Advertisement

ಸಿದ್ಧಗಂಗಾ ಶ್ರೀಗೆ ಭಾರತರತ್ನ ನೀಡಬೇಕಿತ್ತು

12:30 AM Jan 27, 2019 | |

ತ್ರಿವಿಧ ದಾಸೋಹಿ ತುಮಕೂರಿನ ಸಿದ್ಧಗಂಗಾ ಮಠದ ಲಿಂಗೈಕ್ಯ ಡಾ.ಶಿವಕುಮಾರ ಸ್ವಾಮೀಜಿಯವರಿಗೆ ಭಾರತರತ್ನ ಘೋಷಣೆ ಮಾಡದಿರುವುದಕ್ಕೆ ಭಕ್ತ ವಲಯದಲ್ಲಿ ಅಸಮಾಧಾನ ಒಡಮೂಡಿದೆ. ಶ್ರೀಗಳಿಗೆ ಈ ಬಾರಿಯಾದರೂ ಪ್ರಶಸ್ತಿ ನೀಡಬೇಕಿತ್ತು ಎಂಬುದು ನಾಡಿನೆಲ್ಲೆಡೆಯಿಂದ ಕೇಳಿ ಬರುತ್ತಿರುವ ಕೂಗು.

Advertisement

ಲೋಕಸಭಾ ಅಧಿವೇಶನದಲ್ಲಿ ಪ್ರಸ್ತಾಪವಾಗಿತ್ತು: ಉಗ್ರಪ್ಪ
ಬಳ್ಳಾರಿ
: ತುಮಕೂರಿನ ಸಿದ್ಧಗಂಗಾ ಮಠದ ಶ್ರೀ ಶಿವಕುಮಾರ ಸ್ವಾಮೀಜಿಗಳಿಗೆ ‘ಭಾರತ ರತ್ನ’ ನೀಡುವಂತೆ ಕಳೆದ ತಿಂಗಳು ನಡೆದ ಲೋಕಸಭೆ ಅಧಿವೇಶನದಲ್ಲಿ ಪ್ರಸ್ತಾಪಿಸಲಾಗಿತ್ತು. ಆದರೆ, ಕೊನೆಯ ದಿನವಾದ್ದರಿಂದ ವಿಷಯ ಚರ್ಚೆಗೆ ಬರಲಿಲ್ಲ ಎಂದು ಸಂಸದ ವಿ.ಎಸ್‌.ಉಗ್ರಪ್ಪ ತಿಳಿಸಿದರು. ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಶಿವಕುಮಾರ ಶ್ರೀಗಳ ಸೇವೆ ಅವಿಸ್ಮರಣೀಯವಾದದ್ದು. ಅವರಿಗೆ ಭಾರತ ರತ್ನ ನೀಡಬೇಕೆಂಬುದು ರಾಜ್ಯದ ಜನರ, ಸರ್ಕಾರದ, ಪಕ್ಷಾತೀತವಾಗಿ ಎಲ್ಲ ಸಂಸದರ ಅಪೇಕ್ಷೆಯಾಗಿತ್ತು. ಹಾಗಾಗಿ, ಈ ವಿಷಯವನ್ನು ಲೋಕಸಭೆಯ ಅಧಿವೇಶನದಲ್ಲಿ ಪ್ರಸ್ತಾಪಿಸಲು ಕಳೆದ ತಿಂಗಳು ನಡೆದ ಅಧಿವೇಶನದ ಕೊನೆಯ ದಿನ ಶೂನ್ಯವೇಳೆಯಲ್ಲಿ ನೋಂದಣಿ ಮಾಡಿಸಲಾಗಿತ್ತು. ಆದರೆ, ವಿಷಯ ಚರ್ಚೆಗೆ ಬರಲಿಲ್ಲ ಎಂದು ವಿಷಾದ ವ್ಯಕ್ತಪಡಿಸಿದರು. ಶಿವಕುಮಾರ ಶ್ರೀಗಳ ತ್ರಿವಿಧ ದಾಸೋಹ ಸೇವೆಗೆ ‘ಭಾರತ ರತ್ನ’ ಪ್ರಶಸ್ತಿಯೂ ಸಮಾನವಲ್ಲ. ಸ್ವಾಮೀಜಿಗಳಿಗೆ ಪ್ರಶಸ್ತಿ ನೀಡುವುದರಿಂದ ಭಾರತ ರತ್ನ ಪ್ರಶಸ್ತಿಗೇ ಮೆರಗು ಬರುತ್ತದೆ. ಅಂತಹ ಶ್ರೀಗಳ ಸೇವೆಯನ್ನು ಗುರುತಿಸಿ ಕೇಂದ್ರ ಸರ್ಕಾರ ಕೂಡಲೇ ಭಾರತ ರತ್ನ ನೀಡಿದರೆ, ಅದು ಬೇರೆಯವರಿಗೆ ಪ್ರೇರಣೆಯಾಗಲಿದೆ. ಹಾಗಾಗಿ, ಕೇಂದ್ರ ಸರ್ಕಾರ ರಾಜ್ಯದ ಜನರ ಭಾವನೆಗಳ ಜತೆಗೆ ಚೆಲ್ಲಾಟವಾಡದೆ, ಮೀನಾಮೇಷ ಎಣಿಸದೆ ಕೂಡಲೇ ಭಾರತರತ್ನ ನೀಡಬೇಕು ಎಂದು ಒತ್ತಾಯಿಸಿದರು.

ಭಾರತ ರತ್ನ: ಮಾತೆ ಮಹಾದೇವಿ
ಕೂಡಲಸಂಗಮ
: ಕೇಂದ್ರ ಸರ್ಕಾರ ಆರ್‌ಎಸ್‌ಎಸ್‌ ಓಲೈಸಿದವರಿಗೆ ಮಾತ್ರ ‘ಭಾರತ ರತ್ನ’ ಪ್ರಶಸ್ತಿ ಘೋಷಣೆ ಮಾಡಿದೆ ಎಂದು ಕೂಡಲಸಂಗಮ ಬಸವ ಧರ್ಮ ಪೀಠದ ಡಾ| ಮಾತೆ ಮಹಾದೇವಿ ಹೇಳಿದ್ದಾರೆ. ಈ ಕುರಿತು ಪ್ರಕಟಣೆ ನೀಡಿರುವ ಅವರು, ಈ ಬಾರಿ ಮಾಜಿ ರಾಷ್ಟ್ರಪತಿ ಪ್ರಣವ್‌ ಮುಖರ್ಜಿ ಹಾಗೂ ಜನಸಂಘದ ಸಂಸ್ಥಾಪಕ ನಾನಾಜಿ ದೇಶಮುಖ್‌ ಮತ್ತು ಗಾಯಕ ಡಾ|ಭೂಪೆನ್‌ ಹಜಾರಿಕಾ ಅವರಿಗೆ ಮರಣೋತ್ತರವಾಗಿ ಪ್ರಶಸ್ತಿ ಘೋಷಿಸಿದೆ. ಈ ಮೂವರು ಕೂಡಾ ಆರ್‌ಎಸ್‌ಎಸ್‌ ಬೆಂಬಲಿಗರಾಗಿದ್ದಾರೆ. ತುಮಕೂರಿನ ಸಿದ್ಧಗಂಗಾ ಶ್ರೀಗಳು ಜೀವನ ಪರ್ಯಂತ ಜಾತಿ-ಮತ, ಪಂಥ ಬೇಧವಿಲ್ಲದೆ ಎಲ್ಲ ವರ್ಗದ ಮಕ್ಕಳಿಗೆ ಅನ್ನ ಪ್ರಸಾದದೊಂದಿಗೆ ಸಂಸ್ಕಾರ ಕೊಟ್ಟು, ಶಿಕ್ಷಣದ ಮೂಲಕ ಸಾವಿರಾರು ಜನರ ಬದುಕು ರೂಪಿಸಿದ್ದಾರೆ. ಇವರ ಸೇವೆಯನ್ನು ಕಡೆಗಣಿಸಿ ಕೇಂದ್ರ ಸರ್ಕಾರ ಆರ್‌ಎಸ್‌ಎಸ್‌ ಓಲೈಸಿದವರಿಗೆ ಪ್ರಶಸ್ತಿ ಘೋಷಿಸಿದ್ದು ಖಂಡನೀಯ ಹಾಗೂ ವಿಷಾದನೀಯ ಎಂದಿದ್ದಾರೆ. ಸಿದ್ಧಗಂಗಾ ಶ್ರೀಗಳು ಪ್ರಮುಖ ವಿರಕ್ತ ಮಠಾಧೀಶ, ಲಿಂಗಾಯತ ಸ್ವಾಮೀಜಿ, ಭಾರತ ರತ್ನ ಕೊಡಿ ಎಂದು ಜನರು ಒಕ್ಕೊರಲಿನಿಂದ ಕೇಳಿದರೂ ಮನ್ನಣೆ ಕೊಡದಿರುವುದು ಕೇಂದ್ರ ಸರ್ಕಾರದ ಧೋರಣೆಯನ್ನು ತೋರಿಸುತ್ತದೆ ಎಂದು ಟೀಕಿಸಿದ್ದಾರೆ.

ಪ್ರಶಸ್ತಿ ನೀಡಲು ಅವಧಿಯ ಮಾನದಂಡವಿಲ್ಲ
ಸಿದ್ಧಗಂಗಾ ಶ್ರೀಗಳಿಗೆ ‘ಭಾರತ ರತ್ನ’ ಸಿಗಲಿಲ್ಲ ಎಂಬ ಬಗ್ಗೆ ಆಕ್ರೋಶ ವ್ಯಕ್ತವಾ ಗುತ್ತಿರುವ ನಡುವೆಯೇ ಸಾಮಾಜಿಕ ಜಾಲತಾಣಗಳಲ್ಲಿ ‘ಪ್ರಶಸ್ತಿ ನೀಡಲು ಇರುವ ಅವಧಿಯ ಮಾನದಂಡ’ದ ಬಗ್ಗೆ ಪರ-ವಿರೋಧ ಚರ್ಚೆಗಳು ಆರಂಭವಾಗಿವೆ. 2015ರಲ್ಲಿ ಕೇಂದ್ರ ಸರ್ಕಾರವು ಶ್ರೀಗಳಿಗೆ ಪದ್ಮಭೂಷಣ ಪ್ರಶಸ್ತಿ ನೀಡಿ ಗೌರವಿಸಿತ್ತು. ಐದು ವರ್ಷಗಳ ಅಂತರದಲ್ಲಿ ರಾಷ್ಟ್ರದ ಅತ್ಯುನ್ನತ ಎರಡು ಪ್ರಶಸ್ತಿಗಳನ್ನು ಒಬ್ಬ ವ್ಯಕ್ತಿಗೆ ನೀಡಬಾರದು ಎಂಬ ಅಂಶ ಕಾನೂನಿನಲ್ಲಿರುವ ಕಾರಣ ಶ್ರೀಗಳಿಗೆ ಭಾರತ ರತ್ನ ನೀಡಲಿಲ್ಲ ಎನ್ನುವುದು ಕೆಲವರ ವಾದ. ಆದರೆ, ಇದನ್ನು ಒಪ್ಪದವರು, ಗಾಯಕಿ ಲತಾ ಮಂಗೇಶ್ಕರ್‌ ಅವರಿಗೆ 1999ರಲ್ಲಿ ಪದ್ಮವಿಭೂಷಣ ಗೌರವ ನೀಡಿ, 2001ರಲ್ಲಿ ಅಂದರೆ ಎರಡೇ ವರ್ಷಗಳ ಅಂತರದಲ್ಲಿ ಭಾರತ ರತ್ನ ನೀಡಿ ಗೌರವಿಸಿದ್ದು ಹೇಗೆ ಎಂದು ಪ್ರಶ್ನಿಸಿದ್ದಾರೆ.

ಈ ಗೊಂದಲಕ್ಕೆ ತೆರೆ ಎಳೆಯಬಹುದಾದ ಮಾಹಿತಿ ಇಲ್ಲಿದೆ: ಅದೇನೆಂದರೆ, ದೇಶದ ಅತ್ಯುನ್ನತ ನಾಗರಿಕ ಪ್ರಶಸ್ತಿಗಳನ್ನು ಒಬ್ಬ ವ್ಯಕ್ತಿಗೆ ನೀಡುವಾಗ ಕನಿಷ್ಠ 5 ವರ್ಷಗಳ ಅಂತರವಿರಬೇಕು(ಅಂದರೆ, ಒಂದು ಬಾರಿ ಪದ್ಮ ಪ್ರಶಸ್ತಿ ಸಿಕ್ಕವರಿಗೆ, ಮತ್ತೆ ಅತ್ಯುನ್ನತ ನಾಗರಿಕ ಪ್ರಶಸ್ತಿ ನೀಡಬೇ ಕೆಂದರೆ 5 ವರ್ಷಗಳ ಅಂತರ ಬೇಕು) ಎಂಬ ನಿಯಮ ಕಾನೂನಿನಲ್ಲಿ ಇರುವುದು ನಿಜ. ಆದರೆ, ಅತ್ಯಂತ ವಿಶೇಷ ಹಾಗೂ ಅರ್ಹ ಪ್ರಕರಣಗಳಲ್ಲಿ, ಪ್ರಶಸ್ತಿ ಸಮಿತಿಗೆ ಈ ನಿಯಮ ಪಾಲಿಸುವಲ್ಲಿ ವಿನಾಯ್ತಿ ನೀಡಲಾಗಿದೆ. ಅಂದರೆ, ವಿಶೇಷ ಸಂದರ್ಭಗಳಲ್ಲಿ ಸಾಧಕರಿಗೆ ಪದ್ಮ ಪ್ರಶಸ್ತಿ ದೊರೆತ 5 ವರ್ಷಗಳ ಒಳಗೆ ಭಾರತ ರತ್ನವನ್ನೂ ನೀಡಿ ಗೌರವಿಸಬಹುದಾಗಿದೆ.

Advertisement

ಸಿದ್ಧಗಂಗಾ ಶ್ರೀಗೆ ಭಾರತ ರತ್ನ ನೀಡಿದ್ದರೆ ತೂಕ ಹೆಚ್ಚುತ್ತಿತ್ತು
ಹುಬ್ಬಳ್ಳಿ:
ಸಿದ್ಧಗಂಗಾ ಮಠದ ಶಿವಕುಮಾರ ಸ್ವಾಮೀಜಿ ಅವರಿಗೆ ಭಾರತ ರತ್ನ ಪ್ರಶಸ್ತಿ ನೀಡಿದ್ದರೆ ಪ್ರಶಸ್ತಿಯ ಹಿರಿಮೆ ಹೆಚ್ಚುತ್ತಿತ್ತು. ಪ್ರಶಸ್ತಿಗೆ ಸ್ವಾಮಿಗಳನ್ನು ಪರಿಗಣಿಸದಿರುವುದು ನಾಡಿನ ಭಕ್ತರಿಗೆ ನೋವುಂಟು ಮಾಡಿದೆ ಎಂದು ವಿಧಾನ ಪರಿಷತ್‌ ಸದಸ್ಯ ಬಸವರಾಜ ಹೊರಟ್ಟಿ ಹೇಳಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶಿವಕುಮಾರ ಸ್ವಾಮಿಗಳ ಅನನ್ಯ ಸೇವೆ, ನಾಡಿಗೆ ನೀಡಿದ ಕೊಡುಗೆ ಪರಿಗಣಿಸಿ ಅವರಿಗೆ ಭಾರತರತ್ನ ಪ್ರಶಸ್ತಿ ಯಾವಾಗಲೋ ಬರಬೇಕಿತ್ತು. ಆದರೆ, ಕಳೆದ ಐದು ವರ್ಷಗಳಿಂದ ಪ್ರಶಸ್ತಿ ನೀಡುವುದಾಗಿ ಕೇಂದ್ರ ಸರ್ಕಾರ ಭರವಸೆ ನೀಡುತ್ತಾ ಬಂದಿದೆ. ದೇಶವು ಸರ್ವಶ್ರೇಷ್ಠ ಶ್ರೀಗಳಿಗೆ ಭಾರತರತ್ನ ಪ್ರಶಸ್ತಿ ನೀಡಿದ್ದರೆ ಪ್ರಶಸ್ತಿಯ ಗೌರವ ಮತ್ತಷ್ಟು ಹೆಚ್ಚಾಗುತ್ತಿತ್ತು. ಬಿಜೆಪಿ ನಾಯಕರು ಕೇಂದ್ರದ ಮೇಲೆ ಒತ್ತಡ ಹಾಕುವುದಾಗಿ ಭರವಸೆ ನೀಡಿದ್ದರು. ಕೇಂದ್ರ ಸರ್ಕಾರದ ಈ ನಡೆಯಿಂದ ಭಕ್ತವೃಂದಕ್ಕೆ ನೋವಾಗಿದೆ. ಒತ್ತಡ ಹೇರಿ ಪ್ರಶಸ್ತಿ ಪಡೆಯುವ ಅಗತ್ಯವಿಲ್ಲ ಎಂದರು.

ಮುಂದಾದರೂ ಶ್ರೀಗಳಿಗೆ ಭಾರತ ರತ್ನ ನೀಡಿ: ಖಾಶೆಂಪೂರ
ಬೀದರ:
ಶಿವಕುಮಾರ ಸ್ವಾಮೀಜಿ ಅವರಿಗೆ ಭಾರತ ರತ್ನ ಪ್ರಶಸ್ತಿ ನೀಡಿ ಗೌರವಿಸಬೇಕೆಂಬುದು ರಾಜ್ಯದ ಜನಾಭಿಪ್ರಾಯವಾಗಿತ್ತು. ಆದರೆ, ಪ್ರಶಸ್ತಿ ತಪ್ಪಿರುವುದಕ್ಕೆ ತುಂಬಾ ಬೇಜಾರಾಗಿದೆ ಎಂದು ಸಚಿವ ಬಂಡೆಪ್ಪ ಖಾಶೆಂಪೂರ ಹೇಳಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೇಂದ್ರ ಸರ್ಕಾರ ಭಾರತ ರತ್ನ ಗೌರವ ನೀಡದಿರುವುದರಿಂದ ರಾಜ್ಯದ ಜನರಿಗೆ ನಿರಾಸೆಯಾಗಿದೆ. ಅವರ ಸೇವೆ ಪರಿಗಣಿಸಿ ಶ್ರೀಗಳಿಗೆ ಭಾರತ ರತ್ನ ನೀಡಬೇಕಿತ್ತು. ಆದರೆ, ಇದು ಕೇಂದ್ರ ಸರ್ಕಾರದ ವಿವೇಚನೆಗೆ ಬಿಟ್ಟ ವಿಷಯವಾಗಿದ್ದು, ಮುಂದಿನ ದಿನಗಳಲ್ಲಿ ಶ್ರೀಗಳಿಗೆ ಭಾರತ ರತ್ನ ನೀಡುವಂತೆ ಆಗ್ರಹಿಸುವುದಾಗಿ ತಿಳಿಸಿದರು.

ಪಾಟೀಲ್‌ ಬೇಸರ
ವಿಜಯಪುರ/ಬೆಂಗಳೂರು:
ಸಿದ್ಧಗಂಗಾ ಮಠ ತನ್ನ ಸೇವೆಯಿಂದ ವಿಶ್ವದೆಲ್ಲೆಡೆ ಮನ್ನಣೆ ಪಡೆದಿದ್ದು, ಡಾ.ಶಿವಕುಮಾರಸ್ವಾಮಿಗಳಿಗೆ ಕೇಂದ್ರ ಸರ್ಕಾರವೇ ಸ್ವಯಂ ಪ್ರೇರಣೆಯಿಂದ ಭಾರತ ರತ್ನ ನೀಡಬೇಕಿತ್ತು ಎಂದು ಗೃಹ ಸಚಿವ ಎಂ.ಬಿ.ಪಾಟೀಲ್‌ ತಿಳಿಸಿದ್ದಾರೆ. ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ರಾಜ್ಯ ಸರ್ಕಾರ ಈ ಕುರಿತು ಕೇಂದ್ರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದರೂ, ರಾಜ್ಯದ ಜನತೆ ಒಕ್ಕೊಲರ ಆಗ್ರಹ ಮಾಡಿದರೂ ಭಾರತರತ್ನ ನೀಡದಿರುವುದು ನಾಡಿಗೆ ದಿಗಿಲು ಬಡಿದಂತಾಗಿದೆ. ಈ ಮೂಲಕ ಕೇಂದ್ರ ಸರ್ಕಾರವು 111 ವರ್ಷಗಳ ಪರಮಪೂಜ್ಯರ ಸೇವೆಯನ್ನು ಅವಮಾನಿಸುವ ಕಾರ್ಯಕ್ಕೆ ಮುಂದಾಗಿದೆ. ಜತೆಗೆ, ಈ ದೇಶದ ಅತ್ಯುನ್ನತವಾದ ಭಾರತ ರತ್ನ ಪ್ರಶಸ್ತಿಯನ್ನು ಅಪಮೌಲ್ಯಕ್ಕೆ ಈಡು ಮಾಡಿದೆ ಎಂದು ರಾಜ್ಯದ ಗೃಹ ಸಚಿವನಾಗಿ ನೋವಿನಿಂದ ತಿಳಿಸುತ್ತೇನೆ ಎಂದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next