Advertisement

“ಬಾಲವನದಲ್ಲಿ ಕಾರಂತ ಅಧ್ಯಯನ ಕೇಂದ್ರ’

12:01 AM Jun 22, 2020 | Sriram |

ಪುತ್ತೂರು: ಮಂಗಳೂರು ವಿ.ವಿ.ಯಲ್ಲಿನ ಡಾ| ಶಿವರಾಮ ಕಾರಂತ ಅಧ್ಯಯನ ಕೇಂದ್ರ ಕಳೆದ ನಾಲ್ಕು ವರ್ಷ ಗಳಿಂದ ಚಟುವಟಿಕೆ ರಹಿತವಾಗಿರುವ ಕಾರಣ ಅದನ್ನು ಕಾರಂತರ ಕರ್ಮಭೂಮಿ ಬಾಲವನಕ್ಕೆ ಸ್ಥಳಾಂತರಿಸುವುದು ಅಥವಾ ಹೊಸದಾಗಿ ಅಧ್ಯಯನ ಕೇಂದ್ರ ಸ್ಥಾಪಿಸಲು ಆದ್ಯತೆ ನೀಡುವುದಾಗಿ ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.

Advertisement

ಬಾಲವನವನ್ನು ನಿರಂತರ ಚಟುವಟಿಕೆ ಕೇಂದ್ರವನ್ನಾಗಿಸುವ ಕುರಿತಂತೆ ಸಚಿವರ ನೇತೃತ್ವದಲ್ಲಿ ಸಾಹಿತ್ಯ, ಸಾಂಸ್ಕೃತಿಕ ಕ್ಷೇತ್ರದ ಪ್ರಮುಖರೊಂದಿಗೆ ಜೂ. 21ರಂದು ಪರ್ಲಡ್ಕ ಬಾಲವನದಲ್ಲಿ ಸಭೆ ನಡೆಯಿತು.

ಸಾಹಿತಿ, ಉಪನ್ಯಾಸಕ ಡಾ| ನರೇಂದ್ರ ರೈ ದೇರ್ಲ ಮಾತನಾಡಿ, ಬಾಲವನದಲ್ಲಿ ಅಧ್ಯಯನ ಕೇಂದ್ರ ಸ್ಥಾಪನೆಯಿಂದ ನಿರಂತರ ಚಟುವಟಿಕೆ ಸಾಧ್ಯವಿದೆ ಎಂದರು. ಇದಕ್ಕೆ ಸಚಿವರು ಪ್ರತಿಕ್ರಿಯಿಸಿ, ಈ ಬಗ್ಗೆ ಗಮನ ಹರಿಸುತ್ತೇನೆ ಎಂದರು.

ಯಕ್ಷಕೂಟ, ಸಾಹಿತ್ಯ ಚಟುವಟಿಕೆ ಆರಂಭ
ಬಾಲವನದಲ್ಲಿ ಪ್ರತಿ ತಿಂಗಳು ಕಾರ್ಯ ಕ್ರಮ ನಡೆಸುವ ಉದ್ದೇಶವಿದ್ದು, ಜುಲೈ ಪ್ರಥಮ ರವಿವಾರ ಚಾಲನೆ ನೀಡಲಾಗು ವುದು ಎಂದು ಸಚಿವರು ಹೇಳಿದರು.
ಶಾಸಕ ಸಂಜೀವ ಮಠಂದೂರು ಮಾತನಾಡಿ, ಬಾಲವನದ ಅಭಿವೃದ್ಧಿಗೆ ಪೂರಕವಾಗಿ ಜೂ. 25ರಂದು ಬೆಂಗ ಳೂರಿನಲ್ಲಿ ಸಭೆ ನಡೆಯಲಿದೆ ಎಂದರು.

ಪುತ್ತೂರಿಗೆ ರಂಗಾಯಣ
ರಂಗ ಕಲಾವಿದ ಜೀವನ್‌ರಾಂ ಸುಳ್ಯ ಮಾತನಾಡಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಚಿವರು ಈ ಹಿಂದಿನ ಸಭೆ ಯಲ್ಲಿ ಪುತ್ತೂರಿಗೆ ಐದನೇ ರಂಗಾಯಣ ನೀಡುವ ಪ್ರಸ್ತಾವನೆ ಮಾಡಿದ್ದಾರೆ. ಈ ಬಗ್ಗೆ ಇನ್ನೆರೆಡು ದಿನಗಳಲ್ಲಿ ಬೆಂಗಳೂರಿನಲ್ಲಿ ಸಭೆ ನಡೆಯಲಿದೆ ಎಂದರು.

Advertisement

ಜಾನಪದ ಅಧ್ಯಯನಕಾರ ಡಾ| ಸುಂದರ ಕೇನಾಜೆ ಮಾತನಾಡಿ, ಯಕ್ಷಗಾನ ಪಠ್ಯ ಇದ್ದು, ಬಾಲವನದಿಂದಲೇ ಅದಕ್ಕೆ ಚಾಲನೆ ಸಿಕ್ಕರೆ ಕಾರಂತರ ಆಶಯಕ್ಕೂ ಉತ್ತೇಜನ ನೀಡಿದಂತಾಗುತ್ತದೆ ಎಂದರು. ರಾಜ್ಯ ಅರೆಭಾಷೆ ಅಕಾಡೆಮಿ ಅಧ್ಯಕ್ಷ ಲಕ್ಷ್ಮೀನಾರಾಯಣ ಕಜೆಗದ್ದೆ, ಮೂಲ ಸೌಕರ್ಯ ಒದಗಿಸಬೇಕು ಎಂದರು.

ಉಪನ್ಯಾಸಕ ಎಚ್‌.ಜಿ. ಶ್ರೀಧರ, ರಾಜ್ಯ ಸಂಸ್ಕಾರ ಭಾರತೀ ಉಪಾಧ್ಯಕ್ಷ ಚಂದ್ರಶೇಖರ, ಉಪನ್ಯಾಸಕ ಡಾ| ಶ್ರೀಶ ಕುಮಾರ್‌, ಕಸಪಾ ತಾ| ಅಧ್ಯಕ್ಷ ಐತ್ತಪ್ಪ ನಾಯ್ಕ, ಕರ್ನಾಟಕ ಸಂಘದ ಪುರಂದರ ಭಟ್‌, ಸುಧಾನ ವಸತಿ ಶಾಲೆಯ ವಿಜಯ ಹಾರ್ವಿನ್‌, ದತ್ತಾತ್ರೇಯ ರಾವ್‌, ಸುಬ್ರಾಯ ಅಮ್ಮಣ್ಣಾಯ, ಉಪನ್ಯಾಸಕ ಚಂದ್ರಗಿರಿ ವರದರಾಜ್‌, ಕ್ಸೇವಿಯರ್‌ ಡಿ’ಸೋಜಾ, ವಸಂತ ಭಟ್‌, ಶೋಭಿತಾ ಸತೀಶ್‌, ಆಶಾ ಬೆಳ್ಳಾರೆ, ಐ.ಕೆ. ಬೊಳ್ವಾರು ಅಭಿಪ್ರಾಯಗಳನ್ನು ವ್ಯಕ್ತಪಡಿಸಿದರು.

ಸಹಾಯಕ ಆಯುಕ್ತ ಡಾ| ಯತೀಶ್‌ ಉಳ್ಳಾಲ್‌, ತಹಶೀಲ್ದಾರ್‌ ರಮೇಶ್‌ ಬಾಬು, ತಾಲೂಕು ಪಂಚಾಯತ್‌ ಸ್ಥಾಯೀ ಸಮಿತಿ ಅಧ್ಯಕ್ಷ ರಾಧಾಕೃಷ್ಣ ಆಳ್ವ, ಸಾಹಿತಿ ವಿ.ಬಿ. ಅರ್ತಿಕಜೆ ಮತ್ತಿತರರು ಸಭೆಯಲ್ಲಿ ಉಪಸ್ಥಿತರಿದ್ದರು.

ಉಚಿತ ಪ್ರವೇಶ; ಅಧಿಕಾರಿ ನೇಮಕ
ಬಾಲವನಕ್ಕೆ ಬರುವ 15 ವರ್ಷ ಪ್ರಾಯದೊಳಗಿನ ಮಕ್ಕಳಿಗೆ ಉಚಿತ ಪ್ರವೇಶ, ಸ್ಥಳೀಯರಿಗೆ ಪಾಸ್‌, ಇತರರಿಗೆ ನಿರ್ಧಿಷ್ಟ ಶುಲ್ಕ ವಿಧಿಸುವ ಬಗ್ಗೆ ಚಿಂತನೆ ನಡೆದಿದೆ. ಜಾನಪದ ಅಧ್ಯಯನಕಾರ, ಶಿಕ್ಷಕ ಡಾ|ಸುಂದರ ಕೇನಾಜೆ ಅವರನ್ನು ಆಡಳಿತಾಧಿಕಾರಿಯನ್ನಾಗಿ ನಿಯಕ್ತಿಗೊಳಿಸಲು ಡಿಸಿಗೆ ಸೂಚನೆ ನೀಡಲಾಗಿದೆ ಎಂದು ಸಚಿವರು ಹೇಳಿದರು.

ಸಮ್ಮಾನ
ಶಿವರಾಮ ಕಾರಂತರ ಕಾರು ಚಾಲಕರಾಗಿ ನಾಲ್ಕು ವರ್ಷಗಳ ಕಾಲ ಕಾರ್ಯ ನಿರ್ವಹಿಸಿದ್ದ ಶತಾಯುಷಿ ಮೋನಪ್ಪ ಗೌಡ ಅವರನ್ನು ಸಚಿವ ಕೋಟ ಶ್ರೀನಿವಾಸ ಪೂಜಾರಿ ಸಮ್ಮಾನಿಸಿದರು.

 

Advertisement

Udayavani is now on Telegram. Click here to join our channel and stay updated with the latest news.

Next