Advertisement

ನಿಷ್ಕಲ್ಮಶ ಮನಸ್ಸಿನಲ್ಲಿ ನೂರೆಂಟು ಕನಸುಗಳು

04:04 PM Oct 27, 2020 | Karthik A |

ಬಾಲ್ಯದ ನಿಷ್ಕಲ್ಮಶ ಮನಸ್ಸಿನಲ್ಲಿ ನೂರೊಂದು ಕನಸುಗಳು ಪುಟ್ಟ ಗುಬ್ಬಚ್ಚಿಯಂತೆ ಬೆಚ್ಚಗೆ ಮಲಗಿವೆ.

Advertisement

ಕನಸುಗಳು ಏನೇ ಇದ್ದರೂ ಜೀವನ ಮಾತ್ರ ವಾಸ್ತವ. ನಾನೂ ಕೂಡ ಎಲ್ಲರಂತೆ ಕನಸುಗಳನ್ನು ಕಂಡಿದ್ದೇನೆ. ನನ್ನ ಕನಸಿಗಂತೂ ಮಿತಿ ಇರಲಿಲ್ಲ.

ಇದು ಸುಮಾರು ವರ್ಷಗಳ ಹಿಂದಿನ ಕಥೆ. ನಾನು ಆರನೇ ತರಗತಿಯಲ್ಲಿ ಓದುವಾಗ ನನಗೆ ವಿಪರೀತ ಶೀತ, ಜ್ವರ ಬಾಧಿಸಿ ಹಾಸಿಗೆ ಹಿಡಿದಿದ್ದೆ. ಕೊನೆಗೆ ಅಮ್ಮ ನನ್ನನ್ನು ಆಸ್ಪತ್ರೆಗೆ ಕರೆದುಕೊಂಡು ಹೋದರು. ಅಲ್ಲೇ ಆಸ್ಪತ್ರೆಯ ಪಕ್ಕದಲ್ಲಿ ಒಂದು ಬಸ್‌ ನಿಲ್ದಾಣವಿತ್ತು. ಅಲ್ಲಿ ತಾಯಿಯೋರ್ವರು ಒಂದು ಮಗುವನ್ನು ಕಂಕುಳಲ್ಲಿ, ಇನ್ನೊಂದು ಮಗುವನ್ನು ಕೈಯಲ್ಲಿ ಹಿಡಿದುಕೊಂಡಿದ್ದರು.

ಕಂಕುಳಲ್ಲಿ ಇದ್ದ ಮಗುವು ಕೆಮ್ಮಿ ಕೆಮ್ಮಿ ತುಂಬಾ ಸುಸ್ತಾಗಿತ್ತು. ಆರೋಗ್ಯ ಸರಿ ಇರದೇ ಚಡಪಡಿಸುತ್ತಿತ್ತು. ಆದರೆ ತಾಯಿ ಮಾತ್ರ ಅಸಹಾಯಕಳಾಗಿ ದುಡ್ಡಿಗಾಗಿ ಯಾರಿಗೋ ಕಾಯುತ್ತಿದ್ದಳು. ಇದನ್ನು ನೋಡಿ ನಾನು ಗದ್ಗದಿತನಾದೆ. ಆ ತಾಯಿಯ ಪರಿಸ್ಥಿತಿ ನೋಡಿ ಮುಂದೆ ನಾನು ವೈದ್ಯನಾಗಿ ರೋಗಿಗಳಿಗೆ ಉಚಿತ ಚಿಕಿತ್ಸೆ ಕೊಟ್ಟು ಉಪಕಾರ ಮಾಡಬೇಕು ಎಂದು ಅಂದೆ ಅಂದುಕೊಂಡಿದ್ದೆ. ಅದು ನನ್ನಲ್ಲಿ ಮೊಳಕೆಯೊಡೆದ ಮೊದಲ ಕನಸು ಎಂಬುದು ಅಸ್ಪಷ್ಟ ನೆನಪು.

ಕನಸುಗಳು ಗರಿಬಿಚ್ಚಿದ್ದವು. ಪ್ರತೀ ದಿನ ನೋಡುವ ಎಲ್ಲ ಸಂಗತಿಗಳಿಗೆ ನಾನೇ ಪರಿಹಾರ ನೀಡಬೇಕು ಎಂಬ ನನ್ನ ಅತುಲ್ಯ ಉತ್ಸಾಹ ನನ್ನಲ್ಲಿ ಕನಸುಗಳು ಚಿಗುರೊಡೆಯಲು ಕಾರಣವಾಯಿತು. ಅಂತೆಯೇ ಪಥಗಳು ಬದಲಾಗತೊಡಗಿದವು. ಪ್ರೌಢ ಶಾಲೆಗೆ ನಾನು ಸೇರ್ಪಡೆಗೊಂಡೆ. ಮೊದಲ ದಿನವೇ ಗುರುಗಳು ನಮ್ಮ ಕ್ಲಾಸಿಗೆ ಬಂದು ಎಲ್ಲರನ್ನು ಭವಿಷ್ಯದಲ್ಲಿ ನೀವು ಏನಾಗಬೇಕು ಎಂದು ಅಂದುಕೊಂಡಿದ್ದೀರಿ. ನಿಮ್ಮ ಕನಸುಗಳೇನು ಹೇಳಿ ಮಕ್ಕಳೇ ಎಂದು ಕೇಳಿದರು. ಮೊದಲೆರಡು ಬೆಂಚ್‌ನ ಮಕ್ಕಳ ಗುರಿ ಏನಾಗಿರುತ್ತೋ ಹೆಚ್ಚುಕಡಿಮೆ ಕೊನೆಯ ಬೆಂಚ್‌ನ ತನಕವೂ ಅದೇ ಆಗಿರುತ್ತಿತ್ತು.

Advertisement

ಆದರೆ ನಾನು ಮಾತ್ರ ಸೈನಿಕನಾಗಬೇಕು ಎನ್ನುವ ಆಶಯ ವ್ಯಕ್ತಪಡಿಸಿದ ನೆನಪಿದೆ. ಅಂದ ಹಾಗೆ ನಾನು ಯಾಕೆ ಹೀಗೆ ಹೇಳಿರಬಹುದು ಅದಕ್ಕೆ ಕಾರಣವಿದೆ. ನಾನು ಕಾರ್ಗಿಲ್‌ ವೀರ, ಮೇಜರ್‌ ಮನೋಜ್‌ ಕುಮಾರ್‌ಪಾಂಡೆ ಅವರ ಬಗ್ಗೆ ಪತ್ರಿಕೆಯೊಂದರಲ್ಲಿ ಪ್ರಕಟವಾದ ಅವರ ಜೀವನಗಾಥೆಯನ್ನು ಓದಿ ರೋಮಾಂಚಿತನಾಗಿದ್ದೆ. ಮುಂದೆ ನಾನು ಕೂಡ ಇವರಂತೆ ವೀರಯೋಧನಾಗಬೇಕು ಎಂದುಕೊಂಡಿದ್ದೆ. ಹಾಗಾಗಿ ಕ್ಲಾಸ್‌ನಲ್ಲಿ ನಾನು ವೀರಯೋಧನಾಗಬೇಕು ಎಂದುಕೊಂಡಿದ್ದೆ.

ಸೈನಿಕನಾಗುವ ನನ್ನ ಕನಸು ಇನ್ನು ಇಮ್ಮಡಿಯಾಗುತ್ತ ಹೋಯಿತು ಪ್ರೌಢ ಶಿಕ್ಷಣ ಮುಗಿದು ಪದವಿ ಪೂರ್ವ ಶಿಕ್ಷ‌ಣಕ್ಕೆ ಬಂದರೂ ನನ್ನ ಕನಸು, ಗುರಿ ಬದಲಾವಣೆಯಾಗಿರಲಿಲ್ಲ. ದ್ವಿತೀಯ ಪಿ.ಯು.ಸಿ. ಮುಗಿದು ಒಂದು ತಿಂಗಳಲ್ಲಿ ಸೇನೆಗೆ ಸೇರುವ ಅಭ್ಯರ್ಥಿಗಳು ಅರ್ಜಿ ಹಾಕಬಹುದು ಎಂದು ನಾನು ಕೂಡ ಅರ್ಜಿ ಹಾಕಿದೆ. ದೂರದ ವಿಜಯಪುರದಲ್ಲಿ ನಮಗೆ ದೈಹಿಕ ಪರೀಕ್ಷೆಯನ್ನು ಏರ್ಪಡಿಸಲಾಗಿತ್ತು. ನಾನು ನನ್ನ ಸ್ನೇಹಿತರು ಆ ಪರೀಕ್ಷೆಯಲ್ಲಿ ಭಾಗವಹಿಸಿದೆವು. ಆದರೆ ಆ ಪರೀಕ್ಷೆಯಲ್ಲಿ ವಿಫಲನಾದೆ. ಆದರೆ ಆತ್ಮವಿಶ್ವಾಸ ಕಳೆದುಕೊಂಡಿಲ್ಲ. ನನಗಿನ್ನೂ ಚಿಕ್ಕವಯಸ್ಸು ಸಾಧನೆ ಮಾಡುತ್ತೇನೆ ಎಂಬ ಛಲವಿದೆ. ನನ್ನ ಆಸೆ ಯಾವುದಾದರೂ ರೂಪದಲ್ಲಿ ದೇಶಸೇವೆ ಮಾಡಬೇಕೆನ್ನುವುದು. ನನಗೆ ನನ್ನ ಮೇಲೆ ನಂಬಿಕೆ ಇದೆ ಮಾಡಿಯೇ ತೀರುತ್ತೇನೆ.


ಮಹೇಶ ಕೊಠಾರಿ, ಡಾ| ಬಿ.ಬಿ. ಹೆಗ್ಡೆ ಕಾಲೇಜು ಕುಂದಾಪುರ 

Advertisement

Udayavani is now on Telegram. Click here to join our channel and stay updated with the latest news.

Next