Advertisement

ಚರಂಡಿ ಸ್ವಚ್ಛಗೊಳಿಸಿದ ಗವಿಶ್ರೀಗಳು

06:53 AM Jan 27, 2019 | Team Udayavani |

ಕೊಪ್ಪಳ: ಅಜ್ಜನ ಜಾತ್ರಾ ಮಹೋತ್ಸವ ಮೂರು ದಿನಗಳ ಕಾಲ ಸಂಭ್ರಮದಿಂದ ನಡೆದಿದೆ. ಜಾತ್ರೆಗೆ ಬಂದ ಭಕ್ತ ಸಮೂಹ ಕೆಲವೆಡೆ ತ್ಯಾಜ್ಯ ಎಸೆದಿದ್ದರೆ, ಶೌಚಾಲಯ, ವಿವಿಧೆಡೆ ಚರಂಡಿಗಳಲ್ಲಿ ತ್ಯಾಜ್ಯ ತುಂಬಿಕೊಂಡಿತ್ತು. ಕಾರ್ಮಿಕ ವರ್ಗವೂ ಸ್ವಚ್ಛತೆಯಲ್ಲಿತೊಡಗಿದ್ದರು. ಈ ವೇಳೆ ಗವಿಸಿದ್ದೇಶ್ವರ ಶ್ರೀಗಳು ಕಾರ್ಮಿಕರಿಗೆ ಪ್ರೋತ್ಸಾಹಿಸಲು ತಾವೇ ಚರಂಡಿ ಸ್ವಚ್ಛಗೊಳಿಸಿ ಪ್ರೇರಣೆ ನೀಡಿದ್ದು ಎಲ್ಲರ ಗಮನ ಸೆಳೆಯಿತು.

Advertisement

ಗವಿಸಿದ್ದೇಶ್ವರ ಸ್ವಾಮೀಜಿ ಸಾಮಾನ್ಯರಲ್ಲಿ ಸಾಮಾನ್ಯ ವ್ಯಕ್ತಿಯಂತೆ ಎಲ್ಲರ ಜತೆಗೂಡಿ ಬೆರೆತು ಕಾಯಕಕ್ಕೆ ಪ್ರೋತ್ಸಾಹ ನೀಡಿ ಸರಳತೆ ಮೆರೆಯುತ್ತಿದ್ದಾರೆ. ಗವಿಸಿದ್ದೇಶ್ವರ ಜಾತ್ರಾ ಮಹೋತ್ಸವಕ್ಕೆ ಲಕ್ಷಾಂತರ ಭಕ್ತ ಸಮೂಹ ನಾಡಿನ ಮೂಲೆ ಮೂಲೆಗಳಿಂದಲೂ ಆಗಮಿಸಿತ್ತು. ಮಹಾ ರಥೋತ್ಸವ ಸೇರಿದಂತೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಸಂಭ್ರಮದಿಂದ ನಡೆದವು. ಆದರೆ ಭಕ್ತ ಸಮೂಹ ಆಗಮಿಸಿದ್ದ ವೇಳೆ ಗವಿಮಠದ ಮೈದಾನವೆಲ್ಲ ಕಸದ ರಾಸಿಯಿಂದ ತುಂಬಿಕೊಂಡಿತ್ತು. ಪುರುಷ ಹಾಗೂ ಮಹಿಳಾ ಶೌಚಾಲಯಗಳು ಸೇರಿದಂತೆ ಗವಿಮಠದ ಕಟ್ಟಡದ ಸುತ್ತಲೂ ತ್ಯಾಜ್ಯವೂ ಹೆಚ್ಚಾಗಿ ಸಂಗ್ರಹವಾಗಿತ್ತು. ಮಠದಲ್ಲಿ ನಿಯೋಜನೆಗೊಂಡ ಕಾರ್ಮಿಕ ವರ್ಗವು ತಮ್ಮ ನಿತ್ಯದ ಕಾಯಕದಲ್ಲಿ ತೊಡಗಿದ್ದ ವೇಳೆಗವಿಮಠದ ಶ್ರೀಗಳು ಅವರೊಂದಿಗೆ ಬೆರೆತು ತಾವೇ ಕೈಯಲ್ಲಿ ಪೊರಕೆ, ಸಲಾಕೆ ಹಿಡಿದು ಕಸ ತೆಗೆದು ಹಾಕಿದರು. ಇನ್ನು ಚರಂಡಿಯಲ್ಲಿ ತುಂಬಿದ್ದ ಕಸವನ್ನೂ ತೆಗೆದು ಸ್ವಚ್ಛಗೊಳಿಸಿ ಎಲ್ಲರ ಗಮನ ಸೆಳೆದರು.

ಕಸ, ತ್ಯಾಜ್ಯ ಎಂದರೆ ಮೂಗು ಮುಚ್ಚಿಕೊಂಡು ಮಾರುದ್ದ ಸರಿಯುವ ಈ ವ್ಯವಸ್ಥೆ ಮಧ್ಯೆಯೂ ಗವಿಶ್ರೀಗಳು ಯಾವುದಕ್ಕೂ ಬೇಧಬಾವ ಮಾಡದೇ ಕಾರ್ಮಿಕರ ಜತೆ ಕೂಡಿ ಅವರಿಗೆ ಪ್ರೋತ್ಸಾಹ ಹಾಗೂ ಪ್ರೇರಣೆ ನೀಡಲು ಮುಂದಾಗಿದ್ದು ಸಮಾಜಿಕ ಕಳಕಳಿ ತೋರಿತು.

ಸಾರ್ವಜನಿಕರು, ಗವಿಮಠದ ಭಕ್ತ ಸಮೂಹವು ಶ್ರೀಗಳೇ ಚರಂಡಿ ಸ್ವಚ್ಛಗೊಳಿಸುತ್ತಿದ್ದು, ನಾವೇಕೆ ಸುಮ್ಮನೆ ನಿಲ್ಲಬೇಕು ಎಂದು ಭಾವಿಸಿ ಅವರೂ ಸಹಿತ ವಿವಿಧೆಡೆ ಸ್ವಚ್ಛತಾ ಕಾರ್ಯದಲ್ಲಿ ತೊಡಗಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next