Advertisement
ಅಪ್ಪ ಎಣಿಸಿದಾಗ ಮಗ ಊರಿಗೆ ಬರುತ್ತಿದ್ದ. ನಾಲ್ಕು ದಿನ ಉಳಿಯುತ್ತಿದ್ದ. ಸಮಾಧಾನದಿಂದ ದಿನಗಳನ್ನು ಕಳೆದು ರಾತ್ರಿ ಬಸ್ ಹತ್ತಿದರೆ ನಿದ್ದೆ ಮುಗಿಯುವಷ್ಟರಲ್ಲಿ ಬೆಳಗ್ಗೆ ಆ ನಗರದ ಬಸ್ ನಿಲ್ದಾಣದಲ್ಲಿ ಇಳಿಯುತ್ತಿದ್ದ. ಉಳಿದಿದ್ದೆಲ್ಲವೂ ಎಲ್ಲರಿಗೂ ತಿಳಿದದ್ದೇ.
Related Articles
Advertisement
ಸಂಜೆ ಇಳಿಹೊತ್ತಿಗೆ ಅಪ್ಪ ಮತ್ತು ಮಗ ಸಣ್ಣ ವಾಯುವಿಹಾರಕ್ಕೆ ಹೊರಟರು. ಸಂಬಂಧಿಕರ ಮನೆಗೆ ಹೋಗುವ ನೆವ. ದಾರಿ ಮಧ್ಯೆ ಮಗ, “ನಾನು ಈ ಟೌನ್ ಬದಲಾಯಿಸಬೇಕೆಂದಿದ್ದೇನೆ’ ಎಂದ. “ಯಾಕೆ, ಏನಾಯಿತು?’ ಎಂದು ಕೇಳಿದ ಅಪ್ಪ. “ಹೀಗೆ, ಸುಮ್ಮನೆ. ಬೇರೆ ಊರಿಗೆ ಹೋಗೋಣ’ ಎಂದು ಮಗ ಹೇಳಿದ್ದಕ್ಕೆ ಅಪ್ಪ “ನಿನಗೊಂದು ಕಥೆ ಹೇಳ್ತೀನಿ. ಆ ಬಳಿಕ ನೀನು ನಿನ್ನ ನಿರ್ಧಾರ ಮಾಡು’ ಎಂದರು.
ತನಗೆ ನೆನಪಿಗೆ ಬಂದ ಝೆನ್ ಕಥೆಯನ್ನು ಹೇಳಿದ ಅಪ್ಪ. ಒಮ್ಮೆ ಒಬ್ಬ ಗುರುವಿನ ಬಳಿ ಬಂದ ಒಬ್ಬ ವ್ಯಕ್ತಿ, “ನಾನು ಈ ಊರಿಗೆ ಬರಬೇಕೆಂದಿದ್ದೇನೆ. ಹೇಗಿದೆ ಈ ಊರು?’ ಎಂದು ಕೇಳಿದ. ಅದಕ್ಕೆ ಝೆನ್ ಗುರು ನಗುತ್ತಾ, “ಅಷ್ಟಕ್ಕೂ ಆ ಊರು ಬಿಡುವ ಕಾರಣವೇನು?’ ಎಂದು ಕೇಳಿದ. “ಆ ಊರು ಚೆನ್ನಾಗಿಲ್ಲ. ಬರೀ ದ್ವೇಷ, ಗಲಾಟೆ ಇತ್ಯಾದಿ. ಬದುಕುವುದಕ್ಕೇ ಕಷ್ಟ’ ಎಂದ ಆ ವ್ಯಕ್ತಿ.ಹೌದೇ ಎಂದು ಕಣ್ಣರಳಿಸಿ ಕೇಳಿದ ಗುರು, “ಈ ಊರು ಅದರಂತೆಯೇ. ಹಾಗಾಗಿ ನೀನು ಬರಬೇಡ. ಅಲ್ಲೇ ಇರು’ ಎಂದು ಹೇಳಿ ವಾಪಸು ಕಳುಹಿಸಿದ. ಅದಾದ ಸ್ವಲ್ಪ ಹೊತ್ತಿಗೆ ಮತ್ತೂಬ್ಬ ವ್ಯಕ್ತಿ ಬಂದ. ಅವನೂ ಹಾಗೆಯೇ ಗುರುವಿನ ಬಳಿ ಬಂದು, “ಗುರುಗಳೇ, ನಾನು ಈ ಊರಿಗೆ ಬರಬೇಕೆಂದಿದ್ದೇನೆ. ನಿಮ್ಮ ಅಭಿಪ್ರಾಯವೇನು?’ ಎಂದು ಕೇಳಿದ. ಅದಕ್ಕೂ ಗುರುಗಳು ತಣ್ಣಗೆಯ ಸ್ವರದಲ್ಲಿ ಮೊದಲನೆಯವನಿಗೆ ಕೇಳಿದ ಪ್ರಶ್ನೆಯನ್ನೇ ಕೇಳಿದರು. ಆಗ ಎರಡನೆಯವನೂ, “ಆ ಊರು ಬಹಳ ಸುಂದರವಾಗಿದೆ. ಒಳ್ಳೆಯ ಜನರು. ಆದರೂ ಯಾಕೋ ಬದಲಾಯಿಸೋಣ ಎನ್ನಿಸಿತು. ಅದಕ್ಕೆ ಇಲ್ಲಿಗೆ ಬರಲು ಯೋಚಿಸುತ್ತಿರುವೆ’ ಎಂದ ಆತ. ಆಗಲೂ ಗುರುಗಳು “ನೀನಿರುವ ಊರೇ ಸುಂದರ ಹಾಗೂ ಚೆನ್ನಾಗಿ ಇರುವಾಗ ಇಲ್ಲಿಗೆ ಏಕೆ ಬರುತ್ತೀ? ಈ ಊರು ಅದಕ್ಕಿಂತ ಭಿನ್ನವಾಗಿಲ್ಲ’ ಎಂದರು. ಎರಡನೆಯವನೂ ಏನೂ ಹೇಳಲಾಗದೇ ಆಯಿತು ಎಂದು ನಮಸ್ಕರಿಸಿ ಆಲ್ಲಿಂದ ಹೊರಟು ಹೋದ.
“ಈಗ ಹೇಳು, ಆ ನಗರವನ್ನು ಬಿಡಲು ಕಾರಣ’ ಎಂದು ಕೇಳಿದ ಅಪ್ಪನಿಗೆ ಮಗನ ಉತ್ತರ ಹೊಸದಾಗಿರಲಿಲ್ಲ. “ಸತ್ಯ’ ಎಂಬುದಷ್ಟೇ ಆಗಿತ್ತು. ನಾವು ಎಲ್ಲವನ್ನೂ ಬದಲಾಯಿಸಬೇಕೆಂದುಕೊಳ್ಳುತ್ತೇವೆ. ಆ ಬದಲಾವಣೆಯಿಂದ ಹೊಸದೇನನ್ನೋ ಪಡೆಯುತ್ತೇವೆಂಬ ಹಂಬಲವೂ ನಮ್ಮದಾಗಿರುತ್ತದೆ. ಆದರೆ ನಿಜಕ್ಕೂ ಯಶಸ್ವಿಯಾಗುತ್ತೇವೆಯೇ? ಖಂಡಿತಾ ಗೊತ್ತಿಲ್ಲ. ಭಾವ ಇರುವುದು ನಮ್ಮೊಳಗೆ. ನಾವು ಹೇಗೆ ಬದುಕನ್ನು ಸ್ವೀಕರಿಸುತ್ತೇವೆಯೋ ಹಾಗೆಯೇ ಬದುಕು. ಪ್ರತೀ ಕ್ಷಣವನ್ನೂ ಧನಾತ್ಮಕತೆಯಿಂದ ಸ್ವೀಕರಿಸಿದರೆ ಎಲ್ಲವೂ ಸುಂದರವಾಗಿಯೇ ಕಾಣಬಲ್ಲದು. ನಾವು ಸೌಂದರ್ಯವನ್ನು ಬೇರೆಲ್ಲೋ ಹುಡುಕಲು ಹೋಗಿ ಹೈರಾಣಾಗುತ್ತೇವೆ. ನಿಜವಾಗಿಯೂ ನಾವಿರುವಲ್ಲೇ ಸೌಂದರ್ಯ ಇರುತ್ತದೆ. ಯಾಕೆಂದರೆ ಅದರ ಸೃಷ್ಟಿಶೀಲರು ನಾವೇ ಹೊರತು ಬೇರಾರೂ ಅಲ್ಲ, ಬೇರೆ ಯಾವುದೂ ಅಲ್ಲ. ಅಪ್ಪ, ಮಗ ಖುಷಿಯಿಂದ ಮನೆಗೆ ವಾಪಾಸಾದರು. ಮಗ ಹೊರಟು ನಿಂತ. ಮುಂಬರುವ ಯುಗಾದಿಗೆ ಬರುವೆ ಎಂದು ಬಸ್ ಹತ್ತಿದ. ಅಪ್ಪನಿಗೆ ಮಗನನ್ನು ದಡಕ್ಕೆ ತಲುಪಿಸಿದ ನೆಮ್ಮದಿ ಆವರಿಸಿತು. ಸೌಂದರ್ಯ ಎನ್ನುವುದು ಅನುಭವಿಸುವುದರಲ್ಲಿ ಇದೆಯೋ ಅಥವಾ ನೋಡುವುದರಲ್ಲಿ ಇದೆಯೋ ಎಂದು ಕೇಳಿದರೆ ಮೊದಲನೆಯದ್ದೇ ಸೂಕ್ತ ಉತ್ತರ ಎನ್ನಿಸುತ್ತದೆ. ಬನ್ನಿ ಬದುಕನ್ನು ಅನುಭವಿಸೋಣ, ನೋಡಿ ಸೆರೆ ಹಿಡಿಯುವ ಬದಲು. - ಅಮೃತಾ