ಜಪ್ಪಿನಮೊಗರು, ಬಜಾಲ್, ಕಣ್ಣೂರು, ಅಳಪೆ ದಕ್ಷಿಣ, ಅಳಪೆ ಉತ್ತರ ವಾರ್ಡ್ ಪ್ರದೇಶದಲ್ಲೂ ಕೇಳಿಬರುತ್ತಿರುವ ಒಂದೇ ಮಾತೆಂದರೆ, ರಾಜ ಕಾಲುವೆಯ ಹೂಳು ಸಕಾಲದಲ್ಲಿ ತೆಗೆದರೆ ಒಂದಿಷ್ಟು ಸಮಸ್ಯೆ ಬಗೆಹರಿದಂತೆ.
ಬುಧವಾರ ಉದಯವಾಣಿಯ ಸುದಿನ ತಂಡವು ಸಾಗಿದ್ದು, ಈ ಪ್ರದೇಶಗಳಲ್ಲಿ. ನಗರದಲ್ಲಿ ಭಾರೀ ಮಳೆ ಸುರಿದರೆ ಕೃತಕ ನೆರೆ ಅಪಾಯ ಎದುರಿಸುವ ಪ್ರಮುಖ ವಾರ್ಡ್‌ಗಳ ಪೈಕಿ ಜಪ್ಪಿನಮೊಗರು ವಾರ್ಡ್ ಕೂಡ ಒಂದು. ಈ ವಾರ್ಡ್‌ನಲ್ಲಿ ಸಾಗುವ ರಾಜಕಾಲುವೆಗಳಲ್ಲಿ ಹೂಳು ತುಂಬಿಕೊಂಡಿದೆ. ಇದನ್ನು ತೆಗೆಯುವ ಕೆಲಸ ಮೊದಲು ಆಗಬೇಕು. ಎಕ್ಕೂರಿನಿಂದ ತುಸು ದೂರ ಕಿರು ಸೇತುವೆಯಿದ್ದು, ಅಲ್ಲೇ ರಾಜಕಾಲುವೆಯಲ್ಲಿ ಕೊಳಚೆ ನೀರು ಹರಿಯುತ್ತಿದೆ. ಕೆಲ ವರ್ಷಗಳ ಹಿಂದೆ ಈ ಕಾಲುವೆಯಿಂದ ನೀರು ಉಕ್ಕಿ ಸುತ್ತಲಿನ ಪ್ರದೇಶಕ್ಕೆ ನುಗ್ಗಿತ್ತು. ಈ ಕಾಲುವೆಯು ರಸ್ತೆ ಮಟ್ಟಕ್ಕಿಂತ ಬಹು ಎತ್ತರದಲ್ಲಿಲ್ಲ. ಹಾಗಾಗಿ ಸಮಸ್ಯೆಯ ಸಾಧ್ಯತೆ ಹೆಚ್ಚು.
ಶಿವಬಾಗ್, ಮರೋಳಿ, ಕುದ್ಕೋರಿ ಗುಡ್ಡ ಪ್ರದೇಶದ ಮಳೆ ನೀರು ತೋಡಿನ ಮೂಲಕ ಪಂಪ್‌ವೆಲ್ ಸರ್ಕಲ್ ಬಳಿ ಕಾಲುವೆಗೆ ಸೇರಿ ಎಕ್ಕೂರು, ಜಪ್ಪಿನಮೊಗರು, ಹೊಗೆರಾಶಿ ಮೂಲಕ ನದಿ ಸೇರುತ್ತದೆ. ಕಾಲುವೆ ಪಂಪ್‌ವೆಲ್‌ನಿಂದ 3 ಕಿ.ಮೀ. ಉದ್ದವಿದ್ದು, ಈ ಪರಿಸರದಲ್ಲಿ ಸುಮಾರು 2 ಸಾವಿರಕ್ಕೂ ಹೆಚ್ಚಿನ ಮನೆಗಳಿವೆ. ಇದೇ ಭಾಗದ ಕಟ್ಟಪುಣಿ ಕಾಲುವೆಯ ಆಯ್ದ ಭಾಗ, ಎಕ್ಕೂರು ಸೇತುವೆ ಬಳಿಯ ಆಯ್ದ ಭಾಗದಲ್ಲಿ ತಡೆಗೋಡೆ ನಿರ್ಮಾಣಕ್ಕೆ ಅನುದಾನ ಬಿಡುಗಡೆಯಾಗಿದೆ. ಕಾಮಗಾರಿ ಮಳೆಗಾಲಕ್ಕೆ ಮುನ್ನ ಮುಗಿಯಬೇಕು. ಇಲ್ಲೇ ಪಕ್ಕದ ಹೊಗೆರಾಶಿ, ಚಿಂತನ ಬಳಿಯ ಕಾಲುವೆಯ ಆಯ್ದ ಭಾಗದ ತಡೆಗೋಡೆ ಕಾಮಗಾರಿಯೂ ಪೂರ್ಣಗೊಳ್ಳಬೇಕಿದೆ.
ಪಡೀಲ್‌ನಲ್ಲಿ ಕೃತಕ ನೆರೆ ಹಾವಳಿ
ರಾ. ಹೆ. ಗೆ ಹೊಂದಿಕೊಂಡ ಪಡೀಲು ಭಾಗದಲ್ಲಿ ಮಳೆ ನೀರು ಹರಿಯಲು ಸೂಕ್ತ ವ್ಯವಸ್ಥೆ ಇಲ್ಲ. ಈ ಭಾಗದ ಒಳಚರಂಡಿ ಸುಧಾರಣೆಯಾಗಬೇಕಿದೆ. ಕೆಲವು ವರ್ಷ ಗಳಿಂದ ಮಳೆಗಾಲದಲ್ಲಿ ಪಡೀಲ್ ಅಂಡರ್ ಪಾಸ್‌ನಲ್ಲಿ ನೀರು ನಿಂತು ಅವಾಂತರ ಸೃಷ್ಟಿಯಾಗುತ್ತದೆ. ಬೈರಾಡಿ ಕೆರೆ ಹಿಂಭಾಗದಲ್ಲೂ ತಡೆಗೋಡೆ ಕಾಮಗಾರಿ ಪ್ರಗತಿಯಲ್ಲಿದೆ. ಸದ್ಯ ಕಾಮಗಾರಿ ಉದ್ದೇಶದಿಂದ ಮಣ್ಣು, ಸಿಮೆಂಟ್ ರಾಜ ಕಾಲುವೆಯಲ್ಲೇ ರಾಶಿ ಹಾಕಿದ್ದು, ಜೋರಾಗಿ ಮಳೆ ಸುರಿದರೆ ಅವಾಂತರ ಸಾಧ್ಯತೆ ಇದೆ.
ಬಜಾಲ್ ಬಳಿಯ ಫೈಸರ್‌ನಗರ ಬಳಿ ಹೂಳೆತ್ತಬೇಕಾಗಿದ್ದು, ಪಡ್ಪು ಬಳಿ, ಬಜಾಲ್- ನಂತೂರು ಬಳಿಯೂ ನೀರು ಸರಾಗವಾಗಿ ಹರಿದು ಹೋಗಲು ವ್ಯವಸ್ಥೆ ಮಾಡಬೇಕಿದೆ. ಈ ಭಾಗದಲ್ಲೂ ಸಮರ್ಪಕ ಒಳಚರಂಡಿ ಇಲ್ಲ. ಹಾಗಾಗಿ ಕೊಳಚೆ ನೀರೂ ಇದೇ ಕಾಲುವೆಯಲ್ಲಿ ಹರಿಯುತ್ತಿದೆ. ಸ್ಥಳೀಯರ ತಡೆಗೋಡೆ ನಿರ್ಮಾಣದ ಬೇಡಿಕೆ ಈಡೇರಬೇಕಿದೆ. ಸಾಧಾರಣ ಮಳೆಯಾದರೂ ಬಜಾಲ್ ಅಂಡರ್‌ಪಾಸ್ ಬಳಿ ವಾಹನ ಸಂಚಾರ ಸ್ಥಗಿತಗೊಳ್ಳುವ ಪರಿಸ್ಥಿತಿ ಇದೆ. ಇದಕ್ಕೆ ಕಾರಣ ಇಲ್ಲಿನ ಅಸಮರ್ಪಕ ರಾಜಕಾಲುವೆ ವ್ಯವಸ್ಥೆ. ಈ ಕಾಲುವೆಯ ವಿಸ್ತೀರ್ಣ ಕಡಿಮೆ ಇದ್ದು, ನೀರು ಸರಾಗವಾಗಿ ಹರಿಯಲಾಗದೇ ಸುತ್ತಲಿನ ಅಳಪೆ ಮಠ, ಬೊಲ್ಲ ರಸ್ತೆ, ಡೆಂಜ, ಕೋಡಿಮೊಗೆರು ಪ್ರದೇಶಕ್ಕೆ ನುಗ್ಗುವ ಸಂದರ್ಭ ಹೆಚ್ಚು. ಜತೆಗೆ ಇದರಲ್ಲೇ ಕೊಳಚೆಯೂ ಹರಿಯುತ್ತಿರುವುದು ಸ್ಥಳೀಯರಿಗೆ ಮತ್ತೂಂದು ಸಮಸ್ಯೆ. ಕಂಕನಾಡಿ ರೈಲು ನಿಲ್ದಾಣದ ಮುಂಭಾಗವೂ ಕಾಲುವೆಗೆ ತಡೆಗೋಡೆ ನಿರ್ಮಿಸಬೇಕೆಂಬ ಬೇಡಿಕೆ ಇದೆ.
ರಾಜಕಾಲುವೆಯಲ್ಲಿ ಪ್ಲಾಸ್ಟಿಕ್ ತ್ಯಾಜ್ಯ !
ಕೆಲವು ರಾಜಕಾಲುವೆಗಳಲ್ಲಿ ಪ್ಲಾಸ್ಟಿಕ್ ಗಳ ರಾಶಿ ಇದ್ದು, ಬಹುದೊಡ್ಡ ಅಪಾಯ ತಂದೊಡ್ಡುವ ಸಾಧ್ಯತೆ ಇದೆ. ಜಪ್ಪಿನಮೊಗರು ಬಳಿಯ ಕಾಲುವೆಯಂತೂ ಪ್ಲಾಸ್ಟಿಕ್‌ಮಯ. ಇದಲ್ಲದೇ ಹಲವು ಕಾಲುವೆಗಳಲ್ಲಿ ಕೊಳಚೆ ಹರಿಯುವ ಕಾರಣ, ಪಾಚಿಯಲ್ಲದೇ ಗಿಡ-ಗಂಟಿ ಬೆಳೆದು ನೀರಿನ ಹರಿವಿಗೆ ತಡೆಯೊಡ್ಡುತ್ತಿವೆ. ಹೂಳು ತೆಗೆದು, ಸ್ವತ್ಛಗೊಳಿಸಬೇಕಿದೆ ಎನ್ನುತ್ತಾರೆ ಸ್ಥಳೀಯರು.
ವಾರದೊಳಗೆ ರಾಜಕಾಲುವೆ ಹೂಳೆತ್ತಲು ಕ್ರಮ
ಮೇಯರ್ ಪಾಲಿಕೆಯ 60 ವಾರ್ಡ್‌ಗಳ ಪೈಕಿ ರಾಜಕಾಲುವೆ ಸೇರಿದಂತೆ ಬೃಹತ್ ಚರಂಡಿಯ ಹೂಳೆತ್ತುವ ಕಾಮಗಾರಿಯನ್ನು ವಾರದೊಳಗೆ ಆರಂಭಿಸಲಾಗುವುದು ಎಂದು ಮೇಯರ್ ಪ್ರೇಮಾನಂದ ಶೆಟ್ಟಿ ತಿಳಿಸಿದ್ದಾರೆ. ‘ಉದಯವಾಣಿ-ಸುದಿನ’ ಕೈಗೊಂಡ ‘ಮುಂಗಾರು ಮುನ್ನೆಚ್ಚರ’ ಅಭಿಯಾನ ಹಿನ್ನೆಲೆಯಲ್ಲಿ ಪ್ರತಿಕ್ರಿಯೆ ನೀಡಿದ ಮೇಯರ್ ಅವರು, ‘ಈ ಬಾರಿ ಮಳೆಗಾಲದಲ್ಲಿ ಯಾವುದೇ ಸಮಸ್ಯೆ ಆಗದಂತೆ ಮುನ್ನೆಚ್ಚರಿಕೆ ವಹಿಸುವ ನಿಟ್ಟಿನಲ್ಲಿ ಪಾಲಿಕೆ ಎಲ್ಲ ಕ್ರಮಗಳನ್ನು ಕೈಗೊಳ್ಳಲಿದೆ. ಸಣ್ಣ ಚರಂಡಿಯ ಕಸ ಕಡ್ಡಿಗಳನ್ನು ತೆಗೆದು ಸ್ವತ್ಛಗೊಳಿಸುವ ಕಾರ್ಯ ಈಗಾಗಲೇ ನಡೆಯುತ್ತಿದೆ. ಉಳಿದಂತೆ ದೊಡ್ಡ ತೋಡು, ರಾಜಕಾಲುವೆಯ ಹೂಳೆತ್ತುವ ಕಾರ್ಯವನ್ನು ಶೀಘ್ರದಲ್ಲಿ ಆರಂಭಿಸಬೇಕಿದೆ. ಈ ಬಗ್ಗೆ ಮಾತುಕತೆ ಕೂಡ ನಡೆಯುತ್ತಿದೆ. ಟೆಂಡರ್ ಪ್ರಕ್ರಿಯೆ ಶೀಘ್ರ ಪೂರ್ಣಗೊಳಿಸಿ ಮುಂದಿನ 1 ವಾರದೊಳಗೆ ಹೂಳೆತ್ತುವ ಕಾರ್ಯವನ್ನು ಎಲ್ಲೆಡೆಯಲ್ಲಿ ಆರಂಭಿಸಲಾಗುವುದು’ ಎಂದು ತಿಳಿಸಿದ್ದಾರೆ.