ಟೊರೊಂಟೊ: ವಿದೇಶದಲ್ಲಿರುವ ಕನ್ನಡಿಗರು ಸಂತೋಷಪಡುವಷ್ಟೇ ಸವಾಲುಗಳನ್ನು ಎದುರಿಸುತ್ತಾರೆ. ಆದರೆ ಅದರ ಮಧ್ಯೆ ಸಂಸ್ಕಾರ, ಸಂಸ್ಕೃತಿಯನ್ನು ಮರೆಯದೆ ಕನ್ನಡವನ್ನು ಬೆಳೆಸಲು ಪ್ರಯತ್ನಿಸುತ್ತಾರೆ. ಮಾತನಾಡುವಾಗ ಅಪ್ಪಿ ತಪ್ಪಿಯೂ ಸಹ ಇಂಗ್ಲಿಷ್ ಶಬ್ದ ಬಳಸುವುದಿಲ್ಲ. ದೂರಕ್ಕೆ ಹೋದರೂ ಕನ್ನಡವನ್ನು ಶುದ್ಧೀಕರಿಸುತ್ತಿರುವರು ಎಂದು ಧರ್ಮಸ್ಥಳ ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆ ಹೇಳಿದರು.
ಅವರು ಟೊರೊಂಟೊ ಕನ್ನಡ ಸಂಘವು ಒಟ್ಟಾವಾ ಕನ್ನಡ ಸಂಘ, ಮಾಂಟ್ರಿಯಲ್ ಕನ್ನಡ ಕೂಟ ಮತ್ತು ಗ್ರಾಂಡ್ ರಿವರ್ ಕನ್ನಡಿಗರ ಸಹಭಾಗಿತ್ವದಲ್ಲಿ ಆಯೋಜಿಸಿದ್ದ ನಾಡಹಬ್ಬ ಭಾಗ- 1 ಅನ್ನು ಉದ್ಘಾಟಿಸಿ ಮಾತನಾಡಿದರು.
ವಿದೇಶದಲ್ಲಿರುವ ಹೆಚ್ಚಿನ ಕನ್ನಡಿಗರು ಕನ್ನಡದ ಶುದ್ಧ ಭಾಷೆಯನ್ನು ಬಳಸುತ್ತಿದ್ದೀರಿ. ಒಳ್ಳೊಳ್ಳೆಯ ಶಬ್ದಗಳನ್ನು ಸಹ ಬಳಸುತ್ತಿರುವಿರಿ. ಅದಕ್ಕಾಗಿ ಅಭಿನಂದನೆಗಳು ಎಂದರು.
ಬ್ರಹ್ಮಾಂಡದೊಳಗೆ ಅರಸಿ ನೋಡಲು ನಮ್ಮೂರೇ ವಾಸಿ ಎಂಬ ಕರ್ನಾಟಕದ ಮೇಲಿನ ಪ್ರೀತಿಯನ್ನು ಸಾರುವ ದಿವಂಗತ ಹೊನ್ನಪ್ಪ ಭಾಗವತರ ಹಾಡನ್ನು ಸ್ಮರಿಸಿದ ಅವರು, ಕನ್ನಡ ರಾಜ್ಯದ ಬಗ್ಗೆ ಮತ್ತು ವಿದೇಶದಲ್ಲಿರುವ ಕನ್ನಡಿಗರ ಭಾಷಾ ಅಭಿಮಾನದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ಭಾರತದಲ್ಲಿ ವೈವಿಧ್ಯಮಯವಾದ ರಾಜ್ಯ, ಭಾಷೆ, ಸಂಸ್ಕೃತಿ, ಸಂಸ್ಕಾರ, ಬುದ್ಧಿವಂತರು ಇದ್ದಾರೆ. ಆದರೂ ಕರ್ನಾಟಕ ಭಾರತ ದೇಶದಲ್ಲೇ ಅತ್ಯಂತ ಸಜ್ಜನಿಕೆಯ, ಸೌಮ್ಯ ಸ್ವಭಾವದ ಮತ್ತು ಪ್ರತಿಷ್ಠಿತ ರಾಜ್ಯವೆಂದು ಹೆಸರುಗಳಿಸಿದೆ. ಇದಕ್ಕೆ ಕಾರಣ ನಮ್ಮ ಮಾತೃ ಭಾಷೆ ಕನ್ನಡದ ಪರಿಣಾಮ. ಕನ್ನಡದಲ್ಲಿ ಎಷ್ಟೋ ಶ್ರೇಷ್ಠ ಸಾಹಿತಿಗಳು ಹುಟ್ಟಿ ನಮ್ಮ ಸಂಪತ್ತನ್ನು ಹೆಚ್ಚಿಸಿದ್ದಾರೆ ಎಂದು ಅಭಿಪ್ರಾಯಪಟ್ಟರು.
ಕರ್ನಾಟಕ ಬಹುತೇಕ ಎಲ್ಲರೂ ವಾಸಿಸಲು ಯೋಗ್ಯವೆಂದು ಆಯ್ಕೆ ಮಾಡುವ ಪ್ರದೇಶ. ಕರ್ನಾಟಕ ಇಂದು ಬೆಳೆಯುತ್ತಿರುವುದಕ್ಕೆ ಮುಖ್ಯ ಕಾರಣ ಇಲ್ಲಿನ ಶಿಕ್ಷಣ ವ್ಯವಸ್ಥೆ. ಜನರು ಶಿಕ್ಷಣದ ಮಹತ್ವವನ್ನು ಕಂಡು ಹೆಚ್ಚಿನ ಪ್ರಾಶಸ್ತ್ಯ ಕೊಡುತ್ತಿದ್ದಾರೆ. ಒಂದು ರೀತಿಯಲ್ಲಿ ಇಡೀ ದೇಶದಲ್ಲಿ ಅತ್ಯಂತ ಸುರಕ್ಷೆಯ ರಾಜ್ಯ ಎನ್ನುವ ಹೆಸರನ್ನೂ ಸಹ ಇದು ಪಡೆದಿದೆ. ಹಾಗಾಗಿ ನೀವು ದೂರದೇಶಕ್ಕೆ ಹೋದಾಗ ಕರ್ನಾಟಕದ ಸ್ಮರಣೆ ಮಾಡುವಂತದ್ದು ಬಹಳ ಸಹಜ ಎಂದರು.
ಕರ್ನಾಟಕ ಈಗ ಸುಭೀಕ್ಷವಾಗಿದೆ. ಕಷ್ಟಗಳಿವೆ ಆದರೆ ಅದನ್ನು ಎದುರಿಸುವಂತಹ ಆತ್ಮ ಶಕ್ತಿಯೂ ಇದೆ. ದೂರದೇಶದಲ್ಲಿರುವ ಕನ್ನಡಿಗರ ಮನಸ್ಸುಗಳೆಲ್ಲ ಒಂದಾಗಲು ಕಾರಣ ನಿಮ್ಮ ವ್ಯಕ್ತಿತ್ವ ಬೆಳೆಸಿಕೊಂಡ ರೀತಿ, ಜೀವನ ರೂಪಿಸಿಕೊಂಡ ವಿಧಾನ, ಮಾತೃಭಾಷೆಯ ಸ್ಮರಣೆ ಎಂದು ಅಭಿಪ್ರಾಯ ಪಟ್ಟರು.
ಬಳಿಕ ನಡೆದ ಸಂವಾದ ಕಾರ್ಯಕ್ರಮದಲ್ಲಿ ಮಾಂಟ್ರಿಯಲ್ ಕನ್ನಡ ಸಂಘ, ಒಟ್ಟಾವಾ ಕನ್ನಡ ಸಂಘ, ಗ್ರಾಂಡ್ ರಿವರ್ ಕನ್ನಡ ಸಂಘ, ಶೃಂಗೇರಿ ದೇವಸ್ಥಾನ, ಶ್ರೀಕೃಷ್ಣ ಬೃಂದಾವನ, ಯಕ್ಷಮಿತ್ರ ಟೊರೊಂಟೊ ಪ್ರತಿನಿಧಿಗಳು ಡಾ| ಹೆಗ್ಗಡೆಯವರೊಂದಿಗೆ ವಿಷಯಾಧಾರಿತ ಪ್ರಶ್ನೆಗಳ ಕುರಿತು ಚರ್ಚೆ ನಡೆಸಿದರು.
ನಗೆ ಹಬ್ಬದಲ್ಲಿ ಹಾಸ್ಯ ಕಲಾವಿದರಾದ ಗಂಗಾವತಿ ಪ್ರಾಣೇಶ್, ಬಸವರಾಜ್ ಮಹಾಮನಿ ಮತ್ತು ನರಸಿಂಹ ಜೋಷಿ ಪಾಲ್ಗೊಂಡರು.
ಆರಂಭದಲ್ಲಿ ಟೊರೊಂಟೊ ಕನ್ನಡ ಸಂಘದ ಅಧ್ಯಕ್ಷ ನಾಗೇಂದ್ರ ಕೃಷ್ಣಮೂರ್ತಿ ಸ್ವಾಗತಿಸಿದರು. ಮಾಂಟ್ರಿಯಲ್ ಕನ್ನಡ ಕೂಟದ ಅಧ್ಯಕ್ಷ ಡಾ| ಹೊಸಹಳ್ಳಿ ರಾಮಸ್ವಾಮಿ ಅವರು ವಂದಿಸಿದರು. ಸುಬ್ರಹ್ಮಣ್ಯ ಶಿಶಿಲ ಮತ್ತು ಸತೀಶ್ ವೆಂಕೋಬ್ ಅವರು ಕಾರ್ಯಕ್ರಮ ನಿರ್ವಹಿಸಿದರು.
ನ. 28ರಂದು ನಾಡಹಬ್ಬ
ಟೊರೊಂಟೊ ಕನ್ನಡ ಸಂಘದ ನಾಡಹಬ್ಬ ಭಾಗ -2 ಆಚರಣೆಯು ನ. 28ರಂದು ನಡೆಯಲಿದೆ. ಭಾರತದ ರಾಯಭಾರಿಗಳಾದ ಅಪೂರ್ವ ಶ್ರೀವಾತ್ಸವ ಮತ್ತು ಕೆನಡಾದಲ್ಲಿ ಸಂಸದರಾಗಿರುವ ಕನ್ನಡಿಗ ಚಂದ್ರ ಆರ್ಯ ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಟೊರೊಂಟೊ ಕನ್ನಡ ಸಂಘದ ಪ್ರತಿಭಾನ್ವಿತರಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ಕಾರ್ಯಕ್ರಮಗಳನ್ನು www.facebook.com/ kstoronto ಮತ್ತು Kannada Sangha Toronto ದ Youtube chanel ಗಳಲ್ಲಿ ವಿಶ್ಶದಾದ್ಯಂತ ಕಾಣಬಹುದಾಗಿದೆ.
– ಸುಬ್ರಹ್ಮಣ್ಯ ಶಿಶಿಲ