Advertisement

ಎನಗೂ ಆಣೆ ರಂಗ ನಿನಗೂ ಆಣೆ

02:48 PM Sep 29, 2018 | |

 ಇದು ಯೋಗಾಯೋಗ ಅಲ್ಲ. ಕನ್ನಡ ಒಳಗೊಂಡಂತೆ ಮತ್ತೂ ಕೆಲವು ಭಾರತೀಯ ಭಾಷೆಗಳಲ್ಲಿ ಬೆರಗುಗಣ್ಣುಗಳಿಂದ ನೋಡುವ ಮಹತ್ತರ ರಂಗಪ್ರಯೋಗಗಳನ್ನು ಮಾಡಿದ ಬಿ.ವಿ. ಕಾರಂತರು ತಮ್ಮ ಭೌತಿಕ ಆವರಣ ಕಳಕೊಂಡು ಮರೆಯಾದ ಮೇಲೆ ಬೇರೊಬ್ಬ ರಂಗನಟನ ಮೂಲಕ ರಂಗಕ್ಕೆ ಬಂದರು. ಇದು ನಾಟಕೀಯವೂ ಅಲ್ಲ. ಅವರು ಆಡಿಸಿದ ನಾಟಕಗಳು ನೋಡುಗರ ಕಣ್ಣುಗಳಲ್ಲಿ ಬೆರಗನ್ನು ಮಾತ್ರ ತುಂಬುತ್ತಿರಲಿಲ್ಲ, ಕಿವಿಗಳೂ ತಣಿಯುವಂಥ ಹಾಡುಗಳನ್ನೂ ಅವರು ಸಂಯೋಜಿಸಿದ್ದರು. ಹಲವರಿಗೆ ಅಭಿನಯದ ಪಾಠ ಹೇಳಿ ಕಲಿಸಿದ್ದು ಯಕ್ಷಗಾನದ ಛಾಪಿನ ಹಿನ್ನೆಲೆಯಲ್ಲಿ. ರಂಗಸಂಗೀತದಲ್ಲಿ ಅವರ ಸಂಯೋಜನೆಯ ಒಂದೊಂದು ಹಾಡೂ ಅನನ್ಯ. ಈ ಅನನ್ಯತೆ ಇದ್ದಿದ್ದರಿಂದ ಅವರು ರಂಗಭೂಮಿಯಲ್ಲಿ ಅನೇಕರಿಗೆ ಅಕ್ಷರಶಃ ಗುರುವಾದರು. ಅಭಿನಯ ಕಲಿಸಿದರು, ಹಾಡು ಕಲಿಸಿದರು. ಹಿಂದಿಯಲ್ಲೂ ಅವರಿಗೆ ಪ್ರಭುತ್ವತ್ತಾದ್ದರಿಂದ ಅವರ ಕಾರ್ಯಕ್ಷೇತ್ರ ವಿಸ್ತರಿಸಿತು. ಆದರೆ, ಅವರ ಮೂಲಮಾತೃಕೆ ಇದ್ದದ್ದು ಕನ್ನಡದಲ್ಲಿ. ಆತ್ಮಕಥೆ ಬರೆಯುವ ಗೋಜಿಗೆ ಸಿಕ್ಕಿಕೊಳ್ಳದ ಕಾರಂತರು ತಮ್ಮ ಜೀವಿತದ ಘಟ್ಟಗಳನ್ನ ಕಡೆಪಕ್ಷ ಹೇಳುವ ಮನಸ್ಸು ಮಾಡಿದರು. ಹೀಗೆ ಅವರಿಂದ ನಿರೂಪಿತವಾದದ್ದನ್ನು ಲೇಖಕಿ ವೈದೇಹಿ ದಾಖಲಿಸಿಕೊಂಡರು. “ಇಲ್ಲಿರಲಾರೆ ಅಲ್ಲಿಗೆ ಹೋಗಲಾರೆ’ ಕಾರಂತರ ಆತ್ಮಕಥನದ ಶೀರ್ಷಿಕೆ. ಅವರ ಬದುಕಿನ ಡೋಲಾಯಮಾನ ಸ್ಥಿತಿಯನ್ನು ಈ ಶೀರ್ಷಿಕೆ ಸಾಂಕೇತಿಕವಾಗಿ ಬಿಂಬಿಸುತ್ತದೆ.

Advertisement

   ಕಾರಂತರ ನೆನಪಿನ ಈ ಪ್ರಯಾಣ ಬೆನಕ ತಂಡದ ಈಚಿನ ರಂಗಪ್ರಸ್ತುತಿ “ಎನಗೂ ಆಣೆ ರಂಗ ನಿನಗೂ ಆಣೆ’ಯಲ್ಲಿ ಚಿತ್ರಗಳಾಗಿ ಕದಲಿತು. ರಂಗದ ಮೇಲೆ ಕದಲಿತು. ಪಾತ್ರಗಳಾಗಿ ಕದಲಿತು. ಕಾರಂತರ ಜೊತೆಗೆ ಬದುಕು ಸಾಗಿಸಿದ ಪ್ರೇಮಾ ಕಾರಂತರ ಆತ್ಮಕಥನ “ಸೋಲಿಸಬೇಡ ಗೆಲಿಸಯ್ಯ’- ಎರಡೂ ಆತ್ಮಕಥನಗಳನ್ನು ಮೇಳೈಸಿ ಕೃಷ್ಣಪ್ರಸಾದ್‌ ಹಾಗೂ ಶ್ರೀಪತಿ ಮಂಜನಬೈಲು ರಂಗರೂಪಕ್ಕೆ ಅಳವಡಿಸಿದ್ದರು. ವಿನ್ಯಾಸ ಹಾಗೂ ನಿರ್ದೇಶನ ನಾಗಾಭರಣ ಅವರದ್ದು.   

  ಬಿ.ವಿ.. ಕಾರಂತರು ರಂಗನಿರ್ದೇಶಕರಾಗಿ ಸೃಷ್ಟಿಸಿದ್ದ ಪ್ರಭಾವಳಿ ಭವ್ಯವಾದದ್ದು. ಈ ಭವ್ಯತೆಗೆ ಕಣ್ಣರಳಿಸಿದ ಮತ್ತು ಅವರಿಂದ ಕಲಿತ ಶಿಷ್ಯರು ಮತ್ತು ಶಿಷ್ಯೆಯರಲ್ಲಿ ಕಾರಂತರು ಹೊತ್ತಿಸಿರುವ ರಂಗದ ಬಗೆಗಿನ ಕಾವು ಬೆಳಕಾಗಿ ಇನ್ನೂ ನಿಗಿನಿಗಿಸುತ್ತಿದೆ. ಕಾವಿನ ಪುಳಕ ಇನ್ನೂ ಹಾಗೇ ಉಳಿದಿದೆ. ಗುರುವಿನ ಬಗೆಗೆ ಅವರಲ್ಲಿ ಮಡುಗಟ್ಟಿರುವ ಗೌರವ ಇಂಥ ಪ್ರಯೋಗಕ್ಕೆ ಅಣಿಯಾಗುವಂತೆ ಮಾಡಿದೆ. ಅವರ ಜೊತೆಗೇ ಕದಲಿ ಪಾಠ ಕಲಿತಿರುವುದರಿಂದ ಅವರ ದೇಹಭಾಷೆ, ಮಾತಿನ ವರಸೆ, ಸಂದಿಗ್ಧಗಳು ಎಲ್ಲವನ್ನೂ ಕರಾರುವಕ್ಕಾಗಿ ಪಡಿಮೂಡಿಸಲು ಸಾಧ್ಯವಾಗಿದೆ. 
   ಕಾರಂತರಿಗಿದ್ದ ಪ್ರಭಾವಳಿಯೇ ನಾಟಕವನ್ನು ಬೇರೆ ಮನಸ್ಥಿತಿಯಲ್ಲಿ ನೋಡಲು ಮೊದಲಿಗೆ ಅಣಿಮಾಡುತ್ತದೆ. ನಿರೀಕ್ಷೆಗಳನ್ನು ಹುಟ್ಟಿಸಿರುತ್ತದೆ. ಈ ನಿರೀಕ್ಷೆಗೆ ಧಕ್ಕೆ ಬರದಂತೆ ಪ್ರಯೋಗವನ್ನು ಅಣಿಮಾಡಿರುವುದು ಬೆನಕ ತಂಡದ ಹೆಗ್ಗಳಿಕೆ. ವಿಶೇಷವಾಗಿ ನಾಗಾಭರಣ ಅವರ ವಿನ್ಯಾಸ. ಆತ್ಮಕಥೆಯನ್ನು ಆತ್ಮನಿವೇದನೆಯೆಂಬಂತೆ ವೈದೇಹಿ ಅವರಲ್ಲಿ ಕಾರಂತರು ಹೇಳಿ ಬರೆಸಿದ ಅನುಕ್ರಮಣಿಕೆಯಲ್ಲೇ ನಾಟಕ ತೆರೆದುಕೊಳ್ಳುತ್ತದೆ. ನಿರೂಪಣಾಕ್ರಮ ದೃಶ್ಯಗಳಾಗುವಾಗ ಏಕತಾನವಾಗದಂತೆ ಎಚ್ಚರದಿಂದ ನಾಗಾಭರಣ ನೋಡಿಕೊಂಡಿರುವುದು ಕಂಡುಬಂದಿತು. ಬೇರೆ ಬೇರೆ ಸ್ಪಾಟ್‌ಗಳನ್ನು ಬೇರೆ ಬೇರೆ ರಂಗತಂತ್ರಗಳೊಂದಿಗೆ ಬಳಸಿಕೊಂಡದ್ದರ ಹಿಂದೆ ಒಂದು ಖಾಚಿತ್ಯ ಇದೆ, ಅನುಭವ ಇದೆ. ಎಲ್ಲಕ್ಕಿಂತ ಮಿಗಿಲಾಗಿ ಕಾರಂತರು ಬೇರೆ ಬೇರೆ ನಾಟಕಗಳಿಗೆ ಸಂಯೋಜಿಸಿ ಗುನುಗುವಂತೆ ಮಾಡಿದ್ದ ಹಾಡುಗಳನ್ನು ಅವರ ಜೀವಿತದ ಕಥೆಗೇ ಅನ್ವಯಿಸುತ್ತಾ ಸಾಗಿದ್ದು ಇಲ್ಲಿ ವಿಶೇಷ ಅನಿಸಿತು. ಜೊತೆಗೆ ಅಂಡೆಯೊಳಗೆ ಬಚ್ಚಿಟ್ಟುಕೊಂಡಾಗ ಧ್ವನಿತವಾಗುವ ಪ್ರತಿಧ್ವನಿತಗಳನ್ನು ಬಿಂಬಿಸಿದ ರೀತಿ ತಂತ್ರಗಾರಿಕೆಯಲ್ಲಿ ನಾಗಾಭರಣರಿಗೆ ಇರುವ ಪರಿಣತಿಯನ್ನು ಕಾಣಿಸಿತು.

   ರಂಗದ ಮೇಲೆ ಆತ್ಮಕಥನದ ನಿರೂಪಣೆ ಮೊದಲಿಂದ ಸರಾಗ. ಕೆಲವು ಕಡೆ ರಂಗದ ಮೇಲೆ ನಿರೂಪಣೆಯೇ ಹೆಚ್ಚಾಯಿತು ಅನಿಸಿ ಅವುಗಳನ್ನು ದೃಶ್ಯಗಳಾಗಿಯೇ ತರಬಹುದಿತ್ತು ಅನಿಸಿತಾದರೂ ನಿರೂಪಣೆಯೂ ಹೆಚ್ಚು ಕಾಲ ಲಂಬಿಸದಿದ್ದರಿಂದ ನೋಡುವ ನೋಟಕ್ರಮವನ್ನು ಸರಿದೂಗಿಸಿತು. ಬಾಲ್ಯ, ಯೌವನ ಮತ್ತು ವೃದ್ಧಾಪ್ಯದ ಚಿತ್ರಗಳು ಚುಟುಕಾಗಿ, ಬಿರುಸಾಗಿ, ಹಾಡುಗಳ ಜೊತೆಗೆ ಒಗ್ಗೂಡುತ್ತಾ ಸಾಗಿದವು. ಎಲ್ಲರ ಅಭಿನಯವೂ ಚೆಂದವಿತ್ತಾದರೂ ವೃದ್ಧಾಪ್ಯದ ಕಾರಂತರನ್ನು ಬಿಂಬಿಸಿದ ಮೈಕೊ ಮಂಜು ಅವರ ಅಭಿನಯ ಇಲ್ಲಿ ಉಲ್ಲೇಖನೀಯ. ಧ್ವನಿಯ ಏರಿತಳಲ್ಲಿಯೇ ಕಾರಂತರನ್ನು ಕಟ್ಟಿಕೊಟ್ಟಿದ್ದು ವಿಶೇಷವಾಗಿತ್ತು. ಕಾರಂತರು ಈ ಪ್ರಯೋಗದಲ್ಲಿ ಬೇರೆಬೇರೆ ವಯೋಮಾನದಲ್ಲಿ ಹಾದುಹೋದರು. ಆದರೆ, ಪ್ರೇಮಾ ಮಾತ್ರ ವಯೋಮಾನ ಮಾಗಿರುವ ಕಾಲಘಟ್ಟದಲ್ಲೂ ಪ್ರಸಾಧನದ ಕನ್ನಡಿ ಎದುರು ಕೂರದ ಕಾರಣ ಹಾಗೇ ಕಾಣುತ್ತಿದ್ದರು. ಉಡುಪು ಬದಲಾಗುತ್ತಿತ್ತೇ ಹೊರತು ಮುಖಚರ್ಯೆ ಅಲ್ಲ. ಉಳಿದದ್ದೆಲ್ಲವೂ ಚೆಂದ- ರಂಗದ ಮೇಲಾಣೆ!

ಎನ್‌.ಸಿ. ಮಹೇಶ್‌

Advertisement
Advertisement

Udayavani is now on Telegram. Click here to join our channel and stay updated with the latest news.

Next