ಒಂದು ಮಾತು ಹೇಳಲಿಕ್ಕಿದೆ, ಕೇಳಿಸಿಕೋ- ನಾ ಇರುವ ವರೆಗೂ, ನಿನ್ನ ಕನಸುಗಳು ನನ್ನ ಜೊತೆಗೇ ಇರುತ್ತವೆ.
ನಿನ್ನೆ ನಿನ್ನೊಂದಿಗೆ, ಕಬ್ಬನ್ ಪಾರ್ಕಿನ ತುಂಬೆಲ್ಲಾ ಐಸ್ ಕ್ರೀಂ ತಿನ್ನುತ್ತಾ ಸುತ್ತಿದಂತೆ, ಆ ಚಿಗುರೆಲೆಗಳ ಮೊರೆತ, ನಮ್ಮ ಮೈಮರೆತ ಧ್ಯಾನಕ್ಕೆ ಸೊಂಪಾಗಿ ಹಾಡಿದಂತೆ. ಮೊನ್ನೆ ನರ್ತಕಿ ಥಿಯೇಟರ್‌ನಲ್ಲಿ, ದಿಯಾ ಸಿನಿಮಾವನ್ನು ನೋಡಬೇಕೆಂಬ ನಿನ್ನ ಒಂದೇ ಹಂಬಲಕ್ಕೆ, ಸೆಮಿನಾರ್‌ನಿಂದ ಅರ್ಧಕ್ಕೇ ಎದ್ದು ಬಂದು ಸಿನಿಮಾ ನೋಡಿದಂತೆ, ಅನಂತರ ಒಂದೇ ಪ್ಲೇಟಿನಿಂದ ತಿಂದ ಮಸಾಲೆ!!
ಅಯ್ಯೋ, ತಿಂಗಳಿಂದ ಲಾಕ್‌ಡೌನ್ ಇದೆ, ಇದೆಲ್ಲವೂ ಹೇಗೆ ಸಾಧ್ಯ ಎಂದು ಅಚ್ಚರಿಯಿಂದ ಬೆರಗುಗಣ್ಣು ಬಿಟ್ಟರೆ, ಇದೆಲ್ಲಾ ನನ್ನ ಕನಸಿನ ಲೋಕ ಎಂದು ಬಿಡಿಸಿ ಹೇಳಲೇಬೇಕು ನಾನು. ಲಾಕ್‌ಡೌನ್ ಇದ್ದರೆ ಏನಂತೆ? ಪ್ರತಿದಿನ ಬೀಳುವ ಕನಸುಗಳಲ್ಲಿ ನೀನು ಜೊತೆಗಿರುತ್ತೀಯ. ವಾಸ್ತವದಲ್ಲಿ ಅಸಾಧ್ಯ ಅನ್ನಿಸುವ ಸಂಗತಿಗಳೆಲ್ಲ, ಕನಸಿನಲ್ಲಿ ಸಾಧ್ಯ ಅನ್ನಿಸತೊಡಗಿವೆ! ಒಂದು ವೇಳೆ ನೀನು ಜೊತೆಗಿದ್ದಿದ್ದರೂ, ಈ ನವೀನ ಅನುಭವಗಳು ಆಗುತ್ತಿರಲಿಲ್ಲವೇನೋ… ನಿನ್ನ ಪ್ರೇಮಿಸಿದ ನಾ ಅದೃಷ್ಟವಂತ. ಪ್ರತಿ ರಾತ್ರಿಯೂ ಕನಸುಗಳು ನೀಡುವ ಖುಷಿಯನ್ನು ವಿವರಿಸಿ ಹೇಳಲಾರೆ!
ನೀನೀಗ ನನ್ನನ್ನು ತೊರೆದಿರಬಹುದು. ಆದರೆ, ನಿನ್ನ ಕನಸುಗಳಿಗೆ ನನ್ನನ್ನು ತೊರೆಯಲು ಆಗದು. ಗೋಡೆಗಳಿಲ್ಲದ ಅನಂತ ಬಯಲಿನಂಥ ಕನಸುಗಳೇ ಸಾಕು, ನಮ್ಮ ಪ್ರೇಮದ
ಜೀವಂತಿಕೆಯನ್ನು ಸಾರಲು. ಇನ್ನು ನೀನು ಪುನಃ ಮರಳಿ ಬಾರದಿರು. ಒಂದು ವೇಳೆ ನೀ ಬಂದರೆ, ಬಯಲಿಗೆ ಬಾಗಿಲಿಟ್ಟಂತಾಗಬಹುದು, ಇಲ್ಲವೇ ಗೋಡೆ ಕಟ್ಟಿದಂತಾಗಬಹುದು. ಹೀಗೆ ಇರುವುದರಲ್ಲಿ ನನಗೆ ಸಂತಸವಿದೆ. ನಾನು ಸ್ವತಂತ್ರ ಪಕ್ಷಿಯಾಗಿ, ಬಾನೆತ್ತರದಲ್ಲಿ ನಿನ್ನನ್ನು ಪ್ರೇಮಿಸುತ್ತಿದ್ದೇನೆ.
ಯಾವ ಪ್ರೇಮಿಗಳಿಗೂ ನನ್ನಷ್ಟು ಪ್ರೇಮಿಸಲು ಸಾಧ್ಯವಿಲ್ಲ. ಇನ್ನು ಮುಂದೆ ನೀನು ನಿನ್ನಿಷ್ಟದಂತೆ ಬದುಕು. ಅದನ್ನು ನಾನು ಯಾವತ್ತೂ ಪ್ರಶ್ನಿಸಲಾರೆ. ಒಂದು ಮಾತು ಹೇಳಲಿಕ್ಕಿದೆ, ಕೇಳಿಸಿಕೋ- ನಾ ಇರುವವರೆಗೂ, ನಿನ್ನ ಕನಸುಗಳು ನನ್ನ ಜೊತೆಗೇ ಇರುತ್ತವೆ.
ಯೋಗೇಶ್ ಮಲ್ಲೂರು