ಚಿಕ್ಕಬಳ್ಳಾಪುರ : ರಾಜ್ಯದಲ್ಲಿ ಕೊರೊನಾ ಸೋಂಕು ನಿಯಂತ್ರಿಸಲು ಲಸಿಕೆಯ ಕೊರತೆಯಿಲ್ಲ. ಈಗಾಗಲೇ ಕೇಂದ್ರ ಆರೋಗ್ಯ ಸಚಿವರು ಮತ್ತು ಕಾರ್ಯದರ್ಶಿಗಳೊಂದಿಗೆ ಸಮಾಲೋಚನೆ ನಡೆಸಿದ್ದು ಮುಂದಿನ ವಾರದೊಳಗೆ 12.5 ಲಕ್ಷ ಲಸಿಕೆಯನ್ನು ಸರಬರಾಜು ಮಾಡಲು ಭರವಸೆ ನೀಡಿದ್ದಾರೆ ಎಂದು ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಡಾ.ಕೆ.ಸುಧಾಕರ್ ತಿಳಿಸಿದರು.
ಜಿಲ್ಲೆಯ ಅರೂರು ಗ್ರಾಪಂಯ ಆವಲನಾಗೇನಹಳ್ಳಿ ಗ್ರಾಮಕ್ಕೆ ಭೇಟಿ ನೀಡಿ ನಿನ್ನೆಯ ದಿನ ಕೊಲೆಗೀಡಾದ ಗ್ರಾಪಂ ಕಾರ್ಯದರ್ಶಿ ರಾಮಾಂಜಿ ಕುಟುಂಬ ಸದಸ್ಯರಿಗೆ ಸಾಂತ್ವನ ಹೇಳಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ರಾಜ್ಯದಲ್ಲಿ ಕೊರೊನಾ ಸೋಂಕು ನಿಯಂತ್ರಿಸಲು ಕಠಿಣ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಜೊತೆಗೆ ಸೋಂಕು ನಿಯಂತ್ರಿಸಲು ಲಸಿಕೆ ಸಹ ನೀಡುವ ಕೆಲಸವನ್ನು ಮಾಡುತ್ತಿದ್ದೇವೆ ಲಸಿಕೆಯ ಕೊರತೆಯಾಗದಂತೆ ಎಲ್ಲಾ ರೀತಿಯ ಸಹಕಾರ ನೀಡಲು ಕೇಂದ್ರ ಆರೋಗ್ಯ ಸಚಿವರು ಭರವಸೆ ನೀಡಿದ್ದಾರೆ ಒಟ್ಟು 12.5 ಲಕ್ಷ ಲಸಿಕೆ ನೀಡಲು ಒಪ್ಪಿಗೆ ಸೂಚಿಸಿದ್ದು ನಾಳೆ ವಿಮಾನದ ಮೂಲಕ ಹೆಚ್ಚುವರಿಯಾಗಿ 4 ಲಕ್ಷ ಲಸಿಕೆ ಬರುತ್ತಿದೆ ಎಂದು ಸ್ಪಷ್ಟಪಡಿಸಿದರು.
ರಾಜ್ಯದಲ್ಲಿ ಕೊರೊನಾ ಸೋಂಕು ನಿಯಂತ್ರಿಸಲು ಸರ್ಕಾರ ಅನೇಕ ರೀತಿಯ ಕ್ರಮಗಳನ್ನು ಕೈಗೊಂಡಿದ್ದು ನಾಗರೀಕರು ಸಹ ಸೋಂಕು ನಿಯಂತ್ರಿಸಲು ಸರ್ಕಾರದೊಂದಿಗೆ ಕೈಜೋಡಿಸಬೇಕು ಅದರಲ್ಲೂ ವಿಶೇಷವಾಗಿ ಮೊದಲು ನಡವಳಿಕೆಗಳನ್ನು ಬದಲಾಯಿಸಿಕೊಂಡು ಸೋಂಕು ನಿರ್ಮೂಲನೆ ಮಾಡಲು ವಿಶೇಷ ಕಾಳಜಿವಹಿಸಬೇಕು ಅನಗತ್ಯವಾಗಿ ಗುಂಪು ಸೇರುವುದನ್ನು ಸ್ವಯಂ ನಿಯಂತ್ರಿಸಿಕೊಂಡು ಆರೋಗ್ಯದ ಹಿತದೃಷ್ಟಿಯಿಂದ ಮುಂದಿನ 2 ತಿಂಗಳ ಕಾಲ ಯಾವುದೇ ರೀತಿಯ ರಾಜಕೀಯ ಅಥವಾ ಧಾರ್ಮಿಕ ಸಭೆ ಸಮಾರಂಭಗಳನ್ನು ಸ್ಥಗಿತ ಮಾಡಬೇಕೆಂದು ಮನವಿ ಮಾಡಿದರು.
ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದಲ್ಲಿ 56 ವರ್ಷಗಳ ನಂತರ ಒಂದು ಕೊಲೆಯಾಗಿದೆ ಅದನ್ನು ಸರ್ಕಾರ ಮತ್ತು ಪೋಲೀಸ್ ಇಲಾಖೆ ಗಂಭೀರವಾಗಿ ಪರಿಗಣಿಸಿದೆ ಜಮೀನಿನ ವಿವಾದದ ಹಿನ್ನೆಲೆಯಲ್ಲಿ ಗ್ರಾಪಂ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸುತ್ತಿದ್ದ ರಾಮಾಂಜಿಯನ್ನು ಅಮಾನುಷವಾಗಿ ಬರ್ಬರವಾಗಿ ಹತ್ಯೆ ಮಾಡಿರುವುದು ಖಂಡನೀಯ ಈ ಕೊಲೆಯಲ್ಲಿ ಭಾಗಿಯಾದವರು ಮತ್ತು ಈ ಕೊಲೆ ಮಾಡಲು ಕುಮ್ಮಕ್ಕು ಮತ್ತು ಪ್ರೇರಣೆ ನೀಡಿರುವ ವ್ಯಕ್ತಿಗಳು ಎಷ್ಟೆ ಪ್ರಭಾವಿಶಾಲಿ ಅಥವಾ ಶಕ್ತಿಶಾಲಿಗಳಿದ್ದರು ಸಹ ಅವರ ಮೇಲೆ ಕಠಿಣ ರೀತಿಯ ಕಾನೂನು ಕ್ರಮ ಜರುಗಿಸಲು ಜಿಲ್ಲಾ ಪೋಲೀಸ್ ವರಿಷ್ಠಾಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ ಎಂದರು.
ಸುಮಾರು 40 ವರ್ಷಗಳ ಸ್ನೇಹವನ್ನು ಹೊಂದಿದ್ದ ಮತ್ತು ಸಹೋದರ ಸಮಾನರಾದ ರಾಮಾಂಜಿ ಹತ್ಯೆಯಿಂದ ಬಹಳ ನೋವು ಉಂಟಾಗಿದೆ ಮೃತನಿಗೆ ಸಣ್ಣ ಮಕ್ಕಳಿದ್ದಾರೆ ಜೊತೆಗೆ ಆತನ ಪತ್ನಿಯನ್ನು ಸಹ ಹತ್ಯೆ ಮಾಡುವ ಪ್ರಯತ್ನ ಮಾಡಿರುವ ಪಾಪಿಗಳ ವಿರುಧ್ಧ ಉಗ್ರ ರೀತಿಯ ಕ್ರಮ ಜರುಗಿಸುತ್ತೇವೆ ಅವರ ಕುಟುಂಬ ಸದಸ್ಯರ ದುಃಖದಲ್ಲಿ ನಮ್ಮ ಕುಟುಂಬ ಸಹ ಭಾಗಿಯಾಗಿರುತ್ತದೆ ಎಂದ ಸಚಿವರು ಮಕ್ಕಳಿಗೆ ಅಪ್ಪನ ಕೊರತೆಯನ್ನು ನೀಗಿಸಲು ಸಾಧ್ಯವಿಲ್ಲ ಆದರೇ ಮಕ್ಕಳಿಗೆ ಉತ್ತಮ ಜೀವನವನ್ನು ಕಲ್ಪಿಸಲು ವೈಯಕ್ತಿಕವಾಗಿ ಸಹಾಯ ಮಾಡುತ್ತೇನೆ ಎಂದರು.