ಸುಳ್ಯ : ಮಾಣಿ-ಮೈಸೂರು ರಾಜ್ಯ ಹೆದ್ದಾರಿಯ ಸುಳ್ಯ ನಗರದಲ್ಲಿ ಚರಂಡಿ ಸ್ಲ್ಯಾಬ್ ಗಳು ಸಮರ್ಪಕವಾಗಿ ಅಳವಡಿಕೆ
ಆಗದಿರುವ ಕುರಿತ ದೂರಿನ ಹಿನ್ನೆಲೆಯಲ್ಲಿ ಕೆಆರ್‌ಡಿಸಿಎಲ್ ಪ್ರಭಾರ ಮುಖ್ಯ ಎಂಜಿನಿಯರ್ ನಂಜುಂಡಪ್ಪ ಹಾಗೂ ಇತರ ಅಧಿಕಾರಿಗಳು ಸೋಮವಾರ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ರಾಜ್ಯ ಹೆದ್ದಾರಿಗಳಲ್ಲಿ ಚರಂಡಿ ಕಾಮಗಾರಿ ಅವೈಜ್ಞಾನಿಕವಾಗಿದೆ ಎಂದು ಸಾಮಾಜಿಕ ಕಾರ್ಯಕರ್ತ ಡಿ.ಎಂ. ಶಾರೀಖ್ ಅವರು ನೀಡಿದ ದೂರಿನ ಹಿನ್ನೆಲೆಯಲ್ಲಿ ಮುಖ್ಯ ರಸ್ತೆ ಬದಿಗಳಲ್ಲಿನ ಚರಂಡಿಯ ಸ್ಲ್ಯಾಬ್ ಗಳ ಪರಿಶೀಲನೆ ನಡೆಯಿತು.
ಸರಿಪಡಿಸಲು ತಾಕೀತು
ಪೈಚಾರ್‌ನಿಂದ ಗಾಂಧಿ ನಗರದ ತನಕ ಪರಿಶೀಲನೆ ನಡೆಸಿದರು. ಸ್ಲ್ಯಾಬ್ ಅವ್ಯವಸ್ಥೆಯನ್ನು ತತ್‌ಕ್ಷಣ ಸರಿಪಡಿಸಬೇಕು. ಮುಂದಿನ ಮಳೆಗಾಲದ ಒಳಗೆ ಕಾಮಗಾರಿ ವ್ಯವಸ್ಥಿತವಾಗಿ ಪೂರ್ಣಗೊಳ್ಳಬೇಕು ಎಂದು ಅವರು ಗುತ್ತಿಗೆದಾರರಿಗೆ ತಾಕೀತು ಮಾಡಿದರು. ಈ ಬಗ್ಗೆ ನಿಗಾ ಇಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಗಾಂಧಿನಗರದ ಅರಣ್ಯ ಇಲಾಖೆ ಕಚೇರಿ ಬಳಿ ಒಂದು ಬದಿಯಲ್ಲಿ ಮಾತ್ರ ಚರಂಡಿ ನಿರ್ಮಿಸಲಾಗಿದೆ. ಇದರಿಂದ ಮಳೆಗಾಲದಲ್ಲಿ ನೀರು ರಸ್ತೆಯಲ್ಲಿಯೇ ಹರಿದು ಪಾದಚಾರಿಗಳಿಗೆ ಹಾಗೂ ವಾಹನ ಸವಾರರಿಗೆ ತೊಂದರೆ ಆಗುತ್ತಿದೆ. ಇದನ್ನು ತತ್‌ಕ್ಷಣ ಸರಿಪಡಿಸುವಂತೆ ಸ್ಥಳೀಯ ನಿವಾಸಿ ಅಬ್ದುಲ್ಲ ಗಾಂಧಿನಗರ ಅವರು ಎಂಜಿನಿಯರ್ ಗಮನಕ್ಕೆ ತಂದರು.
ಆರಂಭದಲ್ಲಿ ಕೆಆರ್‌ಡಿಸಿಎಲ್ ವತಿ ಯಿಂದ ಚರಂಡಿ ನಿರ್ಮಾಣ ನಡೆಯುತ್ತಿದ್ದ ಸಂದರ್ಭ ಕಾಮಗಾರಿ ಗುಣ ಮಟ್ಟದಿಂದ ಕೂಡಿತ್ತು. ಆಂದ್ರಪ್ರದೇಶದ ಕಂಪೆನಿಗೆ ಸಬ್ ಗುತ್ತಿಗೆ ನೀಡಿದ ಬಳಿಕ ಕಾಮಗಾರಿ ಅವೈಜ್ಞಾನಿಕವಾಗಿ ಕೂಡಿದೆ ಎಂದು ಸಾರ್ವಜನಿಕರು ದೂರಿದರು.
ರಾಜ್ಯ ಹೆದ್ದಾರಿಯ ಕಲ್ಲುಗುಂಡಿ ಭಾಗದಲ್ಲಿ ರಸ್ತೆಯಲ್ಲಿ ನಿರ್ಮಿಸಲಾದ ಹಂಪ್‌ಗ್ಳು ಅವೈಜ್ಞಾನಿಕ ಸ್ಥಿತಿಯಲ್ಲಿರುವ ಬಗ್ಗೆ ಉತ್ತರಿಸಿದ ಕೆಎಂಸಿ ಎಂಜಿನಿಯರ್ ಸುನೀಲ್, ಸುಳ್ಯ ಪೊಲೀಸ್ ಠಾಣೆಯ ಕೋರಿಕೆ ಮೇರೆಗೆ ಹಂಪ್ ನಿರ್ಮಿಸಲಾಗಿತ್ತು. ಅಲ್ಲಿ ಅಪಘಾತ ಸಂಭವಿಸಿದ ಕಾರಣದಿಂದ ಹಂಪ್‌ಗೆ ಬಣ್ಣ ಬಳಿಯಲಾಗಿದೆ ಎಂದು ಮಾಹಿತಿ ನೀಡಿದರು. ಈಗಿರುವ ಹಂಪ್ ಎತ್ತರ 6 ಇಂಚು ಇದ್ದಲ್ಲಿ, ಅದನ್ನು 3 ಇಂಚಿಗೆ ಇಳಿಸಬೇಕು. ರಾಜ್ಯ ಹೆದ್ದಾರಿಗಳಲ್ಲಿ ಹಂಪ್ ನಿರ್ಮಿಸುವ ಮೊದಲು ನಮ್ಮ ಗಮನಕ್ಕೆ ತರಬೇಕು ಎಂದು ಸೂಚನೆ ನೀಡಿದರು. ಕೆಆರ್‌ಡಿಸಿಎಲ್ ಎಕ್ಸಕ್ಯೂಟಿವ್ ಎಂಜಿನಿಯರ್ ಲಕ್ಷ್ಮೀಶ ಮೈಸೂರು, ದೂರುದಾರ ಡಿ.ಎಂ. ಶಾರೀಕ್, ಸಂಶುದ್ದೀನ್ ಮೊದಲಾದವರು ಉಪಸ್ಥಿತರಿದ್ದರು.
ಸುದಿನ ವರದಿ ಫಲಶ್ರುತಿ
ಮಾಣಿ-ಮೈಸೂರು ರಾಜ್ಯ ಹೆದ್ದಾರಿ ಹಾಗೂ ಚರಂಡಿ ಅವ್ಯವಸ್ಥೆ ಕುರಿತು ಕೆಲ ತಿಂಗಳ ಹಿಂದೆ ಉದಯವಾಣಿ ಸುದಿನ ವಿಸ್ತೃತ ವರದಿ ಪ್ರಕಟಿಸಿತ್ತು. ಈ ಬಗ್ಗೆ ಸಾಮಾಜಿಕ ಹೋರಾಟಗಾರ ಡಿ.ಎಂ. ಶಾರೀಕ್ ಅವರು ದೂರು ನೀಡಿದ್ದರು.