ಔರಾದ: ತ್ರಿವಿಧ ದಾಸೋಹಿ, ಶತಾಯುಷಿ ಡಾ| ಶಿವಕುಮಾರ ಸ್ವಾಮೀಜಿ ಲಿಂಗೈಕ್ಯರಾದ ಹಿನ್ನೆಲೆಯಲ್ಲಿ ತಾಲೂಕಿನ ಸಾಹಿತಿಗಳ ಬಳಗ ಹಾಗೂ ವಿವಿಧ ಸಂಘಟನೆಗಳ ಮುಖಂಡರಿಂದ ಪಟ್ಟಣದ ಕನ್ನಡಾಂಬೆ ವೃತ್ತದ ಬಳಿ ಶ್ರದ್ಧಾಂಜಲಿ ಸಭೆ ನಡೆಯಿತು.
ಚಂದ್ರಕಾಂತ ನಿರ್ಮಳೆ ಮಾತನಾಡಿ, ಸಿದ್ಧಗಂಗಾ ಶ್ರೀಗಳು ಆಧುನಿಕ ಯುಗದ ಬಸವಣ್ಣರಾಗಿದ್ದರು. ಸರಳ ವ್ಯಕ್ತಿತ್ವದ ಮೂಲಕ ಧಾರ್ಮಿಕ ಹಾಗೂ ಶೈಕ್ಷಣಿಕ ಕ್ಷೇತ್ರಕ್ಕೆ ಉತ್ತಮ ಕೊಡುಗೆ ನೀಡಿದ ಮಹಾನ್ ಜೀವಿಯಾಗಿದ್ದರು. ಶ್ರೀಗಳು ಇಲ್ಲದ ಕರುನಾಡು ಬಡವಾಗಿದೆ ಎಂದರು.
ಹಿರಿಯ ಸಾಹಿತಿ ಮಾಣಿಕ ನೆಳಗೆ ಮಾತನಾಡಿ, ಸ್ವಾರ್ಥವೇ ತುಂಬಿ ತುಳುಕುತ್ತಿರುವ ಸಮಾಜದಲ್ಲಿ ಶ್ರೀಗಳ ನಿಸ್ವಾರ್ಥ ಕೊಡುಗೆ ಅನನ್ಯವಾಗಿದದ್ದು. ಅದರ ದೇಹ ನಮ್ಮಿಂದ ದೂರವಾದರೂ ಅವರು ಮಾಡಿರುವ ಒಳ್ಳೆಯ ಕಾರ್ಯಗಳು, ಬೋಧಿಸಿ ಧರ್ಮ ಮಾರ್ಗ, ಮಾನವೀಯ ಮೌಲ್ಯಗಳು ಅಜರಾಮರವಾಗಿವೆ ಎಂದರು.
ಅನೀಲಕುಮಾರ ಜಿರೋಬೆ ಮಾತನಾಡಿ, ಮಗುವಿನಂತಹ ಮನಸ್ಸು ಇರುವ ಶ್ರೀಗಳ ದೇಹ ಮಾತ್ರ ನಮ್ಮಿಂದ ದೂರವಾಗಿದೆ. ಅವರು ಮಾಡಿರುವ ಉತ್ತಮ ಕಾರ್ಯಗಳು ಭೂಮಂಡಲ ಇರುವ ತನಕ ಶಾಶ್ವತವಾಗಿ ಉಳಿಯುತ್ತವೆ ಎಂದರು.
ಪ್ರಕಾಶ ಘೂಳೆ, ನಾಗನಾಥ ಚಿಟಗೀರೆ, ಕೀರಣ ಉಪ್ಪೆ, ಚಂದ್ರಕಾಂತ ನಿರ್ಮಳೆ, ಸಿದ್ದು ಚಟ್ನಾಳ, ಶಿವರಾಜ ಅಲ್ಮಾಜೆ ಹಾಗೂ ಇನ್ನಿತರ ಸಂಘ ಸಂಸ್ಥೆಯ ಮುಖಂಡರು ಶ್ರೀಗಳ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದರು.