೇವೆ. ಪ್ರಮುಖ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುತ್ತಿದ್ದೇನೆ. ನಾನೂ ಪಕ್ಷದ ಅಭ್ಯರ್ಥಿಗಳ ಪರವಾಗಿ ರಾಜ್ಯಾದ್ಯಂತ ಪ್ರವಾಸ ಮಾಡುತ್ತೇನೆ ಬಿಜೆಪಿಯವರು ರಾಜ್ಯ ಸರ್ಕಾರದ ವಿರುದ್ಧ ಗಂಭೀರ ಆರೋಪ ಮಾಡಿ ತೀವ್ರ ವಾಗಾœಳಿ ನಡೆಸುತ್ತಿದ್ದಾರೆ ?
ಬಿಜೆಪಿಯವರು ಕೀಳು ಮಟ್ಟಕ್ಕೆ ಇಳಿದಿದ್ದಾರೆ . ಇಲ್ಲ ಸಲ್ಲದ ಆರೋಪ ಮಾಡುತ್ತಿದ್ದಾರೆ. ಕೊಲೆಗಡುಕ ಸರ್ಕಾರ ಎಂದು ಹೇಳುತ್ತಿರುವುದಕ್ಕೆ ಏನಾದರೂ ದಾಖಲೆ ಬೇಕಲ್ಲವೇ ? ಟೆನ್ ಪರ್ಸೆಂಟ್ ಸರ್ಕಾರ ಎಂದು ಹೇಳುತ್ತಾರೆ ಅದಕ್ಕೇನಾದರೂ ದಾಖಲೆ ಕೊಡಬೇಕಲ್ಲಾ. ಹೇಗಾದರೂ ಮಾಡಿ ಅಧಿಕಾರ ಹಿಡಿಯಬೇಕೆಂದು ಪ್ರಯತ್ನ ನಡೆಸಿದ್ದಾರೆ. ಅದು ಸಾಧ್ಯವೇ ಇಲ್ಲ. ಬಿಜೆಪಿಯ ಸುಳ್ಳು ಪ್ರಚಾರದ ಬಗ್ಗೆ ಚುನಾವಣಾ ಆಯೋಗಕ್ಕೆ ದೂರು ನೀಡಿದ್ದೇವೆ. ನೀವು ಯಾವ ವಿಷಯದಲ್ಲಿ ಚುನಾವಣೆ ಎದುರಿಸುತ್ತೀರಿ ?
ನಾವು ಮೊದಲಿನಿಂದಲೂ ನಮ್ಮ ಸರ್ಕಾರದ ಸಾಧನೆಗಳನ್ನು ಹೇಳಿಕೊಂಡು ಬರುತ್ತಿದ್ದೇವೆ. ಭವಿಷ್ಯದಲ್ಲಿ ಏನು ಮಾಡುತ್ತೇವೆ ಎಂದು ಪ್ರಣಾಳಿಕೆಯಲ್ಲಿ ಹೇಳಿದ್ದೇವೆ. ಬಿಜೆಪಿಯವರು ನಮ್ಮ ವಿರುದ್ಧ ನೆಗೆಟಿವ್ ಮಾಡಿದ್ದಾರೆ ಎಂದರೆ, ನಾವೂ ಅವರ ವಿರುದ್ಧ ಹಾಗೇ ಮಾಡಬೇಕಿಲ್ಲ. ನಾವು ನಮ್ಮ ಸಾಧನೆಗಳನ್ನು ಹೇಳುತ್ತೇವೆ. ಕಾಂಗ್ರೆಸ್ ಧರ್ಮ ಒಡೆಯುವ ಕೆಲಸ ಮಾಡಿದೆ ಎಂದು ಬಿಜೆಪಿ ಆರೋಪಿಸುತ್ತಿದೆಯಲ್ಲಾ ?
ನಾವು ಯಾವತ್ತು ಆ ಕೆಲಸ ಮಾಡುವುದಿಲ್ಲ. ವೀರಶೈವ- ಲಿಂಗಾಯತ ಪ್ರತ್ಯೇಕ ಧರ್ಮ ವಿಷಯದಲ್ಲಿ 2013 ರಲ್ಲಿಯೇ ಯಡಿಯೂರಪ್ಪ ಸೇರಿದಂತೆ ರಾಜ್ಯದ ಲಿಂಗಾಯತ ನಾಯಕರು ಕೇಂದ್ರಕ್ಕೆ ಮನವಿ ಸಲ್ಲಿಸಿದ್ದರು. ಆಗ ಯುಪಿಎ ಸರ್ಕಾರ ಅದನ್ನು ಸಂವಿಧಾನ ವಿರುದ್ಧ ಎಂದು ಮಾನ್ಯತೆ ನೀಡಿರಲಿಲ್ಲ. ಈಗ ನಮ್ಮ ಸರ್ಕಾರಕ್ಕೆ ಮನವಿ ಮಾಡಿದ್ದಾರೆ. ಅದನ್ನು ಕೇಂದ್ರ ಸರ್ಕಾರಕ್ಕೆ ಕಳುಹಿಸಿ ಕೊಟ್ಟಿದ್ದೇವೆ. ಅಷ್ಟೇ ನಾವು ಮಾಡಿದ್ದು, ತೀರ್ಮಾನ ತೆಗೆದುಕೊಳ್ಳುವುದು ಕೇಂದ್ರಕ್ಕೆ ಬಿಟ್ಟ ವಿಚಾರ. – ಶಂಕರ ಪಾಗೋಜಿ