ಮೊಹಾಲಿ: ಏಕದಿನ ವಿಶ್ವಕಪ್ ಗೆ ಸಿದ್ದತೆ ನಡೆಸುತ್ತಿರುವ ಭಾರತ ತಂಡವು ಇಂದಿನಿಂದ ಆಸ್ಟ್ರೇಲಿಯಾ ವಿರುದ್ಧ ಏಕದಿನ ಸರಣಿ ಆಡುತ್ತಿದೆ. ಮೊದಲೆರಡು ಪಂದ್ಯಗಳಿಗೆ ಪ್ರಮುಖ ಆಟಗಾರರಿಗೆ ವಿಶ್ರಾಂತಿ ನೀಡಿದ್ದು, ಕೆ.ಎಲ್ ರಾಹುಲ್ ಅವರು ತಂಡವನ್ನು ಮುನ್ನಡೆಸಲಿದ್ದಾರೆ.
ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಅವರು ಕ್ರಿಕೆಟ್ ವಿಶ್ವಕಪ್ 2023 ಗೆ ಮಾನಸಿಕವಾಗಿ ಮತ್ತು ದೈಹಿಕವಾಗಿ ತಾಜಾವಾಗಿರಲು ಬಯಸಿದ್ದರಿಂದ ವಿಶ್ರಾಂತಿ ನೀಡಲಾಗಿದೆ ಎಂದು ಭಾರತ ತಂಡದ ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಅವರು ಗುರುವಾರ ಹೇಳಿದರು.
ಮೊಹಾಲಿಯಲ್ಲಿ ಆರಂಭವಾಗಲಿರುವ ಮೂರು ಪಂದ್ಯಗಳ ಏಕದಿನ ಸರಣಿಯು ಐಸಿಸಿ ಕ್ರಿಕೆಟ್ ವಿಶ್ವಕಪ್ ಗೆ ಮೊದಲು ಇದು ಭಾರತದ ಅಂತಿಮ ಸರಣಿಯಾಗಿದೆ. “ನಮ್ಮ ಕೆಲವು ಹುಡುಗರು ಮೊದಲ ಎರಡು ಪಂದ್ಯಗಳನ್ನು ಆಡುತ್ತಿಲ್ಲ. ನಾವು ನಮ್ಮ ವೇಗಿಗಳನ್ನು ಸ್ವಲ್ಪ ಬದಲಿಸಿ ಆಡುತ್ತಿದ್ದೇವೆ. ಇತರ ಕೆಲವು ಹುಡುಗರಿಗೆ ವಿಶ್ವಕಪ್‌ಗೆ ಮುನ್ನ ಮೂರು ಕಠಿಣ ಪಂದ್ಯಗಳು ಆಡಲು ಅವಕಾಶ ನೀಡಿರುವುದು ಸಂತೋಷವಾಗುತ್ತದೆ” ಎಂದು ದ್ರಾವಿಡ್ ಪಂದ್ಯ ಪೂರ್ವ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.
“ರೋಹಿತ್ ಮತ್ತು ವಿರಾಟ್ ಅವರು ದೈಹಿಕ ಮತ್ತು ಮಾನಸಿಕವಾಗಿ ಸದೃಢರಾಗಿ ವಿಶ್ವಕಪ್ ನ ಮೊದಲ ಪಂದ್ಯವನ್ನು ಆಡುವುದು ಮುಖ್ಯ ಎಂದು ನಾನು ಭಾವಿಸುತ್ತೇನೆ. ಅವರು ಆಡಿದ ಕ್ರಿಕೆಟ್ ನಿಂದ ದೊಡ್ಡ ಆಟಗಳಿಗೆ ತಮ್ಮನ್ನು ಹೇಗೆ ಸಿದ್ಧಪಡಿಸುವುದು ಎಂದು ಅವರಿಗೆ ತಿಳಿದಿದೆ. ಅವರು ದೊಡ್ಡ ಈವೆಂಟ್ ಗೆ ಹೇಗೆ ತಯಾರಿ ಮಾಡಲು ಬಯಸುತ್ತಾರೆ ಎಂಬುದನ್ನು ನಾವು ಅವರೊಂದಿಗೆ ಚರ್ಚಿಸುತ್ತೇವೆ. ಈ ಚರ್ಚೆಗಳ ಆಧಾರದ ಮೇಲೆ ನಾವು ಈ ಪರಸ್ಪರ ನಿರ್ಧಾರಗಳನ್ನು ತೆಗೆದುಕೊಳ್ಳುತ್ತೇವೆ” ಎಂದು ದ್ರಾವಿಡ್ ಹೇಳಿದರು.
ಇದನ್ನೂ ಓದಿ:Cricket Stories; ಆ 2 ರನ್…ದ.ಆಫ್ರಿಕಾ ಮರೆಯಲಾಗದ ವಿಶ್ವಕಪ್ ಹೀರೋ ಲ್ಯಾನ್ಸ್ ಕ್ಲೂಸನರ್
ಸ್ಪಿನ್-ಬೌಲಿಂಗ್ ಆಲ್ ರೌಂಡರ್ ರವಿಚಂದ್ರನ್ ಅಶ್ವಿನ್ ಒಂದು ವರ್ಷದ ನಂತರ ಏಕದಿನ ತಂಡಕ್ಕೆ ಮರಳಿದ ಬಗ್ಗೆ ಮಾತನಾಡಿದ ದ್ರಾವಿಡ್, ಸ್ಪಿನ್ನರ್ ಯಾವಾಗಲೂ ನಮ್ಮ ಯೋಜನೆಯಲ್ಲಿರುತ್ತಾರೆ ಎಂದರು.
“ಅಶ್ವಿನ್ ಅವರಂತ ಅನುಭವಿಯನ್ನು ಹೊಂದಿರುವುದು ನಮಗೆ ಯಾವಾಗಲೂ ಒಳ್ಳೆಯದು. ಅವರು ಎಂಟನೇ ಕ್ರಮಾಂಕದಲ್ಲಿ ಬ್ಯಾಟ್ ನೊಂದಿಗೆ ಕೊಡುಗೆ ನೀಡುವ ಸಾಮರ್ಥ್ಯ ಹೊಂದಿದ್ದಾರೆ. ಯಾರಾದರೂ ಗಾಯಗೊಂಡ ಸಂದರ್ಭದಲ್ಲಿ ಅಥವಾ ಅವಕಾಶವನ್ನು ತೆರೆದಾಗ ನಾವು ಎದುರು ನೋಡುತ್ತಿದ್ದ ವ್ಯಕ್ತಿ ಅವರು. ಅವರು ಇತ್ತೀಚೆಗೆ ಹೆಚ್ಚು ಏಕದಿನ ಕ್ರಿಕೆಟ್ ಆಡಿಲ್ಲ, ಆದರೆ ಅವರ ಅನುಭವದಿಂದ ಅದನ್ನು ನಿಭಾಯಿಸಬಹುದು,” ಎಂದು ಕೋಚ್ ಹೇಳಿದರು.