Advertisement

ಡಾ|ಸಾಕ್ಷತ್‌ ಶೆಟ್ಟಿ  ಸಾಧನೆ ಇತರರಿಗೆ ಮಾದರಿ: ಸಚ್ಚಿದಾನಂದ ಶೆಟ್ಟಿ  ಮುನ್ನಲಾಯಿಗುತ್ತು 

11:46 AM Oct 06, 2021 | Team Udayavani |

ಮುಂಬಯಿ: ಅಶಕ್ತರ ಕಷ್ಟಗಳಿಗೆ ಆರ್ಥಿಕ ನೆರವು, ಪ್ರತಿಭೆಗಳಿಗೆ ವೇದಿಕೆ, ಸಾಧಕರಿಗೆ ಗೌರವ ನೀಡುವುದು ಮತ್ತು ಸಮಾಜಮುಖೀ ಕೆಲಸಗಳು ನಮ್ಮ ಸಂಸ್ಥೆಯ ಉದ್ದೇಶವಾಗಿದೆ. ಧೈರ್ಯ, ತ್ಯಾಗ, ಸರಳತೆ, ಸಹಕಾರ ಭಾವನೆಗಳೊಂದಿಗೆ ಯುವಕರನ್ನು ಸಂಘಟಿಸಿ ಸ್ವಾವಲಂಬಿಗಳಾಗಿ ಬಾಳ್ಳೋಣ. ಜಾತ್ಯತೀತವಾಗಿ, ಪಕ್ಷಾತೀತವಾಗಿ ಸಂಸ್ಕೃತಿಯೊಂದಿಗೆ ಬೆಸೆದುಕೊಂಡಿರುವ ಮೀರಾ-ಭಾಯಂದರ್‌ ಯುವ ಬ್ರಿಗೇಡ್‌ ರಾಷ್ಟ್ರೀಯತೆಯನ್ನು ಮೂಡಿಸುವ ಬೃಹತ್‌ ಸಂಘಟನೆಯಾಗಿದೆ ಎಂದು ಮೀರಾ-ಭಾಯಂದರ್‌ ಜಿಲ್ಲಾ ಬಿಜೆಪಿ ಕಾರ್ಯದರ್ಶಿ ಮತ್ತು ಯುವ ಬ್ರಿಗೇಡ್‌ ಮೀರಾ-ಭಾಯಂದರ್‌ ಘಟಕದ ಸ್ಥಾಪಕ ಸಚ್ಚಿದಾನಂದ ಶೆಟ್ಟಿ ಮುನ್ನಲಾಯಿಗುತ್ತು ತಿಳಿಸಿದರು.

Advertisement

ಸೆ. 3ರಂದು ಮೀರಾರೋಡ್‌ ಪೂರ್ವದ ಸಾಯಿ ಬಾಬಾ ನಗರ ಕೆ. ಎಸ್‌. ಮೆಹ್ತಾ ಶಾಲೆಯ ಆವರಣದಲ್ಲಿ  ಯುವ ಬ್ರಿಗೇಡ್‌ ಮೀರಾ-ಭಾಯಂದರ್‌ ಘಟಕದ ವತಿಯಿಂದ ನಡೆದ ರಾಷ್ಟ್ರೀಯ ಮಟ್ಟದ ವೈದ್ಯಕೀಯ ಸ್ನಾತಕೋತ್ತರ ಪದವಿ ಪರೀಕ್ಷೆಯಲ್ಲಿ  ರಾಷ್ಟ್ರ ಮಟ್ಟದಲ್ಲಿ ನಲ್ವತ್ತಾರನೇ ಸ್ಥಾನ ಮತ್ತು ಮಹಾರಾಷ್ಟ್ರ ರಾಜ್ಯದಲ್ಲಿ ಐದನೇ ಸ್ಥಾನ ಪಡೆದ ಡಾ| ಸಾಕ್ಷತ್‌ ಶೆಟ್ಟಿ ಅವರ ಅಭಿನಂದನ ಸಮಾರಂಭದ ನೇತೃತ್ವ ವಹಿಸಿ ಮಾತನಾಡಿದ ಅವರು, ಮಕ್ಕಳು ಮೊಬೈಲ್, ಟಿವಿ, ಸಿನೇಮಾ ಇನ್ನಿತರ ಸಾಮಾಜಿಕ ಮಾಧ್ಯಮಗಳಲ್ಲಿ  ಸಮಯ ವ್ಯರ್ಥ ಮಾಡುತ್ತಿರುವ ಈ ಕಾಲದಲ್ಲಿ  ಡಾ| ಸಾಕ್ಷತ್‌ ಶೆಟ್ಟಿ ಅವರು ಶ್ರೇಷ್ಠ ಸಾಧನೆ ಮಾಡಿರುವುದು ಹೆಮ್ಮೆಯ ವಿಷಯ. ಅವರ ತಂದೆ ಬಾಲಕೃಷ್ಣ ಶೆಟ್ಟಿ  ಹಾಗೂ ತಾಯಿ ಜಯಶ್ರೀ ಶೆಟ್ಟಿಯವರ ಶ್ರಮ ಇತರಿಗೆ ಮಾರ್ಗದರ್ಶನವಾಗಿರಲಿ ಎಂದು ತಿಳಿಸಿ ಶುಭ ಹಾರೈಸಿದರು.

ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಸೈಂಟ್‌ ಆ್ಯಗ್ನೆಸ್‌ ಮತ್ತು ಕೆ. ಎಸ್‌. ಮೆಹ್ತಾ ಶಾಲೆಯ ಕಾರ್ಯಾಧ್ಯಕ್ಷ ಡಾ| ಅರುಣೋದಯ ರೈ ಅವರು ಸ್ವಾವಲಂಬನೆಯ ಬದುಕನ್ನು ಕಟ್ಟಿಕೊಡುವ ವಿದ್ಯೆ ಜೀವನ ಪರ್ಯಂತದ ಪ್ರಬಲ ಅಸ್ತ್ರವಾಗಿದೆ. ಇದನ್ನು ಕಠಿನ ಪರಿಶ್ರಮದಿಂದ ಗಿಟ್ಟಿಸಿಕೊಂಡರೆ ಇನ್ನೊಬ್ಬರಿಗೆ ತಲೆಬಾಗುವ ಪ್ರಮೇಯ ಬರುವುದಿಲ್ಲ. ಅಹೋರಾತ್ರಿಯ ಸತತ ಪ್ರಯತ್ನದಿಂದ ರಾಷ್ಟ್ರ ಮಟ್ಟದಲ್ಲಿ ಗುರುತಿಸಿಕೊಂಡ ಡಾ| ಸಾಕ್ಷತ್‌ ಶೆಟ್ಟಿ  ಅವರು ವೈದ್ಯಕೀಯ ಕ್ಷೇತ್ರದಲ್ಲಿ  ವಿಶಿಷ್ಟ ಸಾಧಕರಾಗಿ ಮಿಂಚಿದ್ದಾರೆ. ಕೊರೊನಾ ಕಾಲದಲ್ಲಿ  ಚಿಕಿತ್ಸೆ ನೀಡಿ ಕೊರೊನಾ ವಾರಿಯರ್ಸ್‌ ಎಂಬ ಪ್ರಶಸ್ತಿ ಬಂದಿರುವುದು ಅವರ ಪ್ರಾಮಾಣಿಕತೆಗೆ ಸಂದ ಗೌರವವಾಗಿದೆ ಎಂದರು.

ಸಮ್ಮಾನ ಸ್ವೀಕರಿಸಿ ಮಾತನಾಡಿದ ಡಾ| ಸಾಕ್ಷತ್‌ ಶೆಟ್ಟಿ , ತಂದೆ-ತಾಯಿಯ ಅವಿರತ ಶ್ರಮದಿಂದ ನಾನು ಈ ಮಟ್ಟಕ್ಕೆ ಏರಲು ಸಾಧ್ಯವಾಯಿತು. ಮಾತಾಪಿತರ ಋಣ, ಸಮಾಜದ ಋಣ, ದೇಶದ ಋಣ ತೀರಿಸಲು ಕಂಕಣ ಬದ್ಧನಾಗಿರುವೆ. ದೇವರ ಸೇವೆಯಂತೆ ವೈದ್ಯಕೀಯ ವೃತ್ತಿಯನ್ನು ನಿಭಾಯಿಸುವ ಪ್ರಾಮಾಣಿಕ ಪ್ರಯತ್ನ ಮಾಡುವೆ. ಇಂದಿನ ಸಮ್ಮಾನವನ್ನು ಎಡವಿದಾಗ ಕೈ ಹಿಡಿದು ನಡೆಸಿದ, ತಪ್ಪಿದಾಗ ಬುದ್ಧಿವಾದದ ಮೂಲಕ ಎಚ್ಚರಿಸಿದ ಮಾತ ಪಿತರಿಗೆ ಆರ್ಪಿಸುವೆ. ಸಮಾರಂಭವನ್ನು ಆಯೋಜಿಸಿದ ಯುವ ಬ್ರಿಗೇಡ್‌ ಕಾರ್ಯಕರ್ತರಿಗೆ ಸದಾ ಋಣಿಯಾಗಿವೆ ಎಂದರು.

ಕಾರ್ಯಕ್ರಮದಲ್ಲಿ  ಆರ್‌ಎಸ್‌ಎಸ್‌ನ ಸೇವಾ ಕಾರ್ಯವಾಹ ಹರೀಶ್‌ ನಾಯಾರ್‌, ಬಿಲ್ಲವರ ಅಸೋಸಿಯೇಶನ್‌ ಮೀರಾರೋಡು ಸ್ಥಳೀಯ ಸಮಿತಿಯ ಕಾರ್ಯಾಧ್ಯಕ್ಷ ಸುಭಾಶ್ಚಂದ್ರ ಕರ್ಕೇರ, ಬಂಟರ ಸಂಘ ಮೀರಾ-ಭಾಯಂದರ್‌ ಪ್ರಾದೇಶಿಕ ಸಮಿತಿಯ ಕಾರ್ಯಾಧ್ಯಕ್ಷ ಶಿವಪ್ರಸಾದ್‌ ಶೆಟ್ಟಿ, ಬಂಟ್ಸ್‌ ಪೋರಂ ಅಧ್ಯಕ್ಷ ಚಂದ್ರಹಾಸ ಶೆಟ್ಟಿ, ಯುವ ಬ್ರಿಗೇಡ್‌ನ‌ ಅರುಣ್‌ ಶೆಟ್ಟಿ  ಪಣಿಯೂರು, ವಿಜಯಲಕ್ಷ್ಮೀ ಶೆಟ್ಟಿ ಉಪಸ್ಥಿತರಿದ್ದರು.

Advertisement

ಗುಣಕಾಂತ್‌ ಶೆಟ್ಟಿ ಕರ್ಜೆ, ಸದಾನಂದ ಸಾಲ್ಯಾನ್‌, ಜಗದೀಶ್‌ ಪಂಜಿನಡ್ಕ, ಹರೀಶ್‌ ರೈ, ಸಂದೇಶ್‌ ಶೆಟ್ಟಿ ಅವರು ಗಣ್ಯರನ್ನು ಗೌರವಿಸಿದರು. ರಂಗಭೂಮಿ ಮತ್ತು ಚಲನಚಿತ್ರ ನಟ ಜಿ. ಕೆ. ಕೆಂಚನಕೆರೆ ಕಾರ್ಯಕ್ರಮ ನಿರ್ವಹಿಸಿ, ವಂದಿಸಿದರು. ವಿಜಯ ಶೆಟ್ಟಿ  ಮೂಡುಬೆಳ್ಳೆ ತಂಡದವರಿಂದ ಸಂಗೀತ ರಸಮಂಜರಿ ಮತ್ತು ಸಚಿನ್‌ ಜಾಧವ್‌ ನಿರ್ದೇಶನದಲ್ಲಿ  ನೃತ್ಯ ವೈಭವ ಆಯೋಜಿಸಲಾಗಿತ್ತು.

ವೈದ್ಯಕೀಯ ಪದವಿಯಲ್ಲಿ  ಮಹಾರಾಷ್ಟ್ರ ರಾಜ್ಯಕ್ಕೆ ಅದ್ವಿತೀಯ ಸಾಧನೆ ಮೂಲಕ ಮುನ್ನುಡಿ ಬರೆದ ಕರ್ನಾಟಕ ಕರಾವಳಿಯ ಡಾ| ಸಾಕ್ಷತ್‌ ಶೆಟ್ಟಿ  ಉಭಯ ರಾಜ್ಯಗಳಲ್ಲಿ ಕೀರ್ತಿ ಪತಾಕೆ ಹಾರಿಸಿ¨ªಾರೆ. ಅವರ ಸೇವೆ ಜನಸಾಮಾನ್ಯರಿಗೆ ತಲುಪಿ ವೈದ್ಯರು ದೇವರೆಂಬ ನಾಮಾಂಕಿತ ಸಾರ್ಥಕವಾಗಲಿ. ಸಂಸ್ಕೃತಿ, ಸಂಸ್ಕಾರವನ್ನು ಮೈಗೂಡಿಸಿಕೊಂಡಿರುವ ಅವರ ಸಾರ್ಥಕ ಬದುಕು ಪಾವನವಾಗಲಿ ಎಂದು  ದೇವರಲ್ಲಿ ಪ್ರಾರ್ಥಿಸುವೆ. ಸಾಂತಿಂಜ ಜನಾರ್ದನ ಭಟ್‌, ಪ್ರಧಾನ ಅರ್ಚಕರು, ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಮೀರಾಗಾಂವ್‌

ಆಪತ್ಕಾಲದಲ್ಲಿ ರೋಗಿಗಳ ಸೇವೆ ಮಾಡುವವನೇ ನಿಜವಾದ ವೈದ್ಯನಾಗುತ್ತಾನೆ. ಪ್ರತಿಯೊಬ್ಬರ ಜೀವ ಅತ್ಯಮೂಲ್ಯವಾಗಿದ್ದು, ಕ್ಲಪ್ತ ಸಮಯದಲ್ಲಿ ಚಿಕಿತ್ಸೆ ನೀಡಿ ರಕ್ಷಿಸುವುದು ವೈದ್ಯರ ಜವಾಬ್ದಾರಿ. ಅದನ್ನು ಸಾಕ್ಷತ್‌ ಶೆಟ್ಟಿ ಅವರಲ್ಲಿ ನಿರೀಕ್ಷಿಸುವೆ.ವಸಂತಿ ಶೆಟ್ಟಿ, ಕಾರ್ಯದರ್ಶಿ, ಮಹಿಳಾ ವಿಭಾಗ, ಶ್ರೀ ಶನಿ ಮಂದಿರ ಮೀರಾರೋಡ್‌

ಸಾಮಾನ್ಯವಾಗಿ ಯಾವುದೇ ಸಮಾರಂಭಗಳಲ್ಲಿ ಸಮ್ಮಾನ ಮಾಡುತ್ತಾರೆಯೇ ವಿನಃ ಸಮ್ಮಾನಕ್ಕಾಗಿಯೇ ಸಮಾರಂಭ ಮಾಡುವುದು ಅಪರೂಪ. ಆದ್ದರಿಂದ ಮೀರಾ-ಭಾಯಂದರ್‌ ಯುವ ಬ್ರಿಗೇಡ್‌ ವಿಭಿನ್ನ ಜನಮೆಚ್ಚುವ ಕಾರ್ಯಕ್ರಮಕ್ಕೆ ಹೆಸರುವಾಸಿಯಾಗಿದೆ. ಇದು ಕೆಲವೇ ತಾಸುಗಳಲ್ಲಿ ಆಯೋಜಿಸಿದ್ದ ಅರ್ಥಪೂರ್ಣ ಕಾರ್ಯಕ್ರಮವಾಗಿದೆ. ಡಾ| ಸಾಕ್ಷತ್‌ ಶೆಟ್ಟಿ ಅವರ ವೈದ್ಯಕೀಯ ವೃತ್ತಿ ಉತ್ತರೋತ್ತರ ಅಭಿವೃದ್ದಿ ಹೊಂದಲಿ. ಮುಂದಿನ ದಿನಗಳಲ್ಲಿ ಅವರ ಸೇವೆ ಮೀರಾ-ಭಾಯಂದರ್‌ ಪರಿಸರದ ಜನತೆಗೆ ಸಿಗುವಂತಾಗಲಿ.ಗಿರೀಶ್‌ ಶೆಟ್ಟಿ  ತೆಳ್ಳಾರ್‌,ಕ್ರೀಡಾ ಕಾರ್ಯಾಧ್ಯಕ್ಷರು, ಬಂಟರ ಸಂಘ ಮುಂಬಯಿ

 

ಚಿತ್ರ-ವರದಿ: ರಮೇಶ ಅಮೀನ್‌

Advertisement

Udayavani is now on Telegram. Click here to join our channel and stay updated with the latest news.

Next