ನವದೆಹಲಿ: ಭಾರತ ಕ್ರಿಕೆಟ್ ತಂಡದ ನೂತನ ಕೋಚ್ ರವಿ ಶಾಸ್ತ್ರಿ ಶ್ರೀಲಂಕಾ ಪ್ರವಾಸಕ್ಕೆ ಹೊರಡುವ ಮೊದಲು ಕ್ರಿಕೆಟ್ ದಂತಕತೆ ಸಚಿನ್ ತಂಡುಲ್ಕರ್ ಅವರನ್ನು ಅಲ್ಪಾವಧಿಗೆ ಭಾರತ ಬ್ಯಾಟಿಂಗ್ ಸಲಹಾಗಾರರಾಗಿ ನೇಮಕ ಮಾಡುವಂತೆ ಬಿಸಿಸಿಐ (ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ) ಸಮಿತಿ ವಿಶೇಷ ಸಭೆಯಲ್ಲಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಹೀಗೆಂದು ಆಂಗ್ಲ ಮಾಧ್ಯಮವೊಂದು ವರದಿ ಮಾಡಿದೆ. ಈ ಮೊದಲೇ ದ್ರಾವಿಡ್ ಹೆಸರನ್ನು ಬಿಸಿಸಿಐ ಉನ್ನತಾ ಸಲಹಾ ಸಮಿತಿ ಬ್ಯಾಟಿಂಗ್ ಸಲಹಾಗಾರಾಗಿ ಪ್ರಕಟಿಸಿತ್ತು.
ದ್ರಾವಿಡ್‌ಗೆನು ಕೆಲಸ? ಎನ್ನುವುದು ಇನ್ನೂ ನಿರ್ಧಾರವಾಗಿಲ್ಲ. ಈ ಬೆನ್ನಲ್ಲೇ ಜಹೀರ್ ಬದಲಿಗೆ ಬಿಸಿಸಿಐ ಹಠಾತ್ ಆಗಿ ಶಾಸ್ತ್ರಿ ಗೆಳೆಯ ಭರತ್ ಅರುಣ್‌ರನ್ನು ತಂದು ಕೂರಿಸಿಯಾಗಿದೆ. ಇದು ಗೊಂದಲ ಮುಂದುವರಿದಿರುವಾಗಲೇ ಸಚಿನ್ ಹೆಸರನ್ನು ಸಭೆಯಲ್ಲಿ ರವಿ ಶಾಸ್ತ್ರಿ ಉಲ್ಲೇಖೀಸಿರುವುದರ ಹಿಂದೆ ಹಲವು ಅನುಮಾನಗಳು ಹುಟ್ಟಿಕೊಂಡಿವೆ. ಮೂಲಗಳ ಪ್ರಕಾರ ಶಾಸ್ತ್ರಿ ತನಗಿಷ್ಟ ಬಂದವರನ್ನು ಮಾತ್ರ ಸಿಬ್ಬಂದಿಗಳಾಗಿ ನೇಮಕ ಮಾಡಲು ಬಯಸಿದ್ದಾರೆ. ದ್ರಾವಿಡ್‌ರನ್ನು ನಿರ್ಲಕ್ಷ್ಯ ಮಾಡಿದ್ದಾರೆ ಎನ್ನಲಾಗಿದೆ.
ಶಾಸ್ತ್ರಿ ಬಿಸಿಸಿಐಗೆ ಹೇಳಿದ್ದೇನು?: ಸಚಿನ್ ಬಿಸಿಸಿಐ ಸಲಹಾ ಸಮಿತಿಯಲ್ಲಿದ್ದಾರೆ. ಜತೆಗೆ ಐಪಿಎಲ್‌ನಲ್ಲೂ ಸಕ್ರೀಯರಾಗಿದ್ದಾರೆ. ಹೀಗಿದ್ದರೂ ಹಿತಾಸಕ್ತಿ ಸಂಘರ್ಷ ವಿಷಯದಿಂದ ಬದಿಗಿಟ್ಟು ಅಲ್ಪಾವಧಿಗೆ ಸಚಿನ್‌ರನ್ನು ಭಾರತ ತಂಡದ ಬ್ಯಾಟಿಂಗ್ ಸಲಹಾಗಾರರಾಗಿ ನೇಮಿಸಿ ಎಂದು ಸಭೆಯಲ್ಲಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದರು ಎನ್ನಲಾಗಿದೆ.
ಶಾಸ್ತ್ರಿಗೆ ಬಿಸಿಸಿಐ ಉತ್ತರಿಸಿದ್ದೇನು?: ರವಿ ಶಾಸ್ತ್ರಿ ಅಭಿಪ್ರಾಯವನ್ನು ಬಿಸಿಸಿಐ ಹಂಗಾಮಿ ಅಧ್ಯಕ್ಷ ಸಿಕೆ ಖನ್ನಾ, ಸಿಇಒ ರಾಹುಲ್ ಜೊಹ್ರಿ, ಹಂಗಾಮಿ ಕಾರ್ಯದರ್ಶಿ ಅಮಿತಾಬ್ ಚೌಧುರಿ ಹಾಗೂ ಆಡಳಿತಾಧಿಕಾರಿ ಡಯಾನ ಎಡುಲ್ಜಿ ಒಳಗೊಂಡ ಸಮಿತಿ ತಿರಸ್ಕರಿಸಿತು. ರಾಷ್ಟ್ರೀಯ ತಂಡಕ್ಕೆ ಅಲ್ಪಾವಧಿ ಅಥವಾ ಪೂರ್ಣಾವಧಿ ಸಲಹಾಗಾರರಾಗಿ ಆಯ್ಕೆಯಾಗುವವರು ಹಿತಾಸಕ್ತಿ ಸಂಘರ್ಷಕ್ಕೆ ಒಳಗಾಗಿರಬಾರದು ಎನ್ನುವುದನ್ನು ಸ್ಪಷ್ಟಪಡಿಸಿತು ಎನ್ನಲಾಗಿದೆ.
ದ್ರಾವಿಡ್‌ಗೆ ಮುಖಭಂಗ ಮಾಡುವ ಉದ್ದೇಶವೇ?: ಸಚಿನ್ ತೆಂಡುಲ್ಕರ್, ಸೌರವ್ ಗಂಗೂಲಿ, ವಿವಿಎಸ್ ಲಕ್ಷ್ಮಣ್ ಒಳಗೊಂಡ ಬಿಸಿಸಿಐ ಉನ್ನತಾ ಸಲಹಾ ಸಮಿತಿ ಭಾರತ ಕಿರಿಯರ ತಂಡದ ಕೋಚ್ ರಾಹುಲ್ ದ್ರಾವಿಡ್ ಅವರನ್ನು ಭಾರತಕ್ಕೆ ಬ್ಯಾಟಿಂಗ್ ಸಲಹಾಗಾರ ಹಾಗೂ ಜಹೀರ್ ಖಾನ್‌ರನ್ನು ಬೌಲಿಂಗ್ ಸಲಹಾಗಾರ ಎಂದು ಪ್ರಕಟಿಸಿತ್ತು. ಈ ಬೆನ್ನಲ್ಲೇ ಜಹೀರ್ ಬದಲಿಗೆ ಭರತ್ ಅರುಣ್ ಬೌಲಿಂಗ್ ಕೋಚ್ ಆಗಿ ಆಯ್ಕೆಯಾಗಿದ್ದಾರೆ ಎಂದು ಬಿಸಿಸಿಐ ಮತ್ತೂಮ್ಮೆ ಪ್ರಕಟಿಸಿದ್ದು ವಿವಾದಕ್ಕೆ ಕಾರಣವಾಗಿತ್ತು. ಸಲಹಾ ಸಮಿತಿ ತೀರ್ಮಾನಕ್ಕೆ ವಿರುದ್ಧವಾಗಿ ತೀರ್ಮಾನ ತೆಗೆದುಕೊಳ್ಳಲಾಗಿದೆ. ದ್ರಾವಿಡ್ ಸಲಹಾಗಾರರಾಗುವುದನ್ನು ತಡೆಯಲು ಶಾಸ್ತ್ರಿ ಸಚಿನ್ ಹೆಸರನ್ನು ಪ್ರಸ್ತಾಪಿಸುತ್ತಿದ್ದಾರೆ ಎನ್ನುವ ಮಾತುಗಳು ಕ್ರಿಕೆಟ್ ವಲಯದಿಂದ ಕೇಳಿ ಬರುತ್ತಿದೆ.