Advertisement

ಕೃತಕ ನೆರೆ, ಸಂಭಾವ್ಯ ಅಪಾಯ ತಪ್ಪಿಸಲು ಪಾಲಿಕೆಯಿಂದ “ಇನ್ಸಿಡೆಂಟ್‌ ಕಮಾಂಡರ್‌’ !

05:58 PM May 15, 2024 | Team Udayavani |

ಮಹಾನಗರ: ಇನ್ನೇನು ಕೆಲವೇ ದಿನಗಳಲ್ಲಿ ಮುಂಗಾರು ಮಾರುತ ಕರಾವಳಿಗೆ ಪ್ರವೇಶ ಪಡೆಯಲಿದ್ದು, ಈ ವೇಳೆ ಉಂಟಾಗುವ ಸಂಭಾವ್ಯ ಅನಾಹುತಗಳನ್ನು ತಡೆಯಲು ಪಾಲಿಕೆ ಸನ್ನದ್ಧವಾಗುತ್ತಿದೆ. ಮುಂಜಾಗ್ರತೆ ಉದ್ದೇಶದಿಂದ ಪ್ರತ್ಯೇಕ ಗ್ಯಾಂಗ್‌ ರಚನೆ ಮಾಡಿದ್ದು, ಪ್ರತೀ ವಾರ್ಡ್‌ಗೆ ಒಬ್ಬರಂತೆ “ಇನ್ಸಿಡೆಂಟ್‌ ಕಮಾಂಡರ್‌’ ನೇಮಕ ಮಾಡಲು ನಿರ್ಧರಿಸಲಾಗಿದೆ.

Advertisement

ಪಾಲಿಕೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಅಧಿಕಾರಿಗಳಲ್ಲಿ ವಾರ್ಡ್‌ಗೆ ಒಬ್ಬರನ್ನು “ಇನ್ಸಿಡೆಂಟ್‌ ಕಮಾಂಡರ್‌’ ಆಗಿ ನೇಮಕ ಮಾಡಲಾಗುತ್ತದೆ. ಅವರ ನೇತೃತ್ವದಲ್ಲಿ 5 ಮಂದಿಯ ಗ್ಯಾಂಗ್‌ ಮನ್‌ ಇರುತ್ತಾರೆ. ಜೋರಾಗಿ ಮಳೆ ಸುರಿದು ಅನಾಹುತ ಸಂಭವಿಸಿದಲ್ಲಿ ವಾರ್ಡ್‌ವಾರು ತಂಡ ಸ್ಥಳಕ್ಕೆ ಭೇಟಿ ನೀಡಿ ಸೂಕ್ತ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳುತ್ತದೆ. ತೋಡು ಸ್ವಚ್ಛತೆ, ಕೃತಕ ನೆರೆ ತಡೆ ಸಹಿತ ಸಂಭಾವ್ಯ ಅಪಾಯ ತಪ್ಪಿಸಲು ಬೇಕಾದ ಉಪಕರಣವನ್ನು ಗ್ಯಾಂಗ್‌ಮನ್‌ಗೆ ನೀಡಲಾಗುತ್ತದೆ. ಜೂನ್‌ ತಿಂಗಳಿನಲ್ಲಿ ಈ ತಂಡ ನಗರದಲ್ಲಿ ಕಾರ್ಯನಿರ್ವಹಿಸಲಿದೆ.

ಮುಂಗಾರು ಮಳೆ ಆರಂಭದ ದಿನದಿಂದ ಪಾಲಿಕೆಯಲ್ಲಿ ಹಗಲು ಮತ್ತು ರಾತ್ರಿ ಪ್ರತ್ಯೇಕ ಸಹಾಯವಾಣಿ ಆರಂಭಿಸಲು ನಿರ್ಧರಿಸಲಾಗಿದೆ. ಆ ವೇಳೆ ಬರುವ ಕರೆಗಳ ಮಾಹಿತಿಯನ್ನು ಪಡೆದು ಸಂಬಂಧಪಟ್ಟ ವಾರ್ಡ್‌ಗಳ “ಇನ್ಸಿಡೆಂಟ್‌ ಕಮಾಂಡರ್‌’ಗೆ ರವಾನೆ ಮಾಡಲಾಗುತ್ತದೆ.

“ಇನ್ಸಿಡೆಂಟ್‌ ಕಮಾಂಡರ್‌’ ನೇಮಕ ಏಕೆ?
ನಗರದಲ್ಲಿ ಸಣ್ಣ ಮಳೆ ಬಂದರೆ ಸಾಕು ಹಲವು ಪ್ರದೇಶಗಳಲ್ಲಿ ಕೃತಕ ನೆರೆ ಸೃಷ್ಟಿಯಾಗಿ ಅನಾಹುತ ಸಂಭವಿಸುತ್ತದೆ. ಅದರಲ್ಲೂ 2018ರ ಮೇ 29ರಂದು ಸುರಿದ ಮಹಾಮಳೆಗೆ ಮಂಗಳೂರು ನಗರವೇ ಸ್ತಬ್ಧಗೊಂಡಿತ್ತು. ಬಳಿಕದ ವರ್ಷದ ಮಳೆಗಾಲದಲ್ಲಿಯೂ ಹಲವು ತಗ್ಗು ಪ್ರದೇಶಗಳು ಮುಳುಗಡೆಯಾಗಿತ್ತು. ಇದರಿಂದ ಪಾಲಿಕೆಗೆ ಅಪಾರ ನಷ್ಟ ಉಂಟಾಗುತ್ತಿದೆ. ಈ ಬಾರಿ ಈ ರೀತಿಯ ಅಪಾಯ ತಪ್ಪಿಸಲು “ಇನ್ಸಿಡೆಂಟ್‌ ಕಮಾಂಡರ್‌’ ನೇಮಕ ಮಾಡಲಾಗುತ್ತಿದೆ. ಸಂಬಂಧಪಟ್ಟ ಅಧಿಕಾರಿಗಳು ಅವರಿಗೆ ನಿಯೋಜಿಸಿದ ವಾರ್ಡ್‌ ಗಳತ್ತ ನಿಗಾ ಇರಿಸಿಕೊಂಡಿರುತ್ತಾರೆ.

ಆರು ಕಡೆ ವಿಶೇಷ ನಿಗಾ

Advertisement

ಮಂಗಳೂರು ಪಾಲಿಕೆ ವ್ಯಾಪ್ತಿಯ ನೆರೆ ಪೀಡಿತ ಪ್ರದೇಶಗಳ ಮ್ಯಾಪಿಂಗ್‌ ಮಾಡಲು ಜಿಲ್ಲಾಧಿಕಾರಿ ಮುಲ್ಲೆ çಮುಗಿಲನ್‌ ಅವರು ಪಾಲಿಕೆಗೆ ಸೂಚನೆ ನೀಡಿದ್ದು, ಅದರಂತೆ ಸದ್ಯ ನಗರದ ಸುರತ್ಕಲ್‌ ಬೈಲಾರೆ ಪ್ರದೇಶ, ಕೊಟ್ಟಾರ ಚೌಕಿ, ಜಪ್ಪಿನಮೊಗರು, ಪಂಪ್‌ವೆಲ್‌, ಸುಭಾಷ್‌ನಗರ-ಪಾಂಡೇಶ್ವರ, ಮಾಲೇಮಾರ್‌ ಪ್ರದೇಶಗಳನ್ನು ಗುರುತಿಸಲಾಗಿದೆ. ಈ ಪ್ರದೇಶಗಳಲ್ಲಿ ರಾಜಕಾಲುವೆಗಳಿಂದ ಹೂಳು ತೆಗೆಯುವುದು, ಕೆಲವು ಕಡೆಗಳಲ್ಲಿ ತಡೆಗೋಡೆ ನಿರ್ಮಾಣ ಮಾಡಲಾಗಿದೆ. ಈ ಪ್ರದೇಶಗಳಲ್ಲಿ ನಿಗಾ ಇರಿಸಲು “ಇನ್ಸಿಡೆಂಟ್‌ ಕಮಾಂಡರ್‌’ ಅವರಿಗೂ ಹೇಳಲಾಗುತ್ತಿದೆ ಎನ್ನುತ್ತಾರೆ ಪಾಲಿಕೆ ಅಧಿಕಾರಿಗಳು.

ಸಂಭಾವ್ಯ ಅನಾಹುತ ತಡೆಯಲು ಕ್ರಮ
ಮಳೆಗಾಲಕ್ಕೆ ಪಾಲಿಕೆಯಿಂದ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ನಗರದಲ್ಲಿ ರಾಜಕಾಲುವೆ ಹೂಳೆತ್ತುವ ಕಾಮಗಾರಿ ನಡೆದಿದ್ದು, ಸಂಭಾವ್ಯ ಅನಾಹುತಗಳನ್ನು ತಡೆಯುವ ಉದ್ದೇಶಕ್ಕೆ ಪ್ರತೀ ವಾರ್ಡ್‌ವಾರು “ಇನ್ಸಿಡೆಂಟ್‌ ಕಮಾಂಡರ್‌’ ಅನ್ನು ನೇಮಕ
ಮಾಡಿ ಅವರಿಗೆ ಪ್ರತ್ಯೇಕ ಜವಾಬ್ದಾರಿ ನೀಡಲಾಗುತ್ತದೆ. ಜೂನ್‌ನಿಂದ ಈ ತಂಡ ನಗರದಲ್ಲಿ ಕಾರ್ಯನಿರ್ವಹಿಸಲಿದೆ.
*ಆನಂದ್‌ ಸಿ.ಎಲ್‌., ಪಾಲಿಕೆ ಆಯುಕ್ತರು

*ನವೀನ್‌ ಭಟ್‌ ಇಳಂತಿಲ

Advertisement

Udayavani is now on Telegram. Click here to join our channel and stay updated with the latest news.

Next