ನಾಟಕ: ಬಿಕರೆ ಬಿಂಬ್
ಮನುಷ್ಯ ಅತಿ ಹೆಚ್ಚು ಹೆದರುವುದು ಹೊರಗಿನವರ ಗದರುವಿಕೆಗಲ್ಲ, ತನ್ನೊಳಗಿನ ಹೆದರಿಕೆಗೆ. ಅದು ಆತ್ಮಸಾಕ್ಷಿ, ಅದು ಪಾಪ, ಅದು ಪಾಪಪ್ರಜ್ಞೆ. ಮಂಜುಳಾ ನಾಯಕ್ ಇಂಗ್ಲಿಷ್‌ನಲ್ಲಿ ಬರೆವ ಕನ್ನಡದ ಲೇಖಕಿ. ಆಕೆಯ ಭಾಷಣವೊಂದು ಟಿವಿಯಲ್ಲಿ ಪ್ರಸಾರವಾಗುತ್ತದೆ, ಅದಾದಮೇಲೆ ಸ್ಟುಡಿಯೋದಿಂದ ಹೊರ ಹೊರಡುತ್ತಿದ್ದ ಹಾಗೇ ಅವಳ ಭಾಷಣ ಪ್ರಸಾರ ಮಾಡುತ್ತಿದ್ದ ಟಿವಿಯಲ್ಲೇ ಅವಳ ಅಂತರಾತ್ಮ ಬಂದು ಕುಳಿತುಕೊಂಡುಬಿಡುತ್ತದೆ, ಅದು ಇವಳ ಜೊತೆ ಸಂಭಾಷಣೆ ಮಾಡಲಾರಂಭಿಸುತ್ತದೆ. ಅವಳ ಅಂತರಾಳ ಮತ್ತು ಅಂತರಾತ್ಮಗಳ ನಡುವಿನ ಸಂಭಾಷಣೆಗಳೇ “ಬಿಕರೆ ಬಿಂಬ್’ ಆಗುತ್ತದೆ.
ಸರಿಯಾಗಿ ಹನ್ನೊಂದು ವರ್ಷಗಳ ಹಿಂದೆ ಕನ್ನಡದಲ್ಲಿ ಪ್ರದರ್ಶನಗೊಂಡಿದ್ದ “ಒಡಕಲು ಬಿಂಬ’, ಅನಂತರ ಇಂಗ್ಲಿಷ್‌ನಲ್ಲಿ “ಹೀಪ್ ಆಫ್ ಬ್ರೋಕನ್ ಇಮೇಜಸ್’ ಎಂದೂ, ಹಿಂದಿಯಲ್ಲಿ “ಬಿಕರೆ ಬಿಂಬ್’ ಎಂದೂ ಪ್ರಯೋಗಿಸಲ್ಪಟ್ಟಿತು. ಬಹಳ ವರ್ಷಗಳ ನಂತರ ಇದರ ಹಿಂದಿ ರೂಪವನ್ನು ಇತ್ತೀಚೆಗೆ ರಂಗಶಂಕರ ಪ್ರಸ್ತುತಪಡಿಸಿತು. ಆ ಪಾತ್ರವನ್ನು ಅತ್ಯಂತ ಸಮರ್ಥವಾಗಿ ಅರುಂಧತಿ ರಾವ್ ನಿರ್ವಹಿಸಿ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾದರು. ತಂತ್ರಜ್ಞಾನ ಬದಲಾಗಬಹುದು, ಮನುಷ್ಯನ ಮನೋವಿಜ್ಞಾನ ಬದಲಾಗದು, ಪಾಪ ಅಥವಾ ಸಿನ್ ಅನ್ನುವುದು ಮನುಷ್ಯನ ಬೇಟೆ ನಾಯಿಗಳು ಎನ್ನುವುದನ್ನು ಹೇಳುವ ಈ ನಾಟಕ ತಂತ್ರಜ್ಞಾನ ಮತ್ತು ಪಾಪಪುಣ್ಯವನ್ನು ಮುಖಾಮುಖೀಯಾಗಿಸಿತು.
ಈ ನಾಟಕ ಬಂದ ಕಾಲಕ್ಕೆ ಅದು ಪ್ರೇಕ್ಷಕರನ್ನು ಮತ್ತು ರಂಗಭೂಮಿಯನ್ನು ಏಕಕಾಲಕ್ಕೆ ಬೆಚ್ಚಿಬೀಳಿಸಲು ಕಾರಣ, ಅದು ತಂತ್ರಜ್ಞಾನವನ್ನು ಬಳಸಿಕೊಂಡ ಬಗೆಗೆ. ಒಂದು ಪಾತ್ರ ರಂಗದ ಮೇಲೆ ಇದ್ದಾಗ ಇನ್ನೊಂದು ಪಾತ್ರ ಟಿವಿಯಲ್ಲಿ ಬರುತ್ತಿರುತ್ತದೆ, ಆ ಪಾತ್ರಕ್ಕೂ ಈ ಪಾತ್ರಕ್ಕೂ ವಾಗ್ವಾದಗಳು ನಡೆಯುತ್ತವೆ. ಲೈವ್ ಅನ್ನುವ ಪರಿಕಲ್ಪನೆಯನ್ನು ರಂಗಕ್ಕೆ ಸಮರ್ಥವಾಗಿ ಅಳವಡಿಸಿದ ನಾಟಕ ಇದು. ಟಿವಿಯಲ್ಲಿ ಬರುವ ಅಂತರಾತ್ಮದ ಪಾತ್ರವೇ ಹೇಳುವ ಹಾಗೆ “ಅಂತರಾತ್ಮವೂ ತಂತ್ರಜ್ಞಾನಕ್ಕೆ ಅಪ್‌ಡೇಟ್ ಆಗಿದೆ, ಮೊದಲು ನಾನು ಬೇರೆ ಬೇರೆ ರೂಪದಲ್ಲೆಲ್ಲಾ ಬರುತ್ತಿದೆ; ಈಗ ಟಿವಿಯೊಳಗೆ ಬರುತ್ತಿದ್ದೇನೆ’. ಹಾಗಾಗಿ ಈ ನಾಟಕಕ್ಕೆ ಒಂದು ರೋಚಕತೆ ಬಂದಿರುವುದೇ ಇವತ್ತಿನ ಲೈವ್ ಕಾಲದಲ್ಲಿ ಅಂತರಾತ್ಮವೂ ಲೈವ್ ಆಗಿ “ಪಾಪ’ವನ್ನು ಪಾತ್ರಕ್ಕೇ ಅರ್ಥ ಮಾಡಿಸುವುದು. ಹಾಗಾಗಿ ಇದ್ದಕ್ಕಿದ್ದ ಹಾಗೇ ನಾಟಕ ಒಂದು ಥ್ರಿಲ್ಲರ್ ಅನುಭವವಾಗಿಬಿಡುತ್ತದೆ.
ಅಂಗವೈಕಲ್ಯವುಳ್ಳ ತಂಗಿ ಬರೆದಿದ್ದನ್ನು ತನ್ನ ಕೃತಿಯೆಂದು ಬಿಂಬಿಸಿ, ಅಂತಾರಾಷ್ಟ್ರೀಯ ಜನಪ್ರಿಯತೆಯನ್ನು ಪಡೆವ ಮಂಜುಳಾ ನಾಯಕ್, ಆಕೆಯ ಪತಿ ಪ್ರಮೋದ್ ಮೂರ್ತಿ, ತಂಗಿ ಮಾಲಿನಿ ನಾಯಕ್, ತಂಗಿಗೂ ಪತಿಗೂ ನಡುವಿನ ಅನೈತಿಕ ಸಂಬಂಧ, ಭಾಷಣ, ಕನ್ನಡ ಲೇಖಕಿ ಇಂಗ್ಲಿಷ್‌ನಲ್ಲಿ ಬರೆವ ದ್ವಂದ್ವ- ಇವೆಲ್ಲದರ ರೂಪವಿದು. ಅದ್ಭುತವಾಗಿ ಗಿರೀಶ್ ಕಾರ್ನಾಡ್ ಅವರು ಕಟ್ಟಿಕೊಟ್ಟು, ಅವರೇ ನಿರ್ದೇಶಿಸಿದ್ದನ್ನು ರಂಗದ ಮೇಲೆ ಅರುಂಧತಿ ರಾವ್ ನಾಜೂಕಾಗಿ ಕಟ್ಟಿದ್ದಾರೆ. ಅಲ್ಲೆಲ್ಲೋ ವಿಷಾದ, ಮತ್ತೆಲ್ಲೋ ಕೀರ್ತಿಯ ಆಸೆ, ಬರಹಗಾರ್ತಿಯ ಸೋಗು, ಬುದ್ಧಿಜೀವಿಯ ಅಣಕು, ಕಣ್ಣಂಚಿನ ನೀರು, ಮರುಕ್ಷಣ ದೇಶಾವರಿ ನಗು, ಭಯ, ಭಂಡತನ, ಜಿಗುಪ್ಸೆ, ತುಂಟತನಗಳು ಅವರ ಅಭಿನಯದಲ್ಲಿ ನಿಜಕ್ಕೂ ಜೀವ ತಳೆದು ನಿಂತಿವೆ. ಕಣ್ಣು ಮಿಟುಕಿಸದಂತೆ ನೋಡುವಂತೆ ಅವರು ಮಾಡಿದ್ದಾರೆ.
ರಂಗ ಸಜ್ಜಿಕೆ ಈ ಪ್ರಯೋಗದ ಮತ್ತೂಂದು ಮೆಚ್ಚುಗೆ. ಟಿವಿ ಚಾನಲ್‌ನ ಸೆಟಪ್ ಸೇರಿದಂತೆ ತುಂಬ ಸಿಂಪಲ್ ಆಗಿ ಕಾಣುವಂತೆ ರಂಗಸಜ್ಜಿಕೆ (ಬಸವರಾಜು) ಇದೆಯಾದರೂ ಅದು ವಸ್ತುವಿಗೆ ತುಂಬ ಪೂರಕವಾಗಿ ದುಡಿದಿದೆ. ಬಹಳ ಮುಖ್ಯವಾಗಿ ಟಿವಿ ಪರದೆ ಮೇಲಿನ ಪಾತ್ರ ಮತ್ತು ನೈಜ ಪಾತ್ರಗಳ ಸಂಭಾಷಣೆಯ ಟೈಮಿಂಗ್ ಚೆನ್ನಾಗಿ ಒಂದಕ್ಕೊಂದು ಹೊಂದಿಕೊಂಡು, ನಾಟಕದ ಓಟ ತಾಳ ತಪ್ಪದಂತಿದೆ. ಪ್ರದೀಪ್ ಬೆಳವಾಡಿ ಬೆಳಕು ವಿನ್ಯಾಸ ಸಮರ್ಪಕ.
ಯಾವುದೇ ರಂಗಭೂಮಿ, ಆಯಾ ಕಾಲದ ಪಾತ್ರೆಯ ಆಕಾರಕ್ಕೆ ಹೊಂದಿಕೊಳ್ಳಬೇಕಾಗಿರುವ ನೀರು. ಈ ನಾಟಕ ಕೂಡ ನಮ್ಮ ಕಾಲದ ತಂತ್ರಜ್ಞಾನವನ್ನೂ ರಂಗದೊಳಗೆ ಬಿಟ್ಟುಕೊಂಡು ಹೊಸ ರಂಗಸಾಧ್ಯತೆಯನ್ನು ತೆರೆದಿಟ್ಟಿದೆ. ಅದನ್ನು ನುರಿತ ಕಲಾವಿದರಾಗಿ ಅರುಂಧತಿ ಕಟ್ಟಿಕೊಟಿದ್ದಾರೆ.
-ವಿಕಾಸ ನೇಗಿಲೋಣಿ