ಮುಂಬೈ: ಕಳೆದ ಕೆಲದಿನಗಳಿಂದ ಕುತೂಹಲದ ಕೇಂದ್ರವಾಗಿದ್ದ ಈ ಬಾರಿಯ ಐಪಿಎಲ್ ಪ್ರಾಯೋಜಕತ್ವ ಡ್ರೀಮ್ ಇಲೆವೆನ್ ಪಾಲಾಗಿದೆ ಎಂದು ವರದಿಯಾಗಿದೆ.
ಸುದ್ದಿ ಸಂಸ್ಥೆ ಪಿಟಿಐ ಈ ಬಗ್ಗೆ ವರದಿ ಮಾಡಿದ್ದು, ಫ್ಯಾಂಟಸಿ ಕ್ರಿಕೆಟ್ ಲೀಗ್ ಸಂಸ್ಥೆ ಡ್ರೀಮ್ ಇಲೆವೆನ್ ಗೆ ಈ ಬಾರಿಯ ಇಂಡಿಯನ್ ಪ್ರೀಮಿಯರ್ ಲೀಗ್ ಪ್ರಾಯೋಜಕತ್ವ ಲಭಿಸಿದೆ ಎಂದಿದೆ.
ಅಂತಿಮ ಸಮರದಲ್ಲಿ ಟಾಟಾ ಸಂಸ್ಥೆ, ಬೈಜೂಸ್ ಮತ್ತು ಅನ್ ಅಕಾಡಮೆ ಸಂಸ್ಥೆಗಳು ಇದ್ದವು. ಆದರೆ ಡ್ರೀಮ್ ಇಲೆವೆನ್ 222 ಕೋಟಿ ರೂ. ಗೆ ಬಿಡ್ ಗೆದ್ದುಕೊಂಡಿದೆ ಎಂದು ವರದಿಯಾಗಿದೆ.
ನಾಲ್ಕು ವರ್ಷಗಳ ಕಾಲ ಐಪಿಎಲ್ ಪ್ರಾಯೋಜಕತ್ವದ ಹಕ್ಕು ಪಡೆದಿದ್ದ ವಿವೋ ಸಂಸ್ಥೆ ಈ ಬಾರಿಯ ಐಪಿಎಲ್ ಪ್ರಾಯೋಜಕತ್ವದಿಂದ ಹಿಂದೆ ಸರಿದಿತ್ತು. ಹೀಗಾಗಿ ಬಿಸಿಸಿಐ ವಿಶ್ವದ ದುಬಾರಿ ಕ್ರಿಕೆಟ್ ಲೀಗ್ ಗೆ ಹೊಸ ಪ್ರಾಯೋಜಕರನ್ನು ಆಹ್ವಾನಿಸಿತ್ತು.
ಕೋವಿಡ್ -19 ಕಾರಣದಿಂದ ಮಾರ್ಚ್ ಅಂತ್ಯದಲ್ಲಿ ನಡೆಯಬೇಕಿದ್ದ 13ನೇ ಆವೃತ್ತಿಯ ಐಪಿಎಲ್ ಮುಂದೂಡಲಾಗಿತ್ತು. ಸದ್ಯ ಕೂಟವನ್ನು ಯುಎಇನಲ್ಲಿ ಆಯೋಜಿಸಲು ಬಿಸಿಸಿಐ ಸಜ್ಜಾಗಿದ್ದು, ಸೆ.19ರಿಂದ ನವೆಂಬರ್ 10ರ ವರೆಗೆ ನಡೆಯಲಿದೆ.