ಪಣಂಬೂರು: ಜಿಲ್ಲೆಯಲ್ಲಿ ಶಾಂತಿ ನೆಮ್ಮದಿ ನೆಲೆಸಿದಾಗ ದೇಶದಲ್ಲಿ ಮಂಗಳೂರು ನಂ. ವನ್ ಆಗುವುದರಲ್ಲಿ ಸಂದೇಹವಿಲ್ಲ ಎಂದು ಖ್ಯಾತ ಮೂಳೆ ತಜ್ಞ, ತೇಜಸ್ವಿನಿ ಆಸ್ಪತ್ರೆಯ ಚೆಯರ್‌ಮನ್ ಡಾ| ಶಾಂತಾರಾಮ್ ಶೆಟ್ಟಿ ಹೇಳಿದರು. ಪಣಂಬೂರು ಬೀಚ್ ನಲ್ಲಿ ರವಿವಾರ ಕರಾವಳಿ ಉತ್ಸವ ಸಮಾರೋಪದಲ್ಲಿ ಈ ಬಾರಿಯ ಕರಾವಳಿ ಉತ್ಸವ ಗೌರವ ಪ್ರಶಸ್ತಿ ಸ್ವೀಕರಿಸಿ ಅವರು ಮಾತನಾಡಿದರು.
ಸಮಾಜ ತನ್ನನ್ನು ಗೌರವಿಸಿದೆ, ತನಗೆ ಹೆಸರು ತಂದುಕೊಟ್ಟಿದೆ, ಹೀಗಾಗಿ ಪ್ರಶಸ್ತಿಯನ್ನು ಮಂಗಳೂರು ಜನತೆಗೆ ಅರ್ಪಿಸುವುದಾಗಿ ಅವರು ಹೇಳಿದರು. ಮಂಗಳೂರು ಶಿಕ್ಷಣ ಕಾಶಿಯಾಗಿದ್ದು, ಆರೋಗ್ಯ ಕ್ಷೇತ್ರ, ಹೋಟೆಲ್ ಉದ್ಯಮ ಮುಂತಾಗಿ ಪ್ರತಿಯೊಂದರಲ್ಲೂ ಮುಂದಿದೆ. ಶಾಂತಿ, ಶುಚಿತ್ವಕ್ಕೆ ಮಹತ್ವ ನೀಡಿದರೆ ಇಂದೋರನ್ನು ಹಿಂದಿಕ್ಕಿ ನಂ. ವನ್ ಸ್ಥಾನ ಪಡೆಯಬಹುದಾಗಿದೆ. ಈ ನಿಟ್ಟಿನಲ್ಲಿ ಶ್ರಮಿಸಬೇಕಿದೆ ಎಂದರು.
ಪ್ರಶಸ್ತಿ ನೀಡಿ ಗೌರವಿಸಿದ ಸಚಿವ ಬಿ. ರಮಾನಾಥ ರೈ ಮಾತನಾಡಿ, ಡಾ| ಶಾಂತಾರಾಮ್ ಶೆಟ್ಟಿ ಅವರಿಗೆ ಅರ್ಹವಾಗಿಯೇ ಈ ಪ್ರಶಸ್ತಿ ಸಂದಿದೆ. ಅವರು ಮಂಗಳೂರಿನ ಹೆಸರನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಪಸರಿಸಿ ದ್ದಾರೆ. ಜಗದ ಉದ್ದಗಲಕ್ಕೂ ತಮ್ಮ ತಜ್ಞ ಚಿಕಿತ್ಸೆ ಹಾಗೂ ಉಪನ್ಯಾಸದಿಂದ ಪ್ರಸಿದ್ಧರಾಗಿದ್ದಾರೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಶಾಸಕ ಮೊದಿನ್ ಬಾವಾ ಕರಾವಳಿಯನ್ನು ಪ್ರವಾಸೋ ದ್ಯಮದ ಹಬ್ ಆಗಿ ರೂಪಿಸಲು ಕ್ರಿಯಾ ಯೋಜನೆ ರೂಪಿಸಬೇಕಿದೆ ಎಂದರು.
ದ.ಕ ಜಿಲ್ಲಾಧಿಕಾರಿ ಶಶಿಕಾಂತ್ ಸೆಂಥಿಲ್, ಪೊಲೀಸ್ ಆಯುಕ್ತ ಟಿ.ಆರ್. ಸುರೇಶ್, ಮೇಯರ್ ಕವಿತಾ ಸನಿಲ್, ಪ್ರದೀಪ್ ಕುಮಾರ್ ಕಲ್ಕೂರ, ಗೇರು ಅಭಿವೃದ್ಧಿ ನಿಗಮದ ಬಿ.ಎಚ್. ಖಾದರ್, ಮಹಮ್ಮದ್ ನಝೀರ್, ನರೇಂದ್ರ ನಾಯಕ್, ರೇಣುಕಾ ಪ್ರಸಾದ್, ಯತೀಶ್ ಬೈಕಂಪಾಡಿ, ವಾರ್ತಾಧಿಕಾರಿ ಖಾದರ್ ಶಾ ಉಪಸ್ಥಿತರಿದ್ದರು. ಎಡಿಸಿ ಕುಮಾರ್ ಸ್ವಾಗತಿಸಿ, ಮಂಜುಳಾ ನಿರೂಪಿಸಿದರು.