Advertisement

ರಸ್ತೆ ಮೇಲೆ ಚರಂಡಿ ನೀರು: ಸಂಚಾರಕ್ಕೆ ಕಿರಿಕಿರಿ

03:08 PM Jun 23, 2022 | Team Udayavani |

ಗದಗ: ನಗರದ ಪ್ರಮುಖ ರಸ್ತೆಗಳಲ್ಲೊಂದಾಗಿರುವ ಪಾಲಾ ಬಾದಾಮಿ ರಸ್ತೆಯ ತೋಂಟದಾರ್ಯ ಮಠದ ಮಹಾದ್ವಾರ ಬಳಿ ಕಳೆದೊಂದು ತಿಂಗಳಿನಿಂದ ನಿರಂತರವಾಗಿ ಚರಂಡಿ ನೀರು ಹರಿಯುತ್ತಿರುವುದರಿಂದ ಸಂಚಾರಕ್ಕೆ ಇನ್ನಿಲ್ಲದ ತೊಂದರೆಯಾಗಿದೆ. ಇತ್ತೀಚೆಗೆ ನಡೆದ ರಸ್ತೆ ಡಾಂಬರೀಕರಣದ ಸಂದರ್ಭದಲ್ಲಿ ಚರಂಡಿ ಮುಚ್ಚಿ ಹೋಗಿದ್ದರಿಂದ ಪಾದಚಾರಿಗಳು, ವಾಹನ ಸವಾರರು ಹರಸಾಹಸ ಪಡಬೇಕಾಗಿದೆ.

Advertisement

ಹಗಲು-ರಾತ್ರಿ ಚರಂಡಿ ನೀರು ರಸ್ತೆಯುದ್ದಕ್ಕೂ ಹರಿಯುತ್ತಿದ್ದು, ಮಲೀನ ನೀರಿನಲ್ಲಿಯೇ ಸಾರ್ವಜನಿಕರು ಸಂಚರಿಸುವ ಅನಿವಾರ್ಯತೆ ಎದುರಾಗಿದೆ. ಇದೇ ರಸ್ತೆಯಲ್ಲಿ ಗದಗ-ಬೆಟಗೇರಿ ನಗರಸಭೆ ಅಧಿಕಾರಿಗಳು ನಿತ್ಯ ಸಂಚರಿಸಿದರೂ ಚರಂಡಿ ದುರಸ್ತಿಗೆ ಮುಂದಾಗುತ್ತಿಲ್ಲ ಎಂಬ ಆರೋಪಗಳು ಸಾರ್ವಜನಿಕರಿಂದ ಕೇಳಿಬರುತ್ತಿವೆ.

ತೋಂಟದಾರ್ಯ ರಥ ಬೀದಿಯ ಮಹಾದ್ವಾರಕ್ಕೆ ಹೊಂದಿಕೊಂಡಿರುವ ಪಾಲಾ ಬಾದಾಮಿ ರಸ್ತೆ ಅಗಲೀಕರಣದ ಹಿನ್ನೆಲೆಯಲ್ಲಿ ಚರಂಡಿ ಬಂದ್‌ ಆಗಿದ್ದರಿಂದ ನೀರು ರಸ್ತೆ ಮೇಲೆ ಹರಿಯತೊಡಗಿದೆ. ಚರಂಡಿ ಬಂದ್‌ ಆಗಿರುವುದು ಅಧಿ ಕಾರಿಗಳ ಗಮನಕ್ಕಿದ್ದರೂ ಸರಿಪಡಿಸಲು ಮುಂದಾಗುತ್ತಿಲ್ಲ.

ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಇಲಾಖೆಯವರು ಅವಳಿ ನಗರದಲ್ಲಿ ಒಳಚರಂಡಿ ಕಾಮಗಾರಿ ಕೈಗೊಂಡಿದ್ದು, ಅವರೇ ಆ ಕೆಲಸ ಮಾಡುತ್ತಾರೆ ಎಂದು ನಗರಸಭೆ ಅಧಿ ಕಾರಿಗಳು ಹೇಳುತ್ತಾರೆ. ಆದರೆ, ಒಳಚರಂಡಿ ಇಲಾಖೆ ಅಧಿ ಕಾರಿಗಳು ಯಾವುದಕ್ಕೂ ಕ್ಯಾರೇ ಎನ್ನುತ್ತಿಲ್ಲ. ಇದರಿಂದ ಜನರು ತೀವ್ರ ತೊಂದರೆ ಅನುಭವಿಸುವಂತಾಗಿದೆ.

ಕಳೆದೆರಡು ದಿನಗಳಿಂದ ನಿತ್ಯ ಮಳೆಯಾಗುತ್ತಿರುವುದರಿಂದ ಚರಂಡಿ ತುಂಬಿ ಹರಿಯುತ್ತಿದೆ. ಇದೇ ರಸ್ತೆ ಮಾರ್ಗದಲ್ಲಿ ರೋಣ, ಗಜೇಂದ್ರಗಡ, ಬಾಗಲಕೋಟೆ ಬಸ್‌ಗಳು ತೆರಳಬೇಕಿದ್ದು, ರಸ್ತೆ ದಿನಪೂರ್ತಿ ದಟ್ಟಣೆಯಿಂದ ಕೂಡಿರುತ್ತದೆ. ಅಲ್ಲದೇ, ನಗರದ ಕೆ.ಸಿ.ರಾಣಿ ರಸ್ತೆ, ತೋಂಟದಾರ್ಯ ಮಠ, ಮಹಾತ್ಮ ಗಾಂಧಿ  ವೃತ್ತ ಮತ್ತು ಭೂಮರಡ್ಡಿ ವೃತ್ತದ ಕಡೆಗೆ ತೆರಳುವ ಕೂಡು ರಸ್ತೆಯೂ ಇದಾಗಿದೆ. ಇಲ್ಲಿ ನಿತ್ಯ ಹಲವಾರು ಆಟೋಗಳು, ಕಾರುಗಳು, ಸಾವಿರಾರು ದ್ವಿಚಕ್ರ ವಾಹನಗಳು ಸಂಚರಿಸುತ್ತವೆ. ರಸ್ತೆ ಮೇಲೆ ಹರಿಯುತ್ತಿರುವ ಮಲೀನ ನೀರು ವಾಹನ ತೆರಳುವ ಸಂದರ್ಭದಲ್ಲಿ ಜನರ ಮೇಲೆ ಸಿಡಿದಿರುವ ಅನೇಕ ಉದಾಹರಣಗಳಿವೆ.

Advertisement

ಅಲ್ಲದೇ, ತೋಂಟದಾರ್ಯ ಮಠದ ರಥ ಬೀದಿಯಲ್ಲೂ ಚರಂಡಿ ನೀರು ಹರಿಯುತ್ತಿದ್ದು, ಸದ್ಯ ಈ ರಸ್ತೆಯಲ್ಲಿ ತೋಂಟದಾರ್ಯ ಮಠದ ಜಾತ್ರೆ ನಿಮಿತ್ತ ವ್ಯಾಪಾರಸ್ಥರು ವಿವಿಧ ಅಂಗಡಿಗಳನ್ನು ಹಾಕಿಕೊಂಡು ವ್ಯಾಪಾರ ಮಾಡುತ್ತಿದ್ದಾರೆ. ಈ ಚರಂಡಿ ನೀರು ಅಂಗಡಿಗಳಿಗೂ ನುಗ್ಗಿ ಸಾಕಷ್ಟು ತೊಂದರೆ ಉಂಟಾಗುತ್ತಿದೆ. ಇಷ್ಟಾದ್ದರೂ ನಗರಸಭೆ ಅಧಿಕಾರಿಗಳು ಹಾಗೂ ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಇಲಾಖೆ ಅಧಿಕಾರಿಗಳು ಪರಸ್ಪರ ಆರೋಪ ಮಾಡಿಕೊಳ್ಳುತ್ತ ಕಾಲಹರಣ ಮಾಡುತ್ತಿದ್ದಾರೆ. ಚರಂಡಿ ಹಾಗೂ ರಸ್ತೆ ದುರಸ್ತಿ ಯಾವಾಗ ಎಂದು ಜನರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ವಿಧಾನ ಪರಿಷತ್‌ ಪಶ್ಚಿಮ ಶಿಕ್ಷಕರ ಕ್ಷೇತ್ರದ ಚುನಾವಣೆ ಹಿನ್ನೆಲೆಯಲ್ಲಿ ನೀತಿ ಸಂಹಿತೆ ಜಾರಿಯಲ್ಲಿದ್ದುದರಿಂದ ಚರಂಡಿ ಹಾಗೂ ರಸ್ತೆ ದುರಸ್ತಿ ಕಾಮಗಾರಿ ನಡೆಸಲು ಸಾಧ್ಯವಾಗಿರಲಿಲ್ಲ. ಈಗಾಗಲೇ ಟೆಂಡರ್‌ ಪ್ರಕ್ರಿಯೆ ಮುಗಿದಿದ್ದು, ಮುಂದಿನ ಎರಡು ದಿನದೊಳಗಾಗಿ ದುರಸ್ತಿ ಕಾರ್ಯ ಪೂರ್ಣಗೊಳ್ಳಲಿದೆ. –ರಮೇಶ ಸುಣಗಾರ, ಪೌರಾಯಕ್ತ, ಗದಗ-ಬೆಟಗೇರಿ ನಗರಸಭೆ

ಕಳೆದ ಒಂದು ತಿಂಗಳಿನಿಂದ ರಸ್ತೆ ಮೇಲೆ ಚರಂಡಿ ನೀರು ಹರಿಯುತ್ತಿದೆ. ಗಲೀಜು ನೀರಿನಲ್ಲೇ ಸಂಚರಿಸುವ ಕರ್ಮ ಜನರದ್ದಾಗಿದೆ. ನಿತ್ಯ ಚರಂಡಿ ನೀರು ರಸ್ತೆ ಮೇಲೆ ಹರಿಯುತ್ತಿರುವುದರಿಂದ ರಸ್ತೆಯೂ ಸಂಪೂರ್ಣ ಹಾಳಾಗಿದೆ. ರಸ್ತೆ ತುಂಬ ತಗ್ಗು-ಗುಂಡಿಗಳು ಬಿದ್ದಿದ್ದು, ದ್ವಿಚಕ್ರ ವಾಹನ ಸವಾರರು ಸರ್ಕಸ್‌ ಮಾಡುತ್ತ ಸಾಗಬೇಕಿದೆ. -ತಿಪ್ಪಣ್ಣ ಹೂಗಾರ, ಗದಗ ನಿವಾಸಿ

Advertisement

Udayavani is now on Telegram. Click here to join our channel and stay updated with the latest news.

Next