ಬೆಂಗಳೂರು: ಪ್ರವಾಸಿ ದಕ್ಷಿಣ ಆಫ್ರಿಕಾ ವಿರುದ್ಧ ರವಿವಾರ ಇಲ್ಲಿನ “ಎಂ. ಚಿನ್ನಸ್ವಾಮಿ ಸ್ಟೇಡಿಯಂ’ನಲ್ಲಿ ನಡೆಯುವ 3ನೇ ಟಿ20 ಪಂದ್ಯಕ್ಕಾಗಿ ಭಾರತ ತಂಡ ಶುಕ್ರವಾರ ಅಭ್ಯಾಸ ಆರಂಭಿಸಿದೆ. ಈ ವೇಳೆ ಲೆಜೆಂಡ್ರಿ ಬ್ಯಾಟ್ಸ್‌ಮನ್ ರಾಹುಲ್ ದ್ರಾವಿಡ್ ಸ್ಟೇಡಿಯಂಗೆ ಆಗಮಿಸಿ ಭಾರತ ತಂಡದ ಸದಸ್ಯರೊಂದಿಗೆ ಬೆರೆತರು.
ತಂಡದ ಕೋಚ್ ರವಿಶಾಸ್ತ್ರಿ ನಾಯಕ ವಿರಾಟ್ ಕೊಹ್ಲಿ ಜತೆ ಬಹಳ ಹೊತ್ತು ಕಳೆದ ದ್ರಾವಿಡ್, ತಂಡದ ಇತರ ಸದಸ್ಯರೊಂದಿಗೂ ಕುಶಲೋಪರಿ ನಡೆಸಿದರು. ಇವರೆಲ್ಲರಿಗೂ ದ್ರಾವಿಡ್ ಭೇಟಿ ಹೊಸ ಸ್ಫೂರ್ತಿ ತುಂಬಿದ್ದರಲ್ಲಿ ಅನುಮಾನವಿಲ್ಲ.
ರಾಹುಲ್ ದ್ರಾವಿಡ್ ಮತ್ತು ರವಿಶಾಸ್ತ್ರಿ ಜತೆಗಿರುವ ಚಿತ್ರವನ್ನು ಟ್ವೀಟ್ ಮಾಡಿರುವ ಬಿಸಿಸಿಐ, “ಭಾರತೀಯ ಕ್ರಿಕೆಟಿನ ಇಬ್ಬರು ಶ್ರೇಷ್ಠ ಆಟಗಾರರು ಭೇಟಿಯಾದಾಗ…’ ಎಂಬ ಶೀರ್ಷಿಕೆ ನೀಡಿದೆ.
ಸದ್ಯ ಭಾರತ ಟಿ20 ತಂಡದಲ್ಲಿರುವ ಬಹುತೇಕ ಆಟಗಾರರು “ಎ’ ತಂಡದಲ್ಲಿರುವಾಗ ರಾಹುಲ್ ದ್ರಾವಿಡ್ ಅವರಿಂದ ಕೋಚಿಂಗ್ ಪಡೆದವರೇ ಆಗಿದ್ದಾರೆ. ಶ್ರೇಯಸ್ ಅಯ್ಯರ್, ಮನೀಷ್ ಪಾಂಡೆ, ಕೃಣಾಲ್ ಪಾಂಡ್ಯ, ರಿಷಭ್ ಪಂತ್, ನವದೀಪ್ ಸೈನಿ, ರಾಹುಲ್ ಚಹರ್, ದೀಪಕ್ ಚಹರ್ ಅವರೆಲ್ಲ ಇಂದು ಟೀಮ್ ಇಂಡಿಯಾ ಪ್ರವೇಶಿಸುವಲ್ಲಿ ದ್ರಾವಿಡ್ ಪಾತ್ರ ಮಹತ್ವದ್ದಾಗಿದೆ. ಇವರೆಲ್ಲ ತಮ್ಮ “ಕ್ರಿಕೆಟ್ ಗುರು’ವನ್ನು ಕಂಡು ಪುಳಕಿತಗೊಂಡರು.