Advertisement

ನೇತ್ರದಾನಕ್ಕೆ ಕೋವಿಡ್ 19 ವೈರಸ್‌ ‘ವಕ್ರದೃಷ್ಟಿ’ : ಈ ವರ್ಷ ಸಂಗ್ರಹಿಸಿದ್ದು ಕೇವಲ 90 

03:22 AM Oct 08, 2020 | Hari Prasad |

ಬೆಂಗಳೂರು: ಕೋವಿಡ್ 19 ವೈರಸ್‌ ಈಗ ನೇತ್ರದಾನದ ಮೇಲೂ ವಕ್ರದೃಷ್ಟಿ ಬೀರಿದೆ.

Advertisement

ಪರಿಣಾಮ ಈ ಸಾಲಿನಲ್ಲಿ ರಾಜ್ಯದಲ್ಲಿ ಆಗಿರುವುದು ಕೇವಲ 90 ನೇತ್ರದಾನಗಳಷ್ಟೆ.

ಹಿಂದಿನ ಮೂರು ವರ್ಷಗಳಿಗೆ ಹೋಲಿಸಿದರೆ ನೇತ್ರದಾನ ಪ್ರಮಾಣ ಶೇ.98ರಷ್ಟು ಕುಸಿದಿದ್ದು, ಇದು ಈವರೆಗಿನ ಕನಿಷ್ಠ ದಾಖಲೆಯೂ ಆಗಿದೆ.

ಪ್ರತೀ ವರ್ಷ ರಾಜ್ಯದಲ್ಲಿ ಸರಾಸರಿ 5,000 ನೇತ್ರದಾನಗಳಾಗುತ್ತಿವೆ. ಕಳೆದ 3 ವರ್ಷಗಳಲ್ಲಿ ಸರಾಸರಿ 5,300 ನೇತ್ರದಾನಗಳಾಗಿವೆ.

ಈ ವರ್ಷ ಕೋವಿಡ್ 19 ಹಿನ್ನೆಲೆಯಲ್ಲಿ “ಆಸ್ಪತ್ರೆಯಲ್ಲಿ ದಾಖಲಾಗಿ ಕೋವಿಡೇತರ ಕಾರಣಕ್ಕೆ ಮೃತಪಟ್ಟವರಿಂದ ಮಾತ್ರ ನೇತ್ರದಾನ ಪಡೆಯಬೇಕು’ ಎಂಬ ನಿಯಮವನ್ನು ಕೇಂದ್ರ ಆರೋಗ್ಯ ಇಲಾಖೆಯು ಜಾರಿಗೊಳಿಸಿತ್ತು.

Advertisement


ಪರೀಕ್ಷೆಗೆ ಸಮಯವಿಲ್ಲ
ಮೃತಪಟ್ಟವರಿಂದ 6 ಗಂಟೆಗಳಲ್ಲೇ ಕಣ್ಣನ್ನು ಸಂಗ್ರಹಿಸಬೇಕಿದ್ದು, ಕೋವಿಡ್ 19 (ಆರ್‌ಟಿಪಿಸಿಆರ್‌) ಪರೀಕ್ಷೆ ನಡೆಸಿ ಸೋಂಕನ್ನು ಖಚಿತಪಡಿಸಿಕೊಳ್ಳಲು ಸಮಯ ಇರುವುದಿಲ್ಲ. ಹೀಗಾಗಿ ಮನೆಯಿಂದ ನೇತ್ರ ಸಂಗ್ರಹಕ್ಕೆ ತಡೆಯೊಡ್ಡಲಾಗಿದೆ ಎಂದು ಆರೋಗ್ಯ ಇಲಾಖೆ ನೇತ್ರ ವಿಭಾಗದ ಹಿರಿಯ ವೈದ್ಯಾಧಿಕಾರಿ ಡಾ| ಜಿ.ಎನ್‌. ರಜನಿ ತಿಳಿಸುತ್ತಾರೆ.

ಮನೆಯಿಂದಲೇ ಸಂಗ್ರಹ ಹೆಚ್ಚು
ರಾಜ್ಯದಲ್ಲಿ ಲಕ್ಷಾಂತರ ಮಂದಿ ನೇತ್ರದಾನಕ್ಕೆ ನೋಂದಣಿ ಮಾಡಿಸಿದ್ದು, ಅಂಥವರು ಮನೆಯಲ್ಲೇ ಮೃತಪಟ್ಟಾಗ ಆರೋಗ್ಯ ಸಿಬಂದಿ  ಸ್ಥಳಕ್ಕೆ ತೆರಳಿ ನೇತ್ರವನ್ನು ಸಂಗ್ರಹಿಸುತ್ತಾರೆ.  ರಾಜ್ಯದಲ್ಲಿ ಶೇ.90ಕ್ಕೂ ಅಧಿಕ ನೇತ್ರ ದಾನಗಳು ಈ ರೀತಿಯಾಗಿದ್ದವು.

ಇಂದು ವಿಶ್ವ ದೃಷ್ಟಿ ದಿನ
ದೃಷ್ಟಿ ಬಗ್ಗೆ ಅರಿವು ಮೂಡಿ ಸಲು ವಿಶ್ವಾದ್ಯಂತ ಅಕ್ಟೋಬರ್‌ 2ನೇ ಗುರುವಾರವನ್ನು ದೃಷ್ಟಿ ದಿನವಾಗಿ ಆಚರಿಸಲಾಗುತ್ತದೆ. ಈ ಬಾರಿಯ ಘೋಷ ವಾಕ್ಯವು ‘ದೃಷ್ಟಿಯಲ್ಲಿ ನಂಬಿಕೆ’ ಎಂಬುದಾಗಿದೆ. ದೇಶದಲ್ಲಿ 1.5 ಕೋಟಿ ಅಂಧರಿದ್ದು, ಈ ಪೈಕಿ ಕಾರ್ನಿಯ ಅಂಧತ್ವ ಪ್ರಮಾಣ ಶೇ.25ರಷ್ಟಿದೆ.  ಭಾರತಕ್ಕೆ ಪ್ರತಿ ವರ್ಷ 2 ಲಕ್ಷ ನೇತ್ರದಾನಿಗಳ ಅಗತ್ಯವಿದೆ.

– ಜಯಪ್ರಕಾಶ್‌ ಬಿರಾದಾರ್‌

Advertisement

Udayavani is now on Telegram. Click here to join our channel and stay updated with the latest news.

Next