Advertisement

DRDO: ಪೈಲಟ್‌ ರಹಿತ ಡ್ರೋನ್‌ ಹಾರಾಟ ಪರೀಕ್ಷೆ- ಸ್ವಯಂ ಟೇಕಾನ್‌, ಟೇಕಾಫ್‌

11:14 PM Dec 15, 2023 | Team Udayavani |

ನಾಯಕನಹಟ್ಟಿ: ಬಾಲರಹಿತ, ಪೈಲಟ್‌ರಹಿತ ಹಾಗೂ ಸ್ವಯಂ ಟೇಕಾನ್‌ ಮತ್ತು ಟೇಕಾಫ್‌ನ ಹೊಸ ತಂತ್ರಜ್ಞಾನದ ಡ್ರೋನ್‌ ಹಾರಾಟ ಪರೀಕ್ಷೆಯನ್ನು ಗುರುವಾರ ಇಲ್ಲಿನ ಡಿಆರ್‌ಡಿಒ ಏರೋನಾಟಿಕಲ್‌ ಟೆಸ್ಟ್‌ ರೇಂಜ್‌(ಎಟಿಆರ್‌)ನಲ್ಲಿ ಯಶಸ್ವಿಯಾಗಿ ಕೈಗೊಳ್ಳಲಾಗಿದೆ. ಇದರೊಂದಿಗೆ ಈ ಅತ್ಯಾಧುನಿಕ ತಾಂತ್ರಿಕತೆ ಹೊಂದಿದ ಪ್ರಪಂಚದ ಕೆಲವೇ ದೇಶಗಳ ಸಾಲಿಗೆ ಭಾರತವೂ ಸೇರಿದೆ. ಈ ತಂತ್ರಜ್ಞಾನವನ್ನು ಡಿಆರ್‌ಡಿಒದ ಏರೋನಾಟಿಕಲ್‌ ಡೆವಲಪ್‌ಮೆಂಟ್‌ ಎಸ್ಟಾಬ್ಲಿಷ್‌ಮೆಂಟ್‌(ಎಡಿಇ) ರೂಪುಗೊಳಿಸಿ ಸಿದ್ಧಪಡಿಸಿದೆ.

Advertisement

ಈ ಹಿಂದಿನ ಡ್ರೋನ್‌ಗಳಲ್ಲಿ ಲಂಬವಾಗಿ ರೆಕ್ಕೆ ಇರುತ್ತಿತ್ತು. ಆದರೆ ಈ ಮಾದರಿಯಲ್ಲಿ ಬಾಲಕ್ಕೆ ಬದಲಾಗಿ ಬಾಣದ ರಚನೆಯಂತಿರುವ ಪ್ಲಾಟ್‌ಫಾರಂ ಹೊಂದಿದೆ. ಇದಕ್ಕೆ ಸ್ವಯಂಚಾಲಿತ ಹಾರುವ ರೆಕ್ಕೆ (ಅಟೋನಾಮಸ್‌ ಫ್ಲೈಯಿಂಗ್‌ ವಿಂಗ್‌) ತಂತ್ರಜ್ಞಾನ ಎಂದು ಕರೆಯಲಾಗುತ್ತದೆ.

ಇಲ್ಲಿನ ಏರೋನಾಟಿಕಲ್‌ ಟೆಸ್ಟ್‌ ರೇಂಜ್‌ನಿಂದ ಗುರುವಾರ ನಸುಕಿನ 6.30ಕ್ಕೆ ಹೊರಟ ಸ್ವಿಫ್ಟ್‌ ಹೆಸರಿನ ಈ ಡ್ರೋನ್‌ ಮಿಂಚಿನ ವೇಗದಲ್ಲಿ ಸಂಚರಿಸಿದೆ. 6.40ಕ್ಕೆ ಎಟಿಆರ್‌ನ ರನ್‌ವೇಗೆ ಸುರಕ್ಷಿತವಾಗಿ ಹಿಂದಿರುಗಿದೆ. ಮೋಡ, ವೇಗವಾಗಿ ಬೀಸುತ್ತಿದ್ದ ಗಾಳಿ ಮತ್ತು ಇಬ್ಬನಿಯ ನಡುವೆ ಯಾವುದೇ ತೊಂದರೆ ಮತ್ತು ಆತಂಕವಿಲ್ಲದೆ ಪರೀಕ್ಷಾ ಹಾರಾಟ ಪೂರ್ಣಗೊಳಿಸಿದೆ. ಇದರೊಂದಿಗೆ ಮಾನವರಹಿತ ಮತ್ತು ಬಾಲರಹಿತ ಡ್ರೋನ್‌ ನಿರ್ಮಿಸಿದ ದೇಶಗಳ ಸಾಲಿಗೆ ಭಾರತವೂ ಸೇರಿದಂತಾಗಿದೆ. 17 ಸೆಕೆಂಡ್‌ಗಳ ಡ್ರೋನ್‌ ಹಾರಾಟದ ವೀಡಿಯೋವನ್ನು ಡಿಆರ್‌ಡಿಒ ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಹಂಚಿಕೊಂಡಿದೆ.

ಇದು 7ನೇ ಪ್ರಯೋಗ
2022ರ ಜುಲೈನಿಂದ ಆರಂಭವಾದ ಪ್ರಯೋಗಗಳಲ್ಲಿ ಇದು ಏಳನೇ ಪ್ರಯೋಗ. ಭೂಮಿಯ ಮೇಲಿನ ಪೈಲಟ್‌, ರಾಡಾರ್‌ ಹಾಗೂ ಯಾವುದೇ ಮೂಲ ಆವಶ್ಯಕತೆಗಳಿಲ್ಲದೆ ಲ್ಯಾಂಡಿಂಗ್‌ ಆಗುವುದು ಈ ಡ್ರೋನ್‌ನ ವಿಶೇಷ. ಈ ಡ್ರೋನ್‌ನ ಬೋರ್ಡ್‌ನಲ್ಲಿ ಅಳವಡಿಸಿದ ಸೆನ್ಸಾರ್‌ ವ್ಯವಸ್ಥೆ ಮತ್ತು ಉಪಗ್ರಹಗಳಿಂದ ಪಡೆದುಕೊಂಡ ಮಾಹಿತಿ ಬಳಸಿಕೊಂಡು ಈ ಹಾರಾಟ ಯಶಸ್ವಿಯಾಗಿದೆ. ಅತಿವೇಗ ಹೊಂದಿರುವ ಈ ಡ್ರೋನ್‌ ಅನ್ನು ಹಗುರ ಗುಣವಿರುವ ಕಾರ್ಬನ್‌ ಸಂಯುಕ್ತಗಳನ್ನು ಬಳಸಿ ನಿರ್ಮಿಸಲಾಗಿದೆ. ಬಾಣದಾಕಾರದ ಡ್ರೋನ್‌ ಮತ್ತು ತಂತ್ರಜ್ಞಾನವು ಪೂರ್ಣ ಪ್ರಮಾಣದಲ್ಲಿ ದೇಸೀಯವಾಗಿದೆ. ಯಾವುದೇ ರನ್‌ವೇನಿಂದ ಟೇಕಾಫ್‌ ಮತ್ತು ಲ್ಯಾಂಡಿಂಗ್‌ ಸಾಮರ್ಥ್ಯವನ್ನು ಡಿಆರ್‌ಡಿಒ ತಂತ್ರಜ್ಞಾನ ಸಾಬೀತುಪಡಿಸಿದೆ.

ಈ ತಂತ್ರಜ್ಞಾನವನ್ನು ದಾಳಿ ಉದ್ದೇಶದ ಘಟಕ್‌ ಹೆಸರಿನ ಡ್ರೋನ್‌ಗೆ ಅಳವಡಿಸುವ ಉದ್ದೇಶ ಹೊಂದಲಾಗಿದೆ. ರಕ್ಷಣ ಕ್ಷೇತ್ರದಲ್ಲಿ ಆತ್ಮನಿರ್ಭರ ಭಾರತ್‌ ಸಿದ್ಧಪಡಿಸುವ ಪ್ರಧಾನಿ ಮೋದಿ ಚಿಂತನೆ ಮತ್ತು 75ನೇ ಸ್ವಾತಂತ್ರ್ಯ ಹಬ್ಬದ ಹಿನ್ನೆಲೆಯಲ್ಲಿ ಈ ಪ್ರಯೋಗ ಮಹತ್ವ ಪಡೆದುಕೊಂಡಿದೆ.

Advertisement

ಡ್ರೋನ್‌ ತಂತ್ರಜ್ಞಾನದಲ್ಲಿ ಪ್ರಮುಖ ಮೈಲಿಗಲ್ಲನ್ನು ಸಾ ಧಿಸಿರುವುದಕ್ಕೆ ರಕ್ಷಣ ಸಚಿವ ರಾಜನಾಥ್‌ ಸಿಂಗ್‌ ಅವರು ಡಿಆರ್‌ಡಿಒ ಸಿಬಂದಿಯನ್ನು ಅಭಿನಂದಿಸಿದ್ದಾರೆ. ಈ ತಂತ್ರಜ್ಞಾನವನ್ನು ಒಳಗೊಂಡ ಪ್ರಯೋಗವು ದೇಶದ ರಕ್ಷಣ ವ್ಯವಸ್ಥೆ ಮತ್ತು ರಕ್ಷಣ ಉದ್ಯಮಕ್ಕೆ ಹೊಸ ಹುಮ್ಮಸ್ಸು ನೀಡಿದೆ ಎಂದು ಎಕ್ಸ್‌ನಲ್ಲಿ ಹೇಳಿದ್ದಾರೆ. ಡಿಆರ್‌ಡಿಒ ಚೇರ್‌ಮನ್‌ ಜಿ.ಸತೀಶ್‌ ರೆಡ್ಡಿ ಈ ತಂತ್ರಜ್ಞಾನದ ರಚನೆ, ತಂತ್ರಜ್ಞಾನ ಮತ್ತು ಪರೀûಾ ಕಾರ್ಯ ಕೈಗೊಂಡ ಸಿಬಂದಿಯನ್ನು ಅಭಿನಂದಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next