ಕೊರೊನಾ 2ನೇ ಅಲೆ ಮೊದಲನೇ ಅಲೆಗಿಂತ ವೇಗವಾಗಿ ಹರಡುತ್ತಿದೆ. ತಜ್ಞರ ಪ್ರಕಾರ ಮೇ ಅಂತ್ಯದವರೆಗೂ ಇದರ ತೀವ್ರತೆ ತಗ್ಗುವ ಸಾಧ್ಯತೆಗಳಿಲ್ಲ. ಸದ್ಯದ ಪರಿಸ್ಥಿತಿಯಲ್ಲಿ ಕೋವಿಡ್ ವಿಭಾಗದಲ್ಲಿ ಕೆಲಸ ಮಾಡುತ್ತಿರುವ ಆರೋಗ್ಯ ಸಿಬಂದಿ ದೇವರಿಗಿಂತ ಮಿಗಿಲೆಂದರೆ ತಪ್ಪಲ್ಲ. ತಮ್ಮ ಜೀವದ ಹಂಗು ತೊರೆದು ರೋಗಿಗಳ ಜೀವ ರಕ್ಷಿಸುತ್ತಿದ್ದಾರೆ. ಅವರ ಪರಿಸ್ಥಿತಿ ಬಗ್ಗೆ ಕಿಂಚಿತ್ತೂ ಯೋಚಿಸದೆ ಬೇಜವಾಬ್ದಾರಿಯಿಂದ ವರ್ತಿಸುವುದು ಸರಿಯಲ್ಲ. ಆರೋಗ್ಯ ಸಿಬಂದಿಗೂ ಕುಟುಂಬಗಳಿವೆ. ವೈಯಕ್ತಿಕ ಬದುಕಿದೆ. ಅವರ ತಾಳ್ಮೆ ಪರೀಕ್ಷಿಸುವುದು ಸರಿಯಲ್ಲ. ಅವರೇನಾದರೂ ಸೇವೆಯಿಂದ ವಿಮುಖರಾದರೆ ಪರಿಸ್ಥಿತಿ ನಿಯಂತ್ರಿಸಲು ದೇವರಿಂದಲೂ ಸಾಧ್ಯವಿಲ್ಲ.
ಜನ ಎಲ್ಲಿಯವರೆಗೂ ಸಹಕರಿಸುವುದಿಲ್ಲವೋ ಅಲ್ಲಿಯವರೆಗೂ ಸೋಂಕು ನಿಯಂತ್ರಣ ಕಷ್ಟ ಸಾಧ್ಯ. ಸರಕಾರದ ಮುಂದಿರುವ ಏಕೈಕ ಆಯ್ಕೆ ಲಾಕ್‌ಡೌನ್. ಈ ಹಿಂದೆ ಲಾಕ್‌ಡೌನ್ ಮಾಡಿದ್ದರಿಂದ ಏನೆಲ್ಲ ಸಮಸ್ಯೆ ಎದುರಿಸಿದ್ದೇವೆ ಎಂಬುದನ್ನು ಜನ ಮನಗಾಣಬೇಕಿದೆ. ನೈಟ್ ಕರ್ಫ್ಯೂನಿಂದ ಶೇ.10-15ರಷ್ಟು ಸೋಂಕು ನಿಯಂತ್ರಣ ಗೊಂಡಿರಬಹುದು. ಆದರೆ ಸಂಪೂರ್ಣ ಹತೋಟಿಗೆ ಬಂದಿಲ್ಲ. ಹೀಗಾಗಿ ಲಾಕ್‌ಡೌನ್ ಜಾರಿ ಮಾಡುವಂಥ ಸ್ಥಿತಿ ತಂದುಕೊಳ್ಳದೇ ರೋಗ ನಿಯಂತ್ರಣಕ್ಕೆ ಎಲ್ಲರೂ ಸಹಕರಿಸಬೇಕು.
ಸೋಂಕಿತರ ಸಂಖ್ಯೆ ನಿತ್ಯ ಲಕ್ಷ ಗಡಿ ದಾಡುತ್ತಿದ್ದು, ಪರಿಸ್ಥಿತಿ ಸರಕಾರದ ಕೈ ಮೀರುವ ಮುನ್ನವೇ ಎಚ್ಚೆತ್ತುಕೊಳ್ಳಬೇಕಿದೆ. ದೇಶದ ನಾನಾ ಕಡೆ ಬೆಡ್‌ಗಳು ಸಿಗುತ್ತಿಲ್ಲ. ಆಕ್ಸಿಜನ್ ಕೊರತೆಯಾಗುತ್ತಿದೆ. ಬಿಡುವಿಲ್ಲದ ಕೆಲಸ ಮಾಡಿದರೆ ಆರೋಗ್ಯ ಇಲಾಖೆ ಸಿಬಂದಿಯೂ ಒತ್ತಡಕ್ಕೆ ಸಿಲುಕುವ ಸಾಧ್ಯತೆಗಳಿವೆ. ಕೇವಲ ಕೋವಿಡ್ ಮಾತ್ರವಲ್ಲದೇ ಬೇರೆ-ಬೇರೆ ಕಾಯಿಲೆಗಳಿಂದ ಬಳಲುವ ರೋಗಿಗಳಿಗೂ ಚಿಕಿತ್ಸೆ ನೀಡಬೇಕಿರುವ ಕಾರಣ ವೈದ್ಯಕೀಯ ಸಿಬಂದಿಗೂ ಸಾಕಷ್ಟು ಒತ್ತಡವಿದೆ.
ಸಂಪರ್ಕದಿಂದಲೇ ಸೋಂಕು ವಿಸ್ತರಿಸುತ್ತಿರುವ ಕಾರಣ ಅದನ್ನು ತಡೆಯುವುದೇ ಸರಕಾರದ ಮುಂದಿರುವ ಸವಾಲು. ಹೀಗಾಗಿ ರಾಜ್ಯದಲ್ಲಿ ಮಾಸ್ಕ್ ರೂಲ್ಸ್ ಜಾರಿಗೆ ತರುವಂತೆ ಸಲಹೆ ನೀಡಿದ್ದೇನೆ. ದಂಡ ವಿ ಧಿಸಿದರೂ ಕಡ್ಡಾಯ ಮಾಸ್ಕ್ ಬಳಕೆಗೆ ಒತ್ತು ನೀಡಬೇಕು. ಅಂದಾಗ ಮಾತ್ರ ಸೋಂಕು ಹರಡುವಿಕೆ ತಡೆಯಬಹುದು. ಜತೆಗೆ ಸಾಮಾಜಿಕ ಅಂತರ ಕಾಯ್ದುಕೊಳ್ಳುವ ನಿಟ್ಟಿನಲ್ಲಿ ಸಭೆ-ಸಮಾರಂಭಗಳ ನಿಷೇಧಿಸಬೇಕು.
ನನ್ನ ಕ್ಷೇತ್ರದ ಜನರ ಹಿತದೃಷ್ಟಿಯಿಂದ ಆರೋಗ್ಯ ಇಲಾಖೆ ಅಧಿ ಕಾರಿಗಳ ಜತೆ ನಿರಂತರ ಸಂಪರ್ಕದಲ್ಲಿದ್ದೇನೆ. ಮೂರು ದಿನಗಳ ಹಿಂದೆ 250 ವೈಲ್ ರೆಮ್‌ಡೆಸಿವಿಯರ್ ಲಸಿಕೆ ತರಿಸಲಾಗಿತ್ತು. ಎ.21ಕ್ಕೆ ಲಸಿಕೆ ಸುಲಭಕ್ಕೆ ಲಭ್ಯವಾಗುವ ಸಾಧ್ಯತೆಗಳಿವೆ. ಆದರೂ ಡ್ರಗ್ ಕಂಟ್ರೋಲರ್ ಆಫ್ ಇಂಡಿಯಾ ರಾಜ್ಯದ ಮುಖ್ಯಸ್ಥರ ಜತೆ ಮಾತುಕತೆ ನಡೆಸಿದ್ದು, ಕೂಡಲೇ 500 ವೈಲ್ ಬಿಡುಗಡೆ ಮಾಡುವಂತೆ ಮನವಿ ಮಾಡಿದ್ದೇನೆ. ಕೋವಿಡ್ ವ್ಯಾಕ್ಸಿನ್ ಪಡೆಯಲು ಜನ ಹಿಂದೇಟು ಹಾಕುತ್ತಿದ್ದು, ನಿರ್ಭಯದಿಂದ ಲಸಿಕೆ ಪಡೆಯಬೇಕು.