Advertisement

ಚರಂಡಿ ಸಮಸ್ಯೆ: ರಸ್ತೆಯಲ್ಲಿ ಕೃತಕ ನೆರೆ

11:37 AM Jun 10, 2018 | |

ಬೆಳ್ತಂಗಡಿ : ಮುಂಗಾರು ಮಳೆ ಆರಂಭಗೊಂಡಿದ್ದು, ಮಳೆಯ ನೀರು ಸಮರ್ಪಕವಾಗಿ ಹರಿದು ಹೋಗಲು ಚರಂಡಿಯ ವ್ಯವಸ್ಥೆ ಮಾತ್ರ ಅನೇಕ ಕಡೆಗಳಲ್ಲಿ ಇನ್ನೂ ಆಗಿಲ್ಲ. ಬೆಳ್ತಂಗಡಿ ತಾಲೂಕಿನ ಬಹುತೇಕ ಕಡೆಗಳಲ್ಲಿ ರಸ್ತೆ ಬದಿಯ ಚರಂಡಿ ವ್ಯವಸ್ಥೆ ಸರಿಪಡಿಸದೆ ಮಳೆ ನೀರು ಮಾರ್ಗದಲ್ಲಿಯೇ ಹರಿಯುತ್ತಿದೆ. ಜತೆಗೆ ಚರಂಡಿಯಲ್ಲಿದ್ದ ತ್ಯಾಜ್ಯ ವಸ್ತುಗಳು ಮಾರ್ಗದಲ್ಲಿ ಹರಡಿಕೊಂಡಿವೆ. ಎಲ್ಲೆಡೆ ನೀರು ಹರಿಯುತ್ತಿರುವುದರಿಂದ ವಾಹನ ಸವಾರರು, ಜನಸಾಮಾನ್ಯರು ಸಮಸ್ಯೆ ಎದುರಿಸುತ್ತಿದ್ದಾರೆ.

Advertisement

ಉಜಿರೆ ಶಾಲೆ ಬಳಿ
ಶೈಕ್ಷಣಿಕ ನಗರಿ ಉಜಿರೆ ಗ್ರಾಮ ಬೆಳೆದಂತೆ ಸಮಸ್ಯೆಗಳೂ ಬೆಳೆಯುತ್ತಿದೆ. ರಾ.ಹೆ. ಬದಿಯಲ್ಲಿ ಸಮರ್ಪಕ ಚರಂಡಿ ವ್ಯವಸ್ಥೆಯಿಲ್ಲದೆ ಮಳೆ ನೀರೆಲ್ಲ ರಸ್ತೆಯಲ್ಲೇ ಹರಿಯುತ್ತಿದೆ. ಕೆಸರು ನೀರು ಪಾದಚಾರಿಗಳಿಗೆ ರಾಚಿ ಕೆಸರುಮಯಗೊಳಿಸುತ್ತಿದೆ. ವಾಹನ ಸಂಚಾರಕ್ಕೂತೊಡಕುಂಟಾಗುತ್ತಿದೆ. 

ತ್ಯಾಜ್ಯ ಎಸೆಯದಿರಿ
ಉಜಿರೆ ಗ್ರಾ. ಪಂ.ನ ವತಿಯಿಂದ ಶುಕ್ರವಾರ ಉಜಿರೆಯ ಕೆಲವು ಕಡೆಗಳಲ್ಲಿ ಚರಂಡಿಯಲ್ಲಿದ್ದ ತ್ಯಾಜ್ಯಗಳನ್ನು ವಿಲೇವಾರಿ ಮಾಡಿ ಸಮರ್ಪಕವಾಗಿ ನೀರು ಹರಿದು ಹೋಗುವಂತೆ ಸರಿಪಡಿಸಲಾಯಿತು. ನಾಗರಿಕರು ರಸ್ತೆ ಬದಿಯ ಚರಂಡಿಗಳಿಗೆ ತ್ಯಾಜ್ಯಗಳನ್ನು ಎಸೆಯುವುದರಿಂದ ಮಳೆಗಾಲದಲ್ಲಿ ನೀರು ಸರಿಯಾಗಿ ಹರಿದು ಹೋಗದೆ ಇಂತಹ ಸಮಸ್ಯೆ ಎದುರಾಗುತ್ತಿದೆ. ತ್ಯಾಜ್ಯಗಳನ್ನು ಚರಂಡಿಗೆ ತಂದು ಸುರಿಯುವ ಬದಲು ಸೂಕ್ತ ರೀತಿಯಲ್ಲಿ ತಮ್ಮ ಮನೆಯಲ್ಲಿಯೇ ವಿಲೇ ಮಾಡಿದರೆ ಇಂತಹ ಪರಿಸ್ಥಿತಿ ಮರುಕಳಿಸಲು ಸಾಧ್ಯವಿಲ್ಲ.

ನಿಡಿಗಲ್‌ ಸೇತುವೆ
ಕಲ್ಮಂಜ ಗ್ರಾಮದ ನಿಡಿಗಲ್‌ ಸೇತುವೆ ಮೇಲೆ ಮಳೆ ನೀರು ಹರಿದು ಹೋಗುವಂತೆ ಸೂಕ್ತ ವ್ಯವಸ್ಥೆ ಮಾಡಬೇಕಿದೆ. ಸೇತುವೆ ಮೇಲೆ ಶೇಖರಣೆಯಾಗುವ ನೀರಿನಿಂದ ದ್ವಿಚಕ್ರ ವಾಹನದವರಿಗೆ ಘನ ವಾಹನದವರಿಂದ ನೀರ ಸಿಂಚನವಾಗುತ್ತಿದೆ. ಮೊದಲೇ ಇಕ್ಕಟ್ಟಾದ ಈ ಸೇತುವೆಯ ಮೇಲೆ ಘನ ವಾಹನಗಳು ಸಂಚರಿಸುವಾಗ ದ್ವಿಚಕ್ರ ಸವಾರರಿಗೆ, ಪಾದಚಾರಿಗಳಿಗೆ ಕೆಸರು ನೀರಿನ ಸಿಂಚನವಾಗುತ್ತಿದೆ. ನೂತನ ಸೇತುವೆ ನಿರ್ಮಾಣವಾಗುತ್ತಿದೆ. ಶಿರಾಡಿ ಘಾಟಿ ರಸ್ತೆಯಲ್ಲಿ ಕಾಮಗಾರಿ ನಡೆಯುತ್ತಿರುವುದರಿಂದ ಚಾರ್ಮಾಡಿ ಮಾರ್ಗವಾಗಿ ವಾಹನಗಳು ಸಂಚರಿಸುತ್ತಿದ್ದು, ಕೆಲವೆಡೆ ಮೋರಿ ಶಿಥಿಲಗೊಂಡಿದೆ.

ಎಚ್ಚೆತ್ತುಕೊಂಡ ಆಡಳಿತ 
ಉಜಿರೆಯಲ್ಲಿ ನಿರಂತರ ನೀರು ನಿಲ್ಲುವ ಸಮಸ್ಯೆ ಉಂಟಾಗುತ್ತಿತ್ತು. ಶನಿವಾರವೂ ಪೆಟ್ರೋಲ್‌ ಪಂಪ್‌ ಬಳಿ ರಸ್ತೆಯಲ್ಲಿ ನೀರು ನಿಂತು ವಾಹನ ಸವಾರರು ಪರದಾಡುವಂತಾಯಿತು. ಚರಂಡಿಗೆ ಹಾಕಿರುವ ಕೊಳವೆಗಳಲ್ಲಿ ಕಸಗಳು ಸಿಲುಕಿ ಹಾಗೂ ಕಸದಿಂದ ಚರಂಡಿ ಬ್ಲಾಕ್‌ ಆಗುವ ಕಾರಣ ಸಮಸ್ಯೆ ಹೆಚ್ಚಳವಾಗುತ್ತಿದೆ. ಇದೀಗ ಉಜಿರೆ ಪಿಡಿಒ ಗಾಯತ್ರಿ ಮತ್ತು ಗ್ರಾ.ಪಂ. ಅಧ್ಯಕ್ಷ ಶ್ರೀಧರ ಪೂಜಾರಿ ಸ್ಥಳಕ್ಕೆ ಭೇಟಿ ನೀಡಿ ಸ್ಥಳದಲ್ಲಿ ಚರಂಡಿಯ ಹೂಳೆತ್ತಲು ಸೂಚನೆ ನೀಡಿದರು. ಆದ್ದರಿಂದ ಕಾಮಗಾರಿ ಆರಂಭವಾಗಿದೆ. 

Advertisement

ಗುರು ಮುಂಡಾಜೆ

Advertisement

Udayavani is now on Telegram. Click here to join our channel and stay updated with the latest news.

Next