Advertisement

ನೆಲಕಚ್ಚಿದ ‘ಸಾವಿರ ಮನೆ’ಕನಸು

09:50 AM Jan 23, 2019 | Team Udayavani |

ಸಿಂಧನೂರು: ನಗರದ ಕೊಳಚೆ ಪ್ರದೇಶಗಳಲ್ಲಿ ವಾಸಿಸುತ್ತಿರುವ ಬಡವರಿಗೆ ಐಎಚ್ಎಸ್‌ಡಿಪಿ ಯೋಜನೆಯಡಿ ಕೈಗೊಂಡಿದ್ದ ಮನೆಗಳ ನಿರ್ಮಾಣ ಕಾರ್ಯ ಅಪೂರ್ಣಗೊಂಡಿದ್ದು, ಇಲ್ಲಿನ ನಿವಾಸಿಗಳ ಸೂರಿನ ಕನಸು ನನಸಾಗಿಲ್ಲ. ಈ ಯೋಜನೆಯಲ್ಲಿ ಕೆಲ ಮನೆಗಳನ್ನು ಬೇಕಾಬಿಟ್ಟಿಯಾಗಿ ನಿರ್ಮಿಸಿ ಕೈ ತೊಳೆದುಕೊಂಡಿರುವ ಗುತ್ತಿಗೆದಾರರು ಬಡವರಿಗೆ ಅನ್ಯಾಯ ಮಾಡಿದಂತಾಗಿದೆ.

Advertisement

2007ರಲ್ಲಿ ಕೊಳಚೆ ಪ್ರದೇಶಗಳ ಅಭಿವೃದ್ಧಿ ದೃಷ್ಟಿಯಿಂದ 1005 ಮನೆಗಳನ್ನು ಮಂಜೂರು ಮಾಡಲಾಗಿತ್ತು. ಮನೆಗಳ ನಿರ್ಮಾಣಕ್ಕೆ ಜಾಗದ ಅಳತೆ, ಚರಂಡಿ, ರಸ್ತೆ ಮಾರ್ಗ ನಕ್ಷೆ ತಯಾರಿಸಿ, ಕುಡಿಯುವ ನೀರಿನ ವ್ಯವಸ್ಥೆ ಸೇರಿದಂತೆ ಇನ್ನಿತರೆ ಮೂಲ ಸೌಲಭ್ಯಗಳನ್ನೊಳಗೊಂಡಂತೆ ಮನೆಗಳ ನಿರ್ಮಾಣಕ್ಕೆ ವರದಿ ಸಿದ್ದಪಡಿಸಲಾಗಿತ್ತು.

ಯೋಜನೆಯಲ್ಲಿದ್ದಂತೆ 7 ಕೊಳಚೆ ಪ್ರದೇಶಗಳಲ್ಲಿ ಒಟ್ಟು 1005 ಮನೆಗಳ ನಿರ್ಮಾಣಕ್ಕೆ ಅಸ್ತು ದೊರೆತಿತ್ತು. ಆದರೆ ಅಂದುಕೊಂಡಂತೆ ಮನೆಗಳ ನಿರ್ಮಾಣವಾಗಿ ಅಭಿವೃದ್ಧಿ ಕಾರ್ಯಗಳು ನಡೆದಿದ್ದರೆ ಇಷ್ಟೊತ್ತಿಗಾಗಲೇ ಕೊಳಚೆ ಪ್ರದೇಶಗಳ ಸ್ಥಿತಿ ಬದಲಾಗಿರುತ್ತಿತ್ತು. ಆದರೆ ಜನಪ್ರತಿನಿಧಿಗಳ ನಿಷ್ಕಾಳಜಿ ಹಾಗೂ ಅಧಿಕಾರಿಗಳ ಮತ್ತು ಗುತ್ತಿಗೆದಾರರ ವ್ಯಾಪಕ ಭ್ರಷ್ಟಾಚಾರದಿಂದ ಕೆಲ ಮನೆಗಳು ಅರ್ಧಕ್ಕೆ ನಿಂತರೆ, ಕೆಲ ನಿರ್ಮಾಣದ ಹಂತದಲ್ಲೇ ಸಮಾಧಿಯಾಗಿವೆ.

ಇಂದಿರಾ ಕಾಲೋನಿ, ಲಕ್ಷ್ಮೀಕ್ಯಾಂಪ್‌, ಮಹಿಬೂಬಿಯಾ ಕಾಲೋನಿ, 3ನೇ ಮೈಲ್‌ಕ್ಯಾಂಪ್‌ಗ್ಳಲ್ಲಿ ಕೆಲ ಮನೆಗಳನ್ನು ಹೊರತು ಪಡಿಸಿದರೆ ಉಳಿದೆಲ್ಲವನ್ನು ಗುತ್ತಿಗೆದಾರರು ತಮಗಿಷ್ಟ ಬಂದಂತೆ ನಿರ್ಮಾಣ ಮಾಡಿದ್ದಾರೆ. ಪ್ರತಿ ಮನೆಯನ್ನು 1.35 ಲಕ್ಷ ವೆಚ್ಚದಲ್ಲಿ ಕಟ್ಟಿಕೊಡಬೇಕಾಗಿದ್ದ ಗುತ್ತಿಗೆದಾರರು ಬುನಾದಿ ನೋಡಿ ಇಂತಿಷ್ಟು ಹಣ ಎಂದು ನೀಡಿ ಸುಮ್ಮನಾಗಿದ್ದಾರೆ. ಮನೆಗಳ ನಿರ್ಮಾಣದಲ್ಲಿ ಗುಣಮಟ್ಟದ ಸೀಮೆಂಟ್, ಮರಳನ್ನು ಬಳಸಿಲ್ಲ ಎಂಬ ಅಪವಾದಗಳೂ ಕೇಳಿಬರುತ್ತಿವೆ. ಕೆಲವರು ಅರೆಬರೆ ನಿರ್ಮಾಣಗೊಂಡ ಮನೆಗಳಲ್ಲೇ ವಾಸಿಸುತ್ತಿದ್ದಾರೆ. ಗುತ್ತಿಗೆದಾರರು ನಿರ್ಮಿಸಿದ ಮನೆಗಳು ಕಳಪೆ ಗುಣಮಟ್ಟದಿಂದ ಕೂಡಿದ್ದು ಯಾವಾಗ ಬೀಳುತ್ತವೋ ಎಂಬ ಭೀತಿಯಲ್ಲಿ ಜನ ದಿನಕಳೆಯುತ್ತಿದ್ದಾರೆ.

ಎ.ಕೆ. ಗೋಪಾಲನಗರದಲ್ಲಿ ನಿರ್ಮಿಸಿರುವ ಮನೆಗಳ ಸ್ಥಿತಿ ಹೇಳತೀರದು. ಮೂಲ ಸೌಲಭ್ಯ ಒದಗಿಸದೆ ಇಕ್ಕಟ್ಟಾದ ಪ್ರದೇಶಗಳಲ್ಲೇ ಮನೆಗಳನ್ನು ಕಟ್ಟಿಕೊಟ್ಟಿದ್ದರಿಂದ ಜನರಿಗೆ ಜೀವನ ನಡೆಸುವುದು ದುಸ್ತರವಾಗಿದೆ.

Advertisement

ಫಲಾನುಭವಿಗಳೇ ಹೇಳುವಂತೆ ಮನೆಗಳಿಗೆ ಬಾಗಿಲಿದ್ದರೆ, ಕಿಟಕಿಯಿಲ್ಲ. ವಿದ್ಯುತ್‌ ಸಂಪರ್ಕ ದೂರದ ಮಾತು. ಈಗಾಗಲೇ ಸ್ವಂತ ಹಣದಲ್ಲಿ ಮನೆ ಕಟ್ಟಿಕೊಳ್ಳುವ ಯತ್ನದಲ್ಲಿರುವ ನಮಗೆ ಬದುಕೇ ಬೇಸರವೆನಿಸಿದೆ. ಈಗ ವಾಸಿಸುವ ಮನೆಗೆ ಬಾಡಿಗೆ ಕಟ್ಟಲೂ ಪರದಾಡುವಂತಾಗಿದೆ ಎಂದು ಲಕ್ಷ್ಮೀ ಕ್ಯಾಂಪ್‌ ನಿವಾಸಿಗಳ ಅಳಲು ತೋಡಿಕೊಂಡರು.

ನಿರುಪಯುಕ್ತವಾದ ಹಲವು ಯೋಜನೆಗಳ ಸಾಲಿಗೆ ಇದೂ ಸೇರಿತು. ಪ್ರಾರಂಭದಲ್ಲೇ ಹಲವು ವಿಘ್ನಗಳನ್ನು ಎದುರಿಸಿದ್ದ ಯೋಜನೆ ನಂತರವೂ ನಿಯಮದಂತೆ ಮುನ್ನಡೆಯಲಿಲ್ಲ. ಮನೆಗಳ ನಿರ್ಮಾಣದಲ್ಲಿ ಗುತ್ತಿಗೆದಾರರಿಗೆ ತುಂಡು ಗುತ್ತಿಗೆ ನೀಡಿದ್ದರಿಂದ ಅಸಡ್ಡೆ ಜಾಸ್ತಿಯಾಗಿ ಯೋಜನೆ ಲಾಭ ಫಲಾನುಭವಿಗಳಿಗೆ ದೊರೆಯಲಿಲ್ಲ. ಕೆಲವರು ಇದರಲ್ಲಿಯೇ ರಾಜಕೀಯ ಮಾಡಿ ಒಂದೇ ಮನೆಯಲ್ಲಿ ಎರಡ್ಮೂರು ಜನರಿಗೆ ಮನೆಗಳನ್ನು ಹಂಚಿಕೆ ಮಾಡಿದ್ದಾರೆನ್ನುವ ಆರೋಪಗಳಿವೆ. ಈ ಬಗ್ಗೆ ಸಚಿವ ವೆಂಕಟರಾವ್‌ ನಾಡಗೌಡರು ಯಾವ ರೀತಿ ಕ್ರಮ ಕೈಗೊಳ್ಳವರೋ ಕಾದು ನೋಡಬೇಕಿದೆ.

•ಚಂದ್ರಶೇಖರ ಯರದಿಹಾಳ

Advertisement

Udayavani is now on Telegram. Click here to join our channel and stay updated with the latest news.

Next