Advertisement

ಮೂರು ದಶಕದ ಕನಸು ನನಸು

08:49 AM Mar 05, 2019 | |

ಗಂಗಾವತಿ: ದಶಕಗಳ ಕನಸು ಈಡೇರಿಸಿದ ಸಾರ್ಥಕತೆಭಾವ ವ್ಯಕ್ತವಾಗುತ್ತಿದ್ದು, ಜನರಿಗೆ ಕೊಟ್ಟ ಭರವಸೆ ಈಡೇರಿಸುವಲ್ಲಿ ಪ್ರಾಮಾಣಿಕ ಕೆಲಸ ಮಾಡಲಾಗಿದೆ. ಗಂಗಾವತಿ-ಬಳ್ಳಾರಿ ರೈಲು ಮಾರ್ಗಕ್ಕೆ ಯತ್ನಿಸಲಾಗುತ್ತದೆ ಎಂದು ಸಂಸದ ಕರಡಿ ಸಂಗಣ್ಣ ಹೇಳಿದರು.

Advertisement

ಅವರು ಚಿಕ್ಕಬೆಣಕಲ್‌-ಗಂಗಾವತಿ ನೂತನ ರೈಲು ಮಾರ್ಗ ಉದ್ಘಾಟಿಸಿ ಮಾತನಾಡಿದರು. 1996ರಲ್ಲಿ ಶಂಕು ಸ್ಥಾಪನೆಗೊಂಡ ಗಿಣಿಗೇರಾ ಮಹೆಬೂಬನಗರ ರೈಲು ಮಾರ್ಗಕ್ಕೆ ಚಾಲನೆ ನೀಡಲು ಪ್ರಧಾನಮಂತ್ರಿ ನರೇಂದ್ರ ಮೋದಿಯವರ ನೇತೃತ್ವದ ಸರಕಾರವೇ ಬರಬೇಕಾಯಿತು. ಇದುವರೆಗೂ ದೇಶ ಹಾಗೂ ರಾಜ್ಯವನ್ನಾಳಿದ ಕಾಂಗ್ರೆಸ್‌ ಜನರಿಂದ ಅಧಿಕಾರ ಪಡೆದು ಯಾವುದೇ ಕೆಲಸ ಮಾಡಿಲ್ಲ. ಬದಲಿಗೆ ಓಟಿನ ರಾಜಕಾರಣ ಮಾಡುವ ಮೂಲಕ ಓಲೈಕೆ ಮಾಡುವ ಬಹುದೊಡ್ಡ ಕಾರ್ಯ ಮಾಡಿದೆ.

ರೈಲು ಸಂಚಾರದಿಂದ ಗಂಗಾವತಿ ಸೇರಿ ರಾಯಚೂರು ಕೊಪ್ಪಳ ಜಿಲ್ಲೆಗಳ ಸಮಗ್ರ ಪ್ರಗತಿ ಸಾಧ್ಯ. ಹೆದ್ದಾರಿ ರಸ್ತೆಗಳು ರೈಲು ಮಾರ್ಗಗಳು ದೇಶದ ಪ್ರಗತಿಯ ಸಂಕೇತವಾಗಿವೆ. ಗದಗ ವಾಡಿ ರೈಲು ಮಾರ್ಗದ ಕಾಮಗಾರಿ ಪ್ರಗತಿಯಲ್ಲಿದೆ. ಮುಂದಿನ ವರ್ಷಕ್ಕೆ ಸಿಂಧನೂರು ವರೆಗೆ ರೈಲು ಓಡಿಸಲಾಗುತ್ತದೆ. ಮಾನ್ವಿ ರಾಯಚೂರು ಭಾಗದಲ್ಲಿ ಭೂಸ್ವಾಧೀನ ಪ್ರಕ್ರಿಯೆ ಮುಗಿದ ನಂತರ ಅಲ್ಲಿಯೂ ರೈಲು ಮಾರ್ಗ ನಿರ್ಮಾಣ ಕಾರ್ಯ ಆರಂಭವಾಗಲಿದೆ. ಇದುವರೆಗೂ ಕೇಂದ್ರ ಸರಕಾರ 900 ಕೋಟಿ ರೂ. ಖರ್ಚು ಮಾಡಿದ್ದು, ಒಟ್ಟು 2228 ಕೋಟಿ ರೂ.ಗಳ ಯೋಜನೆ ಇದಾಗಿದೆ. ಗಂಗಾವತಿಗೆ ಕಂಪ್ಲಿ ಮೂಲಕ ರೈಲು ಮಾರ್ಗ ನಿರ್ಮಾಣದ ಮೂಲಕ ಪ್ರಮುಖ ನಗರಗಳ ಲಿಂಕ್‌ ಜೋಡಣೆಗೆ ಅನುಕೂಲವಾಗಲಿದ್ದು ಶೀಘ್ರವೇ ಪ್ರಸ್ತಾವನೆ ಕಳಿಸಲಾಗುತ್ತದೆ. 

ಕೊಪ್ಪಳ ಕ್ಷೇತ್ರದ ವ್ಯಾಪ್ತಿಯಲ್ಲಿ 6 ರಾಷ್ಟ್ರೀಯ ಹೆದ್ದಾರಿಗಳ ಅಭಿವೃದ್ಧಿಪಡಿಸುವ ಮೂಲಕ ಮುಖ್ಯವಾಹಿನಿಗೆ ಕ್ಷೇತ್ರವನ್ನು ತೆಗೆದುಕೊಂಡು ಹೋಗಲಾಗಿದೆ. ಉಳೇನೂರು ಬೆನ್ನೂರು ಸಿರಗುಪ್ಪಾ ಮಧ್ಯೆ ತುಂಗಭದ್ರ ನದಿಗೆ ಸೇತುವೆ ನಿರ್ಮಾಣಕ್ಕೆ ಕೇಂದ್ರ ಸರಕಾರ ಸಿಆರ್‌ಎಫ್‌ ನಿ ಯಿಂದ 80 ಕೋಟಿ ಹಣ ಮಂಜೂರಿ ಮಾಡಿ ಟೆಂಡರ್‌ ಪ್ರಕ್ರಿಯೆ ನಡೆದಿದೆ. 2014ರ ಲೋಕಸಭಾ ಚುನಾವಣೆಯಲ್ಲಿ ಭರವಸೆ ಕೊಟ್ಟಂತೆ ಕಾರ್ಯ
ಪೂರ್ಣಗೊಳಿಸಲಾಗಿದೆ ಎಂದರು.

ಶಾಸಕ ಪರಣ್ಣ ಮುನವಳ್ಳಿ ಮಾತನಾಡಿ, ದೇಶದ ಜನರ ಆಶೀರ್ವಾದಿಂದ ಪ್ರಧಾನಿಯಾಗಿರುವ ನರೇಂದ್ರ ಮೋದಿಯವರು ದೇಶದಲ್ಲಿ ರೈಲು ಮಾರ್ಗ ಮತ್ತು ಹೆದ್ದಾರಿ ನಿರ್ಮಾಣಕ್ಕೆ ಮೊದಲ ಆದ್ಯತೆ ನೀಡಿದ್ದಾರೆ. ಸಂಸದ ಕರಡಿ ಸಂಗಣ್ಣ ಅವರು ಸತತ ಪರಿಶ್ರಮದ ಫಲವಾಗಿ ಗಂಗಾವತಿಗೆ ರೈಲು ಬಂದಿದೆ. ಕರಡಿ ಸಂಗಣ್ಣನವರ ಕಾರ್ಯವನ್ನು ಜನರು ಮರೆಯಬಾರದೆಂದರು.

Advertisement

ಕನಕಗಿರಿ ಶಾಸಕ ಬಸವರಾಜ ದಢೇಸುಗೂರು ಮಾತನಾಡಿದರು. ನೈರುತ್ಯ ರೈಲ್ವೆ ವಿಭಾಗೀಯ ವ್ಯವಸ್ಥಾಪಕ ರಾಜೇಶ ಮೋಹನ, ಮಾಜಿ ಎಂಎಲ್ಸಿ ಎಚ್‌.ಆರ್‌. ಶ್ರೀನಾಥ, ತಾಪಂ ಅಧ್ಯಕ್ಷ ವಿರೂಪಾಕ್ಷಗೌಡ, ಮಾಜಿ ಶಾಸಕ ಜಿ. ವೀರಪ್ಪ, ಬಿಜೆಪಿ ಅಧ್ಯಕ್ಷ ಸಿಂಗನಾಳ ವಿರೂಪಾಕ್ಷಪ್ಪ, ಜಿಪಂ ಸದಸ್ಯರಾದ ರಾಮಣ್ಣ ಚೌಡಿR, ಗವಿಸಿದ್ದಪ್ಪ ಕರಡಿ, ಮಾಜಿ ಸದಸ್ಯರಾದ ಸಾಲೋಣಿ ವಿರೇಶ, ಅಮರೇಶ ಕುಳಗಿ, ನಗರಸಭೆ ಸದಸ್ಯ ಉಮೇಶ ಸಿಂಗನಾಳ, ಬಿಜೆಪಿ ಮುಖಂಡರಾದ ರಮೇಶ ವೈದ್ಯ, ತಿಪ್ಪೇರುದ್ರಸ್ವಾಮಿ, ಎಚ್‌.ಗಿರೇಗೌಡ, ಸಂತೋಷ ಕೆಲೋಜಿ, ರವಿ ಬಸಾಪಟ್ಟಣ, ಬಸವರಾಜ ಸಿದ್ದಾಪುರ ಇದ್ದರು.

ಕಾಂಗ್ರೆಸ್‌ ವಿರುದ್ಧ ವಾಗ್ಧಾಳಿ 
ಗಂಗಾವತಿ: ನೂತನ ರೈಲು ನಿಲ್ದಾಣ ಉದ್ಘಾಟನೆ ಮತ್ತು ರೈಲು ಸಂಚಾರಕ್ಕೆ ಚಾಲನೆ ನೀಡುವ ಕಾರ್ಯಕ್ರಮದಲ್ಲಿ ಸಂಸದ ಕರಡಿ ಸಂಗಣ್ಣ, ಶಾಸಕರಾದ ಪರಣ್ಣ ಮುನವಳ್ಳಿ. ದಡೇಸೂಗೂರು ಬಸವರಾಜ ಇವರು ತಮ್ಮ ಭಾಷಣವನ್ನು ರೈಲು ಮಾರ್ಗದ ಕಾಮಗಾರಿ ವಿಷಯಗಳಿಗಿಂತ ಕಾಂಗ್ರೆಸ್‌ ಪಕ್ಷ ಹಾಗೂ ಮುಖಂಡರ ವಿರುದ್ಧ ತೀವ್ರ ವಾಗ್ಧಾಳಿ ಮಾಡಲು ಬಳಕೆ ಮಾಡಿಕೊಂಡರು. ಪ್ರಧಾನಿ ಮೋದಿ ಆಡಳಿತ ಹಾಗೂ
ಉಗ್ರರ ವಿರುದ್ಧ ಸರ್ಜಿಕಲ್‌ ದಾಳಿ ಮಾಡಿರುವುದನ್ನು ಟೀಕಿಸುವ ಕಾಂಗ್ರೆಸ್‌ ಮುಖಂಡರಿಗೆ ದೇಶ ಹಾಗೂ ಸೈನಿಕರ ಮೇಲೆ ಗೌರವವಿಲ್ಲ. ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಮತ್ತೂಮ್ಮೆ ಮೋದಿಯವರನ್ನು ಪ್ರಧಾನಿ ಮಾಡಲು ಬಿಜೆಪಿ ಯನ್ನು ಬೆಂಬಲಿಸುವಂತೆ ಮನವಿ ಮಾಡಿದರು.

ಕೊಪ್ಪಳ ಜಿಲ್ಲೆಯ ಪ್ರಮುಖ ವಾಣಿಜ್ಯ ಹಾಗೂ ಐತಿಹಾಸಿಕ ಕೇಂದ್ರವಾಗಿರುವ ಗಂಗಾವತಿಯಿಂದ ಹುಬ್ಬಳ್ಳಿಗೆ ಪ್ರತಿ ದಿನ ಬೆಳಗ್ಗೆ ಮತ್ತು ಸಂಜೆ ರೈಲು ಸಂಚರಿಸಲಿದೆ. ಶ್ರೀಘ್ರವೇ ಬೆಂಗಳೂರು ಮತ್ತು ಗೋವಾಕ್ಕೆ ರೈಲು ಸಂಚಾರ ಆರಂಭಿಸುವಂತೆ ಕೋರಲಾಗಿದೆ.
 ಕರಡಿ ಸಂಗಣ್ಣ, ಸಂಸದ

Advertisement

Udayavani is now on Telegram. Click here to join our channel and stay updated with the latest news.

Next