Advertisement

ರಾಷ್ಟ್ರೀಯ ಹೆದ್ದಾರಿಗೆ ಚರಂಡಿ ಸಮಸ್ಯೆ

06:13 PM Aug 02, 2021 | Team Udayavani |

ಅಫಜಲಪುರ: ಯಾವುದೇ ರಸ್ತೆ, ಹೆದ್ದಾರಿಗಳನ್ನು ನಿರ್ಮಿಸುವಾಗ ಅವುಗಳ ಪಕ್ಕ ಚರಂಡಿಗಳನ್ನು ನಿರ್ಮಿಸಲಾಗುತ್ತದೆ. ಆದರೆ ಇಲ್ಲೊಂದು ಹೆದ್ದಾರಿಗೆ ಚರಂಡಿ ಸಮಸ್ಯೆ  ಕಾಡುತ್ತಿದೆ. ಹೀಗಾಗಿ ಪ್ರಯಾಣಿಕರು ಮತ್ತು ವಾಹನ ಸವಾರರು, ಸಾರ್ವಜನಿಕರು ಪರದಾಡುವಂತಾಗಿದೆ.

Advertisement

ತಾಲೂಕಿನ ಚವಡಾಪುರ ಗ್ರಾಮದಲ್ಲಿನ ರಾಜ್ಯ ಮತ್ತು ರಾಷ್ಟ್ರೀಯ ಹೆದ್ದಾರಿ ಸೇರಿಕೊಳ್ಳುತ್ತವೆ. ಈ ಹೆದ್ದಾರಿಗೆ ಚರಂಡಿಗಳೇ ಇಲ್ಲ. ಹೀಗಾಗಿ ಮಳೆ ನೀರು ಮತ್ತು ಚವಡಾಪುರ ಗ್ರಾಮದ ನೀರು ಹೆದ್ದಾರಿ ಮೇಲೆ ನಿಲ್ಲುತ್ತಿದೆ. ಹೀಗೆ ನಿಲ್ಲುವ ನೀರು ಹರಿದು ಹೋಗಲು ದಾರಿ ಇಲ್ಲದೇ, ಅದರಲ್ಲಿ ವಾಹನಗಳು ಓಡಾಡಿ, ಹಂದಿಗಳು ಒದ್ದಾಡಿ ಸಾಂಕ್ರಾಮಿಕ ರೋಗದ ತಾಣವಾಗುತ್ತಿದೆ. ಅಲ್ಲದೇ ಸುತ್ತಲೂ ದುರ್ನಾತ ಬೀರುತ್ತಿದೆ.

ಹೆದ್ದಾರಿ ಮೇಲೆ ಚರಂಡಿ ನೀರು:
ಚವಡಾಪುರ ಗ್ರಾಮದಿಂದ ಸುಕ್ಷೇತ್ರ ದೇವಲ ಗಾಣಗಾಪುರಕ್ಕೆ ಹೋಗುವ ಮಾರ್ಗದಲ್ಲಿ ದತ್ತಾತ್ರೇಯ ಮಹಾರಾಜರ ಕಮಾನ್‌ ಕಟ್ಟಲಾಗಿದೆ. ಈ ಸ್ಥಳದಲ್ಲೇ ಚರಂಡಿ ನೀರು ಮತ್ತು ಮಳೆ ನೀರು ನಿಲ್ಲುತ್ತಿದೆ. ಈ ಜಾಗದಲ್ಲಿ ಹೆದ್ದಾರಿಗಿಂತ ಎತ್ತರದಲ್ಲಿ ಚರಂಡಿ ಕಟ್ಟಲಾಗಿದೆ. ಇದರಿಂದ ನೀರು ಹರಿದು ಹೋಗಲು ಸಾದ್ಯವಾಗುತ್ತಿಲ್ಲ. ಹೀಗಾಗಿ ಮಳೆ, ಚರಂಡಿ ನೀರು ಹೆದ್ದಾರಿ ಮೇಲೆ ಸಂಗ್ರಹವಾಗಿ ಸಮಸ್ಯೆಯಾಗುತ್ತಿದೆ. ಇದರಿಂದಾಗಿ ಸಾರ್ವಜನಿಕರು, ಪ್ರಯಾಣಿಕರು, ವಾಹನ
ಸವಾರರು ಸಂಕಷ್ಟ ಎದುರಿಸುವಂತೆ ಆಗಿದೆ.

ಮಳೆ ನೀರು ಹರಿದು ಹೋಗುವ
ವ್ಯವಸ್ಥೆ ಮಾಡಬೇಕಾದವರು ನಿರ್ಲಕ್ಷ್ಯ ವಹಿಸುತ್ತಿದ್ದಾರೆ. ಸ್ಥಳೀಯ ಚವಡಾಪುರ ಗ್ರಾ.ಪಂನವರು ನೀರು ಹರಿದು ಹೋಗುವಂತೆ ವ್ಯವಸ್ಥೆ ಮಾಡುತ್ತಿಲ್ಲ. ಬದಲಾಗಿ ಹೆದ್ದಾರಿ ಅಕ್ಕಪಕ್ಕದಲ್ಲೇ ಕಸ ಚೆಲ್ಲಲಾಗುತ್ತಿದೆ. ಇದರಿಂದ ಇನ್ನಷ್ಟು ದುರ್ನಾತ ಬೀರಿ ಸಾಂಕ್ರಾಮಿಕ ರೋಗದ ತಾಣವಾಗಿ ಮಾರ್ಪಟ್ಟಿದೆ.

ಮುಗಿಯದ ಕಾಮಗಾರಿ: ಪಟ್ಟಣದ ಬಸವೇಶ್ವರ ವೃತ್ತದಲ್ಲಿ ಮಳೆ ಮತ್ತು ಚರಂಡಿ ನೀರು ಹೋಗಲು ಕಳೆದ ಮೂರು ತಿಂಗಳಿಂದ ದೊಡ್ಡದಾದ ಚರಂಡಿ ನಿರ್ಮಿಸಲಾಗುತ್ತಿದೆ. ಆಮೆಗತಿಯಲ್ಲಿ ಕಾಮಗಾರಿ ಸಾಗಿದ್ದರಿಂದ ವಾಹನ ಸವಾರರು ಪರದಾಡುವಂತಾಗಿದೆ. ಅಲ್ಲದೇ ಬಸವೇಶ್ವರ ವೃತ್ತ ಮತ್ತು ಸುತ್ತಮುತ್ತಲಿನ ಬಡಾವಣೆ ಜನರಿಗೆ ಧೂಳು, ವಾಹನ ದಟ್ಟಣೆ ಸದ್ದು ಕೇಳಿ ಸಾಕಾಗಿದೆ. ಹೀಗಾಗಿ ಶೀಘ್ರವೇ ಕಾಮಗಾರಿ ಮುಗಿಯಲಿ ಎಂದು ಸಾರ್ವಜನಿಕರು ಆಗ್ರಹಿಸುತ್ತಿದ್ದಾರೆ.

Advertisement

ಹೆದ್ದಾರಿಗೂ ಬೇಕಿದೆ ಕಾಯಕಲ್ಪ: ಇನ್ನೂ ರಾಷ್ಟ್ರೀಯ ಹೆದ್ದಾರಿ ಅನೇಕ ಕಡೆ ಕಿತ್ತುಕೊಂಡು ಹೋಗಿದೆ. ಹೀಗಾಗಿ ಹೆದ್ದಾರಿಗೆ ಮತ್ತೆ ಡಾಂಬರ್‌ ಹಾಕಿಸಬೇಕಾದ ಅನಿವಾರ್ಯತೆ ಇದೆ. ಇಲ್ಲದಿದ್ದರೆ ನಿತ್ಯ ಒಂದೊಂದು ಅಪಘಾತಗಳಾಗುತ್ತಿದ್ದು, ಅಪಘಾತಗಳ ಸಂಖ್ಯೆ ಹೆಚ್ಚಳವಾಗಿ ಸಾವು-ನೋವುಗಳಿಗೆ ಕಾರಣವಾಗಲಿದೆ. ಒಟ್ಟಿನಲ್ಲಿ ರಾಷ್ಟ್ರೀಯ ಹೆದ್ದಾರಿಯ ಸಮಸ್ಯೆಗಳು ಸರಮಾಲೆಯಂತೆ ಬೆಳೆ ಯುತ್ತಿದ್ದು, ಸಂಬಂಧಪಟ್ಟವರು ಕೂಡಲೇ ಎಚ್ಚೆತ್ತುಕೊಂಡು ಸಮಸ್ಯೆಗಳಿಗೆ ಪರಿಹಾರ ನೀಡುವ ಕೆಲಸ ಮಾಡಲಿ.

ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದವರು ಸಮಸ್ಯೆಗಳಿಗೆ ಸ್ಪಂದಿಸಿ ಕೂಡಲೇ ಸರಿಪಡಿಸುವ ಕೆಲಸ ಮಾಡಬೇಕು. ಸ್ಥಳೀಯ ಜನಪ್ರತಿನಿಧಿಗಳು ತಮ್ಮ ವ್ಯಾಪ್ತಿಯ ಕೆಲಸಗಳನ್ನು ತಡ ಮಾಡದೇ ಮಾಡಿಸಬೇಕು. ಇವರೆಲ್ಲರ ನಿರ್ಲಕ್ಷ್ಯದಿಂದ ಸಾರ್ವಜನಿಕರಿಗೆ ಸಮಸ್ಯೆಯಾಗುತ್ತಿದೆ.
ರಾಜೆಂದ್ರ ಪಾಟೀಲ ರೇವೂರ
(ಬಿ), ಕಾಂಗ್ರೆಸ್‌ ಮುಖಂಡ

*ಮಲ್ಲಿಕಾರ್ಜುನ ಹಿರೇಮಠ

Advertisement

Udayavani is now on Telegram. Click here to join our channel and stay updated with the latest news.

Next