ಸೊಲ್ಲಾಪುರ: ಸೊಲ್ಲಾಪುರ ಮತ ಕ್ಷೇತ್ರದಲ್ಲಿ ಲೋಕಸಭೆ ಚುನಾವಣೆ ರಂಗೇರುತ್ತಿದ್ದು, ಬಿಜೆಪಿ ಅಭ್ಯರ್ಥಿಯಾಗಿ ಕನ್ನಡಿಗ ಗೌಡಗಾಂವ್ ಮಠದ ಪೂಜ್ಯ ಡಾ| ಜಯಸಿದ್ಧೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳು ಜಿಲ್ಲಾಧಿಕಾರಿ ಡಾ| ರಾಜೇಂದ್ರ ಭೋಸ್ಲೆ ಅವರಿಗೆ ನಾಮಪತ್ರ ಸಲ್ಲಿಸಿದ್ದಾರೆ.
ಈ ಸಂದರ್ಭದಲ್ಲಿ ಸಹಕಾರ ಸಚಿವ ಸುಭಾಷ್ ದೇಶು¾ಖ್, ಜಿಲ್ಲಾ ಉಸ್ತುವಾರಿ ಸಚಿವ ವಿಜಯ ಕುಮಾರ್ ದೇಶು¾ಖ್, ಮಾಜಿ ಸಚಿವ ಉತ್ತಮ ಪ್ರಕಾಶ ಖಂದಾರೆ ಮತ್ತು ಶಿವಸೇನಾ ಶಾಸಕಿ ನೀಲಮ್ ಗೋಹೆì ಉಪಸ್ಥಿತರಿದ್ದರು. ಸೊಲ್ಲಾಪುರ ಲೋಕಸಭೆ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿ ಕೇಂದ್ರದ ಮಾಜಿ ಗೃಹ ಸಚಿವ ಸುಶೀಲ್‌ಕುಮಾರ ಶಿಂಧೆ, ಬಿಜೆಪಿ ಅಭ್ಯರ್ಥಿಯಾಗಿ ಗೌಡಗಾಂವ್ ಮಠದ ಪೂಜ್ಯ ಡಾ| ಜಯಸಿದ್ಧೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳು ಹಾಗೂ ಬಹುಜನ ಆಘಾಡಿ ಪಕ್ಷದ ಅಭ್ಯರ್ಥಿಯಾಗಿ ಡಾ| ಪ್ರಕಾಶ ಅಂಬೇಡಕರ್ ಅವರು ಚುನಾವಣೆ ಸ್ಪರ್ಧಿಸುತ್ತಿದ್ದಾರೆ.
ಕಳೆದ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಸುಶೀಲ್‌ಕುಮಾರ ಶಿಂಧೆ ಮತ್ತು ಬಿಜೆಪಿಯಿಂದ ನ್ಯಾಯವಾದಿ ಶರದ್ ಬನ್ಸೋಡೆ ಇವರಿಬ್ಬರ ನಡುವೆ ಪೈಪೋಟಿ ನಡೆದಿತ್ತು. ನರೇಂದ್ರ ಮೋದಿ ಅವರ ಅಲೆಯಿಂದ ಬಿಜೆಪಿ ಅಭ್ಯರ್ಥಿ ಶರದ್ ಬನ್ಸೋಡೆ ಅವರು ಗೆಲುವು ಸಾಧಿಸುವ ಮೂಲಕ ಕಾಂಗ್ರೆಸ್ ಅಭ್ಯರ್ಥಿ ಸುಶೀಲ್‌ಕುಮಾರ ಶಿಂಧೆ ಅವರನ್ನು ಪರಾಭವಗೋಳಿಸಿದ್ದರು.
ಆದರೆ ಈ ಬಾರಿ ಹಾಲಿ ಸಂಸದ ಶರದ್ ಬನ್ಸೋಡೆ ಅವರನ್ನು ಕೈಬಿಟ್ಟು ಗೌಡಗಾಂವ್ ಮಠದ ಡಾ| ಜಯಸಿದ್ಧೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳಿಗೆ ಬಿಜೆಪಿ ಟಿಕೇಟ್ ನೀಡಲಾಗಿದೆ. ಬಿಜೆಪಿ, ಕಾಂಗ್ರೆಸ್ ಮತ್ತು ಬಹುಜನ ಆಘಾಡಿ ಪಕ್ಷದ 3 ಅಭ್ಯರ್ಥಿಗಳ ಮಧ್ಯೆ ಪೈಪೋಟಿ ನಡೆಯುತ್ತಿದ್ದು, ಜಾತಿ ಲೆಕ್ಕಾಚಾರದ ಮೇಲೆ ಚುನಾವಣೆ ರಂಗೇರುತ್ತಿದೆ.
ಅಲ್ಲದೆ ಇದೇ ಮೊದಲ ಬಾರಿಗೆ ಸೊಲ್ಲಾಪುರ ಮತಕ್ಷೇತ್ರದಲ್ಲಿ ಬಿಜೆಯಿಂದ ಡಾ| ಜಯಸಿದ್ಧೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳು ಹಾಗೂ ಬಹುಜನ ಆಘಾಡಿ ಪಕ್ಷದಿಂದ ಡಾ| ಪ್ರಕಾಶ ಅಂಬೇಡ್ಕರ್ ಅವರು ಚುನಾವಣೆ ಸ್ಪರ್ಧಿಸುತ್ತಿರುವುದರಿಂದ ಕಾಂಗ್ರೆಸ್ ಅಭ್ಯರ್ಥಿಯಾದ ಕೇಂದ್ರದ ಮಾಜಿ ಗೃಹ ಸಚಿವ ಸುಶೀಲಕುಮಾರ ಶಿಂಧೆ ಅವರಿಗೆ ಭಾರೀ ತಲೇನೋವಾಗಿ ಪರಿಣಮಿಸಿದೆ.
ಮತದಾರರ ಸಂಖ್ಯೆ
ಸೊಲ್ಲಾಪುರ ಲೋಕಸಭಾ ಕ್ಷೇತ್ರದಲ್ಲಿ ಅಕ್ಕಲ್‌ಕೋಟೆ, ಸೊಲ್ಲಾಪುರ ಶಹರ ಮತ್ತು ಸೊಲ್ಲಾಪುರ ಮಧ್ಯ, ದಕ್ಷಿಣ ಸೊಲ್ಲಾಪುರ, ಮೊಹೊಳ, ಪಂಢರಾಪುರ ಹೀಗೆ 6 ವಿಧಾನಸಭಾ ಮತ ಕ್ಷೇತ್ರಗಳಿವೆ. ಸೊಲ್ಲಾಪುರ ಲೋಕಸಭೆ ಮತ ಕ್ಷೇತ್ರದಲ್ಲಿ ಸುಮಾರು 16 ಲಕ್ಷ 99 ಸಾವಿರ ಮತದಾರರಿದ್ದಾರೆ. ಇದರಲ್ಲಿ 8 ಲಕ್ಷ 97 ಸಾವಿರ ಪುರುಷರು ಮತ್ತು 8 ಲಕ್ಷ 82 ಸಾವಿರ ಮಹಿಳಾ ಮತದಾರರಿದ್ದಾರೆ.