Advertisement

ಒಳಚರಂಡಿ ಪೈಪ್‌ ಸೋರಿಕೆ: ಪುಣ್ಯಸ್ನಾನಕ್ಕೂ ಕೊಳಕು ನೀರೆ ಗತಿ!

11:28 AM May 03, 2018 | |

ಸುಬ್ರಹ್ಮಣ್ಯ: ಪುಣ್ಯಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯದಲ್ಲಿ ಸಮಗ್ರ ಅಭಿವೃದ್ಧಿಗೆ 180 ಕೋಟಿ ರೂ. ವೆಚ್ಚದ ಮಾಸ್ಟರ್‌ ಪ್ಲಾನ್‌ ಜಾರಿಯಲ್ಲಿದೆ. ಇದರಲ್ಲಿ ಒಳಚರಂಡಿಯೂ ಸೇರಿದೆ. ಒಳಚರಂಡಿ ಮತ್ತು ನೀರು ಸರಬರಾಜು ಮಂಡಳಿ ಕಾಮಗಾರಿ ಹೊಣೆ ನಿರ್ವಹಿಸಿತ್ತು. ಕಾಮಗಾರಿ ವೇಳೆ ಲೋಪವಾಗಿದ್ದು, ಕಾರ್ಯಾರಂಭ ಮಾಡಿದ ಒಂದು ವರ್ಷದಲ್ಲೇ ಚೇಂಬರ್‌ ಹಾಗೂ ಪೈಪುಗಳಲ್ಲಿ ಸೋರಿಕೆ ಕಾಣಲಾರಂಭಿಸಿದೆ. 

Advertisement

ಕಾರ್ಯಾರಂಭ ಮಾಡಿದ ಸ್ವಲ್ಪ ದಿನಗಳಲ್ಲೇ ಕಾಮಗಾರಿಯ ಲೋಪ ಗಮನಕ್ಕೆ ಬಂದಿದೆ. ಅದಕ್ಕೆ ಸ್ಥಳೀಯರು ಆಕ್ಷೇಪ ವ್ಯಕ್ತಪಡಿಸಿದ್ದರು. ಬಳಿಕ ಗುತ್ತಿಗೆದಾರರು ಕಾಮಗಾರಿ ಪೂರ್ತಿಗೊಳಿಸಿದ್ದು, ವರ್ಷದ ಹಿಂದೆ ಗಣ್ಯರ ಸಮ್ಮುಖದಲ್ಲಿ ಲೋಕಾರ್ಪಣೆಯಾಗಿತ್ತು. ಕೊಳಚೆ ನೀರು ಹೊರಚೆಲ್ಲಿ ಪರಿಸರ ದುರ್ನಾತ ಬೀರುತ್ತಿದೆ. ಅದು ನದಿಯನ್ನೂ ಸೇರುತ್ತಿದ್ದು, ರೋಗಭೀತಿಗೆ ಕಾರಣವಾಗಿದೆ. ಕುಮಾರಧಾರೆಯ ಕಲುಷಿತ ನೀರನ್ನೇ ಈಗ ಪುಣ್ಯಸ್ನಾನಕ್ಕೂ ಬಳಸಿಕೊಳ್ಳಬೇಕಿದೆ. ನಗರ ವ್ಯಾಪ್ತಿಯಲ್ಲಿ ಅಲ್ಲಲ್ಲಿ ಒಳಚರಂಡಿ ಪೈಪುಗಳು ಹಾದುಹೋಗಿದ್ದು, ದರ್ಪಣ ತೀರ್ಥ ನದಿ ಮಧ್ಯೆಯೂ ಅಳವಡಿಕೆಯಾಗಿವೆ. ಚೇಂಬರ್‌ಗಳು ಶಿಥಿಲಗೊಂಡು ಮಲಿನ ನೀರು ಹೊರಚೆಲ್ಲುತ್ತಿದೆ. ಭಕ್ತರು ಪುಣ್ಯ ಸ್ನಾನ ನೆರವೇರಿಸುವ ದರ್ಪಣ ತಿರ್ಥ ನದಿಯಲ್ಲೆ ಸೋರಿಕೆ ಕಂಡು ಬಂದಿದೆ.

ಸಹಸ್ರಾರು ಸಂಖ್ಯೆಯಲ್ಲಿ ಭಕ್ತರು ಕ್ಷೇತ್ರಕ್ಕೆ ಆಗಮಿಸಿ ದೇವರ ದರ್ಶನ, ಹರಕೆ, ಸೇವೆ ತೀರಿಸಿ ತೆರಳುತ್ತಾರೆ. ದರ್ಪಣ ತೀರ್ಥ ಹಾಗೂ ಕುಮಾರಧಾರಾ ಎರಡೂ ನದಿಗಳು ಕಲುಷಿತಗೊಂಡು, ಪುಣ್ಯ ಸ್ನಾನ ಮಾಡಲು ಭಕ್ತರೂ ಮುಜುಗರ ಪಡುತ್ತಿದ್ದಾರೆ.

ಕುಮಾರಧಾರಾ ನದಿಯ ನೀರು ಅಭ್ರಕದ ನಿಕ್ಷೇಪಗಳಲ್ಲಿ ಹರಿದು ಬರುವುದರಿಂದ ಇಲ್ಲಿ ಮಿಂದರೆ ಪುಣ್ಯ ಪ್ರಾಪ್ತಿಯಾಗುವ ಜತೆಗೆ ಚರ್ಮ ಸಂಬಂಧಿ ರೋಗಗಳು ವಾಸಿ ಯಾಗುತ್ತವೆ. ಸುಬ್ರಹ್ಮಣ್ಯ ಸ್ವಾಮಿಯ ಪ್ರಸಾದ ರೂಪವಾಗಿ ಮಹಾ ಮೃತ್ತಿಕೆಯನ್ನು ನಿತ್ಯವೂ ಸೇವಿಸಿದರೆ ಕುಷ್ಠರೋಗವೂ ಗುಣವಾಗುತ್ತದೆ ಎಂಬುದು ನಂಬಿಕೆ. ಇದೇ ಸ್ನಾನಘಟ್ಟದಲ್ಲಿ ವಾರ್ಷಿಕ ಷಷ್ಠಿ ಮಹೋತ್ಸವದ ವೇಳೆ ಶ್ರೀ ಸುಬ್ರಹ್ಮಣ್ಯ ದೇವರ ಅವಭೃಥ ಸ್ನಾನವೂ ನೆರವೇರುತ್ತದೆ. ಆದರೆ,ಈ ಕಲುಷಿತ ನೀರಿನ, ಸಾಂಕ್ರಾಮಿಕ ರೋಗ ಭೀತಿ ಎದುರಾಗಿದೆ.

ಹೊಳೆಯುದ್ದಕ್ಕೂ ಕೊಳಕು
ಆದಿಸುಬ್ರಹ್ಮಣ್ಯ ಸನ್ನಿಧಿಯ ಎದುರಿನಲ್ಲಿ ಉತ್ತರದಿಂದ ದಕ್ಷಿಣಕ್ಕೆ ಹರಿಯುತ್ತಿರುವ ದರ್ಪಣ ತೀರ್ಥ ನದಿ (ಕನ್ನಡಿ ಹೊಳೆ) ಇಲ್ಲಿಂದ 1.5 ಕಿ.ಮೀ. ದೂರದ ಮತ್ಸ್ಯತೀರ್ಥ ಎಂಬಲ್ಲಿ ಕುಮಾರಧಾರಾ ನದಿ ಸೇರುತ್ತದೆ. ಈ ಹಾದಿಯುದ್ದಕ್ಕೂ ಹೊಳೆ ಮಲೀನವಾಗಿದೆ. 

Advertisement

ಸಾಬೂನು ನೀರು, ರಾಸಾಯನಿಕಗಳು, ಕೊಳಚೆ ಪದಾರ್ಥಗಳು, ಬಳಸಿ ಬಿಸಾಕಿದ ಬಟ್ಟೆ, ಪ್ಲಾಸ್ಟಿಕ್‌, ಆಹಾರ ತ್ಯಾಜ್ಯಗಳು ಸೇರಿಕೊಂಡು ಈ ನೀರು ಕುಮಾರಧಾರೆಯಲ್ಲಿ ಸಂಗಮವಾಗಿ, ಮುಂದಕ್ಕೆ ಹರಿಯುತ್ತದೆ. ನದಿ ಪಾತ್ರದ ಜನರೂ ಈ ನೀರನ್ನು ಕುಡಿಯಲು ಬಳಸುತ್ತಾರೆ. ನೀರು ಕೊಳಚೆಯಂತಾಗಿದ್ದು, ರೋಗ – ರುಜಿನಗಳು ಹಬ್ಬುವ ಸಾಧ್ಯತೆ ದಟ್ಟವಾಗಿದೆ.

ಸ್ವಚ್ಛತೆ ಇಲ್ಲಿ ಸವಾಲು
ಕುಕ್ಕೆ ಕ್ಷೇತ್ರದಲ್ಲಿ ಸ್ವಚ್ಛತೆಯ ಸಮಸ್ಯೆ ಬೆಟ್ಟದಂತೆ ಬೆಳೆಯುತ್ತಿದೆ. ಖಾಸಗಿ ಸಂಸ್ಥೆಗಳು ಮತ್ತು ವಸತಿ ಗೃಹಗಳು ಅಲ್ಲಲ್ಲಿ ತಲೆ ಎತ್ತಿದ್ದು, ಅವು ಹೊರಬಿಡುವ ತ್ಯಾಜ್ಯಗಳು ಇಲ್ಲಿ ನೇರ ನದಿಗಳನ್ನೇ ಸೇರುತ್ತಿವೆ. ಹೀಗಾಗಿ, ಜಲಾಶಯ ಹಾಗೂ ಕೆಳಭಾಗ ಸಂಪೂರ್ಣ ಮಲಿನವಾಗಿದೆ. ಹೀಗಾಗಿ, ದೇವಾಲಯ ಹಾಗೂ ಸ್ಥಳೀಯ ಆಡಳಿತಕ್ಕೆ ಸ್ವಚ್ಛತೆಯೇ ದೊಡ್ಡ ಸವಾಲಾಗಿದೆ.

ಶೀಘ್ರ ದುರಸ್ತಿ
ಪೈಪುಗಳು ಜೋಡಿಸಿದ ಸ್ಥಳಗಳಲ್ಲಿ ಬಿರುಕು ಕಂಡುಬಂದಿದೆ. ಹೀಗಾಗಿ ಸೋರಿಕೆ ಉಂಟಾಗಿದೆ. ತತ್‌ಕ್ಷಣ ಸಿಬಂದಿ ಕಳುಹಿಸಿ ದುರಸ್ತಿಗೆ ಕ್ರಮ ವಹಿಸುತ್ತೇನೆ. ಲೋಪಗಳು ಇಲ್ಲವೆಂದಲ್ಲ. ಕಾಮಗಾರಿ ವೇಳೆ ಸಣ್ಣ ಲೋಪಗಳು ಉಂಟಾಗಿದ್ದವು. ಅದನ್ನು ಸರಿಪಡಿಸಿಕೊಂಡಿದ್ದೇವೆ. 
– ಮಹಾದೇವಯ್ಯ, ಎಕ್ಸಿಕ್ಯೂಟಿವ್‌ ಎಂಜಿನಿಯರ್‌,
ಒಳಚರಂಡಿ ಮಂಡಳಿ

ಬಾಲಕೃಷ್ಣ ಭೀಮಗುಳಿ

Advertisement

Udayavani is now on Telegram. Click here to join our channel and stay updated with the latest news.

Next