ಯಳಂದೂರು: ಚರಂಡಿಗೆ ಮಣ್ಣು ಹಾಕಿದ್ದರಿಂದ ಕೊಳಚೆ ನೀರು ರಸ್ತೆಯಲ್ಲೇ ಹರಿಯುತ್ತಿದ್ದು, ದುರ್ವಾಸನೆ ಸಹಿಸಿಕೊಂಡು ಮಕ್ಕಳು, ಮಹಿಳೆಯರು, ವೃದ್ಧರು ಓಡಾಡಬೇಕಿದೆ.
ತಾಲೂಕಿನ ವೈ.ಕೆ.ಮೋಳೆ ಗ್ರಾಮದ ಉಪ್ಪಾರ, ದಲಿತರ ಬಡಾವಣೆ ಇದೆ. ಈ ಗ್ರಾಮದ ಅರ್ಧಭಾಗ ಅಂಬಳೆ, ಇನ್ನರ್ಧ ದುಗ್ಗಹಟ್ಟಿ ಗ್ರಾಪಂಗೆ ಸೇರುತ್ತದೆ. ಇವೆರಡೂ ಪಂಚಾಯ್ತಿಗೂ ಮಧ್ಯ ಚರಂಡಿ ಇದ್ದು, ಅದಕ್ಕೆ ಮಣ್ಣು ಸುರಿದಿರುವುದರಿಂದ ಕೊಳಚೆ ನೀರು ರಸ್ತೆಯಲ್ಲೇ ಹರಿಯುತ್ತಿದೆ.
ಮೊದಲೇ ಮಣ್ಣಿನ ರಸ್ತೆ ಇದ್ದು ಕೊಳಚೆ ನೀರು ಹರಿದು ಕೆಸರುಗದ್ದೆ ಆಗಿದೆ. ಇದನ್ನೇ ದಾಟಿಕೊಂಡು ಹೋಗುವ ಪರಿಸ್ಥಿತಿ ಇದೆ. ಅಲ್ಲದೆ, ಇದರ ಬಳಿಯಲ್ಲೇ ಇರುವ ತಗ್ಗು ಪ್ರದೇಶದಲ್ಲೂ ಕಲುಷಿತ ನೀರು ಬಂದು ಸೇರುತ್ತಿದೆ. ಈ ಪ್ರದೇಶ, ಸೊಳ್ಳೆ, ಕ್ರಿಮಿಕೀಟಗಳ ಆವಾಸ ಸ್ಥಾನವಾಗಿ ರೋಗಜನ್ಯ ಪ್ರದೇಶವಾಗಿ ಮಾರ್ಪಟ್ಟಿದೆ. 20 ವರ್ಷಗಳ ಹಿಂದೆಯೇ ಚರಂಡಿ ನಿರ್ಮಾಣವಾಗಿದೆ.
ಇಲ್ಲಿನ ನೀರು ತಗ್ಗು ಪ್ರದೇಶದಲ್ಲಿರುವ ದೊಡ್ಡ ಚರಂಡಿಗೆ ಹೋಗಿ ಸೇರುತ್ತದೆ. ಆದರೆ, ಈಚೆಗೆ ಇಲ್ಲಿಗೆ ಮಣ್ಣು ಸುರಿಯಲಾಗಿದೆ. ಈಗ ಚರಂಡಿ ತುಂಬಿಕೊಂಡು ನೀರೆಲ್ಲ ನಮ್ಮ ಮನೆ ಮುಂದೆ ಬಂದು ನಿಂತಿದೆ.
ನಾವು ಮನೆಗೆ ಕೊಳಚೆ ನೀರಿನಲ್ಲೇ ಹೋಗಬೇಕು. ಇಲ್ಲಿಗೆ ಮಣ್ಣಿನ ರಸ್ತೆ ಇದೆ. ಈಗ ಕೊಳಚೆ ನೀರು ಹರಿಯುತ್ತಿ ರುವುದರಿಂದ ಕೆಸರುಮಯವಾಗಿದೆ. ನಡೆಯುವಾಗ ವೃದ್ಧರು, ಮಹಿಳೆಯರು, ಮಕ್ಕಳು ಜಾರಿ ಬೀಳು ವ ಪರಿಸ್ಥಿತಿ ಇದೆ. ಜೊತೆಗೆ ಈಗ ಬೇಸಿಗೆ ಕಾಲವಾಗಿದೆ. ಸಾಂಕ್ರಾಮಿಕ ರೋಗ ಹರಡುವ ಭೀತಿ ಇದೆ. ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಈ ಸಮಸ್ಯೆಗೆ ಮುಕ್ತಿ ನೀಡಬೇಕು. -ದೊಡ್ಡಶೆಟ್ಟಿ, ಪುಟ್ಟಶೆಟ್ಟಿ, ಸ್ಥಳೀಯರು.
ಚರಂಡಿಗೆ ಮಣ್ಣು ಸುರಿದಿರುವ ಬಗ್ಗೆ ಸ್ಥಳೀಯರು ದೂರು ನೀಡಿದ್ದಾರೆ. ಸ್ಥಳಕ್ಕೆ ಭೇಟಿ ನೀಡಿದ್ದೇನೆ. ಇದರ ವ್ಯಾಪ್ತಿ ದುಗ್ಗಹಟ್ಟಿ ಗ್ರಾಪಂಗೆ ಸೇರುತ್ತದೆ. ಈ ಬಗ್ಗೆ ಮೇಲಧಿಕಾರಿಗಳ ಗಮನಕ್ಕೆ ತಂದು ಸಮಸ್ಯೆ ಬಗೆಹರಿಸಲಾಗುವುದು.
-ಬಸವಣ್ಣ, ಪಿಡಿಒ, ಅಂಬಳೆ ಗ್ರಾಮ ಪಂಚಾಯ್ತಿ.