ಉಡುಪಿ: ಓರ್ವ ಉತ್ತಮ ಗುರು ತನ್ನ ವ್ಯಕ್ತಿತ್ವ, ಪ್ರತಿಭೆ, ಪಾಂಡಿತ್ಯ ಹಾಗೂ ಆದರ್ಶ ಗುಣಗಳಿಂದ ಸಾಮಾನ್ಯ ವಿದ್ಯಾರ್ಥಿಯ ಬದುಕಿನ ಗತಿಯನ್ನು ಬದಲಿಸುವ ಶಕ್ತಿ ಹೊಂದಿರುತ್ತಾನೆ ಎಂಬುದು ಡಾ| ಎ.ಪಿ.ಜೆ ಅಬ್ದುಲ್ ಕಲಾಂ ಹಾಗೂ ಡಾ| ರಾಧಾಕೃಷ್ಣನ್ ಅವರ ಬದುಕಿನ ಚರಿತ್ರೆಗಳಿಂದ ತಿಳಿದು ಬರುತ್ತದೆ ಎಂದು ಉಡುಪಿ ಡಾ| ಟಿ.ಎಂ. ಎ. ಪೈ ಶಿಕ್ಷಣ ಮಹಾವಿದ್ಯಾಲಯದ ಸಮನ್ವಯಾಧಿಕಾರಿ ಡಾ| ಮಹಾಬಲೇಶ್ವರ ರಾವ್ ಹೇಳಿದರು.
ಡಾ| ಟಿ.ಎಂ.ಎ. ಪೈ ಪ್ರತಿಷ್ಠಾನ ಮತ್ತು ಪುಂಡಲೀಕ ಶೆಣೈ ಸ್ಮಾರಕ ಟ್ರಸ್ಟ್ ಸಹಯೋಗದಲ್ಲಿ ಉಡುಪಿ ಡಾ| ಟಿ.ಎಂ.ಎ. ಪೈ ಶಿಕ್ಷಣ ಮಹಾವಿದ್ಯಾಲಯದಲ್ಲಿ ನಡೆದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಕಾಲೇಜಿನ ಪೂರ್ವ ವಿದ್ಯಾರ್ಥಿಗಳಾದ ವಿಜಯ ಕುಮಾರ್ ಸೋನ್ಸ್ ಹಾಗೂ ಸರೋಜ ಮರೀನಾ ಅವರನ್ನು ಸಮ್ಮಾನಿಸಲಾಯಿತು. ಪುಂಡಲೀಕ ಶೆಣೈ ಸ್ಮಾರಕ ಟ್ರಸ್ಟ್‌ನ ಅಧ್ಯಕ್ಷ ಹರೀಶ್ ಶೆಣೈ ಟ್ರಸ್ಟ್‌ನ ಬಗ್ಗೆ ಮಾಹಿತಿ ನೀಡಿದರು. ವಿದ್ಯಾರ್ಥಿ ಶಿಕ್ಷಕರಾದ ರಕ್ಷಿತ್ ಆಚಾರ್ಯ, ರಜನಿ ಸಾಮಗ ಮತ್ತು ಅಶ್ವಿನಿ ಶಾಸ್ತ್ರೀ ಹಾಗೂ ವೃಂದದವರು ಜಿ.ವಿ. ಅಯ್ಯರ್ ಅವರ ಗೀತೆ, ಅಲ್ಲಮನ ವಚನ ಪ್ರಸ್ತುತಪಡಿಸಿದರು. ವಿದ್ಯಾಶ್ರೀ ಕುಲಾಲ್ ಅವರು ಡಾ| ರಾಧಾಕೃಷ್ಣನ್ ವ್ಯಕ್ತಿತ್ವದ ಹಿರಿಮೆಗಳ ಬಗ್ಗೆ ಮಾತನಾಡಿದರು.
ಅನ್ನಪೂರ್ಣ ಬಿ.ಎಂ. ಆಧುನಿಕ ಭಾರತದ ನಿರ್ಮಾಣದಲ್ಲಿ ಶಿಕ್ಷಕರ ಪಾತ್ರದ ಬಗ್ಗೆ ಅಭಿಪ್ರಾಯ ಹಂಚಿಕೊಂಡರು. ಕಾಲೇಜಿನ ವಿದ್ಯಾರ್ಥಿ ಶಿಕ್ಷಕಿ ಶ್ರುತಿ ಮೋಹನ ಭಂಡಾರಿ ಸ್ವಾಗತಿಸಿದರು. ನಮೃತಾ ಪೈ ವಂದಿಸಿದರು. ವಿಧಾತ್ರಿ ನಿರೂಪಿಸಿದರು. ಉಪನ್ಯಾಸಕಿ ಮಮತಾ ಸಾಮಂತ್ ಪರಿಚಯಿಸಿದರು.