ಶಿವಮೊಗ್ಗ: ಈಸೂರಿನ ಸ್ವಾತಂತ್ರ್ಯ ಹೋರಾಟದ ನೈಜ ಘಟನೆಯನ್ನು ತಿಳಿಸುವ ಉದ್ದೇಶದಿಂದ ವಾಸವಿ ವಿದ್ಯಾಲಯ, ಹೊಂಗಿರಣ ಸಂಸ್ಥೆ, ಯೂತ್ ಹಾಸ್ಟೆಲ್ಸ್ ಆಸೋಸಿಯೇಷನ್ ಆಫ್ ಇಂಡಿಯಾ (ತರುಣೋದಯ ಘಟಕ) ಆಶ್ರಯದಲ್ಲಿ ನ.14 ಮತ್ತು 15ರಂದು ಶಿವಮೊಗ್ಗದ ಕುವೆಂಪು ರಂಗಮಂದಿರದಲ್ಲಿ ಏಸೂರು ಕೊಟ್ಟರು ಈಸೂರ ಕೊಡೆವು ಎಂಬ ನಾಟಕವನ್ನು ಆಯೋಜಿಸಲಾಗಿದೆ ಎಂದು ವಾಸವಿ ವಿದ್ಯಾಲಯದ ಎಸ್.ಕೆ.ಶೇಷಾಚಲ ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸ್ವಾತಂತ್ರ್ಯದ ಅಮೃತ ಮಹೋತ್ಸವದ ಅಂಗವಾಗಿ ಈ ಐತಿಹಾಸಿಕ ನಾಟಕವನ್ನು ಪ್ರದರ್ಶಿಸಲಾಗುತ್ತಿದೆ. ಇತಿಹಾಸದ ಘಟನೆಯನ್ನು ಸಾರ್ವಜನಿಕರಿಗೆ ತಿಳಿಸುವ ಉದ್ದೇಶದಿಂದ ಈ ನಾಟಕವು 2ದಿನ ಪ್ರದರ್ಶನಗೊಳ್ಳಲಿದೆ ಎಂದರು.
ನಾಟಕದ ನಿರ್ದೇಶಕ ಡಾ|ಸಾಸ್ವೆಹಳ್ಳಿ ಸತೀಶ್ ಮಾತನಾಡಿ, ಇದೊಂದು ಸ್ವಾತಂತ್ರ್ಯ ಹೋರಾಟದ ನೈಜ ಕಥೆಯಾಗಿದೆ. ಇದರಲ್ಲಿ ಸುಮಾರು 35 ಕ್ಕೂ ಹೆಚ್ಚು ಕಲಾವಿದರು ಭಾಗವಹಿಸಲಿದ್ದಾರೆ. 6ರಿಂದ 65 ವರ್ಷದ ವಯಸ್ಸಿನ ನಟರು ಇಲ್ಲಿದ್ದಾರೆ. ನಾಟಕವು ಯಾವುದೇ ಉತ್ಪ್ರೇಕ್ಷೆ ಇಲ್ಲದೆ ನೈಜ ಘಟನೆಯ ಇತಿಹಾಸವನ್ನು ಹೇಳುತ್ತದೆ. ಹರಿಗೆ ಗೋಪಾಲಸ್ವಾಮಿ ಬೆಳಕಿನ ವಿನ್ಯಾಸ ಮಾಡಲಿದ್ದು ಉಮೇಶ್ ಆಚಾರ್ಯರ ಹಿನ್ನೆಲೆ ಸಂಗೀತವಿದೆ. ಚಂದ್ರಶೇಖರ ಹಿರೆಗೋಣಿಗೆ ಅವರ ಪ್ರಸಾದನ, ಪ್ರಶಾಂತ್ ವಿಕ್ರಮ್, ವಾಸು ಅವರಿಂದ ತಮಟೆ ವಾದನ ನಡೆಯಲಿದೆ ಎಂದರು.
ನಾಟಕ ವೀಕ್ಷಣೆಗೆ ಪ್ರೋತ್ಸಾಹ ಧನವಾಗಿ 50 ಮತ್ತು 100 ರೂ.ಗಳ ಪ್ರವೇಶ ಶುಲ್ಕವಿದೆ. ರಂಗಾಸಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಬರಬೇಕು. ಸುಮಾರು 40 ದಿನ ಶ್ರಮ ಹಾಕಿರುವ ಕಲಾವಿದರನ್ನು, ಸಂಸ್ಥೆಯನ್ನು ಬೆಂಬಲಿಸಬೇಕು. ಹೆಚ್ಚಿನ ಮಾಹಿತಿಗೆ ಮೊ:9844367071 ಹಾಗೂ 9448790127 ನ್ನು ಸಂಪರ್ಕಿಸಬಹುದು ಎಂದರು.
ಪತ್ರಿಕಾಗೋಷ್ಠಿಯಲ್ಲಿ ಪ್ರಮುಖರಾದ ಆ.ನಾ. ವಿಜಯೇಂದ್ರ, ವಾಗೀಶ್, ಹರಿಗೆ ಗೋಪಾಲಸ್ವಾಮಿ, ಸುರೇಶ್, ದಿನೇಶ್, ಗಿರಿಧರ್, ಗಣೇಶ್ ಸೇರಿದಂತೆ ಹಲವರಿದ್ದರು.