ಬೀದರ: ಕಲ್ಯಾಣ ಕರ್ನಾಟಕದ ಹೆಮ್ಮೆ ಎನಿಸಿಕೊಂಡಿ ರುವ ವಚನ ವಿಜಯೋತ್ಸವದ ಅಂಗವಾಗಿ ಬಸವ ಸೇವಾ ಪ್ರತಿಷ್ಠಾನದಿಂದ ನೀಡುವ 2020ನೇ ಸಾಲಿನ ಗುರು ಬಸವ ಪುರಸ್ಕಾರ’ಕ್ಕೆ ಈ ಬಾರಿ ಖ್ಯಾತ ವಿಜ್ಞಾನಿ, ಇಸ್ರೋ ಅಧ್ಯಕ್ಷ ಡಾ.ಕೆ.ಶಿವನ್ ಭಾಜನರಾಗಿದ್ದಾರೆ. ನಗರದ ಬಸವಗಿರಿ ಪರಿಸರದಲ್ಲಿ ಫೆ.7ರಿಂದ 3 ದಿನ ಜರುಗುವ ವಚನ ವಿಜಯೋತ್ಸವ-2020ದಲ್ಲಿ ಡಾ. ಶಿವನ್ ಅವರಿಗೆ ಪ್ರಶಸ್ತಿ ಪ್ರದಾನ ಮಾಡಲಾಗುವುದು.
ಪುರಸ್ಕಾರವು 50 ಸಾವಿರ ರೂ. ನಗದು ಮತ್ತು ಫಲಕ ಒಳಗೊಂಡಿದೆ. ಬಾಹ್ಯಾಕಾಶ ಸಂಶೋಧನೆಯಲ್ಲಿನ ಅಪೂರ್ವ ಸಾಧನೆ ಹಿನ್ನೆಲೆಯಲ್ಲಿ ವಿಜ್ಞಾನಿ ಡಾ|ಶಿವನ್ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ಪ್ರತಿಷ್ಠಾನದ ಅಕ್ಕ ಅನ್ನಪೂರ್ಣ ತಾಯಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ವೀರಮಾತೆ ಅಕ್ಕನಾಗಲಾಂಬಿಕೆ ಪುರಸ್ಕಾರಕ್ಕೆ ಪವನಾರ ಸ್ವಾತಂತ್ರ ಹೋರಾಟಗಾರ್ತಿ ಚೆನ್ನಮ್ಮ ಹಳ್ಳಿಕೇರಿ, ಕಾಯಕವೀರ ದಾಸೋಹಿ ಶರಣ ಪುರಸ್ಕಾರಕ್ಕೆ ಬೆಂಗಳೂರಿನ ಆಟೋ ರಾಜಾ ಮತ್ತು ಚನ್ನಬಸವಣ್ಣ ಪ್ರತಿಭಾ ಪುರಸ್ಕಾರಕ್ಕೆ ಯೋಗದಲ್ಲಿ ಗಿನ್ನಿಸ್ ದಾಖಲೆ ಮಾಡಿರುವ ಮೈಸೂರಿನ ಖುಷಿ ಹೇಮಚಂದ್ರ ಅವರಿಗೆ ಪ್ರದಾನ ಮಾಡಲಾಗುವುದು. ಈ ಪುರಸ್ಕಾರಗಳು ತಲಾ 25 ಸಾವಿರ ರೂ. ನಗದು, ಫಲಕ ಒಳಗೊಂಡಿವೆ.
ಈವರೆಗೆ ಗುರು ಬಸವ ಪ್ರಶಸ್ತಿಯನ್ನು ಕೇಂದ್ರ ಮಾಜಿ ಗೃಹ ಸಚಿವ ಡಾ. ಬೂಟಾಸಿಂಗ್, ಮಾಜಿ ಸಿಎಂ ದಿ. ಧರ್ಮಸಿಂಗ್, ಸಾಮಾಜಿಕ ಕಾರ್ಯಕರ್ತ ಅಣ್ಣಾ ಹಜಾರೆ, ಮೂಢನಂಬಿಕೆ ವಿರೋಧಿ ಹೋರಾಟದಲ್ಲಿ ಹುತಾತ್ಮರಾದ ನರೇಂದ್ರ ದಾಬೋಲಕರ, ನಿವೃತ್ತ ನ್ಯಾಯ ಮೂರ್ತಿ ಡಾ. ಶಿವರಾಜ ಪಾಟೀಲ, ಮಹಾರಾಷ್ಟ್ರದ ಖ್ಯಾತ ಸಮಾಜ ಸೇವಕ ಡಾ. ಪ್ರಕಾಶ ಆಮ್ಟೆ ಮತ್ತು ಡಾ. ಮಂದಾಕಿನಿ ದಂಪತಿ, ಖ್ಯಾತ ನಟ ನಾನಾ ಪಾಟೇಕರ್ ಮತ್ತು ಡಾ. ಖಾದರ್‌ಗೆ ಪ್ರದಾನ ಮಾಡಲಾಗಿದೆ.