Advertisement

ಡಾ|ವೆಂಕಟೇಶ್‌ “ಮಾಹೆ”ನೂತನ ಕುಲಪತಿ ; ಕಾರ್ಯನಿರ್ವಾಹಕ ಉಪಾಧ್ಯಕ್ಷರಾಗಿ ಡಾ|ವಿನೋದ ಭಟ್‌

10:42 AM Jun 17, 2020 | mahesh |

ಉಡುಪಿ: ಮಣಿಪಾಲ ಅಕಾಡೆಮಿ ಆಫ್ ಹೈಯರ್‌ ಎಜುಕೇಶನ್‌ (ಮಾಹೆ)ನ ನೂತನ ಕುಲಪತಿಗಳಾಗಿ ನಿವೃತ್ತ ಲೆಫ್ಟಿನೆಂಟ್‌ ಜನರಲ್‌ ಡಾ| ಎಂ.ಡಿ. ವೆಂಕಟೇಶ್‌ ಅವರು ಜವಾಬ್ದಾರಿ ವಹಿಸಿಕೊಳ್ಳಲಿದ್ದಾರೆ. ಹಾಲಿ ಕುಲಪತಿ ಡಾ| ವಿನೋದ ಭಟ್‌ ಅವರನ್ನು ಮಾಹೆಯ ಕಾರ್ಯನಿರ್ವಾಹಕ ಉಪಾಧ್ಯಕ್ಷರನ್ನಾಗಿ ನೇಮಿಸಲಾಗಿದ್ದು, ಅವರಿಬ್ಬರು ಜು. 1ರಂದು ಅಧಿಕಾರ ವಹಿಸಿಕೊಳ್ಳಲಿದ್ದಾರೆ.

Advertisement

ಮಾಹೆ ವಿ.ವಿ.ಯು ಪರಿಗಣಿತ ವಿ.ವಿ.ಗಳ ಪೈಕಿ ಕೇಂದ್ರ ಸರಕಾರದ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯದಿಂದ ಇನ್‌ಸ್ಟಿಟ್ಯೂಟ್‌ ಆಫ್ ಎಮಿನೆನ್ಸ್‌ ಎಂದು ಗುರುತಿಸಲ್ಪಟ್ಟಿದ್ದು, ಮಾಹೆಯನ್ನು ಈ ಸ್ಥಾನಕ್ಕೆ ಎತ್ತರಿಸಲು ಬಹುವಾಗಿ ಶ್ರಮಿಸಿದ ಡಾ| ವಿನೋದ ಭಟ್‌ ಅವರ ಕೊಡುಗೆಯನ್ನು ಈ ಸಂದರ್ಭದಲ್ಲಿ ಮಾಹೆಯ ಕುಲಾಧಿಪತಿ ಡಾ| ರಾಮದಾಸ್‌ ಪೈ ಅವರು ಶ್ಲಾಘಿಸಿದ್ದಾರೆ.

ಡಾ| ರಾಮದಾಸ್‌ ಎಂ. ಪೈ ಅವರು ಹೊರಡಿಸಿರುವ ಪ್ರಕಟನೆಯ ಪ್ರಕಾರ ಆಯ್ಕೆ ಸಮಿತಿಯು ಕುಲಪತಿ ಸ್ಥಾನಕ್ಕೆ ಡಾ| ಎಂ.ಡಿ. ವೆಂಕಟೇಶ್‌ ಅವರ ಹೆಸರನ್ನು ಅಂತಿಮ ಗೊಳಿಸಿದೆ. ಡಾ| ವೆಂಕಟೇಶ್‌ ಅವರು ಸಿಕ್ಕಿಂ-ಮಣಿಪಾಲ ವಿ.ವಿ.ಯ ಕುಲಪತಿಯಾಗಿ ಮೂರು ವರ್ಷಗಳ ಯಶಸ್ವಿ ಅಧಿಕಾರಾವಧಿಯನ್ನು ಜೂ. 30ರಂದು ಪೂರ್ಣಗೊಳಿಸಲಿದ್ದಾರೆ. ಅವರು ಶಿಕ್ಷಣ ಕ್ಷೇತ್ರದಲ್ಲಿ ಅಪಾರ ಅನುಭವ ಪಡೆದವರು. ಅವರ ಅಧಿಕಾರಾವಧಿಯಲ್ಲಿ ಸಿಕ್ಕಿಂ- ಮಣಿಪಾಲ ವಿ.ವಿ. ಸರ್ವಾಂಗೀಣ ಅಭಿವೃದ್ಧಿಯನ್ನು ಸಾಧಿಸಿದೆ. ಅವರು ಹೊಂದಿರುವ ವಿಶೇಷ ಆಡಳಿತ ಪರಿಣತಿಯಿಂದಾಗಿ ಸಿಕ್ಕಿಂ-ಮಣಿಪಾಲ ವಿ.ವಿ.ಯು ದೇಶದ ಖಾಸಗಿ ವಿ.ವಿ.ಗಳ ಪೈಕಿ ಉಚ್ಚ ಸ್ಥಾನದಲ್ಲಿ ಗುರುತಿಸಿಕೊಳ್ಳುವಂತಾಗಿದೆ.

ಡಾ| ಎಂ.ಡಿ. ವೆಂಕಟೇಶ್‌ ಅವರು ಮೈಸೂರು ಮೆಡಿಕಲ್‌ ಕಾಲೇಜಿನಲ್ಲಿ 1978ರಲ್ಲಿ ಎಂಬಿಬಿಎಸ್‌ ಪದವಿ ಮುಗಿಸಿ ಸೇನೆಯ ವೈದ್ಯಕೀಯ ವಿಭಾಗ ಸೇರಿದರು. 1986ರಲ್ಲಿ ಮುಂಬಯಿ ವಿ.ವಿ.ಯಲ್ಲಿ ಇಎನ್‌ಟಿ ವಿಭಾಗದಲ್ಲಿ ಎಂಎಸ್‌ ಪದವಿ ಪಡೆದ ಅವರು ಕೊಕ್ಲಿಯರ್‌ ಇಂಪ್ಲಾಂಟೇಶನ್‌ ಮತ್ತು ನ್ಯೂರೊಟಾಲೊಜಿ
ಯಲ್ಲಿ ದೇಶ-ವಿದೇಶದಲ್ಲಿ ತರಬೇತಿ ಪಡೆದಿದ್ದಾರೆ. 38 ವರ್ಷಗಳ ಕಾಲ ಸೇನಾ ಪಡೆಯ ಶೈಕ್ಷಣಿಕ ಸಂಸ್ಥೆಗಳಲ್ಲಿ ದುಡಿದ ಡಾ| ವೆಂಕಟೇಶ್‌ ಅವರು ಅನೇಕ ಆಡಳಿತಾತ್ಮಕ ಜವಾಬ್ದಾರಿಗಳನ್ನು ನಿರ್ವಹಿಸಿದ್ದಾರೆ. ಈ ಅವಧಿಯಲ್ಲಿ ವೈದ್ಯಕೀಯ ಶಿಕ್ಷಣ ಕ್ಷೇತ್ರಕ್ಕೆ ಅಪೂರ್ವ ಕೊಡುಗೆ ನೀಡಿದ್ದಾರೆ. ಪದವಿ, ಸ್ನಾತಕೋತ್ತರ ಪದವಿಗೆ ಆನ್‌ಲೈನ್‌ ಪ್ರವೇಶ ಪ್ರಕ್ರಿಯೆಯನ್ನು ಪರಿಚಯಿಸಿದ್ದಾರೆ. ಅವರು ಎಂಸಿಐ, ಐಸಿಎಂಆರ್‌ ಸೇರಿದಂತೆ ಹಲವಾರು ಸಮಿತಿಗಳ ಸದಸ್ಯರಾಗಿ ಕಾರ್ಯನಿರ್ವಹಿಸಿದ್ದಾರೆ. ಡಾ| ವೆಂಕಟೇಶ್‌ ಅವರ ಪತ್ನಿ ಕುಸುಮಾ ವೆಂಕಟೇಶ್‌ ಅವರೂ ಪರಿಣತ ಶಿಕ್ಷಣ ತಜ್ಞೆ. ಓರ್ವ ಪುತ್ರಿ ಅಮೆರಿಕ, ಇನ್ನೋರ್ವ ಪುತ್ರಿ ಮುಂಬಯಿಯಲ್ಲಿ ನೆಲೆಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next