ಕಿನ್ನರ ಮೇಳ (ರಿ.), ತುಮರಿ ಇವರು ಈ ಬಾರಿ ಎಳೆಯರಿಗಾಗಿ “ಹೂಂ ಅಂದ…. ಉಹೂಂ ಅಂದ…’ ಎನ್ನುವ ನಾಟಕವನ್ನು ಆಯ್ದಿದ್ದು, ಬ್ರಹ್ಮಾವರದ ಸರಕಾರಿ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳಿಗಾಗಿ ಪ್ರದರ್ಶಿಸಿದರು. ಹಳೆಯ ಸಂಪ್ರದಾಯಗಳನ್ನು ಹಾಗೆಯೇ ಮುಂದುವರಿಸ ಬೇಕೇ ಅಥವಾ ಅದನ್ನು ಮುರಿದು ಹೊಸತನದೊಂದಿಗೆ ಮುಂದೆ ಸಾಗಬೇಕೇ ಎನ್ನುವ ಪ್ರಶ್ನೆಯನ್ನು ನಮ್ಮ ಮುಂದಿಡುತ್ತದೆ ಈ ನಾಟಕ. ಶಾಲಾ ಶಿಕ್ಷಕರೋರ್ವರು ತನ್ನ ವಿದ್ಯಾರ್ಥಿಗಳೊಂದಿಗೆ ಚಾರಣಕ್ಕೆ ಹೊರಟು ನಿಂತಾಗ, ಎಳೇ ಹುಡುಗನೊಬ್ಬ ಅನಾರೋಗ್ಯದಿಂದಿರುವ ತಾಯಿಯ ಅನುಮತಿ ಪಡೆದು ಇವರ ಜೊತೆಗೂಡುತ್ತಾನೆ. ಇತ್ತ ತಾಯಿಗೂ ಅವನು ಔಷಧಿ ತರಬೇಕಾಗಿದೆ. ಬೆಟ್ಟ ಹತ್ತುವ ಸಂದರ್ಭದಲ್ಲಿ ಬಾಲಕನಿಗೆ ತೀವ್ರ ಅಸ್ವಸ್ಥತೆ ಕಾಡುತ್ತದೆ. ಅಲ್ಲಿನ ಸಂಪ್ರದಾಯದಂತೆ ಅಸ್ವಸ್ಥರಾದವರನ್ನು ಕಣಿವೆಗೆ ದೂಡಿ ಮುಂದೆ ಸಾಗಬೇಕು. ಬಾಲಕ ಗುಣಮುಖವಾದ ನಂತರ ಮುಂದುವರೆಯುವ ನಿರ್ಧಾರಕ್ಕೆ ಶಿಕ್ಷಕನು ಬಂದಾಗ, ವಿದ್ಯಾರ್ಥಿಗಳು ಸಂಪ್ರದಾಯ ಪಾಲಿಸದಿದ್ದರೆ ಮುಂದೆ ಅನಾಹುತವಾಗುತ್ತದೆ, ಹಾಗಾಗಿ ಈ ನಿಯಮ ಪಾಲಿಸಲೇಬೇಕು ಎಂದು ಹಠ ಹಿಡಿಯುತ್ತಾರೆ. ದ್ವಂದ್ವಕ್ಕೆ ಸಿಲುಕಿದ ಶಿಕ್ಷಕ ಉಪಾಯದಿಂದ ಮೊಲವೂ – ಆಮೆಯೂ ಎನ್ನುವ ನೀತಿ ಕಥೆಯ ಮೂಲಕ ಮಕ್ಕಳ ಮನಸ್ಸನ್ನು ತಿದ್ದುವಲ್ಲಿ ಯಶಸ್ವಿಯಾಗುತ್ತಾನೆ. ಸಮಾಜದಲ್ಲೂ ಹಿಂದೆ ಬಿದ್ದವರನ್ನು ಉಪೇಕ್ಷಿಸದೆ ಜೊತೆಯಾಗಿ ಕರೆದುಕೊಂಡು ಮುಂದೆ ಸಾಗುವುದೇ ನಿಜವಾದ ಮಾನವೀಯತೆ ಎನ್ನುವುದನ್ನು ಎಳೆಯರಿಗೆ ಮನವರಿಕೆ ಮಾಡುತ್ತಾರೆ. ಶಿಕ್ಷಕನಾಗಿ ನಾಗರಾಜ್ ಹುಬ್ಳಿ, ಬಾಲಕ ಸುಬ್ಬುವಾಗಿ ಸಜೀ ತುಮರಿ, ತಾಯಿಯಾಗಿ ಶಶಿ ಹುಬ್ಳಿ, ವಿದ್ಯಾರ್ಥಿಗಳಾಗಿ ಆಕಾಶ್ ಸೋಲಾಪುರ, ಮೆಹಬೂಬ್ ಮಂಗಳೂರು, ಸುಹಾಸ್ ಸಾಗರ ತಮ್ಮ ಪಾತ್ರಗಳನ್ನು ಸೊಗಸಾಗಿ ನಿರ್ವಹಿಸಿ ಮಕ್ಕಳ ಮನ ಗೆಲ್ಲುವಲ್ಲಿ ಯಶಸ್ವಿಯಾದರು. ಹಿನ್ನೆಲೆಯಲ್ಲಿ ಸಂಗೀತ ಮತ್ತು ಬೆಳಕಲ್ಲಿ ಸಹಾಯಕರಾಗಿದ್ದವರು ಮನೋಜ್ ದಾವಣಗೆರೆ ಮತ್ತು ವಿಶ್ವಾಸ್. ಮೂಲ ಕಥೆ ಜರ್ಮನಿಯ ಪ್ರಸಿದ್ಧ ನಾಟಕಕಾರ ಬಟೋìಲ್ಡ್ ಬ್ರೆಕ್ಟ್ ಅವರದ್ದಾಗಿದ್ದು, ನಮ್ಮ ನೆಲಕ್ಕೆ ಒಗ್ಗುವಂತೆ ವೈದೇಹಿಯವರು ರೂಪಾಂತರಿಸಿದ್ದಾರೆ. ನಿರ್ದೇಶನ ಕೆ. ಜಿ. ಕೃಷ್ಣಮೂರ್ತಿ, ಸಹ ನಿರ್ದೇಶನ ರಾಜೇಂದ್ರ ಬಾಳೆಹಳ್ಳಿ, ಸಂಗೀತ ಜಿ. ಎಸ್. ಮಂಜುನಾಥ ಮತ್ತು ಶ್ರೀಕಾಂತ ಕಾಳಮಂಜಿಯವರದ್ದಾಗಿತ್ತು.
ಕೆ. ದಿನಮಣಿ ಶಾಸ್ತ್ರಿ