ಕನಕಪುರ: ತಿಂಗಳು ಕಳೆದರೂ ಚರಂಡಿ ಕಾಮಗಾರಿ ಮಾಡದೆ ವಿಳಂಬ ಹಾಗೂ ಕಾಮಗಾರಿ ಸ್ಥಗಿತಗೊಳಿಸುತ್ತಿದ್ದ ಗುತ್ತಿಗೆದಾರ ಹಾಗೂ ನಗರಸಭೆ ಅಧಿಕಾರಿಗಳ ವಿರುದ್ಧ ನಿರ್ವಾಣೇಶ್ವರ ನಗರದ ವಾಸಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನಗರದ ನಿರ್ವಾಣೇಶ್ವರ ನಗರದಲ್ಲಿ ಅರೆಬರೆ ಮಾಡಿರುವ ಚರಂಡಿ ಕಾಮಗಾರಿ ಸ್ಥಗಿತಗೊಳಿಸಿ ಪರಿಕರಗಳನ್ನು ಸಾಗಣೆ ಮಾಡಲು ಮುಂದಾದ ಕಾರ್ಮಿಕರನ್ನು ತಡೆದು ಆಕ್ರೋಶ ವ್ಯಕ್ತಪಡಿಸಿದರು. ಚರಂಡಿ ಕಾಮಗಾರಿಗೆ ಅಗತ್ಯ ಪರಿಕರಗಳು ಮತ್ತು ಕಾರ್ಮಿಕರಿಗೆ ಹಣ ಪಾವತಿ ಮಾಡಿಲ್ಲ ಎಂದು ಕಾರ್ಮಿಕರು ಕಾಮಗಾರಿ ಸ್ಥಗಿತಗೊಳಿಸಿ ಪರಿಕರಗಳನ್ನು ಬೇರೆಡೆಗೆ ಸಾಗಣೆ ಮಾಡಲು ಮುಂದಾಗಿದ್ದರು. ಈ ಸಂದರ್ಭದಲ್ಲಿ ರೊಚ್ಚಿಗೆದ್ದ ನಿರ್ವಾಣೇಶ್ವರ ನಗರದ ನಿವಾಸಿಗಳು, ಕಾಮಗಾರಿ ಕೈಗೊಂಡ ಗುತ್ತಿಗೆದಾರರು ಮತ್ತು ನಗರಸಭೆ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಕಳೆದ ಒಂದು ತಿಂಗಳಿಂದ ಚರಂಡಿ ಮಾಡುವು ದಾಗಿ ಈ ಹಿಂದೆ ಇದ್ದ ಚರಂಡಿಯನ್ನು ಕಿತ್ತು ಹಾಕಿ ತಿಂಗಳು ಕಳೆದಿದೆ. ಇನ್ನು ಕಾಮಗಾರಿ ಪೂರ್ಣಗೊಂಡಿಲ್ಲ. ಚರಂಡಿಗೆ ಕಾಮಗಾರಿಗೆ ಗುಂಡಿ ತೆಗೆದು ಬಿಟ್ಟಿದ್ದಾರೆ. ಇದರಿಂದ ಮನೆಗಳಿಗೆ ಓಡಾಡಲು ಆಗುತ್ತಿಲ್ಲ. ಕೆಲವು ಕಡೆ ಕಂಬಿ ಹಾಕಿ ಹಾಗೆ ಬಿಟ್ಟಿದ್ದಾರೆ. ಮಕ್ಕಳು ದಾಟಿಕೊಂಡು ಓಡಾಡುವಾಗ ಆಯತಪ್ಪಿ ಬಿದ್ದರೆ ಪ್ರಾಣವೇ ಕಳೆದುಕೊಳ್ಳ ಬೇಕಾಗುತ್ತದೆ. ಮುಂದಾಗುವ ಅನಾಹುತಕ್ಕೆ ಹೊಣೆ ಯಾರು ಎಂದು ಸಾರ್ವಜನಿಕರು ಪ್ರಶ್ನಿಸಿದರು.
ಮನವಿ ಮಾಡಿದರೂ ಪ್ರಯೋಜನವಾಗಿಲ್ಲ: ಚರಂಡಿ ನಿರ್ಮಾಣಕ್ಕೆ ಗುಂಡಿ ತೆಗೆಯುವಾಗ ನೀರಿನ ಕೊಳಾಯಿ ಸಂಪರ್ಕ ಮತ್ತು ಯುಜಿಡಿ ಪೈಪುಗಳನ್ನು ಕಿತ್ತು ಹಾಕಿದ್ದಾರೆ. ಕಳೆದ ಒಂದು ತಿಂಗಳಿಂದ ಮನೆಗಳಿಗೆ ಸರಿಯಾಗಿ ನೀರು ಪೂರೈಕೆ ಆಗುತ್ತಿಲ್ಲ. ಕೆಲವು ಮನೆಗಳಿಗೆ ಕಲಿಷಿತ ನೀರು ಪೂರೈಕೆ ಆಗುತ್ತಿದೆ ಯುಜಿಡಿ ಪೈಪ್ ಕಿತ್ತು ಬಂದು ಮನೆಯ ಮುಂದೆ ಶೌಚದ ನೀರು ನಿಂತು ಗಬ್ಬು ನಾರುತ್ತಿದೆ. ನಗರಸಭೆ ಅಧಿಕಾರಿಗಳಿಗೆ ನಲ್ಲಿ ಸಂಪರ್ಕ ಸರಿಪಡಿಸುವಂತೆ ಮನವಿ ಮಾಡಿಕೊಂಡರೂ, ಯಾವುದೇ ಪ್ರಯೋಜನವಾಗಿಲ್ಲ ಎಂದು ಆರೋಪಿಸಿದರು.
ಜನರ ಸಮಸ್ಯೆಗೆ ಸ್ಪಂದಿಸದ ಅಧಿಕಾರಿಗಳು: ಅವೈಜ್ಞಾನಿಕವಾಗಿ ಕಾಮಗಾರಿ ಮಾಡಿ ಕೈ ತೊಳೆದುಕೊಳ್ಳಲು ನೋಡುತ್ತಿದ್ದಾರೆ. ಪ್ರಗತಿ ಹಂತದಲ್ಲಿರುವ ಕಾಮಗಾರಿಗಳನ್ನು ಪರಿಶೀಲನೆ ನಡೆಸಿ ವೈಜ್ಞಾನಿಕವಾಗಿ ಗುಣಮಟ್ಟದ ಕಾಮಗಾರಿ ಮಾಡುವಂತೆ ಸೂಚನೆ ನೀಡಬೇಕಾದ ಅಧಿಕಾರಿಗಳು, ಒಂದು ದಿನವೂ ಕಾಮಗಾರಿ ಪರಿಶೀಲನೆಗೆ ಬಂದಿಲ್ಲ. ದೂರವಾಣಿ ಕರೆ ಮಾಡಿದರೂ, ಕರೆಯನ್ನೇ ಸ್ವೀಕರಿಸಲಿಲ್ಲ. ಜನರ ಸಮಸ್ಯೆಗಳಿಗೆ ಸ್ಪಂದಿಸದೆ ಮತ್ತು ಕಾಮ ಗಾರಿಗಳಲ್ಲಿ ಸರ್ಕಾರದ ಹಣ ಪೋಲಾಗದಂತೆ ಎಚ್ಚರ ವಹಿಸಬೇಕಾದ ಅಧಿಕಾರಿಗಳು, ಬೇಜವಾ ಬ್ದಾರಿತನ ಪ್ರದರ್ಶನ ಮಾಡುತ್ತಿರುವುದು ಅಧಿಕಾರಿ ಗಳ ಕಾರ್ಯವೈಖರಿಗೆ ಹಿಡಿದ ಕೈಗನ್ನಡಿ ಎಂದು ದೂರಿದರು.
ನಗರಸಭೆ ಮುಂದೆ ಧರಣಿ ಎಚ್ಚರಿಕೆ: ಕಾಮಗಾರಿ ಕೈಗೊಂಡಿರುವ ಗುತ್ತಿಗೆದಾರರು ಸರಿಯಾಗಿ ಸ್ಥಳಕ್ಕೆ ಬರದೆ ಕಾರ್ಮಿಕರು ತಮಗಿಷ್ಟ ಬಂದಂತೆ ಕಾಮಗಾರಿ ಮಾಡುತ್ತಿದ್ದಾರೆ. ಮಳೆ ಬಂದಾಗ ಮನೆಯ ಮುಂಭಾಗದ ನೀರು ಹರಿದು ಹೋಗಲು ಅವಕಾಶವೇ ಇಲ್ಲದಂತೆ ಕಾಮಗಾರಿ ಮಾಡಿದ್ದಾರೆ. ಇದರಿಂದ ಮಳೆ ಬಂದಾಗ ಕೆಲವು ಮನೆಗಳಿಗೆ ನೀರು ನುಗ್ಗುವಂತೆ ಅವೈಜ್ಞಾನಿಕವಾಗಿ ಚರಂಡಿ ನಿರ್ಮಾಣ ಮಾಡಿದ್ದಾರೆ. ಇದನ್ನು ಸರಿಪಡಿಸುವವರು ಯಾರು. ಎಂದು ಪ್ರಶ್ನಿಸಿದ ಅವರು, ಕಾಮಗಾರಿಯಿಂದ ಆಗಿರುವ ಸಮಸ್ಯೆ ಬಗೆಹರಿಸಬೇಕು. ಇಲ್ಲದಿದ್ದರೆ ಇಲ್ಲಿನ ನಿವಾಸಿಗಳು ನಗರಸಭೆ ಮುಂದೆ ಧರಣಿ ಕೂರಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.