Advertisement

ದಂತ ವೈದ್ಯ ಡಾ|ಕೃಷ್ಣಮೂರ್ತಿ ಸಾವು: ಐವರ ಬಂಧನ: ಬದಿಯಡ್ಕದಲ್ಲಿ ಹರತಾಳ

12:29 AM Nov 12, 2022 | Team Udayavani |

ಬದಿಯಡ್ಕ: ಇಲ್ಲಿನ ಹಿರಿಯ ದಂತ ವೈದ್ಯ ಡಾ| ಕೃಷ್ಣಮೂರ್ತಿ ಸರ್ಪಂಗಳ (57) ಅವರ ಸಾವಿಗೆ ಸಂಬಂಧಿಸಿದ ಪ್ರಕರಣದಲ್ಲಿ ಐವರನ್ನು ಬದಿಯಡ್ಕ ಪೊಲೀಸರು ಬಂಧಿಸಿದ್ದಾರೆ. ಇದೇ ಸಂದರ್ಭ ಆರೋಪಿಗಳ ಬಗ್ಗೆ ಎನ್‌ಐಎ ತನಿಖೆ ನಡೆಸಬೇಕೆಂದು ಆಗ್ರಹಿಸಿ ಬದಿಯಡ್ಕ ಪಂಚಾಯತ್‌ ವ್ಯಾಪ್ತಿಯಲ್ಲಿ ಹರತಾಳ ನಡೆಯಿತು. ಘಟನೆ ಹಿನ್ನೆಲೆಯಲ್ಲಿ ಬದಿಯಡ್ಕದಲ್ಲಿ ಬಿಗು ಪೊಲೀಸ್‌ ಬಂದೋಬಸ್ತು ಏರ್ಪಡಿಸಲಾಗಿದೆ.

Advertisement

ಘಟನೆಗೆ ಸಂಬಂಧಿಸಿ ಟಿ.ಎಸ್‌. ಅಲಿ ಪೂಟ್ಟುಕಲ್ಲು, ಕುಂಬಾxಜೆ ಅನ್ನಡ್ಕದ ಮೊಹಮ್ಮದ್‌ ಶಿಹಾಬುದ್ದೀನ್‌, ವಿದ್ಯಾಗಿರಿ ಮುನಿಯೂರಿನ ಉಮ ರುಲ್‌ ಫಾರೂಕ್‌, ಕುಂಬಾxಜೆಯ ಅಶ್ರಫ್‌, ಬದಿಯಡ್ಕ ಚೆನ್ನಾರ್‌ಕಟ್ಟೆಯ ಮುಹಮ್ಮದ್‌ ಹನೀಫ್‌ನನ್ನು ಪೊಲೀಸರು ಬಂಧಿಸಿದ್ದಾರೆ.

ತಂಡವೊಂದರ ಬೆದರಿಕೆಯ ಹಿನ್ನೆಲೆಯಲ್ಲಿ ಡಾ| ಕೃಷ್ಣಮೂರ್ತಿ ಸರ್ಪಂಗಳ ಅವರ ಸಾವು ಸಂಭವಿಸಿದೆ. ಈ ಹಿನ್ನೆಲೆಯಲ್ಲಿ ಸಮಗ್ರ ತನಿಖೆ ನಡೆಸಬೇಕೆಂದು ಆಗ್ರಹಿಸಿ ವಿಶ್ವ ಹಿಂದೂ ಪರಿಷತ್‌ ಬದಿಯಡ್ಕ ಪ್ರಖಂಡ ನೀಡಿದ್ದ ಕರೆಯಂತೆ ಬದಿಯಡ್ಕ ಪಂ. ವ್ಯಾಪ್ತಿಯಲ್ಲಿ ಶುಕ್ರ ವಾರ ಪೂರ್ಣ ಹರತಾಳ ನಡೆಯಿತು. ಇದೇ ಬೇಡಿಕೆಯನ್ನು ಮುಂದಿಟ್ಟು ನ. 10ರಂದು ಹವ್ಯಕ ಸಭಾ ಮತ್ತು ಸ್ಥಳೀಯರು ಪ್ರತಿಭಟನೆ ನಡೆಸಿದ್ದರು.

ನ. 8ರಂದು ಮಧ್ಯಾಹ್ನದಿಂದ ಡಾ| ಕೃಷ್ಣಮೂರ್ತಿ ಸರ್ಪಂಗಳ ನಾಪತ್ತೆ ಯಾಗಿದ್ದರು. ಅವರ ಪತ್ನಿ ನೀಡಿದ ದೂರಿನಂತೆ ಬದಿಯಡ್ಕ ಪೊಲೀಸರು ಕೇಸು ದಾಖಲಿಸಿದ್ದರು. ಕುಂದಾಪುರ ಸಮೀಪದ ಹಟ್ಟಿಯಂಗಡಿ ಗ್ರಾಮದ ಕಾಡು ಅಜ್ಜಿಮನೆ ಎಂಬಲ್ಲಿ ರೈಲು ಹಳಿ ಯಲ್ಲಿ ಮೃತದೇಹ ಪತ್ತೆಯಾಗಿತ್ತು. ಮರಣೋತ್ತರ ಪರೀಕ್ಷೆ ನಡೆಸಿ ಮೃತ ದೇಹವನ್ನು ಬದಿಯಡ್ಕದ ಸ್ವಗೃಹಕ್ಕೆ ತಂದು ಶುಕ್ರವಾರ ಬೆಳಗ್ಗೆ ಮನೆ ಹಿತ್ತಿಲಿನಲ್ಲಿ ಅಂತ್ಯಸಂಸ್ಕಾರ ನಡೆಸಲಾಯಿತು.

ಬದಿಯಡ್ಕದಲ್ಲಿ ಹರತಾಳ
ಡಾ| ಕೃಷ್ಣಮೂರ್ತಿ ಅವರ ಸಾವಿನ ಕುರಿತು ಸಮಗ್ರ ತನಿಖೆ ನಡೆಸಬೇಕೆಂದು ಆಗ್ರಹಿಸಿ ವಿಹಿಂಪ ಬದಿಯಡ್ಕ ಪ್ರಖಂಡ ಸಮಿತಿ ಕರೆ ನೀಡಿದ ಬದಿಯಡ್ಕ ಪಂ. ವ್ಯಾಪ್ತಿಯ ಹರತಾಳ ಯಶಸ್ವಿಯಾಗಿದೆ. ಬದಿ ಯಡ್ಕ ಪೇಟೆಯಲ್ಲಿ ಬೃಹತ್‌ ಮೆರ ವಣಿಗೆ ನಡೆಯಿತು. ವಿಹಿಂಪ ಪ್ರಮುಖರು ನೇತೃತ್ವ ವಹಿಸಿದ್ದರು. ಸಭೆಯನ್ನು ಉದ್ದೇಶಿಸಿ ಮಾತನಾಡಿದ ಶರಣ್‌ ಪಂಪ್‌ವೆಲ್‌ ಪ್ರಕರಣದಲ್ಲಿ ಭಾಗಿಯಾದ ಎಲ್ಲರನ್ನು ಬಂಧಿಸ ಬೇಕು. ತನಿಖೆಯನ್ನು ಎನ್‌ಐಎ ಹಸ್ತಾಂತರಿಸ ಬೇಕೆಂದು ಆಗ್ರಹಿಸಿದರು.

Advertisement

30 ವರ್ಷಗಳಿಂದ ವೈದ್ಯ ವೃತ್ತಿ
ಸುಮಾರು 30 ವರ್ಷಗಳಿಂದ ಡಾ| ಕೃಷ್ಣಮೂರ್ತಿ ವೈದ್ಯ ವೃತ್ತಿ ನಡೆಸುತ್ತಿದ್ದರು. ಅವರ ಪುತ್ರಿ ವರ್ಷಾ ಎಂಬಿಬಿಎಸ್‌ ಬಳಿಕ ಉನ್ನತ ಶಿಕ್ಷಣ ಪಡೆಯಲು ತಯಾರಿ ನಡೆಸುತ್ತಿದ್ದಾರೆ. ಡಾ| ಕೃಷ್ಣಮೂರ್ತಿ ಪತ್ನಿ, ಪುತ್ರಿ, ತಂದೆ ಡಾ| ಎಸ್‌.ಎಸ್‌. ಭಟ್‌ ಮತ್ತು ತಾಯಿ ಭಾರತಿ ಅವರನ್ನು ಅಗಲಿದ್ದಾರೆ.

ವ್ಯಾಪಕ ಚರ್ಚೆ
ಡಾ| ಕೃಷ್ಣಮೂರ್ತಿ ಅವರ ನಾಪತ್ತೆ, ಸಾವು ಪ್ರಕರಣ ಬದಿಯಡ್ಕದಲ್ಲಿ ವ್ಯಾಪಕ ಚರ್ಚೆಗೆ ಕಾರಣವಾಗಿದೆ. ಅವರು ಎಂದಿನಂತೆ ನ. 8ರಂದು ಬೆಳಗ್ಗೆ ಆಸ್ಪತ್ರೆಗೆ ತೆರಳಿದ್ದರು. 11 ಗಂಟೆಗೆ ತಪಾಸಣೆಗೆಂದು ಮುಸ್ಲಿಂ ಮಹಿಳೆಯೊಬ್ಬಳು ಆಸ್ಪತ್ರೆಗೆ ಬಂದಿದ್ದಳು. ಆಕೆಯ ಜತೆ ಅನುಚಿತವಾಗಿ ವರ್ತಿಸಿದ್ದಾರೆಂದು ಆರೋಪಿಸಿ ತಂಡವೊಂದು ಬೆದರಿಸಿ ಹಲ್ಲೆಗೆ ಯತ್ನಿಸಿತ್ತು. ಮಹಿಳೆ ನೀಡಿದ ದೂರಿನಂತೆ ಪೊಲೀಸರು ಕೇಸು ದಾಖಲಿಸಿದ್ದರು. ಆ ಬಳಿಕ ಡಾ| ಕೃಷ್ಣಮೂರ್ತಿ ನಾಪತ್ತೆಯಾಗಿದ್ದರು.

ಕೊಲೆ ಬೆದರಿಕೆ, ಹಣದ ಬೇಡಿಕೆ
ಡಾ| ಕೃಷ್ಣಮೂರ್ತಿ ಅವರಿಗೆ ಕ್ಲಿನಿಕ್‌ನಲ್ಲಿ ಮಂಗಳವಾರ ತಂಡವೊಂದು ಕೊಲೆ ಬೆದರಿಕೆ ಒಡ್ಡಿತ್ತು. ಅಲ್ಲದೆ 10 ಲಕ್ಷ ರೂ. ಹಣದ ಬೇಡಿಕೆ ಒಡ್ಡ ಲಾಗಿತ್ತೆಂದು ತಿಳಿದು ಬಂದಿದೆ. ಇದಕ್ಕೂ ಮೊದಲು ವೈದ್ಯರಿಂದ ಕ್ಷಮೆ ಯಾಚಿಸುವ ನಾಟಕವಾಡಿ ಅವರು ಮಾನಸಿಕವಾಗಿ ಕುಗ್ಗುವಂತೆ ಮಾಡಲಾಗಿತ್ತು. ಡಾ| ಕೃಷ್ಣಮೂರ್ತಿ ಇದರಿಂದ ಸಂಪೂರ್ಣ ಕ್ಷೋಭೆ ಗೊಳಗಾಗಿದ್ದರು ಎಂದು ಪ್ರತ್ಯಕ್ಷ ದರ್ಶಿಗಳು ಹೇಳಿದ್ದಾರೆ.

ಕುಂದಾಪುರ: ವಿವಿಧೆಡೆ ಸಿಸಿಟಿವಿ ಪರಿಶೀಲನೆ
ಕುಂದಾಪುರ: ಡಾ| ಕೃಷ್ಣಮೂರ್ತಿ ಪ್ರಕರಣಕ್ಕೆ ಸಂಬಂಧಿಸಿ ಕುಂದಾಪುರ ಗ್ರಾಮಾಂತರ ಪೊಲೀಸರು ಕೂಡ ತನಿಖೆ ಮುಂದುವರಿಸಿದ್ದಾರೆ. ಕುಂದಾಪುರಕ್ಕೆ ಅವರು ಹೇಗೆ ಬಂದಿರಬಹುದು ಅನ್ನುವ ಬಗ್ಗೆ ಇಲ್ಲಿನ ಪೊಲೀಸರು ಪತ್ತೆಹಚ್ಚಲು ಮುಂದಾಗಿದ್ದಾರೆ. ಮೂಡ್ಲಕಟ್ಟೆಯ ರೈಲು ನಿಲ್ದಾಣ, ಕುಂದಾಪುರದ ಬಸ್‌ ನಿಲ್ದಾಣಗಳಲ್ಲಿ, ಶಾಸ್ತ್ರಿ ಸರ್ಕಲ್‌, ಕೊಲ್ಲೂರು, ತಲ್ಲೂರು ಜಂಕ್ಷನ್‌ ಸಹಿತ ವಿವಿಧೆಡೆಗಳಲ್ಲಿರುವ ಸಿಸಿಟಿವಿಗಳನ್ನು ಪರಿಶೀಲನೆ ನಡೆಸಿ, ಯಾವುದಾದರೂ ಸುಳಿವು ಸಿಗಬಹುದೇ ಎಂಬ ಬಗ್ಗೆ ತನಿಖೆ ಮುಂದುವರಿಸಿದ್ದಾರೆ.

 

Advertisement

Udayavani is now on Telegram. Click here to join our channel and stay updated with the latest news.

Next