ಉಡುಪಿ: ಕಾರ್ಕಳದ ಡಾ| ಟಿಎಂಎ ಪೈ ರೋಟರಿ ಆಸ್ಪತ್ರೆಯಲ್ಲಿ ಕಾರ್ಕಳ ಮತ್ತು ಅದರ ಸುತ್ತಮುತ್ತಲಿನ ಪ್ರದೇಶಗಳಲ್ಲಿನ ಜನರಿಗೆ ಇನ್ನಷ್ಟು ಉತ್ತಮ ಆರೋಗ್ಯ ಸೇವೆ ಹೆಚ್ಚಿಸುವ ಉದ್ದೇಶದೊಂದಿಗೆ ಹೊಸ ಹೊರರೋಗಿ ವಿಭಾಗ ಮತ್ತು ಲೇಬರ್ ಥಿಯೇಟರ್ ಕಾಂಪ್ಲೆಕ್ಸ್‌ಗೆ ಮಾಹೆಯ ಟ್ರಸ್ಟಿ ವಸಂತಿ ಆರ್.ಪೈ ಅವರು ಶಂಕುಸ್ಥಾಪನೆ ನೆರವೇರಿಸಿದರು.
ಮಾಹೆ ಸಹ ಕುಲಾಧಿಪತಿ ಡಾ| ಎಚ್.ಎಸ್. ಬಲ್ಲಾಳ್, ಕುಲಪತಿ ಲೆ| ಜ| ಡಾ| ಎಂ.ಡಿ.ವೆಂಕಟೇಶ್ ಮಾತನಾಡಿ, ಈ ವ್ಯವಸ್ಥೆಯು ಇನ್ನಷ್ಟು ಸುಧಾರಿತ ವೈದ್ಯಕೀಯ ಸೇವೆಯನ್ನು ನೀಡಲು ಸಹಕಾರಿಯಾಗಲಿದೆ ಎಂದರು.
ಕಾರ್ಕಳದ ಡಾ| ಟಿಎಂಎ ಪೈ ರೋಟರಿ ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ ಡಾ| ಕೀರ್ತಿನಾಥ ಬಲ್ಲಾಳ್ ಮಾತನಾಡಿ, ಈ ಹೊಸ ಕಟ್ಟಡದ ನಿರ್ಮಾಣದ ಮೂಲಕ ಆರೋಗ್ಯ ಸೇವೆಯನ್ನು ವಿಸ್ತರಿಸುವ ಗುರಿ ಹೊಂದಲಾಗಿದೆ. ಸ್ಥಳೀಯವಾಗಿ ವೈದ್ಯಕೀಯ ಸೇವೆಯನ್ನು ಹೆಚ್ಚಿಸುವ ಉದ್ದೇಶವೂ ಇದೆ ಎಂದರು.
ಮಣಿಪಾಲ ಹೆಲ್ತ್ ಎಂಟರ್‌ಪ್ರೈಸಸ್ ಎಂಡಿ ಮತ್ತು ಮುಖ್ಯ ಸಿಒಇ ದಿಲೀಪ್ ಜೋಸ್, ಸಹ ಉಪ ಕುಲಪತಿ ಡಾ| ಶರತ್ ಕುಮಾರ್ ರಾವ್, ಸಿಇಒ ಡಾ| ರವಿರಾಜ್ ಎನ್.ಎಸ್., ಕೆಎಂಸಿ ಡೀನ್ ಡಾ| ಪದ್ಮರಾಜ್ ಹೆಗ್ಡೆ, ಮಾಹೆ ಮಣಿ ಪಾಲದ ಬೋಧನಾ ಆಸ್ಪತ್ರೆಗಳ ಸಿಒಒ ಡಾ| ಆನಂದ್ ವೇಣುಗೋಪಾಲ್, ಮಾಹೆ ಮಣಿ ಪಾಲದ ಹಿರಿಯ ಅಧಿಕಾರಿಗಳು, ರೋಟರಿ ಕ್ಲಬ್ ಕಾರ್ಕಳ ರಾಕ್ ಸಿಟಿ ಅಧ್ಯಕ್ಷ ಉಪೇಂದ್ರ ವಾಗೆ, ರೋಟರಿ ಕ್ಲಬ್ ಕಾರ್ಕಳದ ಅಧ್ಯಕ್ಷ ಇಕ್ಬಾಲ್ ಅಹ್ಮದ್ ಉಪಸ್ಥಿತರಿದ್ದರು.
ಈ ಸಂಕೀರ್ಣವು ಸಾಮಾನ್ಯ ಮತ್ತು ಸೂಪರ್-ಸ್ಪೆಷಾಲಿಟಿ ಸೇವೆಗಳಿಗಾಗಿ ಸಮಾಲೋಚನ ಕೊಠಡಿಗಳನ್ನು ಒಳಗೊಂಡಿದೆ. ಜತೆಗೆ ರೋಗಿಗಳಿಗೆ ಆರಾಮದಾಯಕವಾದ ವಿಶ್ರಾಂತಿ ಕೊಠಡಿಗಳನ್ನು ಒಳಗೊಂಡಿದೆ. ರೋಗಿಗಳ ಗೌಪ್ಯತೆ ಮತ್ತು ಸೌಕರ್ಯಗಳಿಗೆ ಆದ್ಯತೆ ನೀಡಲು ಮೀಸಲಾದ ಲೇಬರ್ ಥಿಯೇಟರ್ (ಹೆರಿಗೆ ಕೊಠಡಿ) ವಿನ್ಯಾಸಗೊಳಿಸಲಾಗಿದೆ. ಎಪ್ರಿಲ್ 2025ರ ವೇಳೆಗೆ ಕಾರ್ಯನಿರ್ವಹಿಸುವ ಉದ್ದೇಶ ಹೊಂದಲಾಗಿದೆ.